ಬಾಡಿಹೋದ ಸೂರ್ಯಕಾಂತಿ ಗಿಡ ನೋಡಿ ರೈತರಿಗೆ ಧೈರ್ಯ ತುಂಬಿದ ಸಿಎಂ ಡಿ.ಕೆ.ಶಿವಕುಮಾರ್
ಚಿತ್ರದುರ್ಗ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ಹಿರಿಯೂರು ತಾಲ್ಲೂಕಿನ ವದ್ದೀಕೆರೆ ಗ್ರಾಮದ ಜಮೀನಿನಲ್ಲಿ ಮಳೆ ಇಲ್ಲದೇ ಒಣಗುತ್ತಿರುವ ಸೂರ್ಯಕಾಂತಿ ಬೆಳೆ ವೀಕ್ಷಣೆ ಮಾಡಿದರು. ಕಾಯಿ ಕಟ್ಟುವ ಹಂತದಲ್ಲಿ ಬಾಡಿ ಹೋಗಿರುವ ಗಿಡಗಳನ್ನು ಮುಟ್ಟಿ ಪರಿಶೀಲಿಸಿದರು.ಬೆಂಗಳೂರು ವಲಯ ಮಟ್ಟದ ಪ್ರಗತಿ ಪರಿಶೀಲನೆ ಅಂಗವಾಗಿ ಜಿಲ್ಲೆಗೆ ಬಂದ ಮುಖ್ಯಮಂತ್ರಿಗಳು ಹಿರಿಯೂರು

ಚಿತ್ರದುರ್ಗ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ಹಿರಿಯೂರು ತಾಲ್ಲೂಕಿನ ವದ್ದೀಕೆರೆ ಗ್ರಾಮದ ಜಮೀನಿನಲ್ಲಿ ಮಳೆ ಇಲ್ಲದೇ ಒಣಗುತ್ತಿರುವ ಸೂರ್ಯಕಾಂತಿ ಬೆಳೆ ವೀಕ್ಷಣೆ ಮಾಡಿದರು. ಕಾಯಿ ಕಟ್ಟುವ ಹಂತದಲ್ಲಿ ಬಾಡಿ ಹೋಗಿರುವ ಗಿಡಗಳನ್ನು ಮುಟ್ಟಿ ಪರಿಶೀಲಿಸಿದರು.ಬೆಂಗಳೂರು ವಲಯ ಮಟ್ಟದ ಪ್ರಗತಿ ಪರಿಶೀಲನೆ ಅಂಗವಾಗಿ ಜಿಲ್ಲೆಗೆ ಬಂದ ಮುಖ್ಯಮಂತ್ರಿಗಳು ಹಿರಿಯೂರು ತಾಲ್ಲೂಕಿನ 2 ಕಡೆಗಳಲ್ಲಿ ಬೆಳೆ ಪರಿಶೀಲನೆ ನಡೆಸಿದರು. ವದ್ದೀಕೆರೆಯ ಪಿ.ಕೆ.ಪಾಂಡುರಂಗರೆಡ್ಡಿ ಅವರ ಜಮೀನಿನಲ್ಲಿ ಬೆಳೆದಿದ್ದ ಸೂರ್ಯಕಾಂತಿ ಬೆಳೆ ಪರಿಶೀಲಿಸಿದರು. ‘ಜೂನ್ ತಿಂಗಳಲ್ಲಿ ಸುರಿದ ಅಲ್ಪಮಳೆಗೆ ಸೂರ್ಯಕಾಂತಿ ಬಿತ್ತನೆ ಮಾಡಿದ್ದೆವು. ಗಿಡ ಒಂದು ಅಡಿ ಬೆಳೆದಿದ್ದು ಈಗ 2 ಹದ ಮಳೆ ಬೇಕಾಗಿತ್ತು. ಮಳೆ ಬಾರದ ಕಾರಣ ಗಿಡಗಳು ನಾಶವಾಗುತ್ತಿವೆ’ ಎಂದು ರೈತರು ಮುಖ್ಯಮಂತ್ರಿಗಳಿಗೆ ವಿವರಿಸಿದರು.ಹಿರಿಯೂರು ತಾಲ್ಲೂಕಿನಲ್ಲಿ ಪ್ರಮುಖ ಬೆಳೆಯಾಗಿರುವ ಶೇಂಗಾ ಬಿತ್ತನೆಯಾಗದಿರುವುದನ್ನು ಮುಖ್ಯಮಂತ್ರಿಗಳು ಕಣ್ಣಾರೆ ಕಂಡರು. ಬಿತ್ತನೆಯಾಗಿದೇ ಬಟಾಬಯಲಿನಂತಿರುವ ಜಮೀನುಗಳನ್ನು ವೀಕ್ಷಣೆ ಮಾಡಿದರು. ದೂಳಿನಂತಿದ್ದ ಮಣ್ಣು ಮುಟ್ಟಿ ನೋಡಿದರು. ಯರಬಳ್ಳಿ ಗ್ರಾಮದ ಮಹಾಲಿಂಗಯ್ಯ ಅವರ ಜಮೀನಿನಲ್ಲಿ ನಿಂತು ರೈತರ ಅಹವಾಲು ಆಲಿಸಿದರು.‘ಬಿತ್ತನೆ ಬೀಜ ಸಿದ್ಧವಿದೆ, ಜಮೀನು ಹಸನುಗೊಳಿಸಿದ್ದೇವೆ. ಮಳೆರಾಯ ಕೃಪೆ ತೋರದ ಕಾರಣ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಅವಧಿ ಮೀರುತ್ತಿದ್ದು ವಾರದೊಳಗೆ ಶೇಂಗಾ ಬಿತ್ತನೆಯಾಗದಿದ್ದರೆ ಇಡೀ ವರ್ಷ ವ್ಯರ್ಥವಾಗುತ್ತದೆ. ಆಗ ನಮ್ಮನ್ನು ದೇವರೇ ಕಾಪಾಡಬೇಕು’ ಎಂದು ರೈತರು ಮುಖ್ಯಮಂತ್ರಿಗಳ ಮುಂದೆ ಅವಲತ್ತುಕೊಂಡರು. ‘ತಪ್ಪದೇ ಬೆಳೆ ವಿಮೆ ಮಾಡಿಸಿ, ಸರ್ಕಾರ ರೈತರ ಜೊತೆ ನಿಲ್ಲಲಿದೆ’ ಎಂದು ಡಿ.ಕೆ.ಶಿವಕುಮಾರ್ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಈಶ್ವರ ಖಂಡ್ರೆ, ಶಾಸಕರಾದ ಟಿ.ರಘುಮೂರ್ತಿ ಇದ್ದರು.