ಸಾಗರ: ಅಂಚೆ ಇಲಾಖೆಗೆ ಕಟ್ಟಡ ಉಡುಗೊರೆ ನೀಡಿದ ನಿವೃತ್ತ ಅಂಚೆ ಪಾಲಕ ಮಂಜಪ್ಪ
ಸಾಗರ (ಶಿವಮೊಗ್ಗ): 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಗ್ರಾಮೀಣ ಅಂಚೆ ಪಾಲಕರೊಬ್ಬರು ತಮ್ಮೂರಿನ ಅಂಚೆ ಕಚೇರಿಗೆ ಸ್ವಂತ ಕಟ್ಟಡ ಇಲ್ಲದ್ದನ್ನು ಮನಗಂಡು ಸ್ವಂತ ಹಣದಲ್ಲಿ ಕಟ್ಟಡವನ್ನು ನಿರ್ಮಿಸಿ ಉಡುಗೊರೆಯಾಗಿ ನೀಡಿ ಮಾದರಿಯಾಗಿದ್ದಾರೆ.ತಾಲ್ಲೂಕಿನ ಖಂಡಿಕಾ ಗ್ರಾಮದ ಮಂಜಪ್ಪ, ಸೇವೆಯಿಂದ ನಿವೃತ್ತರಾದ ವೇಳೆ ತಂದೆ ಲಕ್ಷ್ಮಿನಾರಾಯಣಪ್ಪ ಅವರ ನೆನಪಿಗಾಗಿ ಈ ಕಾರ್ಯ ಮ

ಸಾಗರ (ಶಿವಮೊಗ್ಗ): 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಗ್ರಾಮೀಣ ಅಂಚೆ ಪಾಲಕರೊಬ್ಬರು ತಮ್ಮೂರಿನ ಅಂಚೆ ಕಚೇರಿಗೆ ಸ್ವಂತ ಕಟ್ಟಡ ಇಲ್ಲದ್ದನ್ನು ಮನಗಂಡು ಸ್ವಂತ ಹಣದಲ್ಲಿ ಕಟ್ಟಡವನ್ನು ನಿರ್ಮಿಸಿ ಉಡುಗೊರೆಯಾಗಿ ನೀಡಿ ಮಾದರಿಯಾಗಿದ್ದಾರೆ.ತಾಲ್ಲೂಕಿನ ಖಂಡಿಕಾ ಗ್ರಾಮದ ಮಂಜಪ್ಪ, ಸೇವೆಯಿಂದ ನಿವೃತ್ತರಾದ ವೇಳೆ ತಂದೆ ಲಕ್ಷ್ಮಿನಾರಾಯಣಪ್ಪ ಅವರ ನೆನಪಿಗಾಗಿ ಈ ಕಾರ್ಯ ಮಾಡಿದ್ದಾರೆ. 1991ರಲ್ಲಿ ಅಂಚೆ ಇಲಾಖೆಗೆ ನೌಕರರಾಗಿ ಸೇರಿದ ಮಂಜಪ್ಪ ಅವರು ಜುಲೈ 11ರಂದು ನಿವೃತ್ತರಾದಾಗ ಅವರ ಕೈಗೆ ಸಿಕ್ಕಿದ್ದು ₹ 1.80 ಲಕ್ಷ. ಅದರ ಜತೆಗೆ ತಮ್ಮಲ್ಲಿದ್ದ ಹಣವನ್ನು ಸೇರಿಸಿ ₹ 3 ಲಕ್ಷ ವೆಚ್ಚದಲ್ಲಿ 18x12 ಅಡಿ ಅಳತೆಯ ನಿವೇಶನದಲ್ಲಿ ಅಂಚೆ ಕಚೇರಿಗಾಗಿ ಕಟ್ಟಡ ನಿರ್ಮಿಸಿ ಕೊಟ್ಟಿದ್ದಾರೆ.ಮಂಜಪ್ಪ ಸೇವೆಯಲ್ಲಿ ಇರುವವರೆಗೆ ಅವರ ಮನೆಯೇ ಅಂಚೆ ಕಚೇರಿಯಾಗಿತ್ತು. ನಿವೃತ್ತಿ ನಂತರ ಊರಿಗೊಂದು ಅಂಚೆ ಕಚೇರಿ ಇರಲಿ ಎಂದು ಆಲೋಚಿಸಿದ್ದಲ್ಲದೆ, ಕಟ್ಟಡ ಇಲ್ಲ ಎಂಬ ಕಾರಣಕ್ಕೆ ಇಡೀ ಊರು ಅಂಚೆ ಸೌಲಭ್ಯದಿಂದ ವಂಚಿತವಾಗಬಾರದು ಎಂದು ಈ ಕಾರ್ಯ ಕೈಗೊಂಡಿದ್ದಾರೆ. ಮಂಜಪ್ಪ ಅವರು ವೃತ್ತಿ ಬದುಕಿನ ಶುರುವಿನಲ್ಲಿ ಸೈಕಲ್ ಮೇಲೆ 25 ಕಿ.ಮೀ. ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಅಂಚೆ ಸೇವೆ ನೀಡುತ್ತಾ, ಉತ್ತಮ ಹೆಸರು ಗಳಿಸಿದ್ದರು.ತಂತ್ರಜ್ಞಾನ ಬದಲಾದಂತೆ ಪತ್ರ ವ್ಯವಹಾರ ಕಡಿಮೆಯಾಯಿತು. ಆದರೂ ಮಂಜಪ್ಪ ಅವರ ಉತ್ಸಾಹ ಕುಂದಲಿಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದ ‘ಸುಕನ್ಯಾ ಸಮೃದ್ಧಿ’ ಮತ್ತಿತರ ಕಾರ್ಯಕ್ರಮಗಳ ಬಗ್ಗೆ ಜನತೆಗೆ ತಿಳಿಸಿ, ತಮ್ಮ ವ್ಯಾಪ್ತಿಯ ಪ್ರತಿ ಮನೆಗೂ ಅವು ತಲುಪಲು ಕಾರಣರಾದರು. ಅದಕ್ಕಾಗಿ ಇಲಾಖೆಯ ಪ್ರಶಂಸೆಗೂ ಪಾತ್ರರಾಗಿದ್ದಾರೆ.‘ವೃತ್ತಿ ಬದುಕಿನ ಕೊನೆಯ ಅವಧಿಯಲ್ಲಿ ನಾನು ಪಡೆದ ಸಂಬಳ ಮಾಸಿಕ ₹ 27,000. ಈಗ ಪಿಂಚಣಿ ಸೌಲಭ್ಯವೂ ಇಲ್ಲ. ಇತರ ಇಲಾಖೆಯ ನೌಕರರಿಗೆ ದೊರಕುವ ಹಲವು ಸೌಲಭ್ಯಗಳು ನಮಗಿಲ್ಲ. ಆದರೂ ಜೀವನ ಕಟ್ಟಿಕೊಳ್ಳಲು ನೆರವಾದ ಇಲಾಖೆಗೆ ಪ್ರತಿಯಾಗಿ ಏನಾದರೂ ಕೊಡಬೇಕು ಎಂಬ ಉದ್ದೇಶದಿಂದ ಕಟ್ಟಡ ಕಟ್ಟಿಸಿದ್ದೇನೆ’ ಎಂದು ಮಂಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ಮಂಜಪ್ಪ ಅವರ ಕಾರ್ಯಕ್ಕೆ ಗ್ರಾಮದ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ.ಮಂಜಪ್ಪ ಖಂಡಿಕಾ –ಜಿ.ಆರ್.ಪಂಡಿತ್, ನಿವೃತ್ತ ಅಂಚೆ ನೌಕರ ಸಾಗರಮಂಜಪ್ಪ ಅವರು ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಯ ನಂತರವೂ ಇಲಾಖೆ ಸದಾ ಕಾಲ ನೆನಪಿಡುವ ರೀತಿಯಲ್ಲಿ ಕೊಡುಗೆ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ–ಕೆ.ಎಂ.ಸೂರ್ಯನಾರಾಯಣ, ನಿರ್ದೇಶಕರು ಆಪ್ಸ್ ಕೋಸ್ ಸಂಸ್ಥೆಖಂಡಿಕಾ ಗ್ರಾಮದಲ್ಲಿ ಅಂಚೆ ಕಚೇರಿಗೆ ನಿವೇಶನ ಸಿಗಲು ಮಂಜಪ್ಪ ಅವರ ಅವಿರತ ಪ್ರಯತ್ನವೇ ಕಾರಣ. ಇಂತಹ ಸಮಾಜಮುಖಿ ಚಿಂತನೆಯ ವ್ಯಕ್ತಿಗಳ ಸಂಖ್ಯೆ ಹೆಚ್ಚಾದರೆ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ –ತಾರಾಮಣಿ ಪೋಸ್ಟ್ ಮಾಸ್ಟರ್ ಪ್ರಧಾನ ಅಂಚೆ ಕಚೇರಿ ಸಾಗರ.ನಿವೃತ್ತಿಯ ನಂತರ ತಾವು ಕೆಲಸ ಮಾಡಿದ ಇಲಾಖೆಗೆ ಮರಳಿ ಏನಾದರೂ ಕೊಡಬೇಕು ಎಂಬ ಮನಸ್ಥಿತಿ ಬಹುತೇಕರಿಗೆ ಇರುವುದಿಲ್ಲ. ಆದರೆ ಮಂಜಪ್ಪ ಅವರು ಇಲಾಖೆಗೆ ಕೊಡುಗೆ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ