ಡಿಸಿಸಿ ಬ್ಯಾಂಕ್ ₹ 6.5 ಕೋಟಿ ಸಾಲ ದುರುಪಯೋಗ ಪ್ರಕರಣಗಳು ಪತ್ತೆ
ಕೆ.ಓಂಕಾರ ಮೂರ್ತಿಕೋಲಾರ: ಹಲವು ಹಗರಣಗಳ ಆರೋಪದ ಸುಳಿಗೆ ಸಿಲುಕಿ ನಲುಗಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗೆ (ಡಿಸಿಸಿ) ಸಂಬಂಧಿಸಿದಂತೆ ಮತ್ತೆ ಹಣ ದುರುಪಯೋಗದ ಹಲವು ಪ್ರಕರಣಗಳು ಪತ್ತೆಯಾಗಿವೆ.ಕೋಲಾರ ಶಾಖೆಯಲ್ಲಿ 130 ಬೇನಾಮಿ, ನಕಲಿ ಸ್ವಸಹಾಯ ಸಂಘಗಳ ಹೆಸರಿನಲ್ಲಿ ಒಟ್ಟು ₹6.50 ಕೋಟಿ ಸಾಲದ ಅಕ್ರಮ ಮತ್ತು ದುರುಪಯೋಗ ನಡೆದಿರುವುದು

ಕೆ.ಓಂಕಾರ ಮೂರ್ತಿಕೋಲಾರ: ಹಲವು ಹಗರಣಗಳ ಆರೋಪದ ಸುಳಿಗೆ ಸಿಲುಕಿ ನಲುಗಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗೆ (ಡಿಸಿಸಿ) ಸಂಬಂಧಿಸಿದಂತೆ ಮತ್ತೆ ಹಣ ದುರುಪಯೋಗದ ಹಲವು ಪ್ರಕರಣಗಳು ಪತ್ತೆಯಾಗಿವೆ.ಕೋಲಾರ ಶಾಖೆಯಲ್ಲಿ 130 ಬೇನಾಮಿ, ನಕಲಿ ಸ್ವಸಹಾಯ ಸಂಘಗಳ ಹೆಸರಿನಲ್ಲಿ ಒಟ್ಟು ₹6.50 ಕೋಟಿ ಸಾಲದ ಅಕ್ರಮ ಮತ್ತು ದುರುಪಯೋಗ ನಡೆದಿರುವುದು ಬ್ಯಾಂಕ್ನ ಆಂತರಿಕ ತನಿಖಾ ವರದಿಯಲ್ಲಿ ಕಂಡುಬಂದಿದೆ.ಹಿರಿಯ ಅಧಿಕಾರಿ ಯಲ್ಲಪ್ಪ ರೆಡ್ಡಿ ನೇತೃತ್ವದ ಸಮಿತಿ ನಡೆಸಿರುವ ಆಂತರಿಕ ತನಿಖಾ ವರದಿಯನ್ನು ಡಿಸಿಸಿ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಖಾನ್ ಫರ್ವೇಜ್ ಅವರಿಗೆ ಸಲ್ಲಿಸಲಾಗಿದೆ. ಅವರು ವರದಿ ಪರಿಶೀಲನೆ ನಡೆಸಿದ ಬಳಿಕ ಬ್ಯಾಂಕ್ನ ಆಡಳಿತಾಧಿಕಾರಿ ಅಮ್ಲಾನ್ ಬಿಸ್ವಾಸ್ ಗಮನಕ್ಕೆ ತರಲಿದ್ದಾರೆ. ನಂತರ ಕ್ರಮವಾಗುವ ನಿರೀಕ್ಷೆ ಇದೆ.ಪ್ರಮುಖವಾಗಿ ತಾಲ್ಲೂಕಿನ ಸುಗಟೂರು ಹೋಬಳಿಯ ಸಂಘಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ದೂರು ಸಲ್ಲಿಕೆಯಾಗಿತ್ತು. ತನಿಖಾ ವರದಿಯ ಮುಖ್ಯ ಮುಖ್ಯಾಂಶಗಳು ಇಂತಿವೆ.* ನಬಾರ್ಡ್ ನಿಯಮಗಳ ಉಲ್ಲಂಘನೆ: ಸಾಲದ ಪ್ರಸ್ತಾವನೆ ಸಲ್ಲಿಸಿದ ನಂತರವಷ್ಟೇ ಸಂಘಗಳ ಖಾತೆಗಳನ್ನು ತೆರೆಯಲಾಗಿದೆ. ಸಂಘ ರಚನೆಯಾದ ಕನಿಷ್ಠ 6 ತಿಂಗಳ ನಂತರವಷ್ಟೇ ಸಾಲ ನೀಡಬೇಕು ಎಂಬ ನಬಾರ್ಡ್ನ ಪಂಚಸೂತ್ರ ನಿಯಮವನ್ನು ಗಾಳಿಗೆ ತೂರಲಾಗಿದೆ.ಅಸಹಜ ಟೈಮ್ಲೈನ್ (ತ್ವರಿತ ಪ್ರಕ್ರಿಯೆ): 22-06-2022 ರಂದು ಸ್ವೀಕೃತಿಯಾದ 168 ಸಾಲದ ಪ್ರಸ್ತಾವನೆಗಳನ್ನು ಕೇವಲ 24 ಗಂಟೆಗಳ ಒಳಗಾಗಿ (23-06-2022 ರಂದು) ಅನುಮೋದಿಸಲಾಗಿದೆ. 22-06-2022ರಂದು ಒಟ್ಟು 168 ಸಾಲದ ಪ್ರಸ್ತಾವನೆಗಳು ಕೇಂದ್ರ ಕಚೇರಿಗೆ ಸ್ವೀಕೃತವಾಗಿದ್ದವು. 23-06-2022ರಂದು ಯಾವುದೇ ಬ್ಯಾಂಕ್ ಕಾರ್ಯಕಾರಿ ಸಮಿತಿ ಅಥವಾ ಆಡಳಿತ ಮಂಡಳಿ ಸಮಿತಿಗಳ ಅಧಿಕೃತ ನಿರ್ಣಯ/ಅನುಮೋದನೆ ಇಲ್ಲದೆಯೇ ಕೇವಲ 24 ಗಂಟೆಗಳ ಒಳಗಾಗಿ ಅಧ್ಯಕ್ಷರಿಂದ ತರಾತುರಿಯಲ್ಲಿ ವೈಯಕ್ತಿಕ ಅನುಮೋದನೆ.* ಕ್ಷೇತ್ರ ಪರಿಶೀಲನೆಯ ಅಭಾವ: ಯಾವುದೇ ರೀತಿಯ ಭೌತಿಕ ಸ್ಥಳ ಪರಿಶೀಲನೆ ನಡೆಸದೇ, ಕೆವೈಸಿ ನಿಯಮಗಳನ್ನು ಗಾಳಿಗೆ ತೂರಿ ಕಡತಗಳನ್ನು ಮಂಜೂರು ಮಾಡಲಾಗಿದೆ.* ಎಸ್ಎಚ್ಜಿ ವಿಭಾಗದ ಹಿರಿಯ ಸಹಾಯಕ ಬಾಲಾಜಿ ಅವರು ಪ್ರಸ್ತಾವನೆಗಳನ್ನು ಸರಿಯಾಗಿ ಪರಿಶೀಲಿಸದೆ ಅಕ್ರಮಗಳಿಗೆ ನೆರವು ನೀಡಿದ್ದಾರೆ ಎಂಬುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.‘ಜಿಲ್ಲೆಯಲ್ಲಿ ನೂರಾರು ನಕಲಿ ಸ್ವಸಹಾಯ ಸಂಘಗಳಿವೆ. ಕೆಲ ಸೊಸೈಟಿಗಳಲ್ಲಿ ಅಕ್ರಮವಾಗಿ ಮಹಿಳಾ ಸಂಘ ರಚಿಸಿ ಸಾಲ ಪಡೆದು ಹಣ ದುರುಪಯೋಗಪಡಿಸಿಕೊಂಡಿವೆ. ಸುಗಟೂರು ಹೋಬಳಿಯೊಂದರಲ್ಲೇ ಇಂಥ 100ಕ್ಕೂ ಅಧಿಕ ನಕಲಿ ಸಂಘಗಳಿವೆ. ಒಂದು ನಕಲಿ ಸಂಘ ರಚಿಸಿ ₹ 5 ಲಕ್ಷ ಪಡೆಯಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಹಾಗೂ ಬ್ಯಾಂಕ್ನ ಮಾಜಿ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಈಚೆಗೆ ಆರೋಪಿಸಿದ್ದರು.ಕಾನೂನು ಹೋರಾಟದಲ್ಲಿ ಬ್ಯಾಂಕ್: ಡಿಸಿಸಿ ಬ್ಯಾಂಕ್ಗೆ ಸಂಬಂಧಿಸಿದಂತೆ ಕಾನೂನು ಹೋರಾಟದ ಸುಮಾರು 23 ಪ್ರಕರಣಗಳು ಈಗಾಗಲೇ ನ್ಯಾಯಾಲಯದಲ್ಲಿವೆ. 10 ವರ್ಷಗಳಲ್ಲಿ 30 ಕಾನೂನು ವ್ಯಾಜ್ಯಗಳು ಈ ಬ್ಯಾಂಕ್ಗೆ ಸಂಬಂಧಿಸಿದಂತೆ ಇದ್ದು, ಹೈಕೋರ್ಟ್ನಲ್ಲಿ ಏಳು ಪ್ರಕರಣಗಳಲ್ಲಿ ಈಗಾಗಲೇ ಆದೇಶವಾಗಿದೆ. ಆದರೆ, ಕಳೆದ ಮೂರು ವರ್ಷಗಳಿಗೆ ಸಂಬಂಧಿಸಿದ ಇನ್ನು 23 ಪ್ರಕರಣಗಳು ತಡೆಯಾಜ್ಞೆ ಹಾಗೂ ವಿಚಾರಣಾ ಹಂತದಲ್ಲಿವೆ. ಕೆಲ ಪ್ರಕರಣಗಳಲ್ಲಿ ಆದೇಶಕ್ಕೆ ಕಾಯಲಾಗುತ್ತಿದೆ. ಎಫ್ಐಆರ್ಗಳಿಗೆ, ಲೋಕಾಯುಕ್ತ ತನಿಖೆಗೆ ತಡೆಯಾಜ್ಞೆ ತರಲಾಗಿದೆ. ತಡೆಯಾಜ್ಞೆ ತೆರವು ಮಾಡುವ ಪ್ರಯತ್ನ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.ಯಲ್ಲಪ್ಪ ರೆಡ್ಡಿ ನೇತೃತ್ವ ಸಮಿತಿಯು ಆಂತರಿಕ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದ್ದು, ನಾನಿನ್ನೂ ಪರಿಶೀಲನೆ ನಡೆಸಿಲ್ಲ. ವರದಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ವಹಿಸಲಾಗುವುದು ಖಾನ್ ಫರ್ವೇಜ್, ಎಂ.ಡಿ, ಡಿಸಿಸಿ ಬ್ಯಾಂಕ್, ಕೋಲಾರಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260725-18-1562939266