ಅಲ್ಲಿ ಮೇಳೈಸಿದ್ದವು ಸೇವೆ, ಸಂವಿಧಾನ, ದೇಶಭಕ್ತಿ
ನವದೆಹಲಿ: ರಾಜಧಾನಿಯ ಬಿಸಿಲಿನ ಧಗೆಯನ್ನೂ ಮೀರಿ ಜಂತರ್ ಮಂತರ್ನಲ್ಲಿ ಪ್ರತಿಭಟನೆಯ ಕಾವು ತೀವ್ರವಾಗಿತ್ತು. ಅಲ್ಲಿ ತುಂಬಿದ್ದ ಯುವಸಮೂಹದ ಒಕ್ಕೊರಲ ಬೇಡಿಕೆ ಒಂದೇ ಆಗಿತ್ತು: ‘ನೀಟ್’ ಪರೀಕ್ಷೆಯಲ್ಲಿನ ಅಕ್ರಮಗಳ ಹಿಂದಿರುವ ದುಷ್ಟಶಕ್ತಿಗಳನ್ನು ಪತ್ತೆಹಚ್ಚಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂಬುದು.ಕಾಕ್ರೋಚ್ ಜನತಾ ಪಾರ್ಟಿ ಕರೆ ನೀಡಿದ್ದ ಪ್ರತಿಭಟನೆಯ ನೇತೃತ್ವ ಬ

ನವದೆಹಲಿ: ರಾಜಧಾನಿಯ ಬಿಸಿಲಿನ ಧಗೆಯನ್ನೂ ಮೀರಿ ಜಂತರ್ ಮಂತರ್ನಲ್ಲಿ ಪ್ರತಿಭಟನೆಯ ಕಾವು ತೀವ್ರವಾಗಿತ್ತು. ಅಲ್ಲಿ ತುಂಬಿದ್ದ ಯುವಸಮೂಹದ ಒಕ್ಕೊರಲ ಬೇಡಿಕೆ ಒಂದೇ ಆಗಿತ್ತು: ‘ನೀಟ್’ ಪರೀಕ್ಷೆಯಲ್ಲಿನ ಅಕ್ರಮಗಳ ಹಿಂದಿರುವ ದುಷ್ಟಶಕ್ತಿಗಳನ್ನು ಪತ್ತೆಹಚ್ಚಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂಬುದು.ಕಾಕ್ರೋಚ್ ಜನತಾ ಪಾರ್ಟಿ ಕರೆ ನೀಡಿದ್ದ ಪ್ರತಿಭಟನೆಯ ನೇತೃತ್ವ ಬಹುತೇಕ ಯುವಜನರದ್ದೇ ಆಗಿತ್ತು. ಅದು ಯುವಜನರಿಂದ, ಯುವಜನರಿಗಾಗಿ ಮತ್ತು ಯುವಜನರಿಗೋಸ್ಕರ ನಡೆಯುತ್ತಿದ್ದ ಹೋರಾಟವಾಗಿತ್ತು.ಅಲ್ಲಿ ಸೇರಿದ್ದ ಬಹುತೇಕರು ಸ್ನೇಹಿತರಲ್ಲದವರು, ಪರಸ್ಪರ ಪರಿಚಯವೂ ಇಲ್ಲದವರು. ಆದರೂ ಒಬ್ಬರಿಗೊಬ್ಬರು ನೆರವಾಗಲು ಮನಸ್ಸುಗಳು ಮಾತ್ರ ಬೆಸೆದುಕೊಂಡಿದ್ದವು. ಬಿಸಿಲಿನ ತಾಪಕ್ಕೆ ಬಳಲಿ ನಿತ್ರಾಣಗೊಳ್ಳುವವರಿಗೆ ಬೀಸಣಿಗೆ ಬೀಸಿ ತುಸು ತಂಪೆರೆಯುವುದು, ದಾಹವಾದವರಿಗೆ ನೀರು ಕೊಡುವುದು, ಕುಸಿದುಬಿದ್ದವರಿಗೆ ಆಸರೆಯಾಗುವುದು... ಪ್ರತಿಭಟನೆಯ ನಡುವೆ ಹಲವು ಮಾನವೀಯ ಮುಖಗಳು ಕಾಣುತ್ತಿದ್ದವು.ಪ್ರತಿಭಟನಾ ಸ್ಥಳದಲ್ಲಿ ಕಂಡುಬಂದ ಅಪಾರ ಜನಸ್ತೋಮ ಒಂದು ಕ್ಷಣ ಆತಂಕ ಹುಟ್ಟಿಸುವಂತಿತ್ತು. ಆದರೆ, ಸ್ವಯಂಸೇವಕರಿಂದ ನಡೆಯುತ್ತಿದ್ದ ವ್ಯವಸ್ಥಿತ ನಿರ್ವಹಣೆ, ಪರಿಸ್ಥಿತಿಯ ಮೇಲೆ ಅವರು ಹೊಂದಿದ್ದ ಹಿಡಿತ ಎಲ್ಲರಲ್ಲೂ ಸುರಕ್ಷತೆಯ ಭಾವ ಮೂಡಿಸುವಂತಿತ್ತು.ಪ್ರತಿಭಟನಾ ಸ್ಥಳದಲ್ಲಿ ಕಲಾವಿದರು ಕಲಾಕೃತಿಗಳನ್ನು ರಚಿಸುತ್ತಿದ್ದರು. ಗಾಯಕರು ಹಾಡುಗಳ ಮೂಲಕ ತಮ್ಮ ಅಭಿವ್ಯಕ್ತಿ ಪ್ರದರ್ಶಿಸುತ್ತಿದ್ದರು. ಭಿತ್ತಿಪತ್ರ ಹಿಡಿದವರು ವಿಭಿನ್ನ ಮತ್ತು ಸೃಜನಶೀಲ ರೀತಿಯಲ್ಲಿ ತಮ್ಮ ಆಕ್ರೋಶವನ್ನು ದಾಖಲಿಸುತ್ತಿದ್ದರು.ಇಷ್ಟೊಂದು ದೊಡ್ಡ ಜನಸ್ತೋಮದ ನಡುವೆಯೂ ಬಹುತೇಕರು ನಿಯಮಗಳನ್ನು ಪಾಲಿಸುತ್ತಿದ್ದರು. ಯುವಜನತೆಯ ಶಕ್ತಿ ಘೋಷಣೆಗಳಲ್ಲಿ ಮಾತ್ರವಲ್ಲ, ಶಿಸ್ತು ಮತ್ತು ಸಂಘಟನೆಯಲ್ಲೂ ಇದೆ ಎಂಬುದನ್ನು ಅದು ಸಾರುತ್ತಿತ್ತು.ಸರ್ಕಾರದ ಹೊಣೆಗಾರಿಕೆಯ ಕೊರತೆಯನ್ನು ಪ್ರಶ್ನಿಸುವ ಸಂದೇಶಗಳಿದ್ದ ಕೈಬರಹದ ಭಿತ್ತಿಪತ್ರಗಳನ್ನು ವಿದ್ಯಾರ್ಥಿಗಳು ಸಿದ್ಧಪಡಿಸಿಕೊಂಡು ಬಂದಿದ್ದರು. ತಮ್ಮ ನೋವು, ಆಕ್ರೋಶ ಮತ್ತು ಪ್ರಶ್ನೆಗಳನ್ನು ತಮ್ಮದೇ ಕೈಬರಹದಲ್ಲಿ ಬರೆದು ಪ್ರದರ್ಶಿಸುತ್ತಿದ್ದರು.ಜಂತರ್ ಮಂತರ್ನ ಪ್ರವೇಶದ್ವಾರದಲ್ಲೇ ಚಹಾ ಮಾರುವ ವ್ಯಕ್ತಿ ಎಂದಿನಂತೆ ಚಹಾ ನೀಡುತ್ತಿದ್ದರು. ಪ್ರತಿಭಟನೆಯ ಕಾವು, ಪೊಲೀಸರ ಬಿಗಿ ಬಂದೋಬಸ್ತ್ ಮತ್ತು ಸಾವಿರಾರು ಜನರ ಓಡಾಟದ ನಡುವೆ ಆ ಪುಟ್ಟ ಚಹಾ ಅಂಗಡಿ ಮಾತ್ರ ತನ್ನದೇ ಲಯದಲ್ಲಿ ಸಾಗುತ್ತಿತ್ತು.ಜನಸಂದಣಿಯ ನಡುವೆ ಮುಂದೆ ಸಾಗುತ್ತಿದ್ದಾಗ ವೇದಿಕೆಯಿಂದ ‘ರಂಗ್ ದೇ ಬಸಂತಿ’ ಚಿತ್ರದ ಹಾಡು ಮೊಳಗುತ್ತಿತ್ತು. ಹಾಡಿನ ತಾಳಕ್ಕೆ ಜನ ಹೆಜ್ಜೆ ಹಾಕುತ್ತಿದ್ದರು. ಕೈಯಲ್ಲಿದ್ದ ರಾಷ್ಟ್ರಧ್ವಜಗಳು ಹಾರಾಡುತ್ತಿದ್ದವು. ಮುಖಗಳಲ್ಲಿ ನಗು ಚೆಲ್ಲುತ್ತಿತ್ತು.ಕೆಲವರು ಕೈಯಲ್ಲಿ ಭಾರತದ ಸಂವಿಧಾನದ ಪ್ರತಿಗಳನ್ನು ಹಿಡಿದುಕೊಂಡೇ ಕುಣಿಯುತ್ತಿದ್ದರು. ಅವರ ಸುತ್ತಲೂ ಮತ್ತಷ್ಟು ಜನ ವೃತ್ತಾಕಾರವಾಗಿ ನಿಂತು ಸಂಭ್ರಮಿಸುತ್ತಿದ್ದರು. ರಾಷ್ಟ್ರಧ್ವಜ ಒಂದು ಕೈಯಲ್ಲಿದ್ದರೆ, ಸಂವಿಧಾನ ಮತ್ತೊಂದು ಕೈಯಲ್ಲಿತ್ತು.ಅದು ಕೇವಲ ಸಂಭ್ರಮದ ದೃಶ್ಯವಾಗಿರಲಿಲ್ಲ. ಒಂದು ರೀತಿಯ ಪ್ರತಿರೋಧವಾಗಿತ್ತು. ತಮ್ಮ ಹಕ್ಕುಗಳಿಗಾಗಿ, ತಮ್ಮ ಭವಿಷ್ಯಕ್ಕಾಗಿ ಮತ್ತು ನ್ಯಾಯಕ್ಕಾಗಿ ಹೋರಾಡುತ್ತಿರುವ ಯುವಜನ, ಸಂವಿಧಾನವನ್ನೇ ತಮ್ಮ ಭರವಸೆಯಾಗಿ ನೋಡುತ್ತಿರುವುದರ ದ್ಯೋತಕವಾಗಿತ್ತು.ಮುಖ್ಯ ವೇದಿಕೆಯ ಸಮೀಪ ನಾನು ಕುಳಿತುಕೊಂಡೆ. ಜನದಟ್ಟಣೆಯನ್ನು ನಿರ್ವಹಿಸುತ್ತಿದ್ದ ಕೆಲವು ಯುವಕರು ನನ್ನ ಸ್ನೇಹಿತರಿಗೆ ಮತ್ತು ನನಗೆ ಕುಳಿತುಕೊಳ್ಳಲು ಜಾಗ ಮಾಡಿಕೊಟ್ಟರು. ಕುಳಿತ ಕೆಲವೇ ಕ್ಷಣಗಳಲ್ಲಿ ಮುಖಕ್ಕೆ ತಂಪಾದ ಗಾಳಿ ಬೀಸಿದ ಅನುಭವವಾಯಿತು. ಹಿಂದೆ ತಿರುಗಿ ನೋಡಿದಾಗ, ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬ ನನ್ನ ಹಿಂದೆ ನಿಂತು ಬೀಸಣಿಗೆ ಬೀಸುತ್ತಿದ್ದ.ಅದೇ ಸಮಯದಲ್ಲಿ, ಕೈಗವಸು ತೊಟ್ಟು, ಕಪ್ಪು ಬಣ್ಣದ ಕಸದ ಚೀಲ ಹಿಡಿದಿದ್ದ ಯುವಕನೊಬ್ಬ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದು ಕಣ್ಣಿಗೆ ಬಿತ್ತು. ಯಾರ ಗಮನವನ್ನೂ ಸೆಳೆಯುವ ಉದ್ದೇಶವಿಲ್ಲದೆ, ಪ್ರಚಾರವನ್ನೂ ಬಯಸದೆ, ಆತ ಮೌನವಾಗಿ ಕಸವನ್ನು ಹೆಕ್ಕಿ ಆವರಣವನ್ನು ಸ್ವಚ್ಛಗೊಳಿಸಲು ಆರಂಭಿಸಿದ. ಹೋರಾಟ ಎಂದರೆ ಘೋಷಣೆ ಕೂಗುವುದು ಮಾತ್ರವಲ್ಲ; ತಾನು ನಿಂತಿರುವ ಸ್ಥಳವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದೂ ಹೋರಾಟದ ಭಾಗವೇ ಎಂಬುದನ್ನು ಆತ ಮೌನವಾಗಿ ಸಾರಿದಂತೆ ಭಾಸವಾಯಿತು.ಒಂದು ಗುಂಪು ಡೋಲು ಬಾರಿಸುತ್ತಾ ‘ಜೈ ಭೀಮ್’ ಘೋಷಣೆಯೊಂದಿಗೆ ಸಾಗುತ್ತಿತ್ತು. ಅವರ ಕೈಯಲ್ಲಿ ಸಂವಿಧಾನದ ಪ್ರತಿಗಳಿದ್ದವು. ಪ್ರತಿಭಟನೆಯ ಗಾಂಭೀರ್ಯದ ನಡುವೆಯೂ ಹಾಸ್ಯ, ಸೃಜನಶೀಲತೆ ಮತ್ತು ಮುಗ್ಧತೆಯೂ ಅಲ್ಲಿ ಜಾಗ ಮಾಡಿಕೊಂಡಿದ್ದವು.ರಸ್ತೆಯ ಬದಿಯಲ್ಲಿ ಕುಳಿತು ಊಟ ಮಾಡುತ್ತಿದ್ದ ಮತ್ತೊಂದು ಸಣ್ಣ ಗುಂಪಿನ ಕೈಯಲ್ಲಿದ್ದ ಭಿತ್ತಿಪತ್ರವೊಂದು ಗಮನ ಸೆಳೆಯಿತು. ‘ನಾನೊಬ್ಬಳು ತಾಯಿ. ನನ್ನ ಮಕ್ಕಳಿಗಾಗಿ ನಾನು ಹೋರಾಡುತ್ತೇನೆ. ಶಿಕ್ಷಣದ ಭವಿಷ್ಯಕ್ಕಾಗಿ ಹೋರಾಡುತ್ತೇನೆ. ಧರ್ಮೇಂದ್ರ ಪ್ರಧಾನ್, ರಾಜೀನಾಮೆ ನೀಡಿ’ ಎಂದು ಬರೆದಿತ್ತು. ಮಕ್ಕಳ ಭವಿಷ್ಯದ ಕುರಿತು ಅಪಾರ ಕನಸು ಹೊಂದಿರುವ ಒಬ್ಬ ತಾಯಿಯ ಧ್ವನಿಯಂತೆ ಕಾಣುತ್ತಿದ್ದ ಆ ಸಂದೇಶ, ಇಡೀ ಹೋರಾಟದ ಮೂಲ ಕಾಳಜಿಯನ್ನು ಸರಳವಾಗಿ ಹೇಳುತ್ತಿತ್ತು.ಪ್ರತಿಭಟನಾ ಸ್ಥಳದಲ್ಲಿ ಹಲವು ವಿದ್ಯಾರ್ಥಿ ಮತ್ತು ಕಾರ್ಯಕರ್ತ ಸಂಘಟನೆಗಳ ಮಳಿಗೆಗಳಿದ್ದವು. ಎಐಡಿಎಸ್ಒ, ಎಐಎಸ್ಎ, ಎಸ್ಎಫ್ಐ, ಪಿಡಿಎಸ್ಯು, ಎಐಪಿಡಬ್ಲ್ಯುಎ ಸೇರಿದಂತೆ ಹಲವು ಸಂಘಟನೆಗಳು ತಮ್ಮದೇ ರೀತಿಯಲ್ಲಿ ಭಾಗವಹಿಸಿದ್ದವು. ಆದರೆ, ಸಂಘಟನೆಗಳಿಗಿಂತಲೂ ದೊಡ್ಡದಾಗಿ ಕಾಣಿಸಿಕೊಂಡಿದ್ದು ಸ್ವಯಂಸೇವಕರ ಜಾಲ.ನೀರು ಮತ್ತು ಆಹಾರವನ್ನು ನಿರಂತರವಾಗಿ ಹಂಚಲಾಗುತ್ತಿತ್ತು. ಆಹಾರ ವಿತರಣಾ ಸಂಸ್ಥೆಗಳ ಸಿಬ್ಬಂದಿ ಪ್ರತಿಭಟನಾ ಸ್ಥಳಕ್ಕೆ ಊಟ ತಂದುಕೊಡುತ್ತಿದ್ದರು. ನೀರು ಮತ್ತು ತಂಪು ಪಾನೀಯಗಳ ಪೆಟ್ಟಿಗೆಗಳನ್ನು ಆಟೊಗಳಲ್ಲಿ ತಂದು ಇಳಿಸಲಾಗುತ್ತಿತ್ತು. ಕೆಲವರು ಬ್ರೆಡ್ ಮತ್ತು ಜಾಮ್ ತಿನ್ನುತ್ತಿದ್ದರು. ಹಸಿವಾದವರಿಗೆ ಆಹಾರ, ಬಾಯಾರಿದರೆ ನೀರು, ಗಾಯವಾದರೆ ಚಿಕಿತ್ಸೆ, ದಣಿವಾದರೆ ವಿಶ್ರಾಂತಿ, ನಿತ್ರಾಣಗೊಂಡರೆ ಬೀಸಣಿಗೆ ಹಿಡಿದ ಕೈಗಳು... ಹೋರಾಟದ ಚಿತ್ರಣಗಳು ಹೀಗೆ ಹರಡಿಕೊಂಡಿದ್ದವು.ಒಂದು ಸಂದರ್ಭದಲ್ಲಿ ಇಬ್ಬರು ಯುವತಿಯರು ಕೈಯಲ್ಲಿ ಒಆರ್ಎಸ್ ಪೊಟ್ಟಣ ಹಾಗೂ ಬ್ಯಾಂಡ್ಏಡ್ಗಳನ್ನು ಹಿಡಿದುಕೊಂಡು ನನ್ನ ಬಳಿ ಬಂದರು. ಅವುಗಳನ್ನು ಅಗತ್ಯವಿರುವವರಿಗೆ ನೀಡಲು ಎಲ್ಲಿ ಒಪ್ಪಿಸಬೇಕು ಎಂದು ಕೇಳಿದರು. ಅವರು ಪ್ರತಿಭಟಿಸಲು ಬಂದವರಷ್ಟೇ ಅಲ್ಲ, ತಮ್ಮ ಕೈಲಾದ ನೆರವು ನೀಡಲು ಬಂದವರೂ ಆಗಿದ್ದರು.ಅದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಭಾಷಣಗಳು ನಡೆಯುತ್ತಿದ್ದಾಗಲೇ, ವಿದ್ಯಾರ್ಥಿಗಳ ಒಂದು ಗುಂಪು ರಾಷ್ಟ್ರಗೀತೆಯನ್ನು ಹಾಡಲು ಆರಂಭಿಸಿತು. ಒಂದೆಡೆ ಭಾಷಣದ ಧ್ವನಿ. ಮತ್ತೊಂದೆಡೆ ರಾಷ್ಟ್ರಗೀತೆ. ಮಧ್ಯೆ ಸಾವಿರಾರು ಜನರ ಸಮೂಹ. ಪ್ರತಿಭಟನೆಯ ಗದ್ದಲದ ನಡುವೆಯೂ ಆ ಕ್ಷಣ ಮಾತ್ರ ಅತ್ಯಂತ ಗಂಭೀರವಾಗಿಯೂ ಗೌರವದಿಂದಲೂ ಸಾಗಿತು.ಸ್ವಲ್ಪ ಹೊತ್ತಿನ ಬಳಿಕ ಆಯೋಜಕರು ‘ಚಕ್ ದೇ ಇಂಡಿಯಾ’ ಹಾಡನ್ನು ಹಾಕಿದರು. ಅಷ್ಟೇ... ಇಡೀ ಜನಸ್ತೋಮ ಒಮ್ಮೆಲೇ ಉತ್ಸಾಹದಿಂದ ಎದ್ದು ನಿಂತಂತೆ ಭಾಸವಾಯಿತು. ಜನರು ಹಾಡಿನೊಂದಿಗೆ ಹಾಡಿದರು; ಕುಣಿದರು. ರಾಷ್ಟ್ರಧ್ವಜಗಳನ್ನು ಬೀಸಿದರು. ಆ ದೃಶ್ಯ ಮೈನವಿರೇಳಿಸುವಂತಿತ್ತು.ಹೋರಾಟವನ್ನು ಹೀಗೆ ಒಗ್ಗೂಡಿಸುವಲ್ಲಿ ಸಾಮಾಜಿಕ ಮಾಧ್ಯಮ, ಅದರಲ್ಲೂ ಇನ್ಸ್ಟಾಗ್ರಾಂ ಪ್ರಮುಖ ಪಾತ್ರ ವಹಿಸಿರುವುದು ಸ್ಪಷ್ಟವಾಗಿತ್ತು. ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಪರಸ್ಪರ ಸಂಪರ್ಕ ಬೆಳೆಸಲು ಮತ್ತು ತಮ್ಮೊಳಗಿನ ನೋವನ್ನು ಸಾಮೂಹಿಕ ಧ್ವನಿಯಾಗಿ ಪರಿವರ್ತಿಸಲು ಯುವಜನರು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡಿದ್ದರು.ಮಹಿಳೆಯಾಗಿ ದೊಡ್ಡ ಜನಸ್ತೋಮದ ನಡುವೆ ಸಾಮಾನ್ಯವಾಗಿ ಎಚ್ಚರಿಕೆಯಿಂದ ಇರುವ ನನಗೆ, ಈ ಎರಡು ದಿನಗಳಲ್ಲೂ ಅಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದ ಪುರುಷರ ನಡುವೆ ಅಸುರಕ್ಷಿತ ಭಾವನೆ ಮೂಡಲಿಲ್ಲ. ಆಕಸ್ಮಿಕವಾಗಿ ಯಾರಿಗಾದರೂ ಡಿಕ್ಕಿ ಹೊಡೆದರೂ ತಕ್ಷಣವೇ ಕ್ಷಮೆ ಕೇಳುವಷ್ಟು ಸಂವೇದನಾಶೀಲತೆ ಅಲ್ಲಿ ಕಂಡುಬಂತು.ಹಲವು ಜಾತಿ, ಧರ್ಮ, ವರ್ಗ ಮತ್ತು ಸಮುದಾಯಗಳಿಗೆ ಸೇರಿದವರು ಒಂದೇ ಉದ್ದೇಶಕ್ಕಾಗಿ ಅಲ್ಲಿ ಸೇರಿರುವಂತೆ ಕಾಣುತ್ತಿದ್ದರು. ಅಲ್ಲಿ ಕಂಡುಬಂದದ್ದು ಭ್ರಷ್ಟಾಚಾರ ವ್ಯವಸ್ಥೆಯ ವಿರುದ್ಧದ ಆಕ್ರೋಶ ಮಾತ್ರವಲ್ಲ; ಅದರೊಂದಿಗೆ, ಪರಸ್ಪರ ಬೆಸೆದುಕೊಂಡಿದ್ದ ಕಾಳಜಿ, ಆತ್ಮೀಯತೆ, ಹಾಸ್ಯ, ಸೃಜನಶೀಲತೆ ಮತ್ತು ಮೌನವಾದ ಪ್ರತಿರೋಧ ಕೂಡ.