ಕಾರ್ಗಿಲ್ ವಿಜಯ್ ದಿವಸ: ಯೋಧರ ಬೆನ್ನಿಗೆ ನಿಂತ ವೀರ ನಾರಿಯರ ಸಾಹಸಗಾಥೆ
ಪಾಕಿಸ್ತಾನದ ಸೇನೆ ಆಕ್ರಮಿಸಿಕೊಂಡಿದ್ದ ಕಾರ್ಗಿಲ್ನ ಪ್ರದೇಶಗಳನ್ನು ಭಾರತೀಯ ಯೋಧರು 1999ರ ಜುಲೈ 26 ರಂದು ಮರಳಿ ವಶಕ್ಕೆ ಪಡೆದರು. ಅಂದಿನಿಂದ ಈ ದಿನವನ್ನು ‘ಕಾರ್ಗಿಲ್ ವಿಜಯ ದಿನ’ವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ವಿಜಯೋತ್ಸವಕ್ಕೆ ವೀರ ಯೋಧರಿಗೆ ಬೆನ್ನೆಲುಬಾಗಿ ನಿಂತವರು, ದೇಶದ ವೀರ ನಾರಿಯರು. ಯಾವುದೇ ಸೇನಾ ಕಾರ್ಯಾಚರಣೆಯ ಯಶಸ್ಸು ಕೇವಲ ಯೋಧರ ಮೇಲಷ್ಟೇ ಅವಲ

ಪಾಕಿಸ್ತಾನದ ಸೇನೆ ಆಕ್ರಮಿಸಿಕೊಂಡಿದ್ದ ಕಾರ್ಗಿಲ್ನ ಪ್ರದೇಶಗಳನ್ನು ಭಾರತೀಯ ಯೋಧರು 1999ರ ಜುಲೈ 26 ರಂದು ಮರಳಿ ವಶಕ್ಕೆ ಪಡೆದರು. ಅಂದಿನಿಂದ ಈ ದಿನವನ್ನು ‘ಕಾರ್ಗಿಲ್ ವಿಜಯ ದಿನ’ವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ವಿಜಯೋತ್ಸವಕ್ಕೆ ವೀರ ಯೋಧರಿಗೆ ಬೆನ್ನೆಲುಬಾಗಿ ನಿಂತವರು, ದೇಶದ ವೀರ ನಾರಿಯರು. ಯಾವುದೇ ಸೇನಾ ಕಾರ್ಯಾಚರಣೆಯ ಯಶಸ್ಸು ಕೇವಲ ಯೋಧರ ಮೇಲಷ್ಟೇ ಅವಲಂಬಿತವಾಗಿರುವುದಿಲ್ಲ. ಬದಲಿಗೆ ಸಂವಹನ, ಕಾನೂನು ಬೆಂಬಲ ಮತ್ತು ವೈದ್ಯಕೀಯ ರಕ್ಷಣೆ ಕೂಡ ಅಷ್ಟೇ ನಿರ್ಣಾಯಕವಾಗಿವೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಪ್ರಮುಖ ಪಾತ್ರ ವಹಿಸಿದ ಹಲವು ಮಹಿಳಾ ಅಧಿಕಾರಿಗಳ ಜೀವನ ಮತ್ತು ಸಾಧನೆ ಕುರಿತ ಮಾಹಿತಿ ಇಲ್ಲಿದೆ..ಯುದ್ಧಭೂಮಿಯಲ್ಲಿ ನಾರಿಯರು ಲೆಫ್ಟಿನೆಂಟ್ ಗುಂಜನ್ ಸಕ್ಸೇನಾ ಕಾರ್ಗಿಲ್ ಯುದ್ಧದಲ್ಲಿ ಪ್ರಮುಖವಾಗಿ ಗುರುತಿಸಲ್ಪಟ್ಟ ಹೆಸರುಗಳಲ್ಲಿ ಭಾರತೀಯ ವಾಯುಪಡೆಯ ಪೈಲೆಟ್ ಲೆಫ್ಟಿನೆಂಟ್ ಗುಂಜನ್ ಸಕ್ಸೇನಾ ಒಬ್ಬರು.ದೆಹಲಿ ಮೂಲದ ಇವರು 1994ರಲ್ಲಿ ವಾಯುಪಡೆಯಲ್ಲಿ ಮಹಿಳಾ ತರಬೇತಿ ಪೈಲಟ್ಗಳ ಮೊದಲ ಬ್ಯಾಚ್ಗೆ ಸೇರಿದರು. ನಂತರ 132 ಫಾರ್ವರ್ಡ್ ಏರಿಯಾ ಕಂಟ್ರೋಲ್ (FAC) ಗೆ ನಿಯೋಜನೆಗೊಂಡರು. 1999ರಲ್ಲಿ ಯುದ್ಧ ಪ್ರಾರಂಭವಾದಾಗ, ಇವರನ್ನು ಶ್ರೀನಗರಕ್ಕೆ ನಿಯೋಜಿಸಲಾಯಿತು. ಅಲ್ಲಿ ಅವರು ರಕ್ಷಣೆ ಮತ್ತು ಗಾಯಾಳುಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆಗಳಲ್ಲಿ ಚೀತಾ ಹೆಲಿಕಾಪ್ಟರ್ಗಳನ್ನು ಹಾರಿಸಿದರು.ಕಷ್ಟಕರವಾದ ಭೂಪ್ರದೇಶ ಮತ್ತು ಶತ್ರುಗಳ ಗುಂಡಿನ ದಾಳಿಯ ಹೊರತಾಗಿಯೂ, ಅವರು ಗಾಯಗೊಂಡ ಸೈನಿಕರನ್ನು ದೂರದ ಪರ್ವತ ಗಡಿ ಪೋಸ್ಟ್ಗಳಿಂದ ಸುರಕ್ಷಿತವಾಗಿ ಕರೆತಂದರು. ಅವರ ಧೈರ್ಯಕ್ಕಾಗಿ ಅವರಿಗೆ 'ಶೌರ್ಯ ಪುರಸ್ಕಾರ' ನೀಡಿ ಗೌರವಿಸಲಾಗಿದೆ.ಶ್ರೀವಿದ್ಯಾ ರಾಜನ್: ಯುದ್ಧದ ಸಮಯದಲ್ಲಿ ಪ್ರಮುಖ ಕೊಡುಗೆ ನೀಡಿದ ಮತ್ತೊಬ್ಬ ವಾಯುಪಡೆಯ ಅಧಿಕಾರಿ ಅಂದರೆ, ಅವರು ಕೇರಳದ ಶ್ರೀವಿದ್ಯಾ ರಾಜನ್. ಒಂದು ವರ್ಷಕ್ಕೂ ಹೆಚ್ಚು ಕಾಲ ಪೈಲಟ್ ಆಗಿ ಸೇವೆ ಸಲ್ಲಿಸಿದ ನಂತರ, ಅವರನ್ನು ಜಮ್ಮು ಮತ್ತು ಕಾಶ್ಮೀರದ ಉಧಂಪುರಕ್ಕೆ ನಿಯೋಜಿಸಲಾಯಿತು. ಕಾರ್ಗಿಲ್ ಸಂಘರ್ಷ ಭುಗಿಲೆದ್ದಾಗ, ಯುದ್ಧ ವಲಯಕ್ಕೆ ಹತ್ತಿರದಲ್ಲಿದ್ದ 25 ವಾಯುಪಡೆ ಪೈಲಟ್ಗಳಲ್ಲಿ ಗುಂಜನ್ ಸಕ್ಸೇನಾ ಕೂಡ ಸೇರಿದ್ದರು.ಅವರಿಗೆ ತಕ್ಷಣವೇ ರಕ್ಷಣಾ ಕಾರ್ಯಾಚರಣೆಗಳ ಜವಾಬ್ದಾರಿ ನೀಡಲಾಯಿತು. ಗಾಯಗೊಂಡ ಸೈನಿಕರನ್ನು ಶ್ರೀನಗರದ ಸೇನಾ ಆಸ್ಪತ್ರೆಗೆ ಸಾಗಿಸುವ ಕೆಲಸ ನಿರ್ವಹಿಸಿದರು. ಸಂಘರ್ಷದ ಸಮಯದಲ್ಲಿ ಅನೇಕ ಭಾರತೀಯ ಸೇನಾ ಸಿಬ್ಬಂದಿಯ ಜೀವ ಉಳಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು.ಕ್ಯಾಪ್ಟನ್ ರುಚಿ ಶರ್ಮಾ:1996ರಲ್ಲಿ ಭಾರತೀಯ ಸೇನೆಯ 'ಕೋರ್ಸ್ ಆಫ್ ಸಿಗ್ನಲ್ಸ್' ಗೆ ಸೇರಿದ ಕ್ಯಾಪ್ಟನ್ ರುಚಿ ಶರ್ಮಾ, ಭಾರತದ ಮೊದಲ ಮಹಿಳಾ ಆಪರೇಷನಲ್ ಪ್ಯಾರಾಟ್ರೂಪರ್ ಎನಿಸಿಕೊಂಡರು.ಕಾರ್ಗಿಲ್ ಯುದ್ಧದ ಸಮಯದಲ್ಲಿ, ಕಷ್ಟಕರವಾದ ಪರ್ವತ ಭೂಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಸೇನಾ ಪಡೆಗಳನ್ನು ಸಂಪರ್ಕಿಸುವ ಸಂವಹನ ಜಾಲಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಅವರು ಹೊತ್ತಿದ್ದರು. ಕಠಿಣ ಪರಿಸ್ಥಿತಿಗಳಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಸಂಘಟಿಸಲು ಅವರ ಕಾರ್ಯ ಪ್ರಮುಖವಾಗಿದ್ದವು. ಅವರ ಸೇವೆಯನ್ನು ಗುರುತಿಸಿ, 1999ರಲ್ಲಿ ಅವರ ವಿಭಾಗದ ಅತ್ಯಂತ ಧೈರ್ಯಶಾಲಿ ಮಹಿಳಾ ಅಧಿಕಾರಿ ಎಂದು 'ಜನರಲ್ ಒಬೆರಾಯ್ ಟ್ರೋಫಿ' ನೀಡಲಾಯಿತು. ನಂತರ ಅವರಿಗೆ 'ರಾಷ್ಟ್ರಪತಿಗಳ ಚಿನ್ನದ ಪದಕ' ಕೂಡ ಲಭಿಸಿದೆ.ಮೇಜರ್ ಡಾ. ಪ್ರಾಚಿ ಗಾರ್ಗ್: 1997ರಲ್ಲಿ ಭಾರತೀಯ ಸೇನೆಗೆ ಸೇರಿದ ಪ್ರಾಚಿ ಗಾರ್ಗ್ ಅವರು ಅತ್ಯಂತ ಅಪಾಯಕಾರಿಯಾದ ದ್ರಾಸ್ ವಲಯದಲ್ಲಿದ್ದ ಏಕೈಕ ಮಹಿಳಾ ಮಿಲಿಟರಿ ವೈದ್ಯೆಯಾಗಿದ್ದರು. ಯುದ್ಧಭೂಮಿಯಲ್ಲೇ ಸುಮಾರು 200ಕ್ಕೂ ಹೆಚ್ಚು ಗಾಯಾಳು ಸೈನಿಕರಿಗೆ ಚಿಕಿತ್ಸೆ ನೀಡಿ ಜೀವ ಉಳಿಸಿದರು.ಕ್ಯಾಪ್ಟನ್ ಯಶಿಕಾ ಹಟ್ವಾಲ್ ತ್ಯಾಗಿಡೆಹರಾಡೂನ್ನ ಕ್ಯಾಪ್ಟನ್ ಯಶಿಕಾ ಹಟ್ವಾಲ್ ತ್ಯಾಗಿ 1994ರಲ್ಲಿ ಭಾರತೀಯ ಸೇನೆಗೆ ಸೇರಿದರು. ಮೂರು ವರ್ಷಗಳ ಬಳಿಕ ಅವರು ಭಾರತದ ಅತ್ಯಂತ ಎತ್ತರದ ಮತ್ತು ಸವಾಲಿನ ಮಿಲಿಟರಿ ಪ್ರದೇಶಗಳಲ್ಲಿ ಒಂದಾದ ಲೇಹ್ನಲ್ಲಿ ನಿಯೋಜನೆಗೊಂಡ ಮೊದಲ ಮಹಿಳಾ ಸೇನಾಧಿಕಾರಿ.ಯುದ್ಧದ ಸಮಯದಲ್ಲಿ ಗರ್ಭಿಣಿಯಾಗಿದ್ದರೂ ದೇಶ ಸೇವೆಯನ್ನು ಮೊದಲ ಆದ್ಯತೆಯಾಗಿಸಿಕೊಂಡು ಲೇಹ್ ವಲಯದಲ್ಲಿ ಕರ್ತವ್ಯ ನಿರ್ವಹಿಸಿದರು. ಇವರಿಗೆ 'ಆಪರೇಷನ್ ವಿಜಯ್ ಸ್ಟಾರ್ ಮೆಡಲ್' ಒಲಿದಿದೆ. ಕಾರ್ಯಾಚರಣೆಯ ಪಾತ್ರದ ಗೌರವಾರ್ಥವಾಗಿ 'ಬ್ಯಾಟಲ್ ರಿಪೋರ್ಟ್' ಪಡೆದ ಮೊದಲ ಮಹಿಳಾ ಸೇನಾಧಿಕಾರಿ ಎನಿಸಿಕೊಂಡರು.ಮೇಜರ್ ಪ್ರಿಯಾ ಜಿಂಗನ್:ಸೇನೆಗೆ ಸೇರಿದ ಪ್ರಥಮ ಮಹಿಳಾ ಕೆಡೆಟ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ಇವರು, ಯುದ್ಧದ ಸಮಯದಲ್ಲಿ ಸೇನೆಗೆ ಅಗತ್ಯವಿದ್ದ ಕಾನೂನು ಹಾಗೂ ಆಡಳಿತಾತ್ಮಕ ಬೆಂಬಲವನ್ನು ನೀಡಿದ್ದರು.ಈ ಮಹಿಳಾ ಅಧಿಕಾರಿಗಳ ಧೈರ್ಯ ಮತ್ತು ಸೇವಾ ಮನೋಭಾವವು ಭಾರತೀಯ ಸೇನೆಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನೇ ಬರೆದಿವೆ. ದೇಶ ಸೇವೆಗೆ ಯಾವುದೇ ಲಿಂಗ ಭೇದವಿಲ್ಲ ಎಂಬುದನ್ನು ಇವರು ನಿರೂಪಿಸಿದ್ದಾರೆ.