ಕಲಬುರಗಿ: ವಿಭಾಗೀಯ ಪ್ರಯೋಗಾಲಯಕ್ಕೆ ಸ್ವಂತ ಸೂರಿಲ್ಲ
ಕಲಬುರಗಿ: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಇಲ್ಲಿನ ಕಲಬುರಗಿ ಪ್ರಾದೇಶಿಕ ಆಹಾರ ಪ್ರಯೋಗಾಲಯವು ಸ್ವಂತ ಸೂರಿಲ್ಲದೇ ಸೊರಗಿದೆ. 2021ರ ಜುಲೈನಿಂದ ಈತನಕ ಬಾಡಿಗೆ ಕಟ್ಟಡದಲ್ಲೇ ‘ಸೇವೆ’ ನೀಡುತ್ತಿದೆ.1984ರ ಡಿಸೆಂಬರ್ನಲ್ಲಿ ರಾಜ್ಯ ಸರ್ಕಾರವು ಬೆಂಗಳೂರು, ಕಲಬುರಗಿ, ಬೆಳಗಾವಿ ಹಾಗೂ ಮೈಸೂರಿನಲ್ಲಿ ಪ್ರಾದೇಶಿಕ ಆಹಾರ ಪ್ರಯೋಗಾಲಯಗಳ ಆರಂಭಕ್ಕೆ ಆದೇಶಿ

ಕಲಬುರಗಿ: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಇಲ್ಲಿನ ಕಲಬುರಗಿ ಪ್ರಾದೇಶಿಕ ಆಹಾರ ಪ್ರಯೋಗಾಲಯವು ಸ್ವಂತ ಸೂರಿಲ್ಲದೇ ಸೊರಗಿದೆ. 2021ರ ಜುಲೈನಿಂದ ಈತನಕ ಬಾಡಿಗೆ ಕಟ್ಟಡದಲ್ಲೇ ‘ಸೇವೆ’ ನೀಡುತ್ತಿದೆ.1984ರ ಡಿಸೆಂಬರ್ನಲ್ಲಿ ರಾಜ್ಯ ಸರ್ಕಾರವು ಬೆಂಗಳೂರು, ಕಲಬುರಗಿ, ಬೆಳಗಾವಿ ಹಾಗೂ ಮೈಸೂರಿನಲ್ಲಿ ಪ್ರಾದೇಶಿಕ ಆಹಾರ ಪ್ರಯೋಗಾಲಯಗಳ ಆರಂಭಕ್ಕೆ ಆದೇಶಿಸಿತ್ತು. ಆಗ ಕಲಬುರಗಿಯಲ್ಲಿದ್ದ ಸಹಾಯಕ ರಾಸಾಯನಿಕ ಪರೀಕ್ಷಾ ಪ್ರಯೋಗಾಲಯವನ್ನೇ ‘ಪ್ರಾದೇಶಿಕ ಆಹಾರ ಪ್ರಯೋಗಾಲಯ’ವಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಕಾಲಕ್ಕನುಗುಣವಾಗಿ ಈ ಪ್ರಯೋಗಾಲಯವು ಸ್ವಂತ ಕಟ್ಟಡ, ಸುಸಜ್ಜಿತ ಸೌಲಭ್ಯಗಳನ್ನೂ ಪಡೆದಿತ್ತು. ಆದರೆ, ಜಯದೇವ ಹೃದ್ರೋಗ ಸಂಸ್ಥೆಯ ಕಟ್ಟಡಕ್ಕಾಗಿ 6,500 ಚದರಡಿಯ ‘ಸ್ವಂತ ಸೂರು’ ಕಳೆದುಕೊಂಡಿತ್ತು.ಈ ಪ್ರಯೋಗಾಲಯವನ್ನು ಬೆಳಗಾವಿಗೆ ಸ್ಥಳಾಂತರಿಸಲು ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರ ನಿರ್ಧರಿಸಿತ್ತು. ಆಗ ವಿರೋಧ ಪಕ್ಷದಲ್ಲಿದ್ದ ಪ್ರಿಯಾಂಕ್ ಖರ್ಗೆ, ‘ಬಿಜೆಪಿಗೆ ಕಟ್ಟಡ ಒದಗಿಸಲು ಕಷ್ಟವಾದರೆ ಚಿತ್ತಾಪುರದಲ್ಲಿ ಕಟ್ಟಡ ಒದಗಿಸುವೆ’ ಎಂದು ಹರಿಹಾಯ್ದಿದ್ದರು. ಬಳಿಕ ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಮೊದಲ ಮಹಡಿಯ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು.ಮೈಸೂರು ಪ್ರಾದೇಶಿಕ ಲ್ಯಾಬ್ 14 ಸಾವಿರ ಚದರಡಿ, ಬೆಳಗಾವಿ ಪ್ರಾದೇಶಿಕ ಲ್ಯಾಬ್ ತಲಾ 4,500 ಚದರಡಿಯ ಎರಡು ಮಹಡಿ ಹಾಗೂ ಬೆಂಗಳೂರಿನ ಪ್ರಾದೇಶಿಕ ಲ್ಯಾಬ್ 1,799 ಚದರ ಮೀಟರ್ನ ಸ್ವಂತ ಕಟ್ಟಡಗಳನ್ನು ಹೊಂದಿವೆ. ಆದರೆ, ಕಲಬುರಗಿ ವಿಭಾಗೀಯ ಪ್ರಯೋಗಾಲಯಕ್ಕೆ ಬಾಡಿಗೆ ಕಟ್ಟಡವೇ ಗತಿಯಾಗಿದೆ.ಏನಿದರ ಕೆಲಸ?: ‘ಕಲ್ಯಾಣ’ದ ಎಲ್ಲ ತಾಲ್ಲೂಕುಗಳ ಆಹಾರ ಸುರಕ್ಷತಾ ಅಧಿಕಾರಿಗಳು ಪ್ರತಿ ತಿಂಗಳು ತಲಾ 15 ನಿಗಾ ಸ್ಯಾಂಪಲ್ ಹಾಗೂ 10 ಲೀಗಲ್ ಸ್ಯಾಂಪಲ್ ಸಂಗ್ರಹಿಸುತ್ತಾರೆ. ಅವುಗಳ ಪರೀಕ್ಷೆಗೆ ಈ ಪ್ರಯೋಗಾಲಯವೇ ಏಕೈಕ ಆಧಾರ. ಕುಡಿಯುವ ನೀರು, ಧಾನ್ಯಗಳು, ಎಣ್ಣೆ ಪದಾರ್ಥ, ಸಾಂಬಾರ ಪದಾರ್ಥಗಳು ಸೇರಿದಂತೆ ಜನರ ದಿನಬಳಕೆಯ ಆಹಾರ ಪದಾರ್ಥಗಳ ಗುಣಮಟ್ಟ, ಕಲಬೆರಕೆ ಪತ್ತೆಗೆ ಈ ಪ್ರಯೋಗಾಲಯ ನೆರವಾಗುತ್ತಿದೆ.‘ಕಲಬುರಗಿ ಪ್ರಯೋಗಾಲಯಕ್ಕೆ ತಿಂಗಳಿಗೆ ಸದ್ಯ 400ರಷ್ಟು ಸ್ಯಾಂಪಲ್ಗಳು ಬರುತ್ತಿವೆ. ಆರಂಭದಲ್ಲಿ ವಿವಿಧ ಆಹಾರ ಪದಾರ್ಥಗಳ 26 ನಿಯತಾಂಕಗಳಿಗೆ (ಪ್ಯಾರಾಮೀಟರ್) ಎನ್ಎಬಿಎಲ್ ಮಾನ್ಯತೆ ಸಿಕ್ಕಿತ್ತು. ಇದೇ ಜುಲೈ 13ರಂದು 173 ನಿಯತಾಂಕಗಳಿಗೆ ಎನ್ಎಬಿಎಲ್ ಪರಿಷ್ಕೃತ ಮಾನ್ಯತೆ ಕೊಟ್ಟಿದೆ. ಇದರಿಂದ ನಮ್ಮಲ್ಲಿಗೆ ಬರುವ ಸ್ಯಾಂಪಲ್ಗಳೂ ಹೆಚ್ಚಲಿವೆ. ಪ್ರತಿ ತಿಂಗಳು 700ರಷ್ಟು ಸ್ಯಾಂಪಲ್ ಬರುವ ನಿರೀಕ್ಷೆಯಿದೆ. ಒಂದೆಡೆ ಸಿಬ್ಬಂದಿ ಕೊರತೆ, ಸೌಕರ್ಯಗಳ ಕೊರತೆ ಕಾಡುತ್ತಿದೆ. ಮತ್ತೊಂದೆಡೆ ಸ್ವಂತ ಸೂರು ಇಲ್ಲದಿರುವುದು ಎನ್ಎಬಿಎಲ್ ಮಾನದಂಡಗಳಿಗೆ ತಕ್ಕಂತೆ ಸೌಲಭ್ಯಗಳ ವಿಸ್ತರಣೆಗೂ ಅಡ್ಡಿಯಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳುತ್ತಾರೆ.ರೇಣುಕಾ ಬಿರಾದಾರ, ಆರ್ಟಿಐ ಕಾರ್ಯಕರ್ತೆಬೆಂಗಳೂರು, ಮೈಸೂರು, ಬೆಳಗಾವಿಯ ವಿಭಾಗೀಯ ಲ್ಯಾಬ್ಗಳಿಗೆ ಸ್ವಂತ ಕಟ್ಟಡಗಳಿವೆ. ಕಲಬುರಗಿ ಲ್ಯಾಬ್ಗೆ ಇದ್ದ ಸ್ವಂತ ಸೂರನ್ನೂ ಕಸಿಯಲಾಗಿದೆ. ಇದು ಮಲತಾಯಿ ಧೋರಣೆ ಅಲ್ಲವೇ?ಲೋಕೇಶ ಪಿ., ಹಿರಿಯ ಆಹಾರ ವಿಶ್ಲೇಷಕ, ಕಲಬುರಗಿ ವಿಭಾಗೀಯ ಆಹಾರ ಪ್ರಯೋಗಾಲಯಸ್ವಂತ ಕಟ್ಟಡಕ್ಕಾಗಿ ಕಳೆದ ಐದು ವರ್ಷಗಳಿಂದ ಸರ್ಕಾರಕ್ಕೆ ನಿರಂತರವಾಗಿ ಪತ್ರ ಬರೆದು ಮನವಿ ಮಾಡಲಾಗಿದೆ. ಜಾಗದ ಮಂಜೂರಾತಿಗಾಗಿ ಕಾಯುತ್ತಿದ್ದೇವೆ. ಸಿಬ್ಬಂದಿ ಕೊರತೆ‘ಕಲಬುರಗಿ ವಿಭಾಗೀಯ ಆಹಾರ ಪ್ರಯೋಗಾಲಯಕ್ಕೆ ಆಹಾರ ವಿಶ್ಲೇಷಕರ ಏಳು ಹುದ್ದೆಗಳ ಮಂಜೂರಾತಿ ಇದೆ. ಸದ್ಯ ಒಬ್ಬರು ಕಾಯಂ, ಇಬ್ಬರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸ್ಯಾಂಪಲ್ಗಳ ಪರೀಕ್ಷಿಸುವ ಒತ್ತಡ ಹೆಚ್ಚುತ್ತಿದೆ. ಮೈಸೂರು ವಿಭಾಗೀಯ ಪ್ರಯೋಗಾಲಯದಲ್ಲಿ ಐವರು ಕಾಯಂ, ನಾಲ್ವರು ಗುತ್ತಿಗೆ ಆಧಾರಿತ, ಬೆಳಗಾವಿಯಲ್ಲಿ ಒಬ್ಬರು ಕಾಯಂ, ಐವರು ಗುತ್ತಿಗೆ ಆಧಾರಿತ, ಬೆಂಗಳೂರಿನಲ್ಲಿ ಐವರು ಕಾಯಂ ಹಾಗೂ 9 ಮಂದಿ ಗುತ್ತಿಗೆ ಆಧಾರಿತ ಆಹಾರ ವಿಶ್ಲೇಷಕರಿದ್ದಾರೆ’ ಎಂದು ಮೂಲಗಳು ತಿಳಿಸಿವೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260725-34-838902887