ಸೌರ ಬಣ್ಣ ಭವಿಷ್ಯದ ವಿದ್ಯುತ್ ಕಾರ್ಖಾನೆ..
ನಮ್ಮ ಜೀವನದಲ್ಲಿ ‘ಬಣ್ಣ’ ಎಂದರೆ ಅಲಂಕಾರ. ಅದು ಮನೆಯ ಸೌಂದರ್ಯ ಹೆಚ್ಚಿಸುವ ವಸ್ತು. ಗೋಡೆಗಳನ್ನು ಮಳೆ, ಬಿಸಿಲು ಮತ್ತು ಧೂಳಿನಿಂದ ರಕ್ಷಿಸುವ ಒಂದು ಪದರ. ಆದರೆ ಅದೇ ಬಣ್ಣ ವಿದ್ಯುತ್ ಉತ್ಪಾದಿಸಿದರೆ ಹೇಗಿರುತ್ತದೆ ಊಹಿಸಿಕೊಳ್ಳಿ.ನಿಮ್ಮ ಮನೆಯ ಗೋಡೆಗಳಿಗೆ ಹಚ್ಚಿದ ಬಣ್ಣದಿಂದ ಕೆಲವೇ ಕ್ಷಣಗಳಲ್ಲಿ ಫ್ಯಾನ್ ತಿರುಗಲು ಆರಂಭಿಸಿದರೆ? ರಾತ್ರಿ
ನಮ್ಮ ಜೀವನದಲ್ಲಿ ‘ಬಣ್ಣ’ ಎಂದರೆ ಅಲಂಕಾರ. ಅದು ಮನೆಯ ಸೌಂದರ್ಯ ಹೆಚ್ಚಿಸುವ ವಸ್ತು. ಗೋಡೆಗಳನ್ನು ಮಳೆ, ಬಿಸಿಲು ಮತ್ತು ಧೂಳಿನಿಂದ ರಕ್ಷಿಸುವ ಒಂದು ಪದರ. ಆದರೆ ಅದೇ ಬಣ್ಣ ವಿದ್ಯುತ್ ಉತ್ಪಾದಿಸಿದರೆ ಹೇಗಿರುತ್ತದೆ ಊಹಿಸಿಕೊಳ್ಳಿ.ನಿಮ್ಮ ಮನೆಯ ಗೋಡೆಗಳಿಗೆ ಹಚ್ಚಿದ ಬಣ್ಣದಿಂದ ಕೆಲವೇ ಕ್ಷಣಗಳಲ್ಲಿ ಫ್ಯಾನ್ ತಿರುಗಲು ಆರಂಭಿಸಿದರೆ? ರಾತ್ರಿ ದೀಪಗಳು ಬೆಳಗಿದರೆ? ಮೊಬೈಲ್ ಚಾರ್ಜ್ ಆಗುವಂತಾದರೆ? ಮಿಕ್ಸರ್-ಗ್ರೈಂಡರ್ ಚಟ್ನಿ ಮಾಡುವಂತಾದರೆ ಎಷ್ಟೊಂದು ಉಳಿತಾಯ ಅಲ್ಲವೇ. ನಿಮ್ಮ ಮನೆಯ ಗೋಡೆಗಳಿಗೆ ಹಚ್ಚುವ ಬಣ್ಣದಿಂದ ನಿಮ್ಮ ಮನೆ ಬಳಕೆಗೆ ಬೇಕಾದ ವಿದ್ಯುತನ್ನು ನೀವೇ ತಯಾರಿಸುವಂತಾದರೆ ಎಷ್ಟೊಂದು ಚೆನ್ನಾಗಿರುತ್ತೆ ಅಲ್ಲವೇ?ಹೌದು ಇಂತದ್ದೊಂದು ಕನಸಿಗೆ ಈಗ ರೆಕ್ಕೆ ಮೂಡಿ ಬಂದಿದೆ. ಆ ಕನಸಿಗೆ ಸೌರ ಬಣ್ಣ ಎಂದು ಹೆಸರು. ಮಾನವ ನಾಗರಿಕತೆಯ ಇತಿಹಾಸವನ್ನು ಗಮನಿಸಿದರೆ ಪ್ರತಿಯೊಂದು ಮಹಾನ್ ನಾಗರಿಕತೆಯ ಹಿಂದೆ ಒಂದು ಶಕ್ತಿಯ ಮೂಲವಿದೆ. ಮೊದಲು ಮರ, ನಂತರ ಕಲ್ಲಿದ್ದಲು, ಆಮೇಲೆ ತೈಲ ಮತ್ತು ನೈಸರ್ಗಿಕ ಅನಿಲ. ಹೀಗೆ ಕೈಗಾರಿಕಾ ಕ್ರಾಂತಿಯಿಂದ ಇಂದಿನ ಡಿಜಿಟಲ್ ಯುಗದವರೆಗೆ ಈ ಪಳೆಯುಳಿಕೆ ಇಂಧನಗಳೇ ಜಗತ್ತನ್ನು ಮುನ್ನಡೆಸಿವೆ.ಆದರೆ ಈ ಅಭಿವೃದ್ಧಿಗೆ ಪ್ರಕೃತಿ ಭಾರೀ ಬೆಲೆ ತೆತ್ತಿದೆ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ, ಮಾಲಿನ್ಯ, ಕರಗುತ್ತಿರುವ ಹಿಮನದಿಗಳು, ಅನಿಯಮಿತ ಮಳೆ, ಭೀಕರ ಬರ ಇವೆಲ್ಲವೂ ನಮ್ಮ ಅತಿಯಾದ ಪಳಯುಳಿಕೆ ಇಂಧನ ಬಳಕೆಯ ಪರಿಣಾಮಗಳು. ಇದರಿಂದ ಇಂದು ಜಗತ್ತಿನ ಎಲ್ಲ ರಾಷ್ಟ್ರಗಳು ಶುದ್ದ ಇಂಧನದತ್ತ ಸಾಗುತ್ತಿವೆ. ಶುದ್ಧ ಶಕ್ತಿಯ ಭಾಗವಾದ ಸೌರ ಫಲಕಗಳು ಇಂದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಶುದ್ಧ ಇಂಧನ ತಂತ್ರಜ್ಞಾನವಾಗಿದೆ. ಸೌರ ಇಂಧನಕ್ಕೆ ಕೆಲವು ಮಿತಿಗಳಿವೆ. ಅವುಗಳನ್ನು ಅಳವಡಿಸಲು ದೊಡ್ಡ ಮೇಲ್ಛಾವಣಿ ಬೇಕು. ಅಳವಡಿಕೆ ದುಬಾರಿ. ನಿರ್ವಹಣಾ ವೆಚ್ಚ ಹೆಚ್ಚು. ಎಲ್ಲಾ ಕಟ್ಟಡಗಳಿಗೂ ಅಳವಡಿಸಲು ಸಾಧ್ಯವಿಲ್ಲ. ಈ ಎಲ್ಲಾ ಮಿತಿಗಳನ್ನು ಮೀರಿದ ತಂತ್ರಜ್ಞಾನ ಬಂದರೆ ಹೇಗೆ ಎಂಬ ಪ್ರಶ್ನೆಗೆ ಉತ್ತರವಾಗಿ ಸೌರ ಬಣ್ಣ ಕಾಣುತ್ತಿದೆ.‘ಸೌರ ಬಣ್ಣ ಎಂದರೇನು?ಸೌರ ಬಣ್ಣವು ಸಾಮಾನ್ಯ ಬಣ್ಣವಲ್ಲ. ಇದು ಅತ್ಯಾಧುನಿಕ ಫೋಟೋವೋಲ್ಟಾಯಿಕ್ (Phoಣovoಟಣಚಿiಛಿ) ನ್ಯಾನೋ ವಸ್ತುಗಳು, ಥಿನ್ ಫಿಲ್ಮ್ ತಂತ್ರಜ್ಞಾನ, ಅರೆವಾಹಕ ಕಣಗಳು ಹಾಗೂ ಬೆಳಕು ಹೀರಿಕೊಳ್ಳುವ ಸಂಯುಕ್ತಗಳು ಸೇರಿರುವ ವಿಶೇಷ ಲೇಪನವಾಗಿದೆ. ಈ ಬಣ್ಣವನ್ನು ಗೋಡೆ, ಮೇಲ್ಛಾವಣಿ, ಗಾಜು, ಲೋಹ, ವಾಹನಗಳು, ರೈಲು, ಸೇತುವೆ, ಕಾರ್ಖಾನೆ ಹೀಗೆ ಯಾವುದೇ ಮೇಲ್ಮೈಗೆ ಬಳಸಬಹುದು. ಸೌರ ಬಣ್ಣ ಹಚ್ಚಿದ ಮೇಲ್ಮೈಗೆ ಒಮ್ಮೆ ಸೂರ್ಯನ ಬೆಳಕು ಬಿದ್ದರೆ ಸಾಕು. ಅದು ವಿದ್ಯುತ್ ಉತ್ಪಾದಿಸಲು ಆರಂಭಿಸುತ್ತದೆ.ಇದು ಹೇಗೆ ಕೆಲಸ ಮಾಡುತ್ತದೆ?ಈ ಬಣ್ಣದೊಳಗೆ ಲಕ್ಷಾಂತರ ಕೋಟಿ ಸೂಕ್ಷ್ಮ ಕಣಗಳು ಅಡಗಿರುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ...ಟೈಟಾನಿಯಂ ಡೈ ಆಕ್ಸೈಡ್: ಇದು ಈಗಾಗಲೇ ಸಾಮಾನ್ಯ ಬಣ್ಣಗಳಲ್ಲಿ ಬಳಸುವ ಅತ್ಯಂತ ಸುರಕ್ಷಿತ ಬಿಳಿ ವರ್ಣದ್ರವ್ಯವಾಗಿದ್ದು ಇದು ಸೂರ್ಯನ ಬೆಳಕನ್ನು ಅತ್ಯುತ್ತಮವಾಗಿ ಹೀರಿಕೊಳ್ಳುತ್ತದೆ.ಮೊಲಿಬ್ಡಿನಮ್ ಡೈಸಲ್ಫೈಡ್: ಇದು ಗಾಳಿಯಲ್ಲಿರುವ ತೇವಾಂಶವನ್ನು ಸೆರೆಹಿಡಿದು ಸೂರ್ಯನ ಬೆಳಕಿನ ಶಕ್ತಿಯಿಂದ ನೀರಿನ ಅಣುಗಳನ್ನು ವಿಭಜಿಸುತ್ತದೆ ಮತ್ತು ಹೈಡ್ರೋಜನ್ನ್ನು ಉತ್ಪಾದಿಸುತ್ತದೆ. ಈ ಹೈಡ್ರೋಜನ್ನ್ನು ಶುದ್ಧ ಇಂಧನವಾಗಿ ಬಳಸಬಹುದು. ಅಂದರೆ ಸೂರ್ಯನ ಬೆಳಕಿನ ಜೊತೆಗೆ ಗಾಳಿಯ ತೇವಾಂಶ ಬಳಸಿಕೊಂಡು ಶುದ್ಧ ಇಂಧನವನ್ನು ಉತ್ಪಾದಿಸುವ ಮೂಲ ತತ್ವವನ್ನು ಸೌರ ಬಣ್ಣ ಹೊಂದಿದೆ.ಜೀವಂತ ವಿದ್ಯುತ್ ಕಾರ್ಖಾನೆಹೌದು ಇಂದು ನಾವು ಗೋಡೆಗೆ ಬಣ್ಣ ಹಚ್ಚಿದರೆ ಅದು ಸುಂದರವಾಗಿ ಕಾಣುತ್ತದೆ ನಿಜ. ಆದರೆ ಭವಿಷ್ಯದಲ್ಲಿ ಅದೇ ಗೋಡೆ ದಿನವಿಡೀ ಸೂರ್ಯನ ಬೆಳಕನ್ನು ಸಂಗ್ರಹಿಸಿ ವಿದ್ಯುತ್ ಉತ್ಪಾದಿಸಲಿದೆ. ಇದರಿಂದ ಮನೆಗಳು ಕೇವಲ ವಾಸದ ಸ್ಥಳಗಳಾಗಿರುವುದಿಲ್ಲ. ಅವು ಮಿನಿ ಪವರ್ ಸ್ಟೇಷನ್ಗಳಾಗುತ್ತವೆ. ಆಕಾಶಚುಂಬಿ ಕಟ್ಟಡಗಳು, ಮೆಟ್ರೋ ನಿಲ್ದಾಣಗಳು, ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಆಸ್ಪತ್ರೆಗಳು, ಕಛೇರಿಗಳ ಕಾಂಪೌಂಡ್ಗಳು, ಬಸ್ ರೈಲು ನಿಲ್ದಾಣಗಳು ಹೀಗೆ ಸೌರ ಬಣ್ಣ ಬಳಿದ ಪ್ರತಿಯೊಂದು ಕಟ್ಟಡವೂ ವಿದ್ಯುತ್ ಉತ್ಪಾದಿಸುತ್ತದೆ.ಸೌರ ಬಣ್ಣದ ಹಿಂದಿರುವ ವಿಜ್ಞಾನ‘ನಾಳೆಯ ಮನೆಗಳು ಕೇವಲ ವಾಸದ ಸ್ಥಳಗಳಲ್ಲ, ಅವು ಸ್ವತಃ ವಿದ್ಯುತ್ ಉತ್ಪಾದಿಸುವ ಜೀವಂತ ವ್ಯವಸ್ಥೆಗಳಾಗಲಿವೆ’ ಎಂಬ ಆಶಯದೊಂದಿಗೆ ವಿಶ್ವದ ಅನೇಕ ಸಂಶೋಧನಾ ಸಂಸ್ಥೆಗಳು ಮೂರು ವಿಭಿನ್ನ ಮಾರ್ಗಗಳಲ್ಲಿ ಸೌರ ಬಣ್ಣವನ್ನು ಅಭಿವೃದ್ಧಿಪಡಿಸುತ್ತಿವೆ. ಅವುಗಳಲ್ಲಿ ಪ್ರತಿಯೊಂದೂ ತನ್ನದೇ ಆದ ವಿಶೇಷತೆ ಮತ್ತು ಭವಿಷ್ಯದ ಸಾಧ್ಯತೆಗಳನ್ನು ಹೊಂದಿದೆ.1) ಹೈಡ್ರೋಜನ್ ಉತ್ಪಾದಿಸುವ ಸೌರ ಬಣ್ಣ : ಗಾಳಿಯ ತೇವಾಂಶವೇ ಇಂಧನವಾಗುವ ಅದ್ಭುತ ಶಕ್ತಿ. ಮಳೆ ಬೇಕಾಗಿಲ್ಲ, ನದಿ ಅಥವಾ ಕೆರೆಯೂ ಬೇಕಾಗಿಲ್ಲ. ಗಾಳಿಯಲ್ಲಿರುವ ಅತಿ ಸೂಕ್ಷ್ಮ ತೇವಾಂಶವೇ ಸಾಕು ವಿದ್ಯುತ್ ಉತ್ಪಾದನೆಯಾಗಲು. ಆಸ್ಟ್ರೇಲಿಯಾದ ಸಂಶೋಧಕರು ಅಭಿವೃದ್ಧಿಪಡಿಸುತ್ತಿರುವ ಈ ವಿಶೇಷ ಸೌರ ಬಣ್ಣ ಗಾಳಿಯಲ್ಲಿರುವ ನೀರಿನ ಅಣುಗಳನ್ನು ಹೀರಿಕೊಂಡು, ಸೂರ್ಯನ ಬೆಳಕಿನ ಸಹಾಯದಿಂದ ಅವುಗಳನ್ನು ಹೈಡ್ರೋಜನ್ ಮತ್ತು ಆಮ್ಲಜನಕವಾಗಿ ವಿಭಜಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ಹೈಡ್ರೋಜನ್ ಭವಿಷ್ಯದ ಶುದ್ಧ ಇಂಧನವೆಂದು ಪರಿಗಣಿಸಲಾಗಿದೆ. ಹೈಡ್ರೋಜನ್ ದಹಿಸಿದಾಗ ಕಾರ್ಬನ್ ಡೈಆಕ್ಸೈಡ್ ಬಿಡುಗಡೆಯಾಗುವುದಿಲ್ಲ. ಹಾಗಾಗಿ ಪರಿಸರ ಮಾಲಿನ್ಯವೂ ಉಂಟಾಗುವುದಿಲ್ಲ. ಇದು ನಿಜಕ್ಕೂ ಇಂಧನ ಕ್ಷೇತ್ರದ ಹೊಸ ಅಧ್ಯಾಯ.2) ಕ್ವಾಂಟಮ್ ಡಾಟ್ ಸೌರ ಬಣ್ಣ: ಸೌರ ಬಣ್ಣದ ಎರಡನೇ ತಲೆಮಾರಿನ ತಂತ್ರಜ್ಞಾನವೇ ಕ್ವಾಂಟಮ್ ಡಾಟ್ ತಂತ್ರಜ್ಞಾನ. ಕ್ವಾಂಟಮ್ ಕಣಗಳು ಅತಿ ಸೂಕ್ಷ್ಮ ಅರೆವಾಹಕ ಕಣಗಳು. ಇವು ಮಾನವನ ಕೂದಲಿನ ದಪ್ಪಕ್ಕಿಂತ ಸಾವಿರಾರು ಪಟ್ಟು ಚಿಕ್ಕದಾಗಿರುತ್ತವೆ. ಆದರೆ ಅವುಗಳ ಸಾಮರ್ಥ್ಯ ಅಪಾರ. ಈ ಕಣಗಳು ಸೂರ್ಯನ ಬೆಳಕನ್ನು ಅತ್ಯಂತ ಪರಿಣಾಮಕಾರಿಯಾಗಿ ಹೀರಿಕೊಂಡು ಅದನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುತ್ತವೆ. ಕ್ವಾಂಟಮ್ ಕಣಗಳ ವಿಶೇಷತೆ ಏನೆಂದರೆ ಇವುಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಬಹುದು. ಅತ್ಯಂತ ತೆಳುವಾದ ಪದರವಾಗಿ ಬಳಸಬಹುದು. ಬಾಗುವ ಮೇಲ್ಮೈಗಳ ಮೇಲೆಯೂ ಲೇಪಿಸಬಹುದು. ಜೊತೆಗೆ ಭವಿಷ್ಯದಲ್ಲಿ ಸಾಂಪ್ರದಾಯಿಕ ಸೌರ ಫಲಕಗಳಿಗಿಂತ ಹೆಚ್ಚಿನ ಕಾರ್ಯಕ್ಷಮತೆ ನೀಡುವ ಸಾಧ್ಯತೆ ಇದೆ.3) ಪೆರೋವ್ಸ್ಕೆಂಟ್ ಸೌರ ಬಣ್ಣ : ಸೌರ ಬಣ್ಣದ ಮೂರನೇ ಪ್ರಮುಖ ತಂತ್ರಜ್ಞಾನ ಪೆರೋವ್ಸ್ಕೆಂಟ್ ಆಧಾರಿತವಾಗಿದೆ. ಈ ವಿಶೇಷ ಸ್ಫಟಿಕ ವಸ್ತುವನ್ನು ದ್ರವರೂಪಕ್ಕೆ ತರಬಹುದು. ನಂತರ ಅದನ್ನು ಸಾಮಾನ್ಯ ಸ್ಪೆಸ್ ಪೇಂಟ್ನಂತೆ ಯಾವುದೇ ಮೇಲ್ಮೆಯ ಮೇಲೆ ಸಿಂಪಡಿಸಬಹುದು. ಕೆಲವೇ ನಿಮಿಷಗಳಲ್ಲಿ ಅದು ಬೆಳಕನ್ನು ಹೀರಿಕೊಳ್ಳುವ ಸಕ್ರಿಯ ಪದರವಾಗಿ ರೂಪಾಂತರಗೊಳ್ಳುತ್ತದೆ. ಇದರಿಂದ ಸೌರ ಫಲಕ ತಯಾರಿಕೆಗೆ ಬೇಕಾಗುವ ಸಮಯ ಮತ್ತು ವೆಚ್ಚ ಎರಡೂ ಕಡಿಮೆಯಾಗುವ ಸಾಧ್ಯತೆ ಇದೆ.ಪ್ರಯೋಗಾಲಯದಿಂದ ಮಾರುಕಟ್ಟೆಯವರೆಗೆಇಂದು ವಿಶ್ವದ ಅನೇಕ ವಿಶ್ವವಿದ್ಯಾಲಯಗಳು ಮತ್ತು ಕಂಪನಿಗಳು ಸೌರ ಬಣ್ಣವನ್ನು ವಾಣಿಜ್ಯ ಉತ್ಪನ್ನವನ್ನಾಗಿ ಮಾಡಲು ಶ್ರಮಿಸುತ್ತಿವೆ. ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ಜಪಾನ್ ಮತ್ತು ಯುರೋಪಿನ ಹಲವು ರಾಷ್ಟçಗಳಲ್ಲಿ ಈ ಕುರಿತು ನಿರಂತರ ಸಂಶೋಧನೆ ನಡೆಯುತ್ತಿದೆ. ವಾಹನ ತಯಾರಿಕಾ ಸಂಸ್ಥೆಗಳು ತಮ್ಮ ವಿದ್ಯುತ್ ಕಾರುಗಳಿಗೆ ಸೌರ ಲೇಪನವನ್ನು ಪರೀಕ್ಷಿಸುತ್ತಿವೆ. ಗಾಜಿನ ಕಿಟಕಿಗಳಿಂದಲೇ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನವೂ ಅಭಿವೃದ್ಧಿಯ ಹಂತದಲ್ಲಿದೆ.ಮನೆಯಿಂದ ಮಂಗಳ ಗ್ರಹದವರೆಗೆಸೌರ ಬಣ್ಣದ ಬಳಕೆ ಕೇವಲ ಮನೆಗಳಿಗೆ ಸೀಮಿತವಾಗುವುದಿಲ್ಲ. ಭವಿಷ್ಯದಲ್ಲಿ ಇದನ್ನು ಬಳಸಬಹುದಾದ ಕ್ಷೇತ್ರಗಳು ಅಸಂಖ್ಯಾತ. ಮನೆಗಳ ಗೋಡೆಗಳು, ಮೇಲ್ಛಾವಣಿಗಳು ಮತ್ತು ಕಿಟಕಿಗಳೇ ವಿದ್ಯುತ್ ಉತ್ಪಾದಿಸುತ್ತವೆ. ವಿದ್ಯುತ್ ವಾಹನಗಳ ಮೇಲ್ಭಾಗ ಹಾಗೂ ಬಾಗಿಲುಗಳ ಮೇಲೆ ಸೌರ ಬಣ್ಣ ಹಚ್ಚಿದರೆ, ವಾಹನ ಓಡುತ್ತಿರುವಾಗಲೇ ಬ್ಯಾಟರಿಗೆ ಹೆಚ್ಚುವರಿ ಶಕ್ತಿ ದೊರೆಯಬಹುದು. ಸ್ಮಾರ್ಟ್ ಸಿಟಿಗಳ ಬೀದಿ ದೀಪಗಳು, ಸೇತುವೆಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ಸಾರ್ವಜನಿಕ ಕಟ್ಟಡಗಳು ಇವೆಲ್ಲವೂ ತಮ್ಮದೇ ವಿದ್ಯುತ್ ಉತ್ಪಾದಿಸುವ ವ್ಯವಸ್ಥೆಗಳಾಗಬಹುದು. ಕೃಷಿಯಲ್ಲಿನ ಹರುಮನೆಗಳ ಮೇಲ್ಮೆಗೆ ಸೌರ ಬಣ್ಣ ಬಳಸಿ, ಬೆಳೆಗಳಿಗೆ ಅಗತ್ಯವಾದ ಬೆಳಕನ್ನು ಉಳಿಸಿಕೊಂಡೇ ವಿದ್ಯುತ್ ಉತ್ಪಾದಿಸಬಹುದು. ಭವಿಷ್ಯದಲ್ಲಿ ಉಪಗ್ರಹಗಳು, ಚಂದ್ರನ ನೆಲೆಗಳು ಮತ್ತು ಮಂಗಳ ಗ್ರಹ ಸೇರಿದಂತೆ ಬಾಹ್ಯಾಕಾಶದಲ್ಲಿಯೂ ಈ ತಂತ್ರಜ್ಞಾನ ಬಳಸುವ ಸಾಧ್ಯತೆ ಇದೆ.ಒಂದು ಬಣ್ಣ ನೂರಾರು ಉಪಯೋಗಗಳುಸೌರ ಬಣ್ಣದ ದೊಡ್ಡ ಶಕ್ತಿ ಎಂದರೆ ಅದರ ಸರಳತೆ. ಇದನ್ನು ಬಳಸಲು ಭಾರೀ ಕಬ್ಬಿಣದ ಚೌಕಟ್ಟುಗಳು ಬೇಕಾಗುವುದಿಲ್ಲ. ಮೇಲ್ಛಾವಣಿಯನ್ನು ಕೊರೆದು ಅಳವಡಿಸುವ ಅಗತ್ಯವಿಲ್ಲ. ಅತ್ಯಂತ ತೆಳುವಾದ ಒಂದು ಪದರವೇ ಸಾಕು. ಅದಕ್ಕಾಗಿಯೇ ವಿಜ್ಞಾನಿಗಳು ಇದನ್ನು ‘ಮುಂದಿನ ತಲೆಮಾರಿನ ಸೌರ ಕ್ರಾಂತಿ’ ಎಂದು ಕರೆಯುತ್ತಿದ್ದಾರೆ. ನಿಮಗಿದು ತಿಳಿದಿರಲಿಒಂದು ಸಾಮಾನ್ಯ ನಗರದಲ್ಲಿ ಕಟ್ಟಡಗಳ ಗೋಡೆಗಳ ಒಟ್ಟು ವಿಸ್ತೀರ್ಣವು, ಮೇಲ್ಛಾವಣಿಗಳ ವಿಸ್ತೀರ್ಣಕ್ಕಿಂತ ಹಲವಾರು ಪಟ್ಟು ಹೆಚ್ಚು. ಈ ಎಲ್ಲ ಗೋಡೆಗಳೂ ಸೌರ ಬಣ್ಣದಿಂದ ವಿದ್ಯುತ್ ಉತ್ಪಾದಿಸಲು ಆರಂಭಿಸಿದರೆ, ನಗರಗಳ ಇಂಧನ ಸಾಮರ್ಥ್ಯ ಹಲವು ಪಟ್ಟು ಹೆಚ್ಚಾಗಬಹುದು.ಸೌರ ಬಣ್ಣ ಬಳಕೆಗೆ ಮುಕ್ತವೇ?ಸೌರ ಬಣ್ಣ ಇನ್ನೂ ಅಭಿವೃದ್ಧಿಯ ಹಾದಿಯಲ್ಲಿದೆ. ಕಾರ್ಯಕ್ಷಮತೆ ಹೆಚ್ಚಿಸುವುದು, ಬಾಳಿಕೆ ಸುಧಾರಿಸುವುದು, ಕಡಿಮೆ ವೆಚ್ಚದಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವುದು ಇವುಗಳ ಮೇಲೆ ವಿಜ್ಞಾನಿಗಳು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಒಂದು ವಿಷಯ ಮಾತ್ರ ಸ್ಪಷ್ಟವಾಗಿದೆ. ಸೌರ ಬಣ್ಣ ಈಗ ಕೇವಲ ಕಲ್ಪನೆಯಲ್ಲ, ಅದು ವಿಜ್ಞಾನದಿಂದ ಸಾಬೀತಾಗುತ್ತಿರುವ ಭವಿಷ್ಯದ ತಂತ್ರಜ್ಞಾನ.ಸೌರ ಬಣ್ಣದ ಮುಂದಿರುವ ಸವಾಲುಗಳು‘ಪ್ರತಿಯೊಂದು ಮಹಾನ್ ಆವಿಷ್ಕಾರವೂ ಆರಂಭದಲ್ಲಿ ಒಂದು ಕನಸಾಗಿರುತ್ತದೆ. ನಂತರ ಅದು ಸಂಶೋಧನೆಯಾಗುತ್ತದೆ. ಕೊನೆಗೆ ಅದು ಮಾನವ ಜೀವನವನ್ನು ಬದಲಾಯಿಸುವ ಕ್ರಾಂತಿಯಾಗುತ್ತದೆ’. ಸೌರ ಬಣ್ಣವೂ ಈಗ ಇದೇ ಹಾದಿಯಲ್ಲಿ ಸಾಗುತ್ತಿದೆ.ಇಂದು ಇದು ವಿಜ್ಞಾನಿಗಳ ಪ್ರಯೋಗಾಲಯದಲ್ಲಿ ಆಶಾದಾಯಕ ಫಲಿತಾಂಶಗಳನ್ನು ನೀಡುತ್ತಿದೆ. ಆದರೆ ನಾಳೆ ಕೋಟ್ಯಂತರ ಮನೆಗಳ ಗೋಡೆಗಳಿಗೆ ತಲುಪಬೇಕಾದರೆ, ಇನ್ನೂ ಕೆಲವು ಸವಾಲುಗಳನ್ನು ದಾಟಬೇಕಿದೆ. ಅವುಗಳೆಂದರೆ,ಕಾರ್ಯಕ್ಷಮತೆ : ಇಂದಿನ ಅತ್ಯಾಧುನಿಕ ಸಿಲಿಕಾನ್ ಸೌರ ಫಲಕಗಳು ಸೂರ್ಯನ ಬೆಳಕಿನ ಶೇಕಡಾ ೨೦ ರಿಂದ ೨೫ರಷ್ಟು ಶಕ್ತಿಯನ್ನು ವಿದ್ಯುತ್ ಆಗಿ ಪರಿವರ್ತಿಸಬಲ್ಲವು. ಆದರೆ ಪ್ರಸ್ತುತ ಸೌರ ಬಣ್ಣದ ಕಾರ್ಯಕ್ಷಮತೆ ಇನ್ನೂ ಶೇಕಡಾ ೩ ರಿಂದ ೧೧ರಷ್ಟಿದೆ. ಅಂದರೆ ೧೦೦ ಯೂನಿಟ್ ಸೌರಶಕ್ತಿ ಲಭ್ಯವಿದ್ದರೆ, ಅದರಲ್ಲಿನ ಕೇವಲ ೩ ರಿಂದ ೧೧ ಯೂನಿಟ್ ಮಾತ್ರ ವಿದ್ಯುತ್ ಆಗಿ ಪರಿವರ್ತನೆಯಾಗುತ್ತದೆ. ಆದ್ದರಿಂದ ವಿಜ್ಞಾನಿಗಳ ಇನ್ನಷ್ಟು ಶಕ್ತಿಯನ್ನು ಸೆರೆಹಿಡಿಯುವ ಹೊಸ ವಸ್ತುಗಳನ್ನು ಅಭಿವೃದ್ಧಿಪಡಿಸುವತ್ತ ಚಿತ್ತ ಹರಿಸುತ್ತಿದ್ದಾರೆ.ಬಾಳಿಕೆ: ಮನೆಯ ಗೋಡೆಗೆ ಹಚ್ಚುವ ಬಣ್ಣ ಕನಿಷ್ಠ ಹತ್ತು ವರ್ಷವಾದರೂ ಉಳಿಯಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಹಾಗೆಯೇ ಸೌರ ಬಣ್ಣವೂ ಸಹ ಅನೇಕ ವರ್ಷಗಳ ಕಾಲ ತನ್ನ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಬೇಕು. ಆದರೆ ಪ್ರಕೃತಿಯಲ್ಲಿನ ತೀವ್ರ ಬಿಸಿಲು, ನಿರಂತರ ಮಳೆ, ಧೂಳು, ಗಾಳಿಯಲ್ಲಿನ ರಾಸಾಯನಿಕ ಮಾಲಿನ್ಯ, ಅಲ್ಟಾçವಯೊಲೆಟ್ ಕಿರಣಗಳು ಇವೆಲ್ಲವೂ ಸೌರ ಬಣ್ಣದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ವಿಜ್ಞಾನಿಗಳು ಸ್ವಯಂ ದುರಸ್ತಿ ಗುಣ ಹೊಂದಿರುವ ಹೊಸ ಲೇಪನಗಳ ಅಭಿವೃದ್ಧಿಯತ್ತ ಗಮನ ಹರಿಸಿದ್ದಾರೆ.ದೊಡ್ಡ ಪ್ರಮಾಣದ ಉತ್ಪಾದನೆ: ಪ್ರಯೋಗಾಲಯದಲ್ಲಿ ಒಂದು ಚದರ ಅಡಿ ಸೌರ ಬಣ್ಣ ತಯಾರಿಸುವುದು ಸುಲಭ. ಆದರೆ ಒಂದು ನಗರಕ್ಕೆ ಬೇಕಾಗುವ ಲಕ್ಷಾಂತರ ಲೀಟರ್ ಸೌರ ಬಣ್ಣವನ್ನು ತಯಾರಿಸುವುದು ಸುಲಭದ ಕೆಲಸವಲ್ಲ. ಉತ್ಪಾದನೆಯ ಪ್ರತಿಯೊಂದು ಬಣ್ಣದಲ್ಲೂ ಒಂದೇ ಗುಣಮಟ್ಟ, ಕಾರ್ಯಕ್ಷಮತೆ ಮತ್ತು ಬಾಳಿಕೆ ಇರಬೇಕು. ಇದಕ್ಕಾಗಿ ಹೊಸ ತಲೆಮಾರಿನ ಉತ್ಪಾದನಾ ತಂತ್ರಜ್ಞಾನಗಳ ಅಗತ್ಯವಿದೆ.ಹೈಡ್ರೋಜನ್ ಸುರಕ್ಷತೆ : ಕೆಲವು ಸೌರ ಬಣ್ಣಗಳು ಹೈಡ್ರೋಜನ್ ಉತ್ಪಾದಿಸುತ್ತವೆ. ಹೈಡ್ರೋಜನ್ ಶುದ್ಧ ಇಂಧನವಾದರೂ ಅದು ಸುಲಭವಾಗಿ ಹೊತ್ತಿ ಉರಿಯುವ ಅನಿಲ. ಆದ್ದರಿಂದ ಸುರಕ್ಷಿತ ಸಂಗ್ರಹಣೆ, ಒತ್ತಡ ನಿಯಂತ್ರಣ, ಸೋರಿಕೆ ತಡೆ, ಸುರಕ್ಷಿತ ಬಳಕೆ, ಇವೆಲ್ಲವೂ ಅತ್ಯಂತ ಪ್ರಮುಖ ವಿಷಯಗಳಾಗಿವೆ. ವಿಜ್ಞಾನಿಗಳು ಈ ಸಮಸ್ಯೆಗಳಿಗೆ ಅತ್ಯಾಧುನಿಕ ಇಂಧನ ಸಂಗ್ರಹ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.ಪೇಟೆಂಟ್ ಮತ್ತು ಕಾನೂನು: ಸೌರ ಬಣ್ಣವು ಕೇವಲ ವೈಜ್ಞಾನಿಕ ಆವಿಷ್ಕಾರವಲ್ಲ. ಇದು ಸಾವಿರಾರು ಕೋಟಿ ರೂಪಾಯಿಗಳ ಜಾಗತಿಕ ಕೈಗಾರಿಕೆಯಾಗುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ ಪ್ರತಿ ಹೊಸ ಆವಿಷ್ಕಾರಕ್ಕೂ ಪೇಟೆಂಟ್ ಪಡೆಯಲು ಕಂಪನಿಗಳ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿದೆ. ಭವಿಷ್ಯದಲ್ಲಿ ಈ ಕ್ಷೇತ್ರದಲ್ಲಿ ಬೌದ್ಧಿಕ ಸ್ವತ್ತಿನ ಮಹತ್ವ ಇನ್ನಷ್ಟು ಹೆಚ್ಚಾಗಲಿದೆ.ಭಾರತಕ್ಕೆ ಏಕೆ ಮುಖ್ಯ?ಭಾರತವು ವಿಶ್ವದಲ್ಲೇ ಅತ್ಯಧಿಕ ಸೌರಶಕ್ತಿ ಪಡೆಯುವ ರಾಷ್ಟ್ರಗಳಲ್ಲಿ ಒಂದಾಗಿದೆ. ವರ್ಷದ ಬಹುತೇಕ ದಿನಗಳಲ್ಲಿ ಉತ್ತಮ ಸೂರ್ಯನ ಬೆಳಕು ಲಭ್ಯವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ವಿಶ್ವಾಸಾರ್ಹ ವಿದ್ಯುತ್ ವ್ಯವಸ್ಥೆ ಇಲ್ಲದ ಪ್ರದೇಶಗಳೂಇವೆ. ಆದರೆ ನಗರಗಳಲ್ಲಿ ಲಕ್ಷಾಂತರ ಕಟ್ಟಡಗಳಿವೆ. ಈ ಹಿನ್ನೆಲೆಯಲ್ಲಿ ಸೌರ ಬಣ್ಣ ಯಶಸ್ವಿಯಾದರೆ ಭಾರತಕ್ಕೆ ಇದು ಇಂಧನ ಕ್ಷೇತ್ರದ ಹೊಸ ಕ್ರಾಂತಿಯಾಗಬಹುದು. ಕರ್ನಾಟಕ ಈಗಾಗಲೇ ದೇಶದ ಪ್ರಮುಖ ಸೌರಶಕ್ತಿ ಉತ್ಪಾದಕ ರಾಜ್ಯಗಳಲ್ಲಿ ಒಂದಾಗಿದೆ. ಪಾವಗಡದಂತಹ ಬೃಹತ್ ಸೌರ ಉದ್ಯಾನಗಳು ವಿಶ್ವದ ಗಮನ ಸೆಳೆದಿವೆ. ಒಂದುವೇಳೆ ಸೌರ ಬಣ್ಣ ಮಾರುಕಟ್ಟೆಗೆ ಬಂದರೆ ಬಹುತೇಕ ನಗರಗಳ ಬಹುಮಹಡಿ ಕಟ್ಟಡಗಳು, ಕೈಗಾರಿಕೆಗಳು, ಬಸ್ಸು ರೈಲು ನಿಲ್ದಾಣಗಳು, ಮುಂತಾದ ಕಟ್ಟಡಗಳು ಸೌರ ಬಣ್ಣದ ಮೂಲಕ ವಿದ್ಯುತ್ ಉತ್ಪಾದಿಸುವ ಪವರ್ ಸ್ಟೇಷನ್ಗಳಾಗಲಿವೆ.ಸೌರ ಬಣ್ಣ ಇನ್ನೂ ಅಭಿವೃದ್ಧಿಯ ಪಯಣದಲ್ಲಿ ಇದೆ. ಆದರೆ ಅದರ ಹಿಂದಿರುವ ವಿಜ್ಞಾನ ಅತ್ಯಂತ ಬಲವಾಗಿದೆ. ಇದು ಕೇವಲ ಹೊಸ ಬಣ್ಣವಲ್ಲ. ಶುದ್ಧ ಇಂಧನ, ಪರಿಸರ ಸಂರಕ್ಷಣೆ, ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟ ಮತ್ತು ಮಾನವ ನಾಗರಿಕತೆಯ ಸುಸ್ಥಿರ ಭವಿಷ್ಯವನ್ನು ಒಟ್ಟುಗೂಡಿಸುವ ಹೊಸ ತಂತ್ರಜ್ಞಾನವಾಗಿದೆ. ಭವಿಷ್ಯದಲ್ಲಿ ಮನೆಯ ಗೋಡೆಗಳಿಗೆ ಬಣ್ಣ ಹಚ್ಚುವುದು ಎಂದರೆ ಕೇವಲ ಅಲಂಕಾರವಲ್ಲ. ಅದು ನಮ್ಮ ನಿಮ್ಮ ಮನೆಯನ್ನು ವಿದ್ಯುತ್ ಸ್ಥಾವರವನ್ನಾಗಿ ನಿರ್ಮಿಸುವ ಕೆಲಸವಾಗಿರುತ್ತದೆ. ‘ಸೂರ್ಯನು ಪ್ರತಿದಿನ ಉಚಿತವಾಗಿ ನೀಡುವ ಬೆಳಕನ್ನು ನಾವು ಇಂದಿಗೂ ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಸೌರ ಬಣ್ಣ ಆ ಬೆಳಕನ್ನು ಪ್ರತಿಯೊಂದು ಗೋಡೆಯಲ್ಲೂ, ಪ್ರತಿಯೊಂದು ಕಟ್ಟಡದಲ್ಲೂ, ಪ್ರತಿಯೊಂದು ನಗರದಲ್ಲೂ ಸೆರೆಹಿಡಿಯುವ ಭವಿಷ್ಯದ ಸೇತುವೆಯಾಗಬಹುದು’ ಅದಕ್ಕಾಗಿ ಪ್ರತಿ ಕಟ್ಟಡಕ್ಕೂ ಸೌರ ಬಣ್ಣ ಹಚ್ಚೋಣವೇ? ಜಗತ್ತಿನ ಚಿತ್ತ ಸೌರ ಬಣ್ಣದತ್ತಇಂದು ವಿಶ್ವದ ಪ್ರಮುಖ ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಕೈಗಾರಿಕೆಗಳು ಈ ತಂತ್ರಜ್ಞಾನದ ಮೇಲೆ ಶತಕೋಟಿ ರೂಪಾಯಿ ಹೂಡಿಕೆ ಮಾಡುತ್ತಿವೆ. ಏಕೆಂದರೆ ಇನ್ನು ಮುಂದೆ ಸೌರ ಫಲಕಗಳನ್ನು ಖರೀದಿಸುವ ಹಾಗೂ ಅಳವಡಿಸುವ ಅಗತ್ಯವೇ ಬರುವುದಿಲ್ಲ. ಬಣ್ಣ ಬಳಿದರೆ ಸಾಕು. ಅದರಿಂದ ವಿದ್ಯುತ್ ಸ್ವಯಂಚಾಲಿತವಾಗಿ ಉತ್ಪಾದನೆಯಾಗುತ್ತದೆ.ನಿಮಗೆ ಗೊತ್ತೇ?ಭೂಮಿಗೆ ಕೇವಲ ಒಂದು ಗಂಟೆಯಲ್ಲಿ ಬೀಳುವ ಸೂರ್ಯನ ಶಕ್ತಿ, ಇಡೀ ಜಗತ್ತು ಒಂದು ವರ್ಷದಲ್ಲಿ ಬಳಸುವ ಶಕ್ತಿಗಿಂತಲೂ ಮಿಗಿಲು. ಆ ಶಕ್ತಿಯನ್ನು ಅಗ್ಗವಾಗಿ ಬಳಸಿಕೊಳ್ಳಲು ಸಾಧ್ಯವಾದರೆ ಇಂಧನ ಕೊರತೆ ಎಂಬ ಪದವೇ ಇರುವುದಿಲ್ಲ.(ಇನ್ನಷ್ಟು ಆಸಕ್ತಿಕರ ನುಡಿಚಿತ್ರಗಳಿಗಾಗಿ, ಕುತೂಹಲಕರ ಕತೆ–ಕಾದಂಬರಿಗಾಗಿ ಮಾರುಕಟ್ಟೆಯಲ್ಲಿರುವ ಸುಧಾ ಓದಿ)