ರಾಜಕೀಯಕ್ಕೆ ‘ಜೆನ್–ಝೀ’ ಮಜಲು
ನವದೆಹಲಿ: ಭಿನ್ನಾಭಿಪ್ರಾಯದ ‘ಮೀಮ್’ಗಳೇ ಸಾಮಾಜಿಕ ಜಾಲತಾಣಗಳನ್ನು ಆಕ್ರಮಿಸಿಕೊಳ್ಳುವ ಕಾಲಘಟ್ಟವಿದು. ಹೀಗಿರುವಾಗಲೇ ಸಮಾಜದಲ್ಲಿನ ಬಹುಮುಖ್ಯವಾದ ಚರ್ಚೆಗೂ ಜಾಲತಾಣವೇ ವೇದಿಕೆಯಾಗುತ್ತಿದೆ.ಭಿನ್ನಾಭಿಪ್ರಾಯ ಎನ್ನುವುದು ನಿರ್ಲಕ್ಷಿಸಲಾಗದ ‘ಟ್ರೆಂಡ್’ ಆಗಿ ಬದಲಾಗಿದೆ. ಸಾಂಪ್ರದಾಯಿಕ ರಾಜಕೀಯ ಪಕ್ಷಗಳು ಇದೀಗ ಹೊಸ ಮಾದರಿಯ ರಾಜಕೀಯ ಸಂವಹನಕ್ಕೆ ಜಿಗಿಯಬೇಕಾದ ಪರಿಸ್ಥಿತಿಗ

ನವದೆಹಲಿ: ಭಿನ್ನಾಭಿಪ್ರಾಯದ ‘ಮೀಮ್’ಗಳೇ ಸಾಮಾಜಿಕ ಜಾಲತಾಣಗಳನ್ನು ಆಕ್ರಮಿಸಿಕೊಳ್ಳುವ ಕಾಲಘಟ್ಟವಿದು. ಹೀಗಿರುವಾಗಲೇ ಸಮಾಜದಲ್ಲಿನ ಬಹುಮುಖ್ಯವಾದ ಚರ್ಚೆಗೂ ಜಾಲತಾಣವೇ ವೇದಿಕೆಯಾಗುತ್ತಿದೆ.ಭಿನ್ನಾಭಿಪ್ರಾಯ ಎನ್ನುವುದು ನಿರ್ಲಕ್ಷಿಸಲಾಗದ ‘ಟ್ರೆಂಡ್’ ಆಗಿ ಬದಲಾಗಿದೆ. ಸಾಂಪ್ರದಾಯಿಕ ರಾಜಕೀಯ ಪಕ್ಷಗಳು ಇದೀಗ ಹೊಸ ಮಾದರಿಯ ರಾಜಕೀಯ ಸಂವಹನಕ್ಕೆ ಜಿಗಿಯಬೇಕಾದ ಪರಿಸ್ಥಿತಿಗೆ ಅಣಿಯಾಗುತ್ತಿದ್ದಾರೆ. ಸಾಂಪ್ರದಾಯಿಕ ಪಕ್ಷಗಳ ಹಿರಿಯ ರಾಜಕಾರಣಿಗಳು ಕೂಡ ತಕ್ಷಣಕ್ಕೆ ಯುವಜನರಿಗೆ ಸಂದೇಶ ತಲುಪಿಸಲು ಇದೇ ಮಾರ್ಗ ಅನುಸರಿಸುತ್ತಿದ್ದಾರೆ. ಇದಕ್ಕೆ ಉತ್ತರವೆಂಬಂತೆ, ಪ್ರಧಾನಿ ನರೇಂದ್ರ ಮೋದಿ ಅವರ ಸೆಲ್ಫಿ ವಿಡಿಯೊ ಮಧ್ಯರಾತ್ರಿಯಲ್ಲಿ ಕೋಟ್ಯಂತರ ಯುವ ಸಮುದಾಯವನ್ನು ತಲುಪಿತ್ತು. ಪ್ರತಿಭಟನೆ ನಡೆಸುತ್ತಿದ್ದ ‘ಜೆನ್–ಝೀ’ಗಳ ಆಕ್ರೋಶ ಶಮನಗೊಳಿಸುವ ನಿಟ್ಟಿನಲ್ಲಿ ನೀಟ್ ಪ್ರಶ್ನೆಪತ್ರಿಕೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಆಶ್ವಾಸನೆ ನೀಡಿದರು.ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ನಿವಾಸದ ಮುಂದೆ ನಡೆಸಿದ ಪ್ರತಿಭಟನೆ, ದೆಹಲಿ ಪೊಲೀಸರು ಅವರನ್ನು ಬಂಧಿಸಿದ ಚಿತ್ರಗಳು ಕ್ಷಣಮಾತ್ರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಇದೆಲ್ಲವೂ, ಇತ್ತೀಚಿನ ಕೆಲವು ಉದಾಹರಣೆಗಳಷ್ಟೆ.ಜೆನ್–ಝೀ ಕೇವಲ ಹೊಸ ಮತ ಬ್ಯಾಂಕ್ ಆಗಿ ಅಷ್ಟೇ ಮಾರ್ಪಟ್ಟಿಲ್ಲ ಎಂಬುದು ತಜ್ಞರ ಅಭಿಮತ. ಅವರ ರಾಜಕೀಯ ಅಭಿಪ್ರಾಯವು ಸಂಪೂರ್ಣವಾಗಿ ಇಂಟರ್ನೆಟ್, ಸಾಮಾಜಿಕ ಜಾಲತಾಣಗಳ ‘ಅಲ್ಗರಿದಂ’, ಆರ್ಥಿಕ ಅನಿಶ್ಚಿತತೆ, ಅಸ್ಮಿತೆಯ ಚರ್ಚೆ ಹಾಗೂ ಜಾಲತಾಣಗಳ ನಿರಂತರ ಮಾಹಿತಿ ಹರಿವಿನ ಮೇಲೆ ರೂಪುಗೊಳ್ಳುತ್ತಾ ಇರುತ್ತದೆ. ಇದರಿಂದ ಪ್ರತಿ ರಾಜಕೀಯ ಪಕ್ಷದ ನಾಯಕರ ನಡೆ– ನುಡಿ ನೇರವಾಗಿ ಜೆನ್–ಝೀ ಪೀಳಿಗೆಯ ‘ಟ್ರೆಂಡ್’ ಅನುಕರಣೆಯತ್ತ ವಾಲುತ್ತಿದೆ. ಸಾಮಾನ್ಯವಾಗಿ, ಯುವ ಸಮುದಾಯವು ರಾಜಕೀಯವಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮುನ್ನ ವಿದ್ಯಾರ್ಥಿ ಸಂಘ, ರಾಜಕೀಯ ಪಕ್ಷಗಳ ಯುವ ಘಟಕಗಳಿಗೆ ಸೇರ್ಪಡೆಯಾಗುವ ಪರಿಪಾಟವಿತ್ತು. ಕಾಕ್ರೋಜ್ ಜನತಾ ಪಕ್ಷದ (ಸಿಜೆಪಿ) ಜತೆಗೆ ಪ್ರಮುಖ ಸಂಧಾನಕಾರರಾಗಿ ತೆರಳಿದ್ದ ಕೇಂದ್ರ ಸಚಿವ ಜೆ.ಪಿ. ನಡ್ಡಾ ಕೂಡ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮೂಲಕವೇ ಸಾರ್ವಜನಿಕ ಜೀವನ ಆರಂಭಿಸಿದ್ದರು. ಅದೇ ರೀತಿ, ರಾಹುಲ್ ಗಾಂಧಿ ಅವರೂ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್, ಇಂಡಿಯನ್ ಯೂಥ್ ಕಾಂಗ್ರೆಸ್ ಮೂಲಕ ತಮ್ಮ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದರು. ಈಗಿನ ಸ್ಥಿತಿ ಬದಲಾಗಿದೆ. ಜೆನ್–ಝೀ ಪೀಳಿಗೆಯವರು ನಿರ್ದಿಷ್ಟ ಸಂಸ್ಥೆ ಅಥವಾ ಸಂಘಟನೆಯೊಂದಿಗೆ ವ್ಯವಹರಿಸುವ ಬದಲಾಗಿ, ವೈಚಾರಿಕವಾಗಿ ತೊಡಗಿಕೊಳ್ಳುತ್ತಿದ್ದಾರೆ. ‘ಇನ್ಫ್ಲುಯೆನ್ಸರ್’, ‘ಕಂಟೆಂಟ್ ಕ್ರಿಯೇಟರ್ಸ್’, ಹೋರಾಟಗಾರರು, ರಾಜಕೀಯ ಪ್ರತಿನಿಧಿಗಳನ್ನೇ ಸಾಮಾಜಿಕ ಮಾಧ್ಯಮದಲ್ಲಿ ‘ಫಾಲೋ’ ಮಾಡುತ್ತಿದ್ದಾರೆ. ‘ಜೆನ್–ಝೀ ಪೀಳಿಗೆಯವರು 2029ರ ಲೋಕಸಭಾ ಚುನಾವಣೆ ಹಾಗೂ ರಾಜ್ಯಗಳ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಅವರೇ ಈಗ ಮೋದಿ ಸರ್ಕಾರದ ವಿರುದ್ಧ ಅತಿ ದೊಡ್ಡ ಧ್ವನಿಯೆತ್ತುತ್ತಿದ್ದಾರೆ. ಅವರ ಸಂಖ್ಯೆ ಹಿಂದೆಂದಿಗಿಂತಲೂ ದೊಡ್ಡದಾಗಿದೆ’ ಎಂದು ರಾಹುಲ್ ಗಾಂಧಿ ಅವರ ಸಂವಹನ ವ್ಯವಸ್ಥೆಯ ನಿರ್ವಹಿಸುತ್ತಿರುವವರಲ್ಲಿ ಒಬ್ಬರಾದ ಶ್ರೀವತ್ಸ ವೈ.ಬಿ. ಅಭಿಪ್ರಾಯಪಡುತ್ತಾರೆ.ಇದಕ್ಕೆಲ್ಲವೂ ನಿರುದ್ಯೋಗ ಕಾರಣ ಎನ್ನುತ್ತಾರೆ ‘ಚಾಣಕ್ಯ’ ಚುನಾವಣಾ ನೀತಿ ನಿರೂಪಣೆ ಸಂಸ್ಥೆಯ ಪಾರ್ಥದಾಸ್. 20 ವರ್ಷದ ಹಿಂದೆ ಶಿಕ್ಷಣ ಪಡೆದುಕೊಂಡರೆ, ಉದ್ಯೋಗ ಗಿಟ್ಟಿಸಿ ಮನೆ ಖರೀದಿಸಬಹುದು ಎಂಬ ಬಯಕೆ ಇತ್ತು. ಈಗಿನ ಮಕ್ಕಳಿಗೆ ಅಂಥ ನಂಬಿಕೆಯಿಲ್ಲ. ಐ.ಟಿ ಕ್ರಾಂತಿಯಿಂದ ಈ ರೀತಿಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆಯಾಗಿಲ್ಲ’ ಎಂದು ಸಮಸ್ಯೆಯ ಮತ್ತೊಂದು ಮಜಲು ತೆರೆದಿಡುತ್ತಾರೆ.ಜಂತರ್ ಮಂತರ್ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಎನ್ಸಿಪಿ (ಎಸ್ಪಿ) ವಕ್ತಾರ ಅನಿಸ್ ಗವಾಂಡೆ ಕೂಡ ಹೊಸ ಪೀಳಿಗೆಗೆ ತಕ್ಕಂತೆ ಬದಲಾಗಬೇಕು ಎಂಬುದನ್ನು ಒಪ್ಪಿಕೊಳ್ಳುತ್ತಾರೆ.ಸಾಂದರ್ಭಿಕ ಚಿತ್ರಮಾಧ್ಯಮಗಳ ಮೇಲೂ ಅಪನಂಬಿಕೆ ಮುಖ್ಯವಾಹಿನಿಯ ಪ್ರಸಾರ ಮಾಧ್ಯಮಗಳ ಕುರಿತೂ ಜೆನ್–ಝೀಗಳ ಅಪನಂಬಿಕೆ ದಟ್ಟವಾಗಿದೆ. ‘ಮುಖ್ಯವಾಹಿನಿಯ ಮಾಧ್ಯಮಗಳು ಪಕ್ಷಪಾತಿಯಾಗಿರುವ ಕಾರಣ ತಿರಸ್ಕರಿಸಿದ್ದಾರೆ. ಅವರು ‘ಟ್ರೆಂಡ್’ ಸೃಷ್ಟಿಸಿದರೂ ಅದರತ್ತ ಆಸಕ್ತಿ ವಹಿಸುತ್ತಿಲ್ಲ. ಇದೂ ಮೋದಿ ಅವರಿಗೆ ಹಿನ್ನಡೆಯಾಗಿದೆ. ಮೋದಿ ಅವರಿಗಿಂತಲೂ ಹೆಚ್ಚಾಗಿ ರಾಹುಲ್ ಗಾಂಧಿಯತ್ತ ಜೆನ್–ಝೀ ವಾಲುತ್ತಿರುವುದಕ್ಕೂ ಇದೇ ಕಾರಣ’ ಎಂದು ಅವರು ತಿಳಿಸಿದ್ದಾರೆ. ಅಭಿವೃದ್ಧಿಶೀಲ ಸಮಾಜ ಅಧ್ಯಯನ ಕೇಂದ್ರದ (ಸಿಎಸ್ಡಿಎಸ್) ಮಾಜಿ ನಿರ್ದೇಶಕ ಹಾಗೂ ರಾಜಕೀಯ ವಿಶ್ಲೇಷಕ ಕುಮಾರ್ ಪ್ರಕಾರ 'ಹೊಸ ರಾಜಕೀಯ ಟೂಲ್ಗಳ ಅಗತ್ಯವಿದೆ. ಪ್ರಚಾರದ ಕಾರ್ಯತಂತ್ರವನ್ನು ಮರುವಿನ್ಯಾಸಗೊಳಿಸಬೇಕಿದೆ. ಈ ಚಳವಳಿಯು ನಾವು ನಿರೀಕ್ಷಿಸಿದಕ್ಕಿಂತಲೂ ಅತ್ಯಂತ ವೇಗವಾಗಿ ಜನರನ್ನು ತಲುಪುತ್ತಿವೆ’ ಎಂದು ತಿಳಿಸಿದ್ದಾರೆ.