ಮಳೆ ಅಭಾವ; ಭಣಗುಡುತ್ತಿದೆ ಭರಚುಕ್ಕಿ ಜಲಪಾತ
ಚಾಮರಾಜನಗರ: ಕಾವೇರಿ ಕೊಳ್ಳದಲ್ಲಿ ಮಳೆಯ ಅಭಾವ ತೀವ್ರವಾಗಿದ್ದು, ಪ್ರಕೃತಿಯ ಸುಂದರ ಮಡಿಲುಗಳು ಕಳೆಗುಂದುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ, ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಭರಚುಕ್ಕಿ ಜಲಪಾತವೀಗ ಸಂಪೂರ್ಣ ಭಣಭಣ ಎನ್ನುತ್ತಿದೆ. ಮೈದುಂಬಿ ಧುಮ್ಮಿಕ್ಕಬೇಕಿದ್ದ ಜಲಪಾತದಲ್ಲಿ ಈಗ ನೀರಿಲ್ಲದೆ ಬರೀ ಬಂಡೆಗಲ್ಲುಗಳು ಮಾತ್ರ ಕಾಣಿಸುತ್ತಿವೆ. ದಿನದಿನಕ್ಕೂ ಹೆ

ಚಾಮರಾಜನಗರ: ಕಾವೇರಿ ಕೊಳ್ಳದಲ್ಲಿ ಮಳೆಯ ಅಭಾವ ತೀವ್ರವಾಗಿದ್ದು, ಪ್ರಕೃತಿಯ ಸುಂದರ ಮಡಿಲುಗಳು ಕಳೆಗುಂದುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ, ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಭರಚುಕ್ಕಿ ಜಲಪಾತವೀಗ ಸಂಪೂರ್ಣ ಭಣಭಣ ಎನ್ನುತ್ತಿದೆ. ಮೈದುಂಬಿ ಧುಮ್ಮಿಕ್ಕಬೇಕಿದ್ದ ಜಲಪಾತದಲ್ಲಿ ಈಗ ನೀರಿಲ್ಲದೆ ಬರೀ ಬಂಡೆಗಲ್ಲುಗಳು ಮಾತ್ರ ಕಾಣಿಸುತ್ತಿವೆ. ದಿನದಿನಕ್ಕೂ ಹೆಚ್ಚುತ್ತಿರುವ ಮಳೆ ಕೊರತೆ, ಕಾವೇರಿ ಕೊಳ್ಳದ ಜಲಮೂಲಗಳನ್ನೇ ಒಣಗಿಸುತ್ತಿದೆ. ಸದಾ ಕಾಲ ಹಸಿರು ತುಂಬಿದ ಬೆಟ್ಟಗುಡ್ಡಗಳ ನಡುವೆ, ಭೋರ್ಗರೆಯುತ್ತಾ ಹರಿಯುತ್ತಿದ್ದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಪ್ರಸಿದ್ಧ ಭರಚುಕ್ಕಿ ಜಲಪಾತ ಈಗ ತನ್ನ ರಂಗು ಕಳೆದುಕೊಂಡಿದೆ. ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಕುಸಿದಿದ್ದು, ಜಲಧಾರೆಗಳೇ ಮಾಯವಾಗಿವೆ. ಸುಮಾರು 220 ಅಡಿ ಎತ್ತರದಿಂದ, ವಿಶಾಲವಾಗಿ ಕವಲು ಕವಲಾಗಿ ಧುಮ್ಮಿಕ್ಕುತ್ತಿದ್ದ ಕಾವೇರಿಯ ರೌದ್ರರಮಣೀಯ ರೂಪ ಪ್ರವಾಸಿಗರ ಕಣ್ಮನ ಸೆಳೆಯುತ್ತಿತ್ತು. ಆದರೆ, ಈ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ವಿಶಾಲ ಜಲಪಾತವೀಗ ಕೇವಲ ಒಂದು ಸಣ್ಣ ಝರಿಯಂತೆ ಮಾರ್ಪಟ್ಟಿದೆ. ಧುಮ್ಮಿಕ್ಕುವ ನೀರಿನ ಬದಲು ಬರೀ ಕಣ್ಮುಂದೆ ಬಂಡೆಗಲ್ಲುಗಳೇ ಪ್ರವಾಸಿಗರಿಗೆ ದರ್ಶನ ನೀಡುತ್ತಿವೆ. ವೀಕೆಂಡ್ ಬಂದರೆ ಸಾಕು ಸಾವಿರಾರು ಸಂಖ್ಯೆಯಲ್ಲಿ ಲಗ್ಗೆ ಇಡುತ್ತಿದ್ದ ಪ್ರವಾಸಿಗರ ಸಂಖ್ಯೆ ಈಗ ಗಣನೀಯವಾಗಿ ಕುಸಿದಿದೆ. ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ನಿರೀಕ್ಷೆಯಿಟ್ಟು ದೂರದ ಊರುಗಳಿಂದ ಬರುವ ಪ್ರವಾಸಿಗರಿಗೆ ತೀವ್ರ ನಿರಾಶೆಯಾಗುತ್ತಿದೆ. ನಿರಾಸೆಯಿಂದಲೇ ಪ್ರವಾಸಿಗರು ಜಲಪಾತದ ಆವರಣದಿಂದ ವಾಪಸ್ ಹೆಜ್ಜೆ ಇಡುತ್ತಿದ್ದಾರೆ.