ನ್ಯಾಯಾಲಯದ ಕಲಾಪದ ವಿಡಿಯೊ ಪೋಸ್ಟ್ಗೆ ನಿಷೇಧ: ಸುಪ್ರೀಂ ಕೋರ್ಟ್
ನವದೆಹಲಿ: ಸುಪ್ರೀಂ ಕೋರ್ಟ್ನ ಪ್ರಧಾನ ಕಾರ್ಯದರ್ಶಿ ಅಥವಾ ಹೈಕೋರ್ಟ್ಗಳ ರಿಜಿಸ್ಟ್ರಾರ್ ಜನರಲ್ಗಳ ಪೂರ್ವಾನುಮತಿ ಇಲ್ಲದೆ ನ್ಯಾಯಾಲಯದ ಕಲಾಪಗಳ ನೇರ ಪ್ರಸಾರದ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಪೋಸ್ಟ್, ಮರು ಪೋಸ್ಟ್ ಹಾಗೂ ಅಪ್ಲೋಡ್ ಮಾಡುವುದಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ನಿಷೇಧ ಹೇರಿದೆ.ಈ ಆದೇಶದಿಂದ, ಕಾನೂ

ನವದೆಹಲಿ: ಸುಪ್ರೀಂ ಕೋರ್ಟ್ನ ಪ್ರಧಾನ ಕಾರ್ಯದರ್ಶಿ ಅಥವಾ ಹೈಕೋರ್ಟ್ಗಳ ರಿಜಿಸ್ಟ್ರಾರ್ ಜನರಲ್ಗಳ ಪೂರ್ವಾನುಮತಿ ಇಲ್ಲದೆ ನ್ಯಾಯಾಲಯದ ಕಲಾಪಗಳ ನೇರ ಪ್ರಸಾರದ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಪೋಸ್ಟ್, ಮರು ಪೋಸ್ಟ್ ಹಾಗೂ ಅಪ್ಲೋಡ್ ಮಾಡುವುದಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ನಿಷೇಧ ಹೇರಿದೆ.ಈ ಆದೇಶದಿಂದ, ಕಾನೂನುಬದ್ಧವಾಗಿ ವರದಿಗಾರಿಕೆ ಮಾಡುವವರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.ನ್ಯಾಯಾಲಯದ ಕಲಾಪಗಳ ನೇರ ಪ್ರಸಾರದ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಎಲ್ಲ ಹೈಕೋರ್ಟ್ಗಳು, ಕೇಂದ್ರ ಸರ್ಕಾರ ಹಾಗೂ ಮೆಟಾ, ‘ಎಕ್ಸ್’ ಸೇರಿದಂತೆ ಪ್ರಮುಖ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ.ಅನುಮತಿ ಇಲ್ಲದೆ ನ್ಯಾಯಾಲಯದ ಕಲಾಪಗಳ ವಿಡಿಯೊಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದು, ಮಾರ್ಪಡಿಸುವುದು, ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಪೀಠವು ಮಧ್ಯಂತರ ಆದೇಶದಲ್ಲಿ ತಿಳಿಸಿದೆ.ಅರ್ಜಿದಾರರ ಪರವಾಗಿ ಹಾಜರಿದ್ದ ಹಿರಿಯ ವಕೀಲ ವಿಕಾಸ್ ಸಿಂಗ್, ‘ನ್ಯಾಯಾಲಯದ ಕಲಾಪಗಳಲ್ಲಿ ಪಾರದರ್ಶಕತೆ ಮತ್ತು ಮುಕ್ತ ನ್ಯಾಯದಾನವನ್ನು ಉತ್ತೇಜಿಸಲು ನೇರ ಪ್ರಸಾರವನ್ನು ಪರಿಚಯಿಸಲಾಗಿದೆ. ಆದರೆ, ಇದಕ್ಕೆ ಯಾವುದೇ ನಿಯಂತ್ರಣ ಕ್ರಮಗಳು ಇಲ್ಲ. ಸಂಚಲನ ಸೃಷ್ಟಿಸಲು ಮತ್ತು ಹಣ ಗಳಿಕೆ ಉದ್ದೇಶದಿಂದ ನೇರ ಪ್ರಸಾರವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ’ ಎಂದು ಗಮನ ಸೆಳೆದರು.‘ನ್ಯಾಯಾಲಯದ ನಡಾವಳಿಗಳನ್ನು ತಿರುಚಲು, ತಪ್ಪುದಾರಿಗೆ ಎಳೆಯುವ ಶೀರ್ಷಿಕೆಗಳೊಂದಿಗೆ ಎಡಿಟ್ ಮಾಡಿದ ವಿಡಿಯೊ ತುಣುಕುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು. ಸಿಂಗ್ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನದ ಮೂಲಕ ವ್ಯಕ್ತಿಯ ತುಟಿಗಳ ಚಲನೆ ಮತ್ತು ಧ್ವನಿಯನ್ನು ಹಾಗೇ ಉಳಿಸಿಕೊಂಡು, ಮಾತುಗಳನ್ನು ಬದಲಾಯಿಸಿ ವಿಡಿಯೊಗಳನ್ನು ಸೃಷ್ಟಿಸಲು ಸಾಧ್ಯವಿದೆ. ಇದರಿಂದ ತಪ್ಪುಮಾಹಿತಿಯನ್ನು ಪ್ರಸಾರ ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ನಿಯಂತ್ರಣ ಕ್ರಮಗಳ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.‘ನನ್ನ ಹೇಳಿಕೆಯನ್ನೇ ತಿರುಚಲಾಗಿದೆ’ ‘ಕೆಲವೊಮ್ಮೆ ನನ್ನ ಹೇಳಿಕೆಗಳನ್ನು ಸಹ ತಿರುಚಿ ಮುದ್ರಣ ಮಾಧ್ಯಮದಲ್ಲಿ ಪ್ರಕಟಿಸಲಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಬೇಸರ ವ್ಯಕ್ತಪಡಿಸಿದ್ದಾರೆ.‘ನೇರ ಪ್ರಸಾರದ ಮಾರ್ಗಸೂಚಿಗಳ ಅನುಷ್ಠಾನದ ಕುರಿತು ಹೈಕೋರ್ಟ್ಗಳು ವರದಿ ಸಲ್ಲಿಸಬೇಕು. ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ನೋಡಲ್ ಸಂಸ್ಥೆಯನ್ನು ಕೇಂದ್ರ ಸರ್ಕಾರವು ಗೊತ್ತುಪಡಿಸಬೇಕು’ ಎಂದು ನಿರ್ದೇಶನ ನೀಡಿದ್ದಾರೆ.