ಡಿ.ಎನ್.ಶ್ರೀನಾಥ್ ಅವರ ಅನುವಾದಿತ ಕಥೆ ‘ಸಂತಸ’
ರಷ್ಯಾ ಮೂಲ: ಮೈಖೇಲ್ ಪಿತ್ರೋವಿಚ್ ಅಟ್ಸೀಬಾಶೇವ್ಕನ್ನಡಕ್ಕೆ: ಡಿ.ಎನ್.ಶ್ರೀನಾಥ್ವೇಶ್ಯೆ ಸಾಶಾಳ ಮೂಗು ಮುರಿದಾಗಿನಿಂದ ಹಾಗೂ ಒಂದು ಕಾಲದಲ್ಲಿ ಸುಂದರವಾಗಿದ್ದ ಮುಖ ಈಗ ಕೊಳೆತ ತಲೆ ಬುರುಡೆಯಂತೆ ಕಾಣಿಸುತ್ತಿತ್ತು. ಜೀವನ ಅವಳಿಂದ ಎಲ್ಲವನ್ನೂ ಕಸಿದಿತ್ತು. ಅವಳ ಜೀವನ ಒಂದು ಭಯಾನಕ ಕನಸಿನಂತಾಗಿದೆ; ಇಲ್ಲಿ ಹಗಲಿನ ಕಾಂತಿ ಕಳೆದುಹೋಗಿದೆ, ರಾತ್ರಿ ಎಂದಿಗೂ ಮುಗಿಯದ ಕಠಿಣ ದಿನ

ರಷ್ಯಾ ಮೂಲ: ಮೈಖೇಲ್ ಪಿತ್ರೋವಿಚ್ ಅಟ್ಸೀಬಾಶೇವ್ಕನ್ನಡಕ್ಕೆ: ಡಿ.ಎನ್.ಶ್ರೀನಾಥ್ವೇಶ್ಯೆ ಸಾಶಾಳ ಮೂಗು ಮುರಿದಾಗಿನಿಂದ ಹಾಗೂ ಒಂದು ಕಾಲದಲ್ಲಿ ಸುಂದರವಾಗಿದ್ದ ಮುಖ ಈಗ ಕೊಳೆತ ತಲೆ ಬುರುಡೆಯಂತೆ ಕಾಣಿಸುತ್ತಿತ್ತು. ಜೀವನ ಅವಳಿಂದ ಎಲ್ಲವನ್ನೂ ಕಸಿದಿತ್ತು. ಅವಳ ಜೀವನ ಒಂದು ಭಯಾನಕ ಕನಸಿನಂತಾಗಿದೆ; ಇಲ್ಲಿ ಹಗಲಿನ ಕಾಂತಿ ಕಳೆದುಹೋಗಿದೆ, ರಾತ್ರಿ ಎಂದಿಗೂ ಮುಗಿಯದ ಕಠಿಣ ದಿನಗಳಾಗಿವೆ. ಹಸಿವು ಮತ್ತು ಚಳಿಯಿಂದ ಶರೀರ ದುರ್ಬಲವಾಗಿದೆ, ಸ್ತನಗಳು ಸಡಿಲವಾಗಿವೆ. ಕಾಲುಗಳಲ್ಲಿ ಎಲುಬಿನ ಆಕಾರಗಳು ಕಾಣಬರುತ್ತವೆ; ಅವಳನ್ನು ನೋಡಿದರೆ ನಾಯಿಯ ಶವವನ್ನು ನೋಡಿದಂತಾಗುತ್ತದೆ.ಸಾಶಾ ಮುಖ್ಯರಸ್ತೆಯಿಂದ ಎದ್ದು ಈಗ ಶೂನ್ಯ ಗಲ್ಲಿಗೆ ಬಂದಳು, ಅತಿ ಕೊಳಕಾದ ಜುಗುಪ್ಸೆ ಹುಟ್ಟಿಸುವಂಥ ಜನರಿಗೆ ತನ್ನ ಶರೀರವನ್ನು ಮಾರಲು ಆರಂಭಿಸಿದಳು. ಒಮ್ಮೆ ಸಾಶಾ ಮಂಜಿನ ಮತ್ತು ಬೆಳದಿಂಗಳ ರಾತ್ರಿಯಲ್ಲಿ ರಸ್ತೆಯ ಚೌಕಕ್ಕೆ ಬಂದಳು, ಇದು ನಗರದ ಮೂಲೆಯಲ್ಲಿದ್ದ ರೈಲ್ವೆ ಲೈನಿನ ಬಳಿಯಿತ್ತು. ಈ ಚೌಕ ಮುಚ್ಚಿದ ಹೊಂಡಗಳು ಮತ್ತು ಕಸದ ರಾಶಿಯ ಆಚೆಗಿತ್ತು. ಅಲ್ಲಿ ಮೌನ ಮತ್ತು ನಿಶ್ಶಬ್ದತೆಯಿತ್ತು. ರಸ್ತೆಯ ಬದಿಗೆ ಬೀಳುತ್ತಿದ್ದ ಬೆಳದಿಂಗಳು ಮಂದವಾಗಿ ಹೊಳೆಯುತ್ತಿತ್ತು; ಇದು ಶೂನ್ಯ ಚೌಕವನ್ನು ಸಮಾನವಾಗಿ ಬೆಳಗುತ್ತಿತ್ತು. ಹೊಂಡಗಳಲ್ಲಿ ಅಕಸ್ಮಾತ್ ಬೀಳುವ ಕಪ್ಪು ನೆರಳುಗಳು ಭಯಾನಕವಾಗಿ ತೋರುತ್ತಿದ್ದವು. ಟೆಲಿಗ್ರಾಫ್ ಕಂಬಗಳು ಮತ್ತು ತಂತಿಗಳು ಹಿಮದಿಂದಾಗಿ ಹೊಳೆಯುತ್ತಿದ್ದವು ಹಾಗೂ ಚಂದಿರನ ಪ್ರೇತಗಳಂತೆ ರಹಸ್ಯಮಯವಾಗಿ ತೋರುತ್ತಿದ್ದವು. ಗಾಳಿ ಸ್ವಚ್ಛವಾಗಿದ್ದು, ಅದರಿಂದ ಅಸಹನೀಯವಾದ ಚಳಿಯ ಅನುಭವವಾಗುತ್ತಿತ್ತು. ಕಲ್ಲಿನಂತಾದ ಹಿಮ, ಶರೀರದ ಪ್ರತಿ ಭಾಗಕ್ಕೆ ಯಾರೋ ಸುಡುವ ಲೋಹದಿಂದ ಬರೆ ಹಾಕಿದಂತೆ, ಶರೀರದ ಮೇಲೆ ಚರ್ಮದ ತುಂಡುಗಳು ಮಾತ್ರ ಇದ್ದಂತೆ... ಬಾಯಿಯಿಂದ ಭಾಷ್ಪದ ಮೋಡಗಳು ಬರುವಂತೆ, ಅವು ಗಾಳಿಯಲ್ಲಿ ಕಲೆತು ಆಗಸದಲ್ಲಿ ಮೇಲಕ್ಕೆ ಹೋಗುತ್ತಿದ್ದವು.ಸಾಶಾಳ ಬಳಿ ಐದು ದಿನಗಳಿಂದ ಯಾವುದೇ ಕೆಲಸವಿರಲಿಲ್ಲ, ಒಂದು ದಿನ ರಾತ್ರಿ ಅವಳಿಗೆ ಹೊಡೆದು-ಬಡಿದು ಫ್ಲಾಟ್ನಿಂದ ಹೊರ ಹಾಕಲಾಗಿತ್ತು, ಅವಳ ಕೊನೆಯ ಉತ್ತಮ ಸ್ವೆಟರನ್ನು ಅವಳಿಂದ ಕಸಿಯಲಾಗಿತ್ತು. ಈ ಶೂನ್ಯ ರಸ್ತೆಯಲ್ಲಿ, ಬೆಳದಿಂಗಳ ರಾತ್ರಿಯಲ್ಲಿ ಅವಳ ಚಿಕ್ಕ ಮತ್ತು ಆಘಾತಗೊಂಡ ಶರೀರ ವಿಚಿತ್ರವಾಗಿ ಎಳೆಯಲ್ಪಡುತ್ತಿತ್ತು. ತಾನು ಜಗತ್ತಿನಲ್ಲಿ ಒಂಟಿ, ಈ ಶೂನ್ಯ ಸ್ಥಳದಿಂದ ತಾನೆಂದೂ ಬೇರೆ ಹೋಗಲಾರೆ ಎಂದು ಅವಳಿಗೆ ಅನ್ನಿಸುತ್ತಿತ್ತು. ಕಾಲುಗಳಿಗೆ ಹಿಮವು ಮೆತ್ತಿಕೊಂಡಿತ್ತು. ಹಿಮದ ರಾಶಿಯಲ್ಲಿ ಬಿದ್ದ ಅವಳ ಕಾಲುಗಳು ಕಲ್ಲಿಗೆ ಬಡಿದಂತೆ ನೋವನ್ನು ಮನಗಾಣುತ್ತಿದ್ದವು.ಆ ಶೂನ್ಯ ಚೌಕದ ನಡುವೆ ಸಾಶಾಳಿಗೆ ಮೊದಲ ಬಾರಿಗೆ ತನ್ನ ಅಸ್ತಿತ್ವ-ಹೀನತೆಯ ಅರಿವಾಯಿತು, ಅವಳು ರೋದಿಸಿದಳು. ಕಣ್ಣೀರು ಚಳಿಯಿಂದ ದಪ್ಪಗಾದ ಅವಳ ಕಣ್ಣುಗಳಿಂದ ಹರಿಯಿತು. ಅವಳ ಕಣ್ಣೀರನ್ನು ಯಾರೂ ನೋಡಲಿಲ್ಲ. ಚಂದಿರ ಮೊದಲಿನಂತೆ ಚೌಕದ ಮೇಲೆ ಸ್ವಚ್ಛ ನೀಲಾಕಾಶದಲ್ಲಿ ಹೊಳೆಯುತ್ತಿದ್ದ. ಯಾರೂ ಬರಲಿಲ್ಲ. ನಿರಾಸೆಯಲ್ಲಿ ಮನುಷ್ಯನ ಅವ್ಯಕ್ತ ಭಾವನೆ ಚೀರುವಂತೆ ಕಂಡಿತು. ಸಾಶಾ ಪ್ರಾರ್ಥಿಸಿದಳು, ‘ನಾನು ಸಾಯ್ತೀನಿ... ಸಾಯಬೇಕು.’ ನಂತರ ಅವಳು ಮೌನವಹಿಸಿದಳು. ಆಗಲೇ ರಸ್ತೆಯಲ್ಲಿ ವ್ಯಕ್ತಿಯೊಬ್ಬನ ದೀರ್ಘ ಹಾಗೂ ಕಪ್ಪು ನೆರಳು ಕಂಡಿತು. ಆ ನೆರಳು ಸಾಶಾಳ ಸಮೀಪಕ್ಕೆ ಬರುತ್ತಿತ್ತು. ಅದರ ಕಾಲುಗಳಿಂದ ಹಿಮವು ಬಿರಿಯುವ ಧ್ವನಿ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಬೆಳದಿಂಗಳಿನಲ್ಲಿ ಅದರ ಕಾಲರ್ಗಳು ಕಾಣಬರಲಾರಂಭಿಸಿದವು. ನೆರಳಿನ ವ್ಯಕ್ತಿ ರಸ್ತೆಯ ಕೊನೆಯಲ್ಲಿದ್ದ ಯಾವುದೋ ಕಾರ್ಖಾನೆಯ ಕಾರ್ಮಿಕನಿರಬೇಕೆಂದು ಸಾಶಾ ಊಹಿಸಿದಳು.ಸಾಶಾ ಈಗ ರಸ್ತೆಯ ತುದಿಯಲ್ಲಿ ನಿಂತಿದ್ದಳು; ಚಳಿಯಿಂದ ಸೆಟೆದುಕೊಂಡ ಕೈಗಳನ್ನು ಅಂಗಿಯ ತೋಳುಗಳೊಳಗೆ ಎಳೆದುಕೊಳ್ಳುತ್ತಾ, ಹೆಗಲನ್ನು ನೇರ ಮಾಡುತ್ತಾ, ಎರಡೂ ಕಾಲುಗಳನ್ನು ಸರದಿಯಂತೆ ಹಾರಿಸುತ್ತಾ ನಿರೀಕ್ಷಿಸುತ್ತಿದ್ದಳು. ಅವಳ ತುಟಿಗಳು ರಬ್ಬರಿನಂತಾಗಿದ್ದವು. ತಾನು ವ್ಯಾಪಾರವನ್ನು ಕುದುರಿಸಲಾರೆ ಎಂಬ ಭಯ ಸಾಶಾಳನ್ನು ಕಾಡಿಸುತ್ತಿತ್ತು.‘ಸಾಹೇಬ್ರೆ...’ ಅವಳು ಮೆಲ್ಲನೆ ಹೇಳಿದಳು. ದಾರಿಹೋಕ ಒಂದು ಕ್ಷಣ ನಿಂತ. ಅವಳನ್ನು ನೋಡಿದ, ನಂತರ ಬೇಗನೆ ಮುಂದಕ್ಕೆ ಹೋದ. ಸಾಶಾ ಧೈರ್ಯವಹಿಸಿ ಹಿಂದೆ ಓಡಿದಳು, ನಂತರ ಅವನ ಮುಂದೆ ಬಂದು ಬೆನ್ನು ತೋರಿಸುತ್ತಾ ನಿಂತಳು.ಈಗ ಸಾಶಾ ಸುಳ್ಳು ಖುಷಿಯಿಂದ ಧೈರ್ಯವಹಿಸಿ ಹೇಳಿದಳು, ‘ಸಾಹೇಬ್ರೆ... ನನ್ನ ಜೊತೆ ಬನ್ನಿ! ನಾನು ನಿಮಗೆ ನಿಮ್ಮ ಮನಸ್ಸು ಖುಷಿಪಡುವಂಥ ಜಗತ್ತನ್ನು ತೋರಿಸುತ್ತೇನೆ... ಬನ್ನಿ... ಪ್ರಿಯರೇ... ನಿಜವಾಗಿಯೂ...’ದಾರಿಹೋಕ ಅವಳ ಕಡೆಗೆ ಗಮನಕೊಡಲಿಲ್ಲ, ಅವನು ಮುಂದುವರೆಯುತ್ತಲೇ ಇದ್ದ. ಅವನ ಭಾವನಾ-ಹೀನ ಮುಖದಲ್ಲಿ ಚಂದಿರನ ಬೆಳಕಿನಲ್ಲಿ ಹೊಳೆಯುತ್ತಿದ್ದ ಕಣ್ಣುಗಳು ಗಾಜಿನ ಕಣ್ಣುಗಳಂತೆ ತೋರುತ್ತಿದ್ದವು.ಸಾಶಾ ಅವನೆದುರು ಬೆನ್ನು ತೋರಿಸುತ್ತಾ ಹೆಗಲು ಕುಣಿಸುತ್ತಾ, ನರಳುವ ಧ್ವನಿಯಲ್ಲಿ ಹತಾಶಳಾಗಿ ನೃತ್ಯಿಸುತ್ತಾ ಹೇಳಿದಳು, ‘ಸಾಹೇಬ್ರೆ, ನಾನು ಹೇಗಿದ್ದೇನೆಂದು ನೋಡ್ತಿದ್ದೀರಲ್ಲ.. ನಾನು ಸ್ಚಚ್ಛ ಮತ್ತು ಸುಂದರಿಯಾಗಿದ್ದೇನೆ... ನನ್ನ ಫ್ಲಾಟ್ ಸಮೀಪದಲ್ಲಿಯೇ ಇದೆ...ನಡೀರಿ...’ ಚಂದಿರ ಚೌಕದ ಮೇಲ್ಭಾಗದಲ್ಲಿ ಹೊಳೆಯುತ್ತಿದ್ದ. ಸಾಶಾಳ ದುರ್ಬಲ ಸ್ವರ ಕಂಪಿಸುತ್ತಿತ್ತು.‘ನಡೀರಿ... ಏದುಸಿರು ಬಿಡುತ್ತಾ ತಡಬಡಿಸುತ್ತಿದ್ದ ಸಾಶಾ ನೃತ್ಯಿಸುತ್ತಾ ಹೇಳಿದಳು, ‘ಸರಿ, ಬೇಡ್ವಾ? ಪರ್ವಾಗಿಲ್ಲ, ಆದರೆ ಕಡೇ ಪಕ್ಷ 20 ಕೋಪೆಕ್ ಕೊಡಿ... ಇಡೀ ದಿನ... ಏನೂ...ತಿಂದಿಲ್ಲ... ಹೋಗ್ಲಿ 10 ಕೋಪೆಕ್ ಕೊಡಿ...’ದಾರಿಹೋಕ ಮೌನವಾಗಿ ಅವಳನ್ನು ನೋಡಿದ; ಅವನು ತನ್ನೆದುರು ಯಾರೂ ಇಲ್ಲವೆಂಬಂತೆ ಮುಂದಕ್ಕೆ ಹೋದ. ಅವಳ ವಿಚಿತ್ರ, ಗಾಜಿನಂಥ ನಿರ್ಜೀವ ಕಣ್ಣುಗಳು ಈ ಹಿಂದಿನಂತೆಯೇ ಬೆಳದಿಂಗಳಿನಲ್ಲಿ ಹೊಳೆಯುತ್ತಿದ್ದವು. ಸಾಶಾಳ ಗಂಟಲು ಒತ್ತಿ ಬಂತು, ಕಣ್ಣುಗಳು ಕಣ್ಣೀರಿನಿಂದ ಒದ್ದೆಯಾದವು.‘ಕೇವಲ 10 ಕೋಪೆಕ್... ಸಾಹೇಬ್ರೆ, ನೀವು ಕರುಣಾಳು, ದಯೆಯುಳ್ಳವರು... ನಿಮ್ಮದೇನು ಹೋಗುತ್ತೆ...’ ಒಮ್ಮೆಲೆ ಅವಳ ಮೆದುಳಿಗೆ ಕೊನೆಯ ಹತಾಶ ವಿಚಾರ ಬಂತು...‘ನಾನು ನಿಮಗಾಗಿ ಏನು ಮಾಡಬಲ್ಲೆ, ನಿಮಗೆ ಗೊತ್ತೆ?... ನನ್ನ ಸ್ಕರ್ಟ್ ಬಿಚ್ಚಿ ಹಿಮದ ಮೇಲೆ ಕೂರ್ತೀನಿ... ಐದು ನಿಮಿಷ ಕೂರ್ತೀನಿ... ನೀವೇ ಎಣಿಸಿ... ದೇವರೇ... ನಿಮಗೆ ಮನರಂಜನೆ ಸಿಗುವುದು, ಅಲ್ವಾ ಸಾಹೇಬ್ರೆ!’ದಾರಿ ಹೋಕ ಅಕಸ್ಮಾತ್ ನಿಂತ. ಅವನ ಗಾಜಿನಂಥ ಕಣ್ಣುಗಳು ಏನೋ ಯೋಚಿಸಿ ಸಜೀವಗೊಂಡವು. ಅವನು ವಿಚಿತ್ರವಾಗಿ ಮೆಲ್ಲನೆ ಮುಗುಳ್ನಕ್ಕ. ಸಾಶಾ ಅವನ ಹಿಂದೆ ಚಳಿಯಿಂದಾಗಿ ಕಂಪಿಸುತ್ತಾ ನಿಂತಿದ್ದಳು. ಅವಳೂ ಮುಗುಳ್ನಗಲು ಪ್ರಯತ್ನಿಸಿದಳು, ಅವಳ ಕಣ್ಣುಗಳು ದಾರಿಹೋಕನ ಕೈ ಮತ್ತು ಮುಖವನ್ನೇ ನೋಡುತ್ತಿದ್ದವು.‘ಸರಿ, ನಾನು ನಿನಗೆ 10 ಕೋಪೆಕ್ಗೆ ಬದಲಾಗಿ 3 ರೂಬಲ್ ಕೊಟ್ಟರೆ?’ ದಾರಿಹೋಕ ಅವಳನ್ನೇ ನೋಡಿದ.ಚಳಿಯಿಂದ ಕಂಪಿಸುತ್ತಿದ್ದ ಸಾಶಾಳಿಗೆ ನಂಬಿಕೆಯಾಗಲಿಲ್ಲ, ಅವಳು ಮೌನವಾಗಿ ನಿಂತಳು.‘ನೀನು ನಿನ್ನೆಲ್ಲಾ ಬಟ್ಟೆಗಳನ್ನು ಕಳಚಬೇಕು, ನಾನು ನಿನಗೆ 10 ಸಲ ಹೊಡೀತೀನಿ... ಪ್ರತಿ ಹೊಡೆತಕ್ಕೆ 50 ಕೋಪೆಕ್.. ಆಯ್ತ?’ಅವನು ನಕ್ಕ, ಅವನ ಆ ನಗು ಕೊಳಕಾಗಿತ್ತು. ‘ಚಳಿಯಿದೆ...’ ಸಾಶಾಳ ಶರೀರವಿಡೀ ಭಯದಿಂದ ನಡುಗಿತು.‘ಏನಾಯ್ತು?... ಚಳಿಯಿದೆಯಲ್ಲ, ಅದಕ್ಕೇ 5 ರೂಬಲ್ ಕೊಡ್ತಿದ್ದೇನೆ!...’‘ನಿಮ್ಮ ಹೊಡೆತದಿಂದ ನೋವಾಗುತ್ತೆ...’ ಸಾಶಾ ಕಂಪಿಸುತ್ತಾ ಪಿಸುಗುಟ್ಟಿದಳು.‘ನೀನು ಸಹಿಸಿಕೋ, 5 ರೂಬಲ್ ಸಿಗುತ್ತದೆಯಲ್ಲ!’ದಾರಿಹೋಕ ಹಿಮವನ್ನು ತುಳಿಯುತ್ತಾ ಮುಂದಕ್ಕೆ ಹೋದ. ಸಾಶಾಳ ಭಯ ಹೆಚ್ಚುತ್ತಿತ್ತು, ಅವಳು ಮತ್ತೆ ಕಂಪಿಸಿದಳು.‘ಸರಿ, ನೀವು 5 ಕೋಪೆಕ್ ಕೊಡಿ...’ದಾರಿಹೋಕ ನಿಲ್ಲಲಿಲ್ಲ.ಸಾಶಾ ಅವನ ಕೈಯನ್ನು ಹಿಡಿಯಲು ಬಯಸುತ್ತಿದ್ದಳು, ಆದರೆ ಈಗ ಅವಳು ಅವನನ್ನು ಭಯಾನಕ ಸಿಟ್ಟಿನಿಂದ ನೋಡಿದಳು, ಅವಳ ಗಾಜಿನ ನಿರ್ಜೀವ ಕಣ್ಣುಗಳಲ್ಲಿನ ಹೊಳಪು ತೀವ್ರವಾಯಿತು; ಅವಳು ಭಯದಿಂದ ಹಿಂದಕ್ಕೆ ಸರಿದಳು.ದಾರಿಹೋಕ ಕೆಲವು ಹೆಜ್ಜೆ ಮುಂದೆ ಬಂದಿದ್ದ.‘ಸಾಹೇಬ್ರೆ... ಸಾಹೇ...ಬ್ರೆ!’ ಸಾಶಾ ನಿರಾಸೆಯಿಂದ ಕಿರುಚಿದಳು.ದಾರಿಹೋಕ ತಡೆದು, ಹೊರಳಿದ. ಅವನ ಕಣ್ಣುಗಳು ಹೊಳೆಯುತ್ತಿದ್ದವು, ಮುಖ ಕಪ್ಪಗಾಗಿತ್ತು.‘ಸರಿ..’ ಅವನು ಹಲ್ಲುಗಳನ್ನು ಕಚ್ಚುತ್ತಾ ಗರ್ಜಿಸಿದ.ಸಾಶಾ ನಿಂತಿದ್ದಳು, ಅವಳು ಅರ್ಥಮಾಡಿಕೊಳ್ಳದೆ ಮೂರ್ಖತನದಿಂದ ಮುಗುಳ್ನಕ್ಕಳು. ನಂತರ ಸತ್ತವಳಂತೆ ಬೇರೆಯವರ ಬೆರಳುಗಳಿಂದ ಕುಪ್ಪುಸವನ್ನು ಬಿಚ್ಚಿದಳು.‘ಏಯ್, ಬೇಗ... ಬೇಗ...ಇಲ್ಲದಿದ್ರೆ ಯಾರಾದ್ರು ಬರ್ತಾರೆ...’ ದಾರಿಹೋಕ ಕಿರುಚಿದ.ಭಯಾನಕ ಚಳಿ ನಗ್ನ ಸಾಶಾಳನ್ನು ನಾಲ್ಕೂ ಕಡೆಗಳಿಂದ ಘೇರಾಯಿಸಿತು. ತನ್ನ ಚರ್ಮವನ್ನು ಯಾರೋ ಸೀಳುತ್ತಿರುವಂತೆ ಭಾಸವಾಯಿತು. ‘ಬೇಗ ಹೊಡೀರಿ..’ ಸಾಶಾ ದಾರಿಹೋಕನಿಗೆ ಬೆನ್ನು ತೋರಿಸುತ್ತಾ, ಹಲ್ಲುಗಳನ್ನು ಕಚ್ಚಿಕೊಂಡಳು.ಈಗ ಸಾಶಾ ಸಂಪೂರ್ಣವಾಗಿ ನಗ್ನಳಾಗಿದ್ದಳು. ಆ ಬೆಳದಿಂಗಳ ಹಿಮದ ರಾತ್ರಿಯಲ್ಲಿ, ಚೌಕದ ಮಧ್ಯದಲ್ಲಿ ಅವಳ ಚಿಕ್ಕ ಬೆತ್ತಲೆ ಶರೀರ ಅಸಾಧಾರಣವಾಗಿ, ವಿಚಿತ್ರವಾಗಿ ತೋರುತ್ತಿತ್ತು.‘ಹೂಂ...’ ಆ ವ್ಯಕ್ತಿ ಭಯಾನಕ ಸ್ವರದಲ್ಲಿ ಉಸಿರೆಳೆದುಕೊಳ್ಳುತ್ತಾ ಹೇಳಿದ, ‘ನೋಡು, ಸಹಿಸಿಕೊಳ್ಳುವುದಾದರೆ 5 ರೂಬೆಲ್, ಸಹಿಸಿಕೊಳ್ಳಲಾಗದಿದ್ದರೆ ಹಾಳಾಗಿ ಹೋಗು...’‘ಸರಿ... ಹೊಡೀರಿ...’ ಚಳಿಯಿಂದ ಮರಗಟ್ಟಿದ ತುಟಿಗಳಿಂದ ಸಾಶಾ ಹೂಗುಟ್ಟಿದಳು. ಅವಳಿಡೀ ಶರೀರದಿಂದ ಬಾವುಗಳು ಮೂಡಲಾರಂಭಿಸಿದವು.ದಾರಿಹೋಕ ಬದಿಗೆ ಹೋದ. ಅಕಸ್ಮಾತ್ ಒಂದು ತೆಳು ಕೊಂಬೆಯನ್ನೆತ್ತಿ, ಶಕ್ತಿಮೀರಿ ವಿಚಿತ್ರ ಧ್ವನಿ ಮಾಡುತ್ತಾ ಸಾಶಾಳ ಬೆನ್ನಿಗೆ ರಭಸದಿಂದ ಹೊಡೆದ. ಸಾಶಾಳ ಇಡೀ ಶರೀರ ಚಳಿಯಿಂದ ಹೆಪ್ಪುಗಟ್ಟಿದಂತಾಗಿತ್ತು. ಇಡೀ ಚೌಕ, ಚಂದಿರ, ದಾರಿಹೋಕ, ಆಗಸ ಮತ್ತು ಇಡೀ ಜಗತ್ತು ಅವಳ ನೋವಿನ ಮಜವನ್ನು ಅನುಭವಿಸುತ್ತಿವೆ ಎಂದು ತೋರುತ್ತಿತ್ತು.‘ಅಯ್ಯೋ...’ ಸಾಶಾ ನರಳುತ್ತಾ ಕೆಲವು ಹೆಜ್ಜೆ ಮುಂದಕ್ಕೆ ಓಡಿದಳು. ಅವಳು ತನ್ನೆರಡು ಕೈಗಳಿಂದ ಹೊಡೆತ ಬಿದ್ದ ಜಾಗಗಳನ್ನು ಮುಚ್ಚಿಕೊಂಡಳು. ‘ಕೈ ತೆಗಿ, ಕೈ ತೆಗಿ!’ ದಾರಿಹೋಕ ಕಿರುಚುತ್ತಾ ಅವಳ ಹಿಂದೆ ಓಡಿದ.ಸಾಶಾ ತನ್ನ ಮೊಣಕೈಗಳನ್ನು ಮಡಚಿಕೊಂಡಳು; ಇನ್ನೊಂದು ಹೊಡೆತ ಅವಳನ್ನು ಮತ್ತೆ ಅಸಹನೀಯವಾದ ವೇದನೆಯನ್ನು ಅನುಭವಿಸುವಂತೆ ಮಾಡಿತು. ಈಗ ಅವಳು ಕೆಳಗೆ ಬಿದ್ದಳು; ನಂತರ ಅವಳ ಶರೀರದ ಮೇಲೆ ಒಂದಾದ ಮೇಲೆ ಒಂದರಂತೆ ಹೊಡೆತಗಳು ಬಿದ್ದವು. ಸಾಶಾ ಸುಮಾರಾಗಿ ತನ್ನ ಪ್ರಜ್ಞೆಯನ್ನು ಕಳೆದುಕೊಂಡು ಬೆತ್ತಲೆ ಬೆನ್ನಿನ ಆಸರೆಯಲ್ಲಿ ಮಲಗಿದಳು. ‘ಒಂಭತ್ತು!...’ ದಾರಿಹೋಕ ಉಡುಗಿದ ಧ್ವನಿಯಲ್ಲಿ ಎಣಿಸಿದ. ಅವಳ ತಲೆಯ ಭಾಗದಿಂದ ಏನೋ ಹೊರಟಂತಾಯಿತು. ಸಾಶಾ ಹಾವಿನಂತೆ ತೆವಳುತ್ತಾ ಬೆನ್ನಿನ ಸಹಾಯದಿಂದ ಪಕ್ಕಕ್ಕೆ ಹೊರಳಿದಳು. ಬೆಳದಿಂಗಳಿನಲ್ಲಿ ಅವಳ ಒಳಗೆ ಹೋದ ಹೊಟ್ಟೆ ಹೊಳೆಯುತ್ತಿತ್ತು.ಆಗಲೇ ಒಂದು ಚೂಪಾದ ಲೋಹ, ಅವಳ ಬಲ ಮೊಲೆಯನ್ನು ಗಟ್ಟಿಯಾಗಿ ಚುಚ್ಚಿತು.‘ಹತ್ತು!’ದೂರದಿಂದ ಯಾರದ್ದೋ ಭಯಾನಕ ಕಿರುಚುವಿಕೆ ಕೇಳಿಸಿತು. ಸಾಶಾಳ ಪ್ರಜ್ಞೆ ತಪ್ಪಿತು. ಆದರೆ ಅವಳು ತಕ್ಷಣ ಮರಳಿ ಪ್ರಜ್ಞೆಗೆ ಬಂದಳು.‘ಏಳು, ನಾಯಿ... ಇದನ್ನು ತಗೋ...’ ಅವಳಿಗೆ ಸಿಟ್ಟಿನಿಂದ ಕಂಪಿಸುವ ಧ್ವನಿ ಕೇಳಿಸಿತು.ಚಂದಿರ ಮೇಲೆ ಹೊಳೆಯುತ್ತಿದ್ದ. ಹಿಮ ಬೀಳುತ್ತಿತ್ತು. ಚೌಕ ಶಾಂತವಾಗಿದ್ದು, ಶೂನ್ಯವಾಗಿತ್ತು. ಸಾಶಾ ಮನುಷ್ಯಳಂತೆ ಕಾಣಿಸುತ್ತಿರಲಿಲ್ಲ. ಅವಳು ತಡಬಡಿಸುತ್ತಾ, ಕಂಪಿಸುವ ಕೈಗಳಿಂದ ನೆಲಕ್ಕೆ ಕೈಯೂರಿ ಮೇಲೆದ್ದಳು. ರಸ್ತೆಯ ನಡುವೆ ಬೆಳದಿಂಗಳಿನಲ್ಲಿ ಅವಳ ಬಿಳಿ ಬಣ್ಣದ ಶರೀರಕ್ಕೆ ಈಗ ಚಳಿಯ ಅನುಭವವಾಗುತ್ತಿರಲಿಲ್ಲ. ಆದರೆ ಒಂದು ವಿಚಿತ್ರ ನಿಶ್ಶಕ್ತಿ ಇಡೀ ಶರೀರಕ್ಕೆ ವೇದನೆಯನ್ನು ಕೊಡುತ್ತಿತ್ತು. ತನ್ನ ಒದ್ದೆಯಾದ ಶರೀರವನ್ನು ಸಂಭಾಳಿಸುತ್ತಾ ಸಾಶಾ ತನ್ನ ಬಟ್ಟೆಗಳನ್ನು ತೆಗೆದುಕೊಂಡಳು. ನಂತರ ಹಿಮದಿಂದ ಒದ್ದೆಯಾದ ತನ್ನ ಬಟ್ಟೆಗಳನ್ನು ತೊಡಲಾರಂಭಿಸಿದಳು.ಬಟ್ಟೆಗಳನ್ನು ಧರಿಸಿದ ನಂತರ, ದಾರಿಹೋಕನ ನೆರಳು ಮಂದ ಬೆಳದಿಂಗಳ ಬೆಳಕಿನಲ್ಲಿ ದೂರಕ್ಕೆ ಹೋದ ನಂತರ ಸಾಶಾ ತನ್ನ ಅಂಗೈಯನ್ನು ತೆರೆದು ನೋಡಿದಳು. ರಕ್ತಮಯವಾಗಿದ್ದ ಅವಳ ಅಂಗೈಯಲ್ಲಿ ಹಳದಿಯಾದ ನಾಣ್ಯವೊಂದು ಹೊಳೆಯುತ್ತಿತ್ತು. ‘ಐದು!’ ಸಾಶಾಳನ್ನು ಅಕಸ್ಮಾತ್ ಸಂತಸವೊಂದು ಆವರಿಸಿತು. ಈಗ ಅವಳು ಹಗುರತೆಯನ್ನು ಮನಗಂಡಳು. ಅಂಗೈಯಲ್ಲಿ ನಾಣ್ಯವನ್ನು ಬಿಗಿಯಾಗಿ ಹಿಡಿದು, ತನ್ನ ಕಂಪಿಸುವ ಕಾಲುಗಳಿಂದ ನಗರದೆಡೆಗೆ ಸುಮಾರಾಗಿ ಓಡಿದಳು. ಸ್ಕರ್ಟ್ನ ಹಿಂಭಾಗಕ್ಕೆ ಒದ್ದೆಯಾದ ವಸ್ತುವೊಂದು ಅಂಟಿತ್ತು. ಆದರೆ ಅವಳು ಅತ್ತ ಕಡೆಗೆ ಗಮನವನ್ನು ಕೊಡಲಿಲ್ಲ. ಅವಳಿಡೀ ಅಸ್ತಿತ್ವ ಸಂತೋಷದ ಭಾವನೆಯಿಂದ ತುಂಬಿ ತುಳುಕಿತು, ‘ಭೋಜನ, ಶಾಂತಿ, ವೋದ್ಕಾ!...’ಅವಳಿಗೆ ಇದೀಗ ತಾನೇ ವಿಚಿತ್ರ ಮತ್ತು ಜುಗುಪ್ಸೆಯಿಂದ ಹೊಡೆಯಲಾಗಿತ್ತು, ಸಾಶಾ ಈ ಬಗ್ಗೆ ಯೋಚಿಸಲಿಲ್ಲ.ಸಾಶಾ ಈಗ ತನಗೆ ಚಳಿಯಾಗುತ್ತಿಲ್ಲ ಎಂದು ಯೋಚಿಸುತ್ತಾ ಗಲ್ಲಿಯಲ್ಲಿ ಹೊರಳಿದಳು, ಅಲ್ಲಿ ರಾತ್ರಿ ವೇಳೆಯ ದೀಪ ಉರಿಯುಲಾರಂಭಿಸಿತ್ತು.ಮೂಲ ಲೇಖಕರು: ಮೈಖೇಲ್ ಪಿತ್ರೋವಿಚ್ ಅಟ್ಸೀಬಾಶೇವ್ 1878ರಲ್ಲಿ ರಷ್ಯಾದಲ್ಲಿ ಜನಿಸಿದ್ದು, ರಷ್ಯಾದ ಕಾದಂಬರಿಕಾರರಾಗಿದ್ದರು. ‘ದ ಡೆಥ್ ಆಫ್ ಇವಾನ್ ಲ್ಯಾಂಡ್’ ಮತ್ತು ‘ಸೇನಿನ್’ ಈ ಎರಡು ಅವರ ಪ್ರಸಿದ್ಧ ಕಾದಂಬರಿಗಳು. ಇವರು 1927ರಲ್ಲಿ ನಿಧನರಾದರು.