ಶಿಗ್ಗಾವಿ| ನಿರ್ವಹಣೆ ಕೊರತೆಯಿಂದ ಪಾಳುಬಿದ್ದ ಉದ್ಯಾನಗಳು; ವಾಯುವಿಹಾರಿಗಳ ಆಕ್ರೋಶ
ಶಿಗ್ಗಾವಿ: ತುಕ್ಕು ಹಿಡಿದ ಕಬ್ಬಿಣದ ರಾಡುಗಳು. ಎಲ್ಲೆಂದರಲ್ಲಿ ಬೆಳೆದಿರುವ ಕಸ. ಕೊಳೆಯುವ ಸ್ಥಿತಿಯಲ್ಲಿರುವ ಆಟಿಕೆಗಳು, ಕಿತ್ತು ಹೋಗಿರುವ ಪಾದಚಾರಿ ಮಾರ್ಗ...ಇದು, ಶಿಗ್ಗಾವಿ ಪಟ್ಟಣದಲ್ಲಿರುವ ಉದ್ಯಾನಗಳ ಸದ್ಯದ ದುಸ್ಥಿತಿ. ಸ್ಥಳೀಯ ಪುರಸಭೆಯ ಅಧಿಕಾರಿಗಳ ನಿರ್ವಹಣೆ ಕೊರತೆಯಿಂದ ಪಟ್ಟಣದ ಉದ್ಯಾನಗಳು ಪಾಳು ಬಿದ್ದಿದ್ದು, ಆಡಳಿತ ಮಂಡಳಿ ವಿರುದ್ಧ ವಾಯುವಿಹಾರಿಗಳು ಆಕ್ರ

ಶಿಗ್ಗಾವಿ: ತುಕ್ಕು ಹಿಡಿದ ಕಬ್ಬಿಣದ ರಾಡುಗಳು. ಎಲ್ಲೆಂದರಲ್ಲಿ ಬೆಳೆದಿರುವ ಕಸ. ಕೊಳೆಯುವ ಸ್ಥಿತಿಯಲ್ಲಿರುವ ಆಟಿಕೆಗಳು, ಕಿತ್ತು ಹೋಗಿರುವ ಪಾದಚಾರಿ ಮಾರ್ಗ...ಇದು, ಶಿಗ್ಗಾವಿ ಪಟ್ಟಣದಲ್ಲಿರುವ ಉದ್ಯಾನಗಳ ಸದ್ಯದ ದುಸ್ಥಿತಿ. ಸ್ಥಳೀಯ ಪುರಸಭೆಯ ಅಧಿಕಾರಿಗಳ ನಿರ್ವಹಣೆ ಕೊರತೆಯಿಂದ ಪಟ್ಟಣದ ಉದ್ಯಾನಗಳು ಪಾಳು ಬಿದ್ದಿದ್ದು, ಆಡಳಿತ ಮಂಡಳಿ ವಿರುದ್ಧ ವಾಯುವಿಹಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ವಾಯುವಿಹಾರಿಗಳ ಅನುಕೂಲಕ್ಕಾಗಿ ಪಟ್ಟಣದ ಹಲವು ಕಡೆಗಳಲ್ಲಿ ಉದ್ಯಾನಗಳನ್ನು ನಿರ್ಮಿಸಲಾಗಿದೆ. ಆದರೆ, ಇಂದು ಉದ್ಯಾನಗಳು ಸಂಪೂರ್ಣ ಹಾಳಾಗಿವೆ. ರೋಗಗಳ ಕೇಂದ್ರಗಳಾಗಿ ಮಾರ್ಪಟ್ಟಿವೆ. ಉದ್ಯಾನಗಳ ಈ ದುಸ್ಥಿತಿಗೆ ಅಧಿಕಾರಿಗಳ ನಿರ್ಲಕ್ಷ್ಯತೆ ಕಾರಣವೆಂದು ಜನರು ದೂರುತ್ತಿದ್ದಾರೆ.ವೃದ್ಧರಿಗೆ ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಹೋಗಲು ಪಟ್ಟಣದಲ್ಲಿ ಉದ್ಯಾನವನಗಳು ಇಲ್ಲದಂತಾಗಿವೆ. ರಸ್ತೆಗಳಲ್ಲಿಯೇ ವಾಯುವಿಹಾರ ಮಾಡಬೇಕಾದ ಅನಿವಾರ್ಯತೆಯಿದೆ. ಇದರಿಂದಾಗಿ, ವಾಯುವಿಹಾರಿಗಳ ಜೀವಕ್ಕೂ ಕುತ್ತು ಇದೆ. ಆಗಾಗ ಅಪಘಾತಗಳೂ ಸಂಭವಿಸುತ್ತಿರುವುದುಜನರಲ್ಲಿ ಭಯವನ್ನುಂಟು ಮಾಡಿದೆ.‘ಪಟ್ಟಣದ ಜನತೆಗೆ ಉದ್ಯಾನಗಳ ಅಗತ್ಯವಿದೆ ಎಂಬುದನ್ನೇ ಅಧಿಕಾರಿಗಳು ಮರೆತಿದ್ದಾರೆ. ಎಲ್ಲ ಕಡೆಯೂ ಉದ್ಯಾನಗಳು ಹಾಳಾಗಿವೆ. ವಿಷಜಂತುಗಳ ವಾಸಸ್ಥಳಗಳಾಗಿವೆ’ ಎಂದು ಜನರು ಆರೋಪಿಸಿದರು.‘ಉದ್ಯಾನಗಳಲ್ಲಿ ಕುಳಿತುಕೊಳ್ಳಲು ಆಸನಗಳಿಲ್ಲ. ಇರುವ ಆಸನಗಳು ಹಾಳಾಗಿವೆ. ಉದ್ಯಾನಗಳಲ್ಲಿ ಗಿಡ ಗಂಟಿಗಳು ಬೆಳೆದಿವೆ. ಹಾವು, ಚೇಳುಗಳ ಕಾಟ ಹೆಚ್ಚಾಗಿದೆ. ಆರೋಗ್ಯಕರ ಜೀವನಕ್ಕಾಗಿ ವಾಯುವಿಹಾರ ಮಾಡುವ ಸ್ಥಳವಾಗಿರುವ ಉದ್ಯಾನಗಳು ಈಗ ರೋಗಗಳನ್ನು ಹರಡುತ್ತಿವೆ. ಹಂದಿ, ನಾಯಿಗಳು ವಾಸಿಸುವ ತಾಣವಾಗಿ ಮಾರ್ಪಟ್ಟಿವೆ’ ಎಂದು ದೂರಿದರು.‘ಜಯನಗರದಲ್ಲಿರುವ ಉದ್ಯಾನದಲ್ಲಿರುವ ಆಟಿಕೆಗಳು ತುಕ್ಕು ಹಿಡಿದು ಹೋಗಿವೆ. ದೊಡ್ಡ ಪ್ರಮಾಣದಲ್ಲಿ ಕಸ ಬೆಳೆದಿದೆ. ಉದ್ಯಾನವು ಈಗ ಬಯಲು ಶೌಚಾಲಯ ಸ್ಥಳವಾಗಿದೆ. ಮಲ–ಮೂತ್ರ ಮಾಡುವ ಸ್ಥಳವಾಗಿದೆ. ಅಲ್ಲದೇ, ಕೆಲ ಉದ್ಯಾನಗಳು ಅಕ್ರಮ ಚಟುವಟಿಕೆಗಳ ತಾಣವಾಗಿವೆ’ ಎಂದು ಜನರು ದೂರಿದರು.ಸಣ್ಣಬಸಪ್ಪ ಕಡೆಮನಿ, ಸ್ಥಳೀಯ ನಿವಾಸಿಶಿಗ್ಗಾವಿಯಲ್ಲಿರುವ ಎಲ್ಲ ಉದ್ಯಾನಗಳು ನಿರ್ವಹಣೆ ಕೊರತೆಯಿಂದ ಹಾಳಾಗಿದ್ದು, ರೋಗ ಹರಡುವ ತಾಣಗಳಾಗಿ ಮಾರ್ಪಟ್ಟಿವೆ. ಪುರಸಭೆಯ ಅಧಿಕಾರಿಗಳು ಉದ್ಯಾನಗಳ ಅಭಿವೃದ್ಧಿಗೆ ಗಮನ ನೀಡಬೇಕು ಇಲ್ಲದಿದ್ದರೆ, ಪ್ರತಿಭಟನೆ ನಡೆಸಬೇಕಾಗುತ್ತದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260724-22-1016792232