ನುಡಿ ಬೆಳಗು: ಮಗುವಿನ ಆಸೆ
ಒಬ್ಬ ಪ್ರೈಮರಿ ಶಾಲೆಯ ಶಿಕ್ಷಕಿ ಒಂದು ದಿನ ಮಕ್ಕಳಿಗೆ ಒಂದು ಪರೀಕ್ಷೆ ಇಟ್ಟಿದ್ದಳು. ಬಳಿಕ ಮಕ್ಕಳ ಉತ್ತರ ಪತ್ರಿಕೆಗಳನ್ನು ತಿದ್ದಲು ಮನೆಗೆ ತಂದಿದ್ದಳು. ಮಕ್ಕಳ ಉತ್ತರ ಪತ್ರಿಕೆಗಳನ್ನು ಒಂದೊಂದಾಗಿ ನೋಡುತ್ತಿದ್ದಂತೆಯೇ ಅವಳ ಕಣ್ಣುಗಳಿಂದ ಹನಿಗಳು ಜಾರತೊಡಗಿದವು. ಅವಳ ಪತಿ ಅಲ್ಲೇ ಪಕ್ಕದಲ್ಲಿ ಟಿ.ವಿ ನೋಡುತ್ತಿದ್ದನು. ಆತ ಹೆಂಡತಿಯ ಅಳುವಿಗೆ ಕಾರಣವೇನೆಂದು ಕೇಳಿದನು.ಶಿ

ಒಬ್ಬ ಪ್ರೈಮರಿ ಶಾಲೆಯ ಶಿಕ್ಷಕಿ ಒಂದು ದಿನ ಮಕ್ಕಳಿಗೆ ಒಂದು ಪರೀಕ್ಷೆ ಇಟ್ಟಿದ್ದಳು. ಬಳಿಕ ಮಕ್ಕಳ ಉತ್ತರ ಪತ್ರಿಕೆಗಳನ್ನು ತಿದ್ದಲು ಮನೆಗೆ ತಂದಿದ್ದಳು. ಮಕ್ಕಳ ಉತ್ತರ ಪತ್ರಿಕೆಗಳನ್ನು ಒಂದೊಂದಾಗಿ ನೋಡುತ್ತಿದ್ದಂತೆಯೇ ಅವಳ ಕಣ್ಣುಗಳಿಂದ ಹನಿಗಳು ಜಾರತೊಡಗಿದವು. ಅವಳ ಪತಿ ಅಲ್ಲೇ ಪಕ್ಕದಲ್ಲಿ ಟಿ.ವಿ ನೋಡುತ್ತಿದ್ದನು. ಆತ ಹೆಂಡತಿಯ ಅಳುವಿಗೆ ಕಾರಣವೇನೆಂದು ಕೇಳಿದನು.ಶಿಕ್ಷಕಿ ಹೇಳಿದಳು: ‘ಬೆಳಿಗ್ಗೆ ಮಕ್ಕಳಿಗೆ ನನ್ನ ಅತ್ಯಂತ ದೊಡ್ಡ ಆಸೆ ಎಂಬ ವಿಷಯದ ಮೇಲೆ ಪ್ರಬಂಧ ಬರೆಯಲು ಹೇಳಿದ್ದೆ. ಅದರಲ್ಲಿ ಒಂದು ಮಗು, ‘ದೇವರು ನನ್ನನ್ನು ಒಂದು ಟಿ.ವಿ (ಟೆಲಿವಿಷನ್) ಆಗಿ ಮಾಡಲಿ ಎಂದು ಆಸೆ ಪಟ್ಟಿದೆ’.ಇದನ್ನು ಕೇಳಿ ಪತಿ ಜೋರಾಗಿ ನಗಲು ಪ್ರಾರಂಭಿಸಿದನು.ಆಗ ಶಿಕ್ಷಕಿ, ‘ಮುಂದೆ ಕೇಳು.. ಆ ಮಗು ಬರೆದಿದೆ; ‘ನಾನು ಟಿ.ವಿ ಆದರೆ, ಮನೆಯಲ್ಲಿ ನನಗೊಂದು ವಿಶೇಷವಾದ ಜಾಗ ಸಿಗುತ್ತದೆ ಮತ್ತು ಇಡೀ ಕುಟುಂಬ ಸದಾ ನನ್ನ ಸುತ್ತಮುತ್ತಲೇ ಇರುತ್ತದೆ. ನಾನು ಮಾತನಾಡುವಾಗ ಎಲ್ಲರೂ ನನ್ನನ್ನು ಗಮನವಿಟ್ಟು ಕೇಳುತ್ತಾರೆ. ನನ್ನನ್ನು ಯಾರೂ ಮಧ್ಯದಲ್ಲಿ ತಡೆಯುವುದಿಲ್ಲ, ಟೀಕಿಸುವುದಿಲ್ಲ. ನಾನು ಟಿ.ವಿ ಆದರೆ, ಅಪ್ಪ ಆಫೀಸ್ನಿಂದ ಎಷ್ಟು ಸುಸ್ತಾಗಿ ಬಂದರೂ ನನ್ನ ಪಕ್ಕದಲ್ಲೇ ಬಂದು ಕೂರುತ್ತಾರೆ. ಅಮ್ಮನಿಗೆ ಏನಾದರೂ ಟೆನ್ಷನ್ ಆದಾಗಲೂ ನನ್ನನ್ನು ಬೈಯುವುದಿಲ್ಲ, ಬದಲಿಗೆ ನನ್ನ ಜೊತೆಗಿರಲು ಇಷ್ಟಪಡುತ್ತಾಳೆ. ನನ್ನ ಅಣ್ಣ-ಅಕ್ಕಂದಿರು ನನ್ನ ಹತ್ತಿರ ಇರಲು ನನ್ನ ಮೇಲಿನ ಹಕ್ಕಿಗಾಗಿ ಜಗಳ ಆಡುತ್ತಾರೆ. ಅಷ್ಟೇ ಏಕೆ, ಟಿ.ವಿ ಆಫ್ ಆಗಿದ್ದಾಗಲೂ ಅದನ್ನು ತುಂಬಾ ಜಾಗರೂಕತೆಯಿಂದ ದೂಳು ಒರೆಸಿ ನೋಡಿಕೊಳ್ಳುತ್ತಾರೆ. ಮತ್ತು ಹೌದು, ಟಿ.ವಿ ರೂಪದಲ್ಲಿ ನಾನು ಎಲ್ಲರಿಗೂ ಸಂತೋಷವನ್ನು ಕೊಡಬಲ್ಲೆ...’ಇದನ್ನು ಕೇಳಿದ ಪತಿ ಕೂಡ ಗಂಭೀರನಾಗಿ, ‘ಹೇ ಭಗವಂತ, ಪಾಪ ಮಗು.. ಅದರ ತಂದೆ-ತಾಯಿ ಅದರ ಕಡೆ ಸ್ವಲ್ಪವೂ ಗಮನ ಹರಿಸುವುದಿಲ್ಲ ಅನ್ನಿಸುತ್ತೆ’ ಎಂದನು.ಹೆಂಡತಿಯು ಹನಿಗೂಡಿದ ಕಣ್ಣುಗಳಿಂದ ಗಂಡನ ಕಡೆಗೆ ನೋಡುತ್ತಾ ಹೇಳಿದಳು: ‘ಗೊತ್ತಾ, ಆ ಮಗು ಯಾರು ಅಂತ? ನಮ್ಮದೇ ಮಗು.. ನಮ್ಮ ಚೋಟು’ಒಮ್ಮೆ ಯೋಚಿಸಿ, ಈ ‘ಚೋಟು’ ಎಲ್ಲೋ ನಿಮ್ಮದೇ ಮಗುವಾಗಿರಬಾರದಲ್ಲವೇ? ಇಂದಿನ ಧಾವಂತದ ಬದುಕಿನಲ್ಲಿ ನಮಗೆ ಈಗಾಗಲೇ ಒಬ್ಬರಿಗೊಬ್ಬರು ಸಮಯ ಕೊಡುವುದು ಕಷ್ಟವಾಗಿದೆ. ಹಾಗಿರುವಾಗ ಸಿಗುವ ಅಲ್ಪ ಸಮಯವನ್ನೂ ನಾವು ಟಿ.ವಿ ನೋಡುವುದರಲ್ಲಿ, ಮೊಬೈಲ್ ಗೇಮ್ ಆಡುವುದರಲ್ಲಿ ಅಥವಾ ಫೇಸ್ಬುಕ್-ಇನ್ಸ್ಟಾಗ್ರಾಂಗಳಿಗೆ ಅಂಟಿಕೊಳ್ಳುವುದರಲ್ಲಿ ಕಳೆದುಬಿಟ್ಟರೆ, ನಮ್ಮ ನೈಜ ಸಂಬಂಧಗಳ ಮೌಲ್ಯವನ್ನು ಮತ್ತು ಅದರಿಂದ ಸಿಗುವ ಪ್ರೀತಿಯನ್ನು ನಾವು ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.ನಮ್ಮ ನಿರ್ಲಕ್ಷ್ಯದ ಕಾರಣದಿಂದಾಗಿ ಯಾವುದೇ ಒಂದು ಮಗು ತಾನು ‘ಟಿ.ವಿ’ ಆಗಬೇಕೆಂದು ಬಯಸುವ ಪರಿಸ್ಥಿತಿ ಬಾರದಿರಲಿ. ಮಕ್ಕಳಿಗೆ ನಾವು ಕೊಡುವ ಅತ್ಯಂತ ಅಮೂಲ್ಯವಾದ ಉಡುಗೊರೆ ಎಂದರೆ ಅದು ಹಣ ಅಥವಾ ಆಟಿಕೆಗಳಲ್ಲ; ಬದಲಿಗೆ ನಮ್ಮ ಸಮಯ ಮತ್ತು ಗಮನ. ತಂತ್ರಜ್ಞಾನ ಬದುಕನ್ನು ಸುಲಭವಾಗಿಸಬೇಕೇ ಹೊರತು, ಪ್ರೀತಿಪಾತ್ರರಿಂದ ನಮ್ಮನ್ನು ದೂರ ಮಾಡಬಾರದು.