ವಿಜಯಪುರ | ಕೊಲ್ಹಾರ, ನಿಡಗುಂದಿ ತಾಲ್ಲೂಕುಗಳಲ್ಲಿ ಹಾಸ್ಟೆಲ್ಗಳ ಕೊರತೆ
ಬಸವನಬಾಗೇವಾಡಿ: ಮತಕ್ಷೇತ್ರದ ನೂತನ ಕೊಲ್ಹಾರ ಮತ್ತು ನಿಡಗುಂದಿ ತಾಲ್ಲೂಕುಗಳಲ್ಲಿ ಗ್ರಾಮೀಣ ಭಾಗದಿಂದ ಉನ್ನತ ಶಿಕ್ಷಣಕ್ಕಾಗಿ ಪಟ್ಟಣಗಳಿಗೆ ಬರುವ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ಕೊರತೆ ಉಂಟಾಗಿದೆ.ಬಸವನಬಾಗೇವಾಡಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮೆಟ್ರಿಕ್ ಪೂರ್ವ ಹಾಗೂ ನಂತರ ಸೇರಿ ಸಮಾಜ ಕಲ್ಯಾಣ ಇಲಾಖೆ 13 ಹಾಸ್ಟೆಲ್ಗಳಿದ್ದು, 1,190 ವಿದ್ಯ

ಬಸವನಬಾಗೇವಾಡಿ: ಮತಕ್ಷೇತ್ರದ ನೂತನ ಕೊಲ್ಹಾರ ಮತ್ತು ನಿಡಗುಂದಿ ತಾಲ್ಲೂಕುಗಳಲ್ಲಿ ಗ್ರಾಮೀಣ ಭಾಗದಿಂದ ಉನ್ನತ ಶಿಕ್ಷಣಕ್ಕಾಗಿ ಪಟ್ಟಣಗಳಿಗೆ ಬರುವ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ಕೊರತೆ ಉಂಟಾಗಿದೆ.ಬಸವನಬಾಗೇವಾಡಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮೆಟ್ರಿಕ್ ಪೂರ್ವ ಹಾಗೂ ನಂತರ ಸೇರಿ ಸಮಾಜ ಕಲ್ಯಾಣ ಇಲಾಖೆ 13 ಹಾಸ್ಟೆಲ್ಗಳಿದ್ದು, 1,190 ವಿದ್ಯಾರ್ಥಿಗಳ ದಾಖಲೆಗೆ ಅವಕಾಶವಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಒಟ್ಟು 19 ಹಾಸ್ಟೆಲ್ಗಳಲ್ಲಿ 1,621 ವಿದ್ಯಾರ್ಥಿಗಳಿಗೆ ಮಾತ್ರ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ.ಆದರೆ, ಮುಖ್ಯವಾಗಿ, ನಿಡಗುಂದಿ ತಾಲ್ಲೂಕು ಕೇಂದ್ರದಲ್ಲಿ ಬಾಲಕಿಯರಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಯಾವುದೇ ಹಾಸ್ಟೆಲ್ಗಳಿಲ್ಲ. ಇನ್ನು ಕೊಲ್ಹಾರ ತಾಲ್ಲೂಕು ಕೇಂದ್ರದಲ್ಲಂತೂ ಸಮಾಜ ಕಲ್ಯಾಣ ಇಲಾಖೆಯ ಯಾವುದೇ ವಸತಿ ನಿಲಯಗಳು ಇಲ್ಲ.ನಿಡಗುಂದಿ ತಾಲ್ಲೂಕಿನಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಸೇರಿ 133 ಶಾಲೆಗಳಿದ್ದು 5 ರಿಂದ 10ನೇ ತರಗತಿವರೆಗೆ 9 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಕೊಲ್ಹಾರ ತಾಲ್ಲೂಕಿನಲ್ಲಿ ಅಂದಾಜು 118 ಶಾಲೆಗಳಿದ್ದು 9,300ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಇದರೊಂದಿಗೆ ವಿವಿಧ ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ಪಟ್ಟಣಗಳಲ್ಲಿ ವಸತಿ ನಿಲಯಗಳ ತುರ್ತು ಬೇಡಿಕೆ ಹೆಚ್ಚಿದೆ.ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಂದ ವಸತಿ ನಿಲಯಕ್ಕಾಗಿ ಬರುವ ಅರ್ಜಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿದೆ. ಇದರಿಂದಾಗಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ ಮಂಜೂರಾದ ಸಂಖ್ಯೆಗಿಂತ ಅನಿವಾರ್ಯವಾಗಿ ಹೆಚ್ಚು ವಿದ್ಯಾರ್ಥಿಗಳಿಗೆ ದಾಖಲಾತಿ ನೀಡಲಾಗುತ್ತಿದ್ದು, ವಸತಿ, ಊಟ ಹಾಗೂ ಮೂಲ ಸೌಕರ್ಯಗಳ ತೀವ್ರ ಕೊರತೆ ಉಂಟಾಗಿ ವಿದ್ಯಾರ್ಥಿಗಳು ಇಕ್ಕಟ್ಟಿನಲ್ಲಿ ಜೀವನ ನಡೆಸುವಂತಾಗಿದೆ.ಮತ್ತೊಂದೆಡೆ ಬಿಸಿಎಂ ಹಾಸ್ಟೆಲ್ಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಪ್ರವೇಶ ನೀಡಲು ಅವಕಾಶವಿಲ್ಲದ ಕಾರಣ ನೂರಾರು ವಿದ್ಯಾರ್ಥಿಗಳು ವಸತಿ ನಿಲಯ ಸೌಲಭ್ಯದಿಂದ ವಂಚಿತ ರಾಗುತ್ತಿದ್ದಾರೆ. ಬಿಸಿಎಂ ಹಾಸ್ಟೆಲ್ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಪೈಕಿ ಮತಕ್ಷೇತ್ರದಲ್ಲಿ 2024-25ನೇ ಸಾಲಿನಲ್ಲಿ 203 ವಿದ್ಯಾರ್ಥಿಗಳು ಮತ್ತು 2025-26 ನೇ ಸಾಲಿನಲ್ಲಿ 221 ವಿದ್ಯಾರ್ಥಿಗಳು ಪ್ರವೇಶದಿಂದ ವಂಚಿತರಾಗಿದ್ದಾರೆ. ಇನ್ನು ಹಾಸ್ಟೆಲ್ ವಂಚಿತ ವಿದ್ಯಾರ್ಥಿಗಳಿಗೆ ಬರುವ ಶಿಷ್ಯವೇತನವು (ಸ್ಕಾಲರ್ಶಿಪ್) ಜನವರಿ ತಿಂಗಳ ಬಳಿಕ ದೊರೆಯುವುದರಿಂದ, ಅಲ್ಲಿಯವರೆಗೆ ಬಡ ವಿದ್ಯಾರ್ಥಿಗಳು ತೀವ್ರ ಪರದಾಡುವಂತಾಗಿದೆ.ನಿಡಗುಂದಿ ಹಾಗೂ ಕೊಲ್ಹಾರ ತಾಲ್ಲೂಕು ಕೇಂದ್ರಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಸ್ಥಾಪನೆ ಅತ್ಯವಶ್ಯವಾಗಿದೆ. ಸ್ಥಳೀಯ ಶಾಸಕ ಶಿವಾನಂದ ಪಾಟೀಲ ಅವರು ಮಂಜೂರು ಮಾಡಿಸಬೇಕು ಎಂದು ಡಿಎಸ್ಎಸ್ ಜಿಲ್ಲಾ ಸಂಚಾಲಕ ಅರವಿಂದ ಸಾಲವಾಡಗಿ ಒತ್ತಾಯಿಸಿದ್ದಾರೆ.ಬೇಕಿದೆ ಮೆಟ್ರಿಕ್ ನಂತರದ ವಸತಿ ನಿಲಯಬಸವನಬಾಗೇವಾಡಿ ತಾಲ್ಲೂಕಿನಲ್ಲೂ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಒಟ್ಟು 281 ಶಾಲೆಗಳಿದ್ದು, 5 ರಿಂದ 10ನೇ ತರಗತಿವರೆಗೆ ಅಂದಾಜು 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ವಿವಿಧ ಕಾಲೇಜುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಬಸವನಬಾಗೇವಾಡಿ ಪಟ್ಟಣದಲ್ಲಿ ಬಾಲಕರಿಗಾಗಿ ಕೇವಲ ಮೆಟ್ರಿಕ್ ಪೂರ್ವ ಹಾಸ್ಟೆಲ್ ಮಾತ್ರವಿದ್ದು, ಮೆಟ್ರಿಕ್ ನಂತರದ ವಸತಿ ನಿಲಯವಿಲ್ಲದಿರುವುದು ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ದೊಡ್ಡ ಕೊರತೆಯಾಗಿ ಪರಿಣಮಿಸಿದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260725-26-199591175