ಆಕಾಶ ದೀಪವು ನೀನೆ ಸೇರಿ ಕನ್ನಡದ ಹಲವು ಹಾಡುಗಳಿಗೆ ಧ್ವನಿಯಾಗಿದ್ದ ಎಸ್. ಜಾನಕಿ
ಸಲೀಲ್ ಚೌಧರಿ ಸ್ವರ ಸಂಯೋಜನೆಯ ‘ಸಂಜೆ ತಂಗಾಳಿ ಮೈಸೋಕಲು/ನಿನ್ನ ನೆನಪಿಂದ ನಾ ಬಾಡಲು’ ಎಂಬ ಹಾಡೊಂದು ಇದೆ. ‘ಕೋಕಿಲಾ’ ಕನ್ನಡ ಸಿನಿಮಾದ ಈ ಹಾಡಿಗೆ ಚಿ. ಉದಯಶಂಕರ್ ಸಾಲುಗಳನ್ನು ಬರೆದಿದ್ದಾರೆ. ಸಂಜೆಕಾಲದ ವಿರಹದ ಅಭಿವ್ಯಕ್ತಿಯ ಈ ಹಾಡಿನ ದೃಶ್ಯದಲ್ಲಿ ನಿರ್ದೇಶಕ ಬಾಲು ಮಹೇಂದ್ರ ಅವರಿಗಿರುವ ಸೌಂದರ್ಯ ಪ್ರಜ್ಞೆ ಅನಾವರಣಗೊಳ್ಳುತ್ತದೆ. ಭಾವಾಭಿನಯ ಅಷ್ಟಕ್ಕಷ್ಟೆ ಎನ್ನುವಂತಿ

ಸಲೀಲ್ ಚೌಧರಿ ಸ್ವರ ಸಂಯೋಜನೆಯ ‘ಸಂಜೆ ತಂಗಾಳಿ ಮೈಸೋಕಲು/ನಿನ್ನ ನೆನಪಿಂದ ನಾ ಬಾಡಲು’ ಎಂಬ ಹಾಡೊಂದು ಇದೆ. ‘ಕೋಕಿಲಾ’ ಕನ್ನಡ ಸಿನಿಮಾದ ಈ ಹಾಡಿಗೆ ಚಿ. ಉದಯಶಂಕರ್ ಸಾಲುಗಳನ್ನು ಬರೆದಿದ್ದಾರೆ. ಸಂಜೆಕಾಲದ ವಿರಹದ ಅಭಿವ್ಯಕ್ತಿಯ ಈ ಹಾಡಿನ ದೃಶ್ಯದಲ್ಲಿ ನಿರ್ದೇಶಕ ಬಾಲು ಮಹೇಂದ್ರ ಅವರಿಗಿರುವ ಸೌಂದರ್ಯ ಪ್ರಜ್ಞೆ ಅನಾವರಣಗೊಳ್ಳುತ್ತದೆ. ಭಾವಾಭಿನಯ ಅಷ್ಟಕ್ಕಷ್ಟೆ ಎನ್ನುವಂತಿರುವ ನಟಿ ಶೋಭಾ ಅವರನ್ನು ತೋರಿಸಿರುವ ರೀತಿಯಲ್ಲೂ ತಾಂತ್ರಿಕ ಜಾಣ್ಮೆ ಇದೆ. ಯಾಕೆಂದರೆ, ಸಿನಿಮಟೊಗ್ರಫಿ ಕೂಡ ಬಾಲು ಮಹೇಂದ್ರ ಅವರದ್ದೇ. ಆದರೆ, ಆ ಹಾಡಿನ ಕಂಠವಿದೆಯಲ್ಲ; ಕಣ್ಣುಮುಚ್ಚಿ ಅದನ್ನು ಕೇಳುತ್ತಾ ಹೋದರೆ ನಾವೂ ವಿರಹಿಗಳಾಗಿಬಿಡುತ್ತೇವೆ. ಎಸ್. ಜಾನಕಿ ಉರುಫ್ ಜಾನಕಿ ಅಮ್ಮನವರ ಶಾರೀರವಿದು.ರವಿಚಂದ್ರನ್ ನಿರ್ದೇಶನದ ‘ಹಳ್ಳಿ ಮೇಷ್ಟ್ರು’ ಸಿನಿಮಾದಲ್ಲಿ ಸಿಲ್ಕ್ಸ್ಮಿತಾ ‘ಹಳ್ಳಿ ಮೇಷ್ಟ್ರೆ ಹಳ್ಳಿ ಮೇಷ್ಟ್ರೆ ಪಾಠ ಮಾಡಿ ಬನ್ನಿ’ ಎಂದು ಆಹ್ವಾನಿಸುವ ಪೋಲಿ ಗೀತೆಯೊಂದು ಇದೆ. ಅ ಆ ಇ ಈ ಅಕ್ಷರಗಳನ್ನು ಹೇಳುತ್ತಲೇ ಸಿಲ್ಕ್ಸ್ಮಿತಾ ನುಲಿಯುವ ರೊಮ್ಯಾಂಟಿಕ್ ಆದ ಪರಿಕಲ್ಪನೆ. ರವಿಚಂದ್ರನ್ ಎಂದಮೇಲೆ ಕೇಳಬೇಕೆ? ಹಂಸಲೇಖ ಬರೆದ ಸಾಲುಗಳಲ್ಲಿ ಪೋಲಿತನದ ಇಂಧನ ಜೋರು. ಒಂದೊಂದು ಸ್ವರಕ್ಕೂ ಜಾನಕಿ ಅವರು ಸವರುವ ಜೇನಿನ ಸವಿ ಉಂಡು ಎಂಥವರೂ ರಸಿಕರೇ ಆಗುವುದು ಸೈ.‘ನಗು ಎಂದಿದೆ ಮಂಜಿನಾ ಬಿಂದು’ ಎಂಬ ‘ಪಲ್ಲವಿ ಅನುಪಲ್ಲವಿ’ ಸಿನಿಮಾದ ಶಾರೀರಬಿಂದು ನೇರಾನೇರ ಎದೆಯೊಳಗೆ ಪ್ರಕೃತಿಯ ಚೆಲ್ಲವರಳಿಸುತ್ತಲೇ ಹುಟ್ಟಿಸುವ ಜೀವನ ಪ್ರೀತಿಗೆ ಸಾಟಿ ಯಾವುದು?‘ಕಿಳಿಯೇ ಕಿಳಿಯೇ ಒರು ಮಳೆಮೇಘಾ... ಸೋಕಿನ್’–‘ಆ ರಾತ್ರಿ’ ಮಲಯಾಳ ಸಿನಿಮಾದ ಈ ಹಾಡನ್ನು ಅದೆಷ್ಟು ಮಕ್ಕಳು ಶಾಲಾಸ್ಪರ್ಧೆಗಳಿಗೆಂದು ತಾಲೀಮು ನಡೆಸಿ ಹಾಡಿರಬಹುದು? ಇದನ್ನು ಪದೇ ಪದೇ ಕೇಳುತ್ತಲೇ ಮಳೆಮೇಘಗಳು ಅದೆಷ್ಟು ಗಿಳಿಗಳಿಗೆ ಸೋಕಿರಬಹುದು? ಗಿಳಿಗಳಿಗೂ ಮೇಘಕ್ಕೂ ಸಂಬಂಧ ಕಲ್ಪಿಸಿರುವ ಕಂಠವೂ ಜಾನಕಿ ಅವರದ್ದೇ.‘ಕೊಂಜುಮ್ ಸಳಂಗೈ’ ತಮಿಳು ಸಿನಿಮಾದ ‘ಸಿಂಗಾರ ವೇಲನೆ ದೇವಾ’ ಹಾಡಿನಲ್ಲಿ ಕರೈಕುರುಚ್ಚಿ ಅರುಣಾಚಲಂ ಅವರ ನಾದಸ್ವರದೊಟ್ಟಿಗೆ ತಮ್ಮ ಸುಶ್ರಾವ್ಯ ಕಂಠದ ಜುಗಲ್ಬಂದಿಗೆ ಜಾನಕಿ ಅವರು ಇಳಿದಿರುವುದನ್ನು, ಅದರ ಗಮಕ–ಆಲಾಪಗಳನ್ನು, ಸ್ವರಸಿದ್ಧಿಯನ್ನು ಮರೆಯಲಾದೀತೆ? ಅಭೇರಿ ರಾಗದ ಈ ಹಾಡನ್ನು ಎಸ್.ಎಂ. ಸುಬ್ಬಯ್ಯ ನಾಯ್ಡು ಸಂಯೋಜಿಸಿದ್ದರು.‘ಕಿಟ್ಟು ಪುಟ್ಟು’ ಸಿನಿಮಾದ ‘ಮಾತೊಂದ ಹೇಳುವೆ ಹತ್ತಿರ ಹತ್ತಿರ ಬಾ’ ಹಾಡಿನಲ್ಲಿ ವೈಶಾಲಿ ಕಾಸರವಳ್ಳಿಯವರ ಮುಖದ ಮೇಲಿನ ಅಪರೂಪದ ತುಂಟತನ ಕಂಡಿದ್ದೆವಲ್ಲ; ಅವರು ತುಟಿ ಆಡಿಸಿದ ಆ ಗೀತೆಗೆ ಬೇಕಾದ ರೊಮ್ಯಾಂಟಿಕ್ ಭಾವವನ್ನು ಹದವರಿತಂತೆ ಹರಿಸಿದ್ದವರು ಜಾನಕಿ ಅಮ್ಮ.‘ಕೊಂಜುಂ ಸಳಂಗೈ’ ಸಿನಿಮಾ ಹಾಡು ಹುಟ್ಟಿದ್ದು 1962ರಲ್ಲಿ. ‘ಕೋಕಿಲಾ’, ‘ಕಿಟ್ಟು ಪುಟ್ಟು’ ಸಿನಿಮಾಗಳು ಬಂದದ್ದು 1977ರಲ್ಲಿ. ‘ಪಲ್ಲವಿ ಅನುಪಲ್ಲವಿ’ಯ ಹಾಡು ಕಟ್ಟಿದ ಕಾಲ 1983. ‘ಕಿಳಿಯೇ ಕಿಳಿಯೇ’ ಎಂದು ಜಾನಕಿ ಉಲಿದದ್ದೂ ಅದೇ ಇಸವಿಯಲ್ಲಿ. ಸಿಲ್ಕ್ ಸ್ಮಿತಾ ಅಭಿನಯಕ್ಕೆ ಕಂಠವಾದದ್ದು 1992ರಲ್ಲಿ.ಮೂವತ್ತು ವರ್ಷಗಳ ಅವಧಿಯ ಈ ಹಾಡುಗಳಲ್ಲಿನ ಕಂಠ ಒಂದೇ. ಆದರೆ ಅವುಗಳ ಅರ್ಥ, ರಾಗ, ಭಾವ, ಉದ್ದೇಶ ಬೇರೆ ಬೇರೆ. ಜನಪ್ರಿಯ ಸಿನಿಮಾಗಳ ‘ಬೇಕು’ಗಳಿಗೆ ಒಬ್ಬರೇ ಅಷ್ಟೂ ಕಾಲದಲ್ಲಿ ಹೇಗೆ ವೈವಿಧ್ಯಮಯವಾಗಿ ಸ್ಪಂದಿಸುತ್ತಾ ಬಂದರು ಎನ್ನುವುದಕ್ಕೆ ಈ ಹಾಡುಗಳು ಅಧ್ಯಯನಯೋಗ್ಯ ಪರಿಕರಗಳಂತೆ ಭಾಸವಾಗುತ್ತವೆ.ವಯಸ್ಸು ಹತ್ತೊಂಬತ್ತು, ಅವಕಾಶ ಹರಿದುಬಂತುಜಾನಕಿ ಅವರು ಹುಟ್ಟಿದ್ದು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಪಲ್ಲಪಟ್ಲ ಎಂಬ ಹಳ್ಳಿಯಲ್ಲಿ, 1938ರ ಏಪ್ರಿಲ್ 23ರಂದು. ಒಂಬತ್ತನೇ ವಯಸ್ಸಿಗಾಗಲೇ ವೇದಿಕೆ ಏರಿ ಸಂಗೀತ ಕಛೇರಿ ನೀಡಿದರು. ಸಿನಿಮಾ ಸಂಗೀತದ ದಾರಿಯಲ್ಲಿ ನಡೆಯುವಂತೆ ಹೇಳಿದವರು ಅವರ ಚಿಕ್ಕಪ್ಪ. ಆ ಸಲಹೆಗೆ ಕಿವಿಗೊಟ್ಟ ಕಾರಣಕ್ಕೇ ಮದ್ರಾಸ್ಗೆ (ಈಗಿನ ಚೆನ್ನೈ) ಹೊರಟರು. ಎ.ವಿ.ಎಂ. ಸ್ಟುಡಿಯೊ ಆಗ ಪ್ರತಿಭೆಗಳ ಪಾಲಿಗೆ ಆಲದಮರ. ಈ ಗಾನಕೋಗಿಲೆಯೂ ಆ ಮರವನ್ನೇರಿತು. ಆರ್. ಸುದರ್ಶನಂ ಅವರ ಗರಡಿಯಲ್ಲಿ ಮೂಲ ಗಾನಪಾಠ ಸಿಕ್ಕಿತು.‘ವಿಧಿಯನ್ ವಿಳಯತ್ತು’ ತಮಿಳು ಸಿನಿಮಾ ಅವರಿಗೆ ಮೊದಲ ಅವಕಾಶವಾಗಿ ಒದಗಿಬಂತು. ಆಗಿನ್ನೂ ಅವರಿಗೆ 19 ವರ್ಷ ವಯಸ್ಸು. 1957 ಅವರ ಪಾಲಿಗೆ ಮರೆಯಲಾಗದ ವರ್ಷ. ಯಾಕೆಂದರೆ, ಮೊದಲ ಅವಕಾಶ ಸಿಕ್ಕ ನಂತರ ಸತತವಾಗಿ ಭಾರತದ ಹಲವು ಭಾಷೆಗಳಲ್ಲಿ ಗಾಯನಕ್ಕೆ ಆಹ್ವಾನ ಬಂದಿತೆನ್ನುವುದು ವಿಶೇಷ. ತೆಲುಗಿನಲ್ಲಿ ‘ನೀ ಆಸ ಅದಿಯಾಸ’ ಹಾಗೂ ‘ಇದೆ ನಂದಿ ಇದೆ ನಂದಿ’ (ಚಿತ್ರ: ಎಂ.ಎಲ್.ಎ), ಮಲಯಾಳದಲ್ಲಿ ‘ಇರುಳ್ ಮೂಡುಕಯೊ’ (ಚಿತ್ರ: ಮಿನ್ನುನ್ನತೆಲ್ಲಾಂ ಪೊನ್ನಲ್ಲ), ಕನ್ನಡದ ‘ತಾಳಲೆಂತು ಶೋಕಾವೇಗ’ (ಚಿತ್ರ: ರಾಯರ ಸೊಸೆ) ಹಾಡುವ ಅವಕಾಶಗಳೂ ಅದೇ ವರ್ಷ ಸಿಕ್ಕವು. ಆರ್. ರಾಮಮೂರ್ತಿ ನಿರ್ದೇಶನದ ರಾಯರ ಸೊಸೆ ಸಿನಿಮಾದ ಹಾಡುಗಳಿಗೆ ಆರ್. ದಿವಾಕರ್ ಮಟ್ಟುಗಳನ್ನು ಹಾಕಿದ್ದರು. ‘ತಾಳಲೆಂತು ಶೋಕಾವೇಗ’ ಹಾಡಿನಲ್ಲಿ ರಾಗಾನಂದ, ರಾಗಧಾರೆ ಎಂಬೆಲ್ಲ ಪದಪುಂಜಗಳಿದ್ದು, ಜಾನಕಿ ಅವರ ವೃತ್ತಿಬದುಕಿಗೆ ಅಗತ್ಯ ಮುನ್ನುಡಿ ಅವಾಗಿದ್ದವೇನೋ ಎಂದು ಈಗ ಭಾಸವಾಗುತ್ತದೆ.ಹಿಂದೊಮ್ಮೆ ಶ್ರೇಯಾ ಘೋಶಾಲ್ ಹಿಂದಿಯಿಂದ ಇತ್ತ ವಲಸೆ ಬಂದು, ದಕ್ಷಿಣ ಭಾರತದ ಹಲವು ಭಾಷೆಗಳಿಗೆ ಹಾಡತೊಡಗಿದಾಗ ಅವರೂ ಎಸ್. ಜಾನಕಿ ಅವರನ್ನೇ ನೆನಪಿಸಿಕೊಂಡಿದ್ದರು. ಆ ಮಹಾನ್ಗಾಯಕಿ ಅಷ್ಟೆಲ್ಲ ಭಾಷೆಗಳಲ್ಲಿ ಆಗಲೇ ಹಾಡಿದ್ದಾಗ ತಮ್ಮದೇನು ಮಹಾ ಎಂದು ನಮ್ರತೆಯಿಂದ ನುಡಿದಿದ್ದರು. ಜಾನಕಿ ಅವರು ಎಷ್ಟು ಹಾಡುಗಳನ್ನು ಹಾಡಿದರೆನ್ನುವ ಲೆಕ್ಕ ಬಹುಶಃ ಅವರಲ್ಲೂ ಸ್ಪಷ್ಟವಾಗಿ ಇರಲಿಲ್ಲ. ಒಂದು ಅಂದಾಜಿನ ಪ್ರಕಾರ ಆರು ದಶಕಗಳ ಅವರ ಸಿನಿಮಾಗಾನ–ಭಕ್ತಿಗೀತೆಯ ಪಯಣದಲ್ಲಿ 17 ಭಾಷೆಗಳ 48 ಸಾವಿರಕ್ಕೂ ಹೆಚ್ಚು ಹಾಡುಗಳು ಹೊಮ್ಮಿವೆ. ಕೆಲವರು 20 ಭಾಷೆಗಳಲ್ಲಿ ಅವರ ಕಂಠಸಿರಿ ಹರಿದಿದೆ ಎನ್ನುತ್ತಾರೆ. ಇಂಗ್ಲಿಷ್, ಜಪಾನೀಸ್, ಸಿಂಹಳ ಭಾಷೆಗಳಲ್ಲೂ ಅವರು ಹಾಡಿದ್ದಾರೆನ್ನುವುದು ವಿಶೇಷ. ದಕ್ಷಿಣ ಭಾರತದಲ್ಲಿ ಹಲವು ಗೀತೆಗಳಿಗೆ ದನಿಯಾದರೂ ಅವರು ಕನ್ನಡದಲ್ಲಿಯೇ ಹೆಚ್ಚು ಹಾಡುಗಳನ್ನು ಹಾಡಿದ್ದು. ಅದೇ ಕಾರಣಕ್ಕೆ ಕನ್ನಡ ಚಿತ್ರರಂಗವೇ ಅವರಿಗೆ ನೆಲೆಯಂತಾಯಿತು. ರೇಡಿಯೊ ಜನಪ್ರಿಯ ಮಾಧ್ಯಮವಾಗಿದ್ದ ಕಾಲದಲ್ಲಿ ಜಾನಕಿ ಅವರ ಬಗೆ ಬಗೆಯ ಹಾಡುಗಳು ಅನುರಣಿಸಿದವು.ಇಳಯರಾಜಾ–ಜಾನಕಿ ನಾದದ ಜೋಕಾಲಿ‘ಸಾಗರ ಸಂಗಮಂ’ ತೆಲುಗು ಸಿನಿಮಾ ನಿರ್ದೇಶಕ ಕೆ. ವಿಶ್ವನಾಥ್. ಅವರೆಂದಮೇಲೆ ಸಂಗೀತ ಒಂದು ಪಾತ್ರವೇ ಸರಿ. ಇಳಯರಾಜ ಸ್ವರ ಸಂಯೋಜನೆ ಇದ್ದಮೇಲೆ ಕಾಡುವಿಕೆ ಸಹಜ. ಆ ಸಿನಿಮಾದ ‘ಮೌನಮೇಲನೋಯಿ ಈ ಮರಪು ರಾನಿ ರೇಯಿ/ಎದಲೋ ವೆನ್ನೆಲಾ ವೆಲಿಗೆ ಕನ್ನುಲಾ’ ಎಂಬ ಹಾಡಿನಲ್ಲಿ ಕಮಲ ಹಾಸನ್ ಪ್ರತಿಕ್ರಿಯೆ, ಜಯಪ್ರದಾ ಅದ್ಭುತ ಸೌಂದರ್ಯ ಅನಾವರಣವಾಗಿದೆ. ಆ ಇಡೀ ರೊಮ್ಯಾಂಟಿಕ್ ಸಂದರ್ಭವನ್ನು ಜಾನಕಿ ಕಂಠವು ಒಲವಿನ ಭಾವದಲ್ಲಿ ಅದ್ದಿ ತೆಗೆದಿಡುತ್ತದೆ. ಇಳಯರಾಜಾ ಹಾಗೂ ಜಾನಕಿ ಜುಗಲ್ಬಂದಿಯ ಒಂದು ಝಲಕ್ ಇದಷ್ಟೆ.‘ಅನ್ನಕ್ಕಿಳಿ’ ತಮಿಳು ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲು ತಮಗೆ ಸಿಕ್ಕ ಮೊದಲ ಅವಕಾಶದಲ್ಲಿಯೇ ಇಳಯರಾಜಾ ಅವರು ಎಸ್. ಜಾನಕಿ ಅವರನ್ನು ನೆಚ್ಚಿಕೊಂಡರು. ಅದಾಗಲೇ ಮನೆಮಾತಾಗಿದ್ದ ಜಾನಕಿ ಅವರ ಶಾರೀರವನ್ನು ತಮ್ಮ ತಾಳ- ಲಯದ ಆಮೋದಕೆ ಒಗ್ಗಿಸಿಕೊಂಡರು. ಆ ಸಿನಿಮಾದ ‘ಮಚ್ಚಾಲ ಪಾರ್ತಿಂಗಳ’ ಗೀತೆಯ ಜನಪದೀಯ ಪಲುಕುಗಳನ್ನು ಅದೆಷ್ಟು ಬಾರಿ ಜಾನಕಿ ಅವರು ಪದೇ ಪದೇ ಹಾಡಿದ್ದಾರೋ?‘ಮೌನ ರಾಗಂ’ ತಮಿಳು ಸಿನಿಮಾದ ‘ಚಿನ್ನ ಚಿನ್ನ ವನ್ನ ಕುಯಿಲ್’, ಕುಂಗುಮಾ ಚಿಮಿಲ್‘ ಚಿತ್ರದ ‘ನಿಲವು ತೂಂಗುಂ ನೇರಂ’, ತೆಲುಗಿನ ‘ಸ್ವಾತಿ ಮುತ್ಯಂ’ ಚಿತ್ರದ ‘ಸುವ್ವಿ ಸುವ್ವಿ ಸುವ್ವಾಲಮ್ಮ’, ‘ಅಭಿನಂದನ’ ಸಿನಿಮಾದ ‘ಮಂಚು ಕುರಿಸೆ’ ಇವೆಲ್ಲವೂ ಇಳಯರಾಜಾ–ಜಾನಕಿ ಕಾಂಬಿನೇಷನ್ನ ಸೂಪರ್ಹಿಟ್ ಗೀತೆಗಳಿಗೆ ಉದಾಹರಣೆಗಳು.ಕನ್ನಡದಲ್ಲಿ ‘ಗೀತಾ’ ಚಿತ್ರದ ‘ಜೊತೆಯಲಿ ಜೊತೆ ಜೊತೆಯಲಿ’, ‘ನೀ ನನ್ನ ಗೆಲ್ಲಲಾರೆ’ ಸಿನಿಮಾದ ‘ಜೀವ ಹೂವಾಗಿದೆ’, ‘ಆಕಾಶದಿಂದ ಜಾರಿ’, ‘ಶಿಕಾರಿ’ಯ ‘ಏನೋ ಮೋಹ ಏಕೋ ದಾಹ’ ಇಬ್ಬರೂ ದಿಗ್ಗಜರ ಹಾಡುವ ಹಾಡುಗಳ ಯಾದಿಯಲ್ಲಿ ಯಾವತ್ತು ಸ್ಥಾನ ಪಡೆದುಕೊಳ್ಳುತ್ತವೆ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಜಾನಕಿ ‘ಬ್ರದರ್’ ಎಂದೇ ಸಂಬೋಧಿಸುತ್ತಿದ್ದರು. ಇವರಿಬ್ಬರೂ ಚಲನಚಿತ್ರ ಗೀತೆಗಳಿಗೆ ಭಾವ ತುಂಬುವ ವಿಷಯದಲ್ಲಿ ಪೋಟಿಗೆ ಬಿದ್ದಿದ್ದರೋ ಏನೋ ಎನ್ನಲು ಲೆಕ್ಕವಿಲ್ಲದಷ್ಟು ಉದಾಹರಣೆಗಳು ಸಿಗುತ್ತವೆ. ಪಿ.ಬಿ. ಶ್ರೀನಿವಾಸ್ ಜೊತೆಗೂ ಜಾನಕಿ ಕಂಠ ಸೊಗಸಾಗಿ ಹೊಂದಿಕೆಯಾಗಿತ್ತು.ತಮಿಳಿನಲ್ಲಿ ಪ್ರಯೋಗಮುಖಿ ಸ್ವರ ಸಂಯೋಜಕರಿಗೆ ಜಾನಕಿ ಯಾವತ್ತಿಗೂ ಅಚ್ಚುಮೆಚ್ಚು. ಎ.ಆರ್. ರೆಹಮಾನ್ ಕೂಡ ಜನಪದೀಯ ಶೈಲಿಯ ಗೀತೆಗಳನ್ನು ಇವರಿಂದ ಹಾಡಿಸಿದ್ದಾರೆ. ‘ಉಯಿರೆ’ ಚಿತ್ರದ ‘ನೆಂಜಿನಿಲೆ ನೆಂಜಿನಿಲೆ’, ‘ಜಂಟಲ್ಮನ್’ ಸಿನಿಮಾದ ‘ಒತ್ತಗತ್ತೆ ಕಟ್ಟಿಕ್ಕೋ’ ಇಬ್ಬರ ಪ್ರಯೋಗಶಾಲೆಯ ಎರಡು ಅಧ್ಯಾಯಗಳು.ಕನ್ನಡದಲ್ಲಿ ರಾಜನ್–ನಾಗೇಂದ್ರ ಹಾಗೂ ಜಾನಕಿ ಕೊಟ್ಟಿರುವ ಹಿಟ್ ಗೀತೆಗಳ ಯಾದಿ ಉದ್ದವಿದೆ. ‘ಪಾವನಗಂಗಾ’ ಚಿತ್ರದ ‘ಆಕಾಶದೀಪವು ನೀನು’, ‘ಆಟೊ ರಾಜಾ’ದ ‘ನನ್ನ ಆಸೆ ಹಣ್ಣಾಗಿ’, ‘ಗಾಳಿಮಾತು’ ಚಿತ್ರದ ‘ಬಯಸದೆ ಬಳಿ ಬಂದೆ’ ಆ ಪಟ್ಟಿಯಲ್ಲಿನ ಅನರ್ಘ್ಯ ರತ್ನಗಳು.ಜಿ.ಕೆ. ವೆಂಕಟೇಶ್ ಅವರೂ ಜಾನಕಿ ಕಂಠದ ಭಾವವನ್ನು ಜೀಕಿಸಿದವರು. ‘ಗೌರಿ’ ಚಿತ್ರದ ‘ಯಾವ ಜನ್ಮದ ಮೈತ್ರಿ’, ‘ಸನಾದಿ ಅಪ್ಪಣ್ಣ’ದಲ್ಲಿನ ‘ಕರೆದರೂ ಕೇಳದೇ’, ‘ಮರೆಯದ ಹಾಡು’ ಸಿನಿಮಾದ ‘ಸುಖದಾ ಸ್ವಪ್ನಗಾನ’ ಎಂದೂ ಮರೆಯಲಾಗದ ಹಾಡುಗಳೇ ಹೌದು.ರಾಜ್ಕುಮಾರ್ ಹಾಗೂ ಜಾನಕಿ ಇಬ್ಬರೂ ಹಾಡುಗಳಿಗೆ ಚಟುವಟಿಕೆಯ ಸಂಚಲನ ಬೆರೆಸಿದಂತೆ ಹಾಡಿರುವುದನ್ನು ಕೆಲವು ಗೀತೆಗಳು ನೆನಪಿಸುತ್ತವೆ. ‘ಎಲ್ಲೆಲ್ಲಿ ನೋಡಲಿ’, ‘ಈ ಸಮಯ ಆನಂದಮಯ’, ‘ನಗುನಗುತಾ ನೀ ಬರುವೆ’, ‘ನನ್ನಾಸೆಯಾ ಹೂವೆ’, ‘ನಾ ನಿನ್ನ ಮರೆಯಲಾರೆ’, ‘ಚಿನ್ನದ ಮಲ್ಲಿಗೆ ಹೂವೆ’, ‘ಈ ಮೌನವಾ ತಾಳೆನು‘, ‘ಸಂಗೀತವೆ ನೀ ನುಡಿಯುವ ಮಾತೆಲ್ಲ’... ಹೀಗೆ ನೆನೆದಷ್ಟೂ ರಾಜ್–ಜಾನಕಿ ಯುಗಳಗೀತೆಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.ಪ್ರಶಸ್ತಿಗೆ ಬೆನ್ನುತಮಗೆ ತಡವಾಗಿ ಪದ್ಮಭೂಷಣ ಘೋಷಣೆಯಾದಾಗ ಅವರು ಅದನ್ನು ಸ್ವೀಕರಿಸಲು ಹೋಗಲಿಲ್ಲ. ಗೈರುಹಾಜರಿಯ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಹಿನ್ನೆಲೆ ಗಾಯನಕ್ಕೆ ಪ್ರಶಸ್ತಿ ನೀಡಲು ಪ್ರಾರಂಭಿಸಿದಾಗ, ಕನ್ನಡೇತರರಿಗೆ ಅದನ್ನು ನೀಡುತ್ತಿರಲಿಲ್ಲ. ಅದನ್ನು ಅವರೇ ಪ್ರಶ್ನಿಸಿದರಾದರೂ, ಆ ಪ್ರಶಸ್ತಿ ಎಂದೂ ಅವರಿಗೆ ದೊರೆಯಲೇ ಇಲ್ಲ. ಆದರೆ, ಅವರ ಪ್ರಶ್ನೆಯಿಂದಾಗಿ ಕನ್ನಡೇತರ ಗಾಯಕ–ಗಾಯಕಿಯರಿಗೆ ಮುಂದೆ ಪ್ರಶಸ್ತಿ ಸಿಗುವಂತಾಯಿತು.ಜಾನಕಿ ಅವರ ಪತಿ ವಿ. ರಾಮಪ್ರಸಾದ್ 1997ರಲ್ಲೇ ಅಗಲಿದರು. ಮಗ ಮುರಳೀಧರ ನಾಟ್ಯ ಕಲಾವಿದ. ಈ ವರ್ಷ ಆತ ಅಸುನೀಗಿದ ಮೇಲೆ ಜಾನಕಿ ಅವರು ಮಾನಸಿಕವಾಗಿ ಮೆತ್ತಗಾದರು. ಕೋವಿಡ್ಗೆ ಮೊದಲು ಮೈಸೂರಿಗೆ ಬಂದಾಗ ಅಕಸ್ಮಾತ್ ಆದ ಅವಘಡದಿಂದಾಗಿ ಚಿಕಿತ್ಸೆ ಪಡೆದುಕೊಳ್ಳಬೇಕಾಗಿ ಬಂತು. ಆಗ ಒಂದಿಷ್ಟು ದಿನ ಉಳಿದುಕೊಂಡಿದ್ದೇ ಮೈಸೂರಿನ ಪರಿಸರದ ಮೇಲೆ ಅವರಿಗೆ ಪ್ರೀತಿ ಹೆಚ್ಚಾಯಿತು. ‘ನಮ್ಮೂರು ಮೈಸೂರು’ ಎಂದು ಅಂದು ನಿರ್ಧರಿಸಿದ ಅವರು ಅದೇ ನಗರಿಯಲ್ಲಿ ಕೊನೆಯುಸಿರೆಳೆದರು. ಅವರ ಹಾಡುಗಳು ಉಸುರುವುದು ಈಗ ಇನ್ನೂ ಹೆಚ್ಚಾಯಿತು. (ಇನ್ನಷ್ಟು ಆಸಕ್ತಿಕರ ನುಡಿಚಿತ್ರಗಳಿಗಾಗಿ, ಕುತೂಹಲಕರ ಕತೆ–ಕಾದಂಬರಿಗಾಗಿ ಮಾರುಕಟ್ಟೆಯಲ್ಲಿರುವ ಸುಧಾ ಓದಿ)