ದಿಬಿಸಾ ತಂದೆ ಸಚಿವ ಕೇಶವ್ ಮಹಂತಾ ಟ್ರೋಲ್ ಬೇಡ: ಅಸ್ಸಾಂ ಸಿ.ಎಂ
ಗುವಾಹಟಿ: ಅಸ್ಸಾಂ ಸಚಿವ ಕೇಶವ್ ಮಹಂತಾ ಅವರ ಪುತ್ರಿ ದಿಬಿಸಾ ಅವರು ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿಚಾರ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ.ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ,‘ತಂದೆಯ ರಾಜಕೀಯ ಸಿದ್ಧಾಂತವನ್ನು ಪುತ್ರಿ ದಿಬಿಸಾ ಅನುಸರಿಸದಿರಬಹುದು. ಆಕೆ ನೀಟ್ ವಿರುದ್ಧ ಸಿಜೆಪಿ ನಡ

ಗುವಾಹಟಿ: ಅಸ್ಸಾಂ ಸಚಿವ ಕೇಶವ್ ಮಹಂತಾ ಅವರ ಪುತ್ರಿ ದಿಬಿಸಾ ಅವರು ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿಚಾರ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ.ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ,‘ತಂದೆಯ ರಾಜಕೀಯ ಸಿದ್ಧಾಂತವನ್ನು ಪುತ್ರಿ ದಿಬಿಸಾ ಅನುಸರಿಸದಿರಬಹುದು. ಆಕೆ ನೀಟ್ ವಿರುದ್ಧ ಸಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಆಕೆಯ ತಂದೆಯನ್ನು ಟ್ರೋಲ್ ಮಾಡಬೇಡಿ’ ಎಂದು ಹೇಳಿದ್ದಾರೆ.ದಿಬಿಸಾ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದು ಹಾಗೂ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸುತ್ತಿದ್ದ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ, ಶರ್ಮಾ ಈ ಪ್ರತಿಕ್ರಿಯೆ ನೀಡಿದ್ದಾರೆ.ಅಸ್ಸಾಂ ಗಣ ಪರಿಷತ್(ಎಜಿಪಿ) ಶಾಸಕರಾಗಿರುವ ಕೇಶವ್ ಮಹಂತಾ, ಪ್ರಸ್ತುತ ಕಂದಾಯ ಸಚಿವರಾಗಿದ್ದಾರೆ.‘ಆಕೆ ಕೂಗುತ್ತಿದ್ದ ಘೋಷಣೆಗಳನ್ನು ನಾನು ಒಪ್ಪುವುದಿಲ್ಲ. ಮುಂದಿನ ಬಾರಿ ಭೇಟಿ ಮಾಡಿದ ಸಂದರ್ಭದಲ್ಲಿ ಈ ವಿಚಾರವಾಗಿ ಆಕೆಯೊಂದಿಗೆ ಮಾತನಾಡುವೆ. ಆಕೆ ಹೇಳಿದ್ದು ಸರಿಯಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸುವೆ’ ಎಂದು ಶರ್ಮಾ ಹೇಳಿದ್ದಾರೆ.‘ಮಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ತಂದೆಯನ್ನು ಟ್ರೋಲ್ ಮಾಡುವುದು ಅಥವಾ ಅವರ ಮೇಲೆ ದಾಳಿ ಮಾಡುವುದು ಸರಿಯಲ್ಲ. ನಾಳೆ ನನ್ನ ಮಗ ವಕೀಲಿಕೆ ಆರಂಭಿಸಿದ ವೇಳೆ ನಾನು ಇಷ್ಟಪಡದ ವ್ಯಕ್ತಿಯೊಬ್ಬರ ಪರ ಆತ ವಕಾಲತ್ತು ವಹಿಸಬಹುದು. ಹೀಗಾಗಿ, ಬೆಳೆದು ನಿಂತಿರುವ ಮಕ್ಕಳ ನಡೆಗಳಿಗೆ ಹಾಗೂ ಅವರ ಪಾಲಕರಿಗೂ ನಂಟು ಬೆಸೆಯಬಾರದು’ ಎಂದೂ ಪ್ರತಿಪಾದಿಸಿದ್ದಾರೆ.