ಬೆಂಗಳೂರು: ಪ್ರಚೋದನಕಾರಿ ಪೋಸ್ಟರ್ ಪ್ರದರ್ಶಿಸಿದ ಯುವತಿ ವಿರುದ್ಧ ಎಫ್ಐಆರ್
ಬೆಂಗಳೂರು: ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪ್ರಚೋದನಕಾರಿ ಪೋಸ್ಟರ್ ಪ್ರದರ್ಶಿಸಿದ ಆರೋಪದ ಮೇರೆಗೆ ಅಪರಿಚಿತ ಯುವತಿ ವಿರುದ್ಧ ಉಪ್ಪಾರ ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುಲೋಚನಾ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದ

ಬೆಂಗಳೂರು: ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪ್ರಚೋದನಕಾರಿ ಪೋಸ್ಟರ್ ಪ್ರದರ್ಶಿಸಿದ ಆರೋಪದ ಮೇರೆಗೆ ಅಪರಿಚಿತ ಯುವತಿ ವಿರುದ್ಧ ಉಪ್ಪಾರ ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುಲೋಚನಾ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಂಡಿದ್ದಾರೆ.‘ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಸಂಜೆ ‘ಕರ್ನಾಟಕ ವಿದ್ಯಾರ್ಥಿ ಸಂಘಟನೆ’ ಆಯೋಜಿಸಿದ್ದ ಪ್ರತಿಭಟನೆ ವೇಳೆ, ಕೇಂದ್ರ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುತ್ತಿದ್ದರು. ಈ ವೇಳೆ ಯುವತಿಯೊಬ್ಬಳು, ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಗಳಾದ ‘ಶಾರ್ಜೀಲ್ ಇಮಾಮ್, ಉಮರ್ ಖಾಲಿದ್ ಜಿಂದಾಬಾದ್’ ಹಾಗೂ ‘ಬೆಂಗಳೂರು ಪೊಲೀಸರನ್ನು ಕಿತ್ತೊಗೆಯಿರಿ’ ಎಂಬ ಘೋಷಣೆಗಳಿರುವ ಪೋಸ್ಟರ್ ಅನ್ನು ಪ್ರದರ್ಶಿಸಿದಳು’ ಎಂದು ಅಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ. ಪೋಸ್ಟರ್ ಅನ್ನು ಗಮನಿಸಿದ ಕೂಡಲೇ ಇತರೆ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಆದರೆ, ಹೆಚ್ಚಿನ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ, ಆ ಪೋಸ್ಟರ್ಗಳನ್ನು ಮರೆಮಾಚಲಾಗಿತ್ತು. ಹೆಚ್ಚು ಜನಸಂದಣಿಯಿಂದಾಗಿ ಅವುಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.ನಂತರ ಪೊಲೀಸರು ಸ್ವಾತಂತ್ರ್ಯ ಉದ್ಯಾನದಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿಗಳು ಮತ್ತು ಕರ್ತವ್ಯದಲ್ಲಿದ್ದ ಸಿಬ್ಬಂದಿ ಚಿತ್ರೀಕರಿಸಿದ ವಿಡಿಯೊಗಳನ್ನು ಪರಿಶೀಲಿಸಿದರು. ಸಾರ್ವಜನಿಕರನ್ನು ಪ್ರಚೋದಿಸುವ ಮತ್ತು ಶಾಂತಿಗೆ ಭಂಗ ತರುವ ರೀತಿಯಲ್ಲಿ ಯುವತಿ ಪೋಸ್ಟರ್ಗಳನ್ನು ಪ್ರದರ್ಶಿಸಿರುವುದು ದೃಶ್ಯಾವಳಿಗಳಲ್ಲಿ ಕಂಡುಬಂದಿದೆ ಎಂದು ಆರೋಪಿಸಲಾಗಿದೆ.