ನವೆಂಬರ್ 17–19ಕ್ಕೆ ತಂತ್ರಜ್ಞಾನ ಶೃಂಗ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು: ‘ಕೃತಕ ಬುದ್ಧಿಮತ್ತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಅನಾವರಣಕ್ಕೆ ಅವಕಾಶ ಒದಗಿಸುವ 29ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯು ಇದೇ ನವೆಂಬರ್ 17ರಿಂದ 19ರವರೆಗೆ ನಡೆಯಲಿದೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಶೃಂಗಸಭೆಗೆ ಪೂರ್ವಭಾವಿಯಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಉದ್ಯಮ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾ ಅಧ

ಬೆಂಗಳೂರು: ‘ಕೃತಕ ಬುದ್ಧಿಮತ್ತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಅನಾವರಣಕ್ಕೆ ಅವಕಾಶ ಒದಗಿಸುವ 29ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯು ಇದೇ ನವೆಂಬರ್ 17ರಿಂದ 19ರವರೆಗೆ ನಡೆಯಲಿದೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಶೃಂಗಸಭೆಗೆ ಪೂರ್ವಭಾವಿಯಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಉದ್ಯಮ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ (ಸಿಇಒ) ಸಭೆಯಲ್ಲಿ ಅವರು ಮಾತನಾಡಿದರು.‘ಈ ಶೃಂಗಸಭೆಯು ತಂತ್ರಜ್ಞಾನ ಕ್ಷೇತ್ರದ ಜಾಗತಿಕ ಪ್ರತಿಭಾವಂತರು ಹಾಗೂ ಚಿಂತಕರನ್ನು ಒಂದೇ ವೇದಿಕೆಗೆ ಕರೆತರಲಿದೆ. ಕೃತಕ ಬುದ್ಧಿಮತ್ತೆಯ (ಎಐ) ಆಚೆಗೆ ಇರುವ ಹೊಸ ಸಾಧ್ಯತೆಗಳನ್ನು ಅನ್ವೇಷಿಸಲು ಮುನ್ನುಡಿ ಬರೆಯಲಿದೆ. ಭವಿಷ್ಯವನ್ನು ರೂಪಿಸುವ ನವೀನ ಆವಿಷ್ಕಾರ, ಜಾಗತಿಕ ಸಹಭಾಗಿತ್ವ ಮತ್ತು ಪರಿವರ್ತನಾತ್ಮಕ ಚಿಂತನೆಗಳಿಗೆ ಚಾಲನೆ ನೀಡಲಿದೆ’ ಎಂದರು.‘ಮೂರು ದಿನಗಳ ಈ ಶೃಂಗಸಭೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ), ಸುಧಾರಿತ ತಂತ್ರಜ್ಞಾನ, ಹಣಕಾಸು ತಂತ್ರಜ್ಞಾನ, ಆರೋಗ್ಯ ಮತ್ತು ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಭಾರತ–ಅಮೆರಿಕ ತಂತ್ರಜ್ಞಾನ ಸಮಾವೇಶ, ಜಾಗತಿಕ ಸಹಯೋಗ ಸೇರಿದಂತೆ ಹಲವು ವಿಷಯಾಧಾರಿತ ಸಂವಾದಗಳು ನಡೆಯಲಿವೆ’ ಎಂದು ಮಾಹಿತಿ ನೀಡಿದರು.‘ರಾಜ್ಯವು ಜಾಗತಿಕ ಮಟ್ಟದ ಉದ್ಯಮಿಗಳಿಂದ ಅಲ್ಪಾವಧಿಯ ಹೂಡಿಕೆಗಳನ್ನು ನಿರೀಕ್ಷಿಸುತ್ತಿಲ್ಲ. ಬದಲಿಗೆ ದೀರ್ಘಾವಧಿಯ ಪಾಲುದಾರಿಕೆಗೆ ಎದುರು ನೋಡುತ್ತಿದ್ದೇವೆ. ಉದ್ಯಮಗಳು ಮತ್ತು ರಾಜ್ಯ ಒಟ್ಟಿಗೇ ಬೆಳೆಯಬೇಕು. ಇದಕ್ಕಾಗಿ ನಮ್ಮೊಂದಿಗೆ ಕೈಜೋಡಿಸಿ’ ಎಂದು ಉದ್ಯಮಿಗಳಿಗೆ ಆಹ್ವಾನ ನೀಡಿದರು.‘ಟೆಕ್ ಕಂಪನಿಗಳು 40 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಬೆಂಗಳೂರಿನಲ್ಲಿ ಇವೆ. ಇಲ್ಲಿನ ವಾತಾವರಣ, ಉದ್ಯಮಸ್ನೇಹಿ ನೀತಿ, ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲವು ಟೆಕ್ ಕಂಪನಿಗಳಿಗೆ ಪೂರಕವಾಗಿವೆ. ಬೆಂಗಳೂರಿನಿಂದಾಚೆಗೂ ಟೆಕ್ ಉದ್ಯಮಗಳು ಬೆಳೆಯಬೇಕು ಎಂಬುದು ನಮ್ಮ ಸರ್ಕಾರದ ಒತ್ತಾಸೆ. ಹೀಗಾಗಿ ರಾಜ್ಯದ ಎಲ್ಲ ದಿಕ್ಕುಗಳಲ್ಲೂ ಜಾಗತಿಕ ಉತ್ಕೃಷ್ಟತಾ ಕೇಂದ್ರಗಳನ್ನು ಆರಂಭಿಸಿದ್ದೇವೆ. ರಾಜ್ಯದ ಬೇರೆ–ಬೇರೆ ಭಾಗಗಳಲ್ಲಿ, ಬೆಂಗಳೂರಿಗಿಂತಲೂ ಕಡಿಮೆ ವೆಚ್ಚದಲ್ಲಿ ಉದ್ಯಮ ಆರಂಭಿಸುವಂತಹ ವಾತಾವರಣ ನಿರ್ಮಿಸಿದ್ದೇವೆ’ ಎಂದು ಮಾಹಿತಿ ನೀಡಿದರು.‘ಇನ್ನೋವರ್ಸ್ ಪ್ರತಿಷ್ಠಾನʼಕ್ಕೆ ಅಧಿಕೃತ ಚಾಲನೆ: ಕರ್ನಾಟಕವನ್ನು ಡೀಪ್ಟೆಕ್ (ಸುಧಾರಿತ ತಂತ್ರಜ್ಞಾನ) ಕ್ಷೇತ್ರದ ಜಾಗತಿಕ ರಾಜಧಾನಿಯನ್ನಾಗಿ ರೂಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿರುವ ಮಹತ್ವಾಕಾಂಕ್ಷಿ ಉಪಕ್ರಮ ‘ಇನ್ನೋವರ್ಸ್ ಫೌಂಡೇಷನ್'ಗೆ ಸಭೆಯಲ್ಲಿ ಚಾಲನೆ ನೀಡಲಾಯಿತು. 'ಎಲಿವೇಟ್ ನೆಕ್ಸ್ಟ್–2026' (ಸುಧಾರಿತ ತಂತ್ರಜ್ಞಾನ) ಯೋಜನೆಯಡಿ ಆಯ್ಕೆಯಾದ 33 ನವೋದ್ಯಮ ಸಂಸ್ಥೆಗಳ ವಿಜೇತರನ್ನು ಸನ್ಮಾನಿಸಲಾಯಿತು.ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ, ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿಷನ್ ಗ್ರೂಪ್ನ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಜೈವಿಕ ತಂತ್ರಜ್ಞಾನ ಕ್ಷೇತ್ರದ ವಿಷನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಹಾಗೂ 200ಕ್ಕೂ ಹೆಚ್ಚು ಕಂಪನಿಗಳ ಸಿಇಒಗಳು ಸಭೆಯಲ್ಲಿ ಭಾಗಿಯಾಗಿದ್ದರು.ಮೂರು ದಿನಗಳ ತಂತ್ರಜ್ಞಾನ ಹಬ್ಬ * ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆಯಲಿರುವ ಶೃಂಗಸಭೆ * 75ಕ್ಕೂ ಹೆಚ್ಚು ದೇಶಗಳು 1800ಕ್ಕೂ ಹೆಚ್ಚು ಪ್ರದರ್ಶಕರು 20000 ಪ್ರತಿನಿಧಿಗಳು ಮತ್ತು 60000ದಷ್ಟು ಸಂದರ್ಶಕರು ಭಾಗಿಯಾಗುವ ನಿರೀಕ್ಷೆ * ನವೋದ್ಯಮಗಳನ್ನು ಹೂಡಿಕೆದಾರರು ಮಾರ್ಗದರ್ಶಕರು ಹಾಗೂ ಜಾಗತಿಕ ಮಾರುಕಟ್ಟೆಗಳ ಜೊತೆಗೆ ಸಂವಾದಕ್ಕೆ ಅವಕಾಶ ಒದಗಿಸುವ ‘ಭವಿಷ್ಯದ ನಿರ್ಮಾತೃಗಳು’ ಕಾರ್ಯಕ್ರಮವು ಈ ಶೃಂಗಸಭೆಯ ಪ್ರಮುಖ ಆಕರ್ಷಣೆಯಾಗಿರಲಿದೆ * ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಮೀಸಲಾದ ವಿಶೇಷ ಸಮ್ಮೇಳನ ಹಾಗೂ ಪ್ರದರ್ಶನದೊಂದಿಗೆ ‘ಎಂಬೆಡೆಡ್ ವರ್ಲ್ಡ್ ಇಂಡಿಯಾ’ದ ಮೊದಲ ಆವೃತ್ತಿಯನ್ನು ಶೃಂಗಸಭೆಯ ವೇದಿಕೆಯಲ್ಲಿ ಆಯೋಜಿಸಲಾಗುತ್ತಿದೆ‘ಅರ್ಧ ಡಾಲರ್ಗೆ ಒಂದಡಿ ಭೂಮಿ’ ‘ಉದ್ಯಮಗಳಿಗೆ ಕಚೇರಿ ಜಾಗ ದೇಶದ ಬೇರೆ ನಗರಗಳಿಗಿಂತ ಬೆಂಗಳೂರಿನಲ್ಲಿ ಕಡಿಮೆ ವೆಚ್ಚದಲ್ಲಿ ಸಿಗುತ್ತಿದೆ’ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.‘ಬೇರೆ ನಗರಗಳಲ್ಲಿ ಕಚೇರಿ ಜಾಗಕ್ಕೆ ಪ್ರತಿ ಅಡಿಗೆ 3.5 ಡಾಲರ್ ವೆಚ್ಚವಾದರೆ ಬೆಂಗಳೂರಿನಲ್ಲಿ ಕೇವಲ 1 ಡಾಲರ್ ವೆಚ್ಚವಾಗುತ್ತಿದೆ. ಬಿಯಾಂಡ್ ಬೆಂಗಳೂರು ನೀತಿ ಮೂಲಕ ರಾಜ್ಯದ ಇತರೆ ನಗರಗಳಿಗೆ ಉದ್ಯಮಗಳನ್ನು ವಿಸ್ತರಿಸುತ್ತಿದ್ದು ಇದರಿಂದ ಉದ್ಯಮಗಳಿಗೆ ಕಚೇರಿ ಜಾಗ ಪ್ರತಿ ಅಡಿಗೆ ಕೇವಲ ಅರ್ಧ ಡಾಲರ್ಗೆ ಸಿಗುವಂತಾಗಲಿದೆ’ ಎಂದರು. ‘ಮೈಸೂರು ಹುಬ್ಬಳ್ಳಿ-ಧಾರವಾಡ ಮಂಗಳೂರು ಬೆಳಗಾವಿ ಮತ್ತು ಕರ್ನಾಟಕದ ಮೂಲೆ ಮೂಲೆಗೂ ಉದ್ಯಮಗಳನ್ನು ಪರಿಚಯಿಸೋಣ. ಮುಂದಿನ 100 ದಿನಗಳಲ್ಲಿ ಅತ್ಯಂತ ಕೈಗೆಟುಕುವ ವೆಚ್ಚದಲ್ಲಿ ವಿಶ್ವದರ್ಜೆಯ ಕಚೇರಿ ಮೂಲಸೌಕರ್ಯವನ್ನು ಒದಗಿಸುವ ಮೂಲಕ ಕೈಗಾರಿಕೆಗಳು ಬೆಂಗಳೂರಿನ ಆಚೆಗೆ ಸ್ಥಾಪನೆಯಾಗಲು ಪ್ರೋತ್ಸಾಹಿಸುವ ನೀತಿಯನ್ನು ನಾವು ಪರಿಚಯಿಸುತ್ತೇವೆ’ ಎಂದು ವಿವರಿಸಿದರು.