‘ಸಂಸತ್ ಚಲೊ’ ಪ್ರತಿಭಟನೆ: NIA ತನಿಖೆಗೆ ನಿರ್ದೇಶಿಸಲು ದೆಹಲಿ ಹೈಕೋರ್ಟ್ ನಕಾರ
ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ ಜುಲೈ 20ರಂದು ನಡೆದ ‘ಸಂಸತ್ ಚಲೊ’ ವೇಳೆ ನಡೆದ ಹಿಂಸಾಚಾರ ಕುರಿತ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನಡೆಸುವಂತೆ ಆದೇಶಿಸಬೇಕೆಂದು ಕೋರಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.‘ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆ, 2008ರ ಸೆಕ್ಷನ್ 6ರಡಿ ಯಾ

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ ಜುಲೈ 20ರಂದು ನಡೆದ ‘ಸಂಸತ್ ಚಲೊ’ ವೇಳೆ ನಡೆದ ಹಿಂಸಾಚಾರ ಕುರಿತ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನಡೆಸುವಂತೆ ಆದೇಶಿಸಬೇಕೆಂದು ಕೋರಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.‘ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆ, 2008ರ ಸೆಕ್ಷನ್ 6ರಡಿ ಯಾವುದೇ ಪ್ರಕರಣವನ್ನು ಎನ್ಐಎಗೆ ಒಪ್ಪಿಸುವ ನಿರ್ಧಾರವು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವಿವೇಚನೆಗೆ ಒಳಪಟ್ಟಿರುತ್ತದೆ. ಅಪರಾಧದ ಗಂಭೀರತೆ ಮತ್ತು ಇತರ ಸಂಬಂಧಿತ ಅಂಶಗಳನ್ನು ಮೌಲ್ಯಮಾಪನ ಮಾಡಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರ ಪೀಠವು ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.‘ಯಾವುದೇ ವಿಷಯದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಕಾನೂನುಬದ್ಧವಾಗಿ ಕೇಂದ್ರ ಸರ್ಕಾರಕ್ಕೆ ಇದ್ದಾಗ, ನ್ಯಾಯಾಲಯವು ತನ್ನ ಸ್ವಂತ ಅಭಿಪ್ರಾಯವನ್ನು ಅದರ ಮೇಲೆ ಹೇರಲು ಸಾಧ್ಯವಿಲ್ಲ’ ಎಂದೂ ಹೇಳಿದೆ.ಅಖಿಲ ಭಾರತ ಹಿಂದೂ ಮಹಾಸಭಾದ ಮಾಜಿ ಉಪಾಧ್ಯಕ್ಷ ಸತೀಶ್ ಕುಮಾರ್ ಅಗರ್ವಾಲ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದು, ‘ಈ ಪ್ರತಿಭಟನೆಯು ಸ್ವಯಂಪ್ರೇರಿತ ವಿದ್ಯಾರ್ಥಿ ಆಂದೋಲನವಾಗಿಲ್ಲ. ಇದು ರಾಜಕೀಯ ನಾಯಕರು, ರಾಷ್ಟ್ರವಿರೋಧಿ ಶಕ್ತಿಗಳು ಮತ್ತು ವಿದೇಶಿ ಧನಸಹಾಯ ಪಡೆಯುವ ಸಂಸ್ಥೆಗಳನ್ನು ಒಳಗೊಂಡ ದೊಡ್ಡ ಪಿತೂರಿಯ ಭಾಗವಾಗಿದೆ. ಇದು ಹಿಂಸಾಚಾರ, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಗಳಿಗೆ ಹಾನಿ, ಪತ್ರಕರ್ತರ ಮೇಲಿನ ದಾಳಿ, ಸಂಸತ್ತಿನ ಭದ್ರತೆಯನ್ನು ಉಲ್ಲಂಘಿಸುವ ಯತ್ನವಾಗಿದೆ’ ಎಂದು ಆರೋಪಿಸಿದ್ದಾರೆ. ಅರ್ಜಿದಾರರ ಪರವಾಗಿ ಹಾಜರಾದ ವಕೀಲ ಬರುಣ್ ಕುಮಾರ್ ಸಿನ್ಹಾ, ‘ರಸ್ತೆತಡೆ, ಮೆಟ್ರೊ ರೈಲು ನಿಲ್ದಾಣ ಬಂದ್, ನಾಗರಿಕ ಹಕ್ಕುಗಳ ಉಲ್ಲಂಘನೆಯಂತಹ ಘಟನೆಗಳು ನಡೆದಿವೆ. ಹೀಗಾಗಿ, ಈ ಪ್ರಕರಣ ಗಂಭೀರತೆಯನ್ನು ಪರಿಗಣಿಸಿ ವಿಶೇಷ ತನಿಖೆ ನಡೆಸಬೇಕು’ ಎಂದು ಮನವಿ ಮಾಡಿದ್ದಾರೆ.‘ಶಾಸನಬದ್ಧ ಕಾರ್ಯವಿಧಾನವನ್ನು ಮೀರಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್ ದೃಢವಾಗಿ ಹೇಳಿದೆ. ಅರ್ಜಿದಾರರು ಅರ್ಜಿಯನ್ನು ಹಿಂಪಡೆದಿದ್ದಾರೆ.