ಹೇಮಾವತಿ ಸಂತ್ರಸ್ತರ ಭೂ ಮಂಜೂರಾತಿ ಅಕ್ರಮ: ಬಂಧನ ಭೀತಿ; ಅಧಿಕಾರಿ, ಸಿಬ್ಬಂದಿ ರಜೆ
ಸಕಲೇಶಪುರ (ಹಾಸನ): ಅಕ್ರಮ ಭೂ ಮಂಜೂರಾತಿ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಕಂದಾಯ, ಭೂಮಾಪನಾ ಇಲಾಖೆಯ ನೂರಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಮೂಹಿಕ ರಜೆ ಮೇಲೆ ತೆರಳಿದ್ದಾರೆ! ಇನ್ನು ಕೆಲವರು ಮೊಬೈಲ್ ಫೋನ್ ಬಂದ್ ಮಾಡಿಕೊಂಡು ಕಚೇರಿಗೆ ಗೈರಾಗಿದ್ದಾರೆ.ಹೇಮಾವತಿ, ಯಗಚಿ ಹಾಗೂ ವಾಟೇಹೊಳೆ ಜಲಾಶಯಗಳಿಗಾಗಿ ಜಮೀನು ಕಳೆದುಕೊಂಡ ಸಂತ್ರಸ್ತರ ಹೆಸರಿ

ಸಕಲೇಶಪುರ (ಹಾಸನ): ಅಕ್ರಮ ಭೂ ಮಂಜೂರಾತಿ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಕಂದಾಯ, ಭೂಮಾಪನಾ ಇಲಾಖೆಯ ನೂರಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಮೂಹಿಕ ರಜೆ ಮೇಲೆ ತೆರಳಿದ್ದಾರೆ! ಇನ್ನು ಕೆಲವರು ಮೊಬೈಲ್ ಫೋನ್ ಬಂದ್ ಮಾಡಿಕೊಂಡು ಕಚೇರಿಗೆ ಗೈರಾಗಿದ್ದಾರೆ.ಹೇಮಾವತಿ, ಯಗಚಿ ಹಾಗೂ ವಾಟೇಹೊಳೆ ಜಲಾಶಯಗಳಿಗಾಗಿ ಜಮೀನು ಕಳೆದುಕೊಂಡ ಸಂತ್ರಸ್ತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಂಜೂರು ಮಾಡಿದ ಪ್ರಕರಣದಲ್ಲಿ ಈ ಎಲ್ಲರಿಗೂ ಬಂಧನದ ಭೀತಿ ಎದುರಾಗಿದೆ.ಬೇಲೂರಿನ ಬಗರ್ಹುಕುಂ ಅಕ್ರಮ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಚೆಗೆ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಸೇರಿ 16 ಜನರನ್ನು ಬಂಧಿಸಲಾಗಿತ್ತು. ಪಿರಿಯಾಪಟ್ಟಣ ತಾಲ್ಲೂಕಿನ ಭೂಮಾಪನಾ ಇಲಾಖೆಯ ಎಂಟು ಮಂದಿಯ ಬಂಧನವಾಗಿತ್ತು. ಈ ಬೆಳವಣಿಗೆ ನಂತರ ಹೆದರಿರುವ ಇಲ್ಲಿನ ಕಂದಾಯ, ಭೂಮಾಪನಾ ಇಲಾಖೆಯ ಅಧಿಕಾರಿಗಳು, ನೌಕರರು ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡು ಕಚೇರಿಗೆ ಬರುತ್ತಿಲ್ಲ.2015ರಿಂದ 2019ರ ಅವಧಿಯಲ್ಲಿ ತಾಲ್ಲೂಕಿನ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಿದ್ದ ಈ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅದರ ಆಧಾರದಲ್ಲಿ ಪೊಲೀಸರ ಕಾರ್ಯಾಚರಣೆ ನಡೆಯಬಹುದು ಎನ್ನುವ ಆತಂಕ ನೌಕರರನ್ನು ಕಾಡುತ್ತಿದೆ.ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಹೊಳೆನರಸೀಪುರ, ಅರಕಲಗೂಡು ತಾಲ್ಲೂಕುಗಳಲ್ಲಿ ಕೆಲಸ ಮಾಡಿದ್ದ ಹಾಗೂ ಈಗಲೂ ಕೆಲಸ ಮಾಡುತ್ತಿರುವ ತಹಶೀಲ್ದಾರರು, ಉಪ ತಹಶೀಲ್ದಾರರು ಸೇರಿ ವಿವಿಧ ಹಂತಗಳ 150ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿ ವರ್ಗದವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆರೋಪಿಗಳಾಗಿರುವುದು ತನಿಖಾ ವರದಿಯಲ್ಲಿ ದಾಖಲಾಗಿದೆ.‘ಎಚ್ಆರ್ಪಿ ಮಂಜೂರಾತಿ ಪ್ರಕರಣದಲ್ಲಿ ತಹಶೀಲ್ದಾರ್ ಜೊತೆ ನಾವೂ ಸ್ಥಳ ಪರಿಶೀಲನೆಗೆ ಹೋಗಿದ್ದು ನಿಜ. ಅವರ ನಿರ್ದೇಶನದಂತೆ ಸಹಿ ಹಾಕಿದ್ದೇವೆ. ದೋಷಾರೋಪ ಪಟ್ಟಿಯಲ್ಲಿ ನನ್ನ ಹೆಸರೂ ಇದೆ. ನನಗೇನೂ ಭಯ ಇಲ್ಲ. ಕೆಲಸ ಮಾಡುತ್ತಿದ್ದೇನೆ. ತನಿಖಾಧಿಕಾರಿಗಳ ಮುಂದೆ ಸತ್ಯ ಹೇಳುತ್ತೇನೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಂದಾಯ ಇಲಾಖೆ ನೌಕರರೊಬ್ಬರು.ಮಂಜುನಾಥ್, ಎಚ್ಆರ್ಪಿ ವಿಶೇಷ ಭೂ ಸ್ವಾಧೀನಾಧಿಕಾರಿಎಚ್ಆರ್ಪಿ ಭೂ ಹಗರಣದಲ್ಲಿ 141 ಅಧಿಕಾರಿಗಳು, ನೌಕರರ ವಿರುದ್ಧ ಶಿಸ್ತು ಕ್ರಮಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗೆ ಈಗಾಗಲೇ ವರದಿ ಸಲ್ಲಿಸಲಾಗಿದೆ.ಏನಿದು ಪ್ರಕರಣ?ಹೇಮಾವತಿ ಜಲಾಶಯ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ಸುಮಾರು 10 ಸಾವಿರ ರೈತರಿಗೆ ವಿತರಿಸಲು ಜಿಲ್ಲೆಯ ವಿವಿಧೆಡೆ ಭೂಮಿ ಕಾದಿರಿಸಲಾಗಿತ್ತು. ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ ಅನರ್ಹರಿಗೆ ಜಮೀನು ಮಂಜೂರು ಮಾಡಿದ್ದಾರೆ.2005ರಿಂದ 2019ರವರೆಗಿನ ಅವಧಿಯಲ್ಲಿ ನಡೆದ ಇಂತಹ ಒಟ್ಟು 977 ಪ್ರಕರಣಗಳನ್ನು ಗುರುತಿಸಿದ ಕಂದಾಯ ಇಲಾಖೆಯ ಪುನರ್ವಸತಿ, ಪುನರ್ನಿರ್ಮಾಣ ಆಯುಕ್ತರಾಗಿದ್ದ ಮೊಹಮ್ಮದ್ ಮೊಹಸಿನ್, ದಾಖಲೆಗಳ ಪರಿಶೀಲನೆಗೆ ಚಿಕ್ಕಮಗಳೂರು, ಹಾಸನದ ಹೆಚ್ಚುವರಿ ಜಿಲ್ಲಾಧಿಕಾರಿ, ಬೆಂಗಳೂರು ಮತ್ತು ಮೈಸೂರಿನ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಿಗೆ ಪ್ರಕರಣಗಳ ಹಂಚಿಕೆ ಮಾಡಿದ್ದರು. ಈ ಪೈಕಿ 535 ಪ್ರಕರಣಗಳಲ್ಲಿ ಭೂ ಮಂಜೂರಾತಿ ರದ್ದುಪಡಿಸಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ. 442 ಪ್ರಕರಣಗಳು ಅರಣ್ಯ ಇಲಾಖೆಗೆ ಸಂಬಂಧಿಸಿದ್ದರಿಂದ ಬಾಕಿ ಉಳಿದಿವೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260724-36-1084310927