ಬೆಂಗಳೂರು: ಹಳಿಗೆ ಕಸ ಹಾಕಿದರೆ ಬೀಳಲಿದೆ ದಂಡ
ಬೆಂಗಳೂರು: ರೈಲ್ವೆ ಹಳಿಗಳ ಮೇಲೆ ಕಸ ಬಿಸಾಡುವವರಿಗೆ ದಂಡ ಬೀಳಲಿದೆ. ವಾಹನದಲ್ಲಿ ತ್ಯಾಜ್ಯ ತಂದು ಸುರಿದರೆ ವಾಹನ ಜಪ್ತಿಯಾಗಲಿದೆ. ಅದಕ್ಕಾಗಿ ರೈಲ್ವೆ ಮತ್ತು ಜಿಬಿಎ ಸಮನ್ವಯದೊಂದಿಗೆ ಕಾರ್ಯಾಚರಣೆ ನಡೆಯಲಿದೆ.ರೈಲು ಹಳಿ ಅಥವಾ ಆವರಣದಲ್ಲಿ ಕಸ ಹಾಕಿದರೆ ರೈಲ್ವೆಯು ₹ 100ರಿಂದ ₹ 500ರವರೆಗೆ ದಂಡ ವಿಧಿಸಬಹುದು ಎಂಬ ನಿಯಮ ಇದೆ. ಹಳಿ ಅಥವಾ ನಿಲ್ದಾಣದಲ್ಲಿ ಉಗುಳುವುದು, ಮೂತ

ಬೆಂಗಳೂರು: ರೈಲ್ವೆ ಹಳಿಗಳ ಮೇಲೆ ಕಸ ಬಿಸಾಡುವವರಿಗೆ ದಂಡ ಬೀಳಲಿದೆ. ವಾಹನದಲ್ಲಿ ತ್ಯಾಜ್ಯ ತಂದು ಸುರಿದರೆ ವಾಹನ ಜಪ್ತಿಯಾಗಲಿದೆ. ಅದಕ್ಕಾಗಿ ರೈಲ್ವೆ ಮತ್ತು ಜಿಬಿಎ ಸಮನ್ವಯದೊಂದಿಗೆ ಕಾರ್ಯಾಚರಣೆ ನಡೆಯಲಿದೆ.ರೈಲು ಹಳಿ ಅಥವಾ ಆವರಣದಲ್ಲಿ ಕಸ ಹಾಕಿದರೆ ರೈಲ್ವೆಯು ₹ 100ರಿಂದ ₹ 500ರವರೆಗೆ ದಂಡ ವಿಧಿಸಬಹುದು ಎಂಬ ನಿಯಮ ಇದೆ. ಹಳಿ ಅಥವಾ ನಿಲ್ದಾಣದಲ್ಲಿ ಉಗುಳುವುದು, ಮೂತ್ರ ಮಾಡುವುದು, ಗಲೀಜು ಮಾಡಿದರೂ ಕೂಡ ದಂಡ ಇದೆ. ಆದರೆ, ಇದು ರೈಲು ನಿಲ್ದಾಣದ ಸುತ್ತಮುತ್ತ ಮಾತ್ರ ಕಾರ್ಯರೂಪದಲ್ಲಿದೆ. ಪ್ರಯಾಣಿಕರು ಈ ರೀತಿ ಮಾಡಿದಾಗ ದಂಡ ಬೀಳುತ್ತಿದೆ. ನಿಲ್ದಾಣದಿಂದ ಹೊರ ಭಾಗಗಳಲ್ಲಿ ಹಳಿ ಹಾದು ಹೋಗುವಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಕಾರ್ಯಸೂಚಿ ಸಿದ್ಧಗೊಳ್ಳುತ್ತಿದೆ.ಬೆಂಗಳೂರು–ರಾಜಾನುಕುಂಟೆ, ಬೆಂಗಳೂರು – ಯಲಹಂಕ, ಬೆಂಗಳೂರು – ಕಾರ್ಮೆಲಾರಾಂ, ಬೆಂಗಳೂರು– ಕೆಂಗೇರಿ, ಬೆಂಗಳೂರು – ವೈಟ್ಫೀಲ್ಡ್ ಹೀಗೆ ನಗರದಿಂದ ಸಾಗುವ ವಿವಿಧ ರೈಲು ಮಾರ್ಗಗಳನ್ನು ಕಸ ಬಿಸಾಡುವ ಪ್ರದೇಶ ಎಂಬಂತೆ ಸಾರ್ವಜನಿಕರು ಭಾವಿಸಿ ಅಲ್ಲಲ್ಲಿ ಕಸ ಬಿಸಾಡುತ್ತಿದ್ದಾರೆ. ಘನತ್ಯಾಜ್ಯ ಹಾಗೂ ಕಟ್ಟಡ ತ್ಯಾಜ್ಯಗಳನ್ನು ಅವ್ಯಾಹತವಾಗಿ ಸುರಿಯಲಾಗುತ್ತಿದೆ. ಕೆಳಗಿನಿಂದ ರೈಲು ಹೋಗುತ್ತಿದ್ದರೆ ರೈಲಿನ ಮೇಲೆಯೇ ಕಸ ಹಾಕಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ರೂಪುರೇಷೆ ತಯಾರಾಗುತ್ತಿದೆ.ಮೇಲೆ ರಸ್ತೆ, ಕೆಳಗೆ ರೈಲ್ವೆ ಹಳಿ ಇರುವ ಪ್ರದೇಶದಲ್ಲಿ ಜಾಲರಿ ಅಳವಡಿಸಿದ್ದರೂ ಜನರು ವಾಹನಗಳಲ್ಲಿ ಬಂದು ಕಸ ಬಿಸಾಡುತ್ತಿದ್ದಾರೆ. ಸ್ಥಳೀಯರೂ ಕಸ ಸುರಿಯುತ್ತಿದ್ದಾರೆ. ರೈಲ್ವೆಯದ್ದಲ್ಲದ ಕಸಕ್ಕೆ ರೈಲ್ವೆ ಜವಾಬ್ದಾರಿ ಆಗಬೇಕಾಗುತ್ತದೆ. ಅದನ್ನು ತಪ್ಪಿಸುವ ಕೆಲಸವೂ ಆಗಬೇಕು. ಜೊತೆಗೆ ಜನರು ಕಸ ಹಾಕದಂತೆಯೂ ಮಾಡಬೇಕು. ಅದಕ್ಕಾಗಿ ಜಿಬಿಎ ಮತ್ತು ರೈಲ್ವೆ ಜಂಟಿಯಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.ಇದು ಸಾಲದು ಎಂಬಂತೆ ನಗರ ಪಾಲಿಕೆಯ ವಾಹನಗಳು, ಖಾಸಗಿ ವಾಹನಗಳು ಕೂಡ ಕಸ ತಂದು ಹಾಕುವುದು ನಡೆದಿದೆ. ಮುಂದೆ ಈ ರೀತಿ ಕಸ ಬಿಸಾಡುವ ವಾಹನಗಳನ್ನು ಜಪ್ತಿ ಮಾಡಿದರೆ, ಕಸ ಬಿಸಾಡುವವರಿಗೆ ದೊಡ್ಡ ಮೊತ್ತದ ದಂಡ ವಿಧಿಸಿದರೆ ನಿಯಂತ್ರಣಕ್ಕೆ ತರಲು ಸಾಧ್ಯ. ಇವೆಲ್ಲ ಒಂದು ದಿನ, ಒಂದು ತಿಂಗಳಲ್ಲಿ ಆಗುವಂಥದ್ದಲ್ಲ. ನಿರಂತರವಾಗಿ ಕಾರ್ಯಾಚರಣೆಗಳನ್ನು ನಡೆಸಬೇಕಾಗುತ್ತದೆ. ಜೊತೆಗೆ ಸಾರ್ವಜನಿಕರಿಗೂ ಜಾಗೃತಿ ಮೂಡಿಸಬೇಕು. ಇದಕ್ಕಾಗಿ ಅಧಿಕಾರಿಗಳನ್ನು ಸಜ್ಜುಗೊಳಿಸುವ ಕೆಲಸ ಆಗಲಿದೆ ಎಂದು ವಿವರಿಸಿದರು.ಇಂದು ಸಭೆ ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ಜುಲೈ 25ರಂದು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಸಮನ್ವಯ ಸಭೆ ನಡೆಸಲಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಕಸ ಬಿಸಾಡುವುದನ್ನು ನಿಯಂತ್ರಿಸಲು ಜಿಬಿಎ ಇತ್ತೀಚೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಜಿಬಿಎಯನ್ನೂ ಸೇರಿಸಿಕೊಂಡು ಕೆಲಸ ಮಾಡಿದಾಗ ರೈಲ್ವೆ ಹಳಿಗಳ ಮೇಲೆ ಕಸ ಬೀಳುವುದು ತಪ್ಪಲಿದೆ. ಅದಕ್ಕಾಗಿ ಜಿಬಿಎ ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರನ್ನೂ ಸಭೆಗೆ ಆಹ್ವಾನಿಸಲಾಗಿದೆ ಎಂದು ಸೋಮಣ್ಣ ತಿಳಿಸಿದ್ದಾರೆ.