ಚುರುಮುರಿ | ಬಿದ್ದರೂ ಮಣ್ಣಾಗದ ಮೀಸೆ!
‘ಆಹಾ! ನೋಡಲೇ... ಜಿರಲೆಗಳು ಅಂತ ಹೀಗಳೆಸಿ ಕೊಂಡವ್ರೇ ಪ್ರಧಾನ್ ಕುರ್ಚಿಯಿಂದ ಕೆಳಗಿಳಿಯುವಂತೆ ಮಾಡಿದ್ರು’ ಎಂದೆ ಸಂತಸದಿಂದ.‘ದೇಶವಾಸಿ ಜಿರಲೆಗಳಿಗೆ, ದೇಶ ವಿರೋಧಿ ಜಿರಲೆಗಳಿಗೆ, ವಿದೇಶಿ ಜಿರಲೆಗಳಿಗೆ ಎಲ್ಲಾರಿಗೂ ಹಾಲು ಪಾಯಸ ಕುಡಿದಂಗೆ ಆಗಿರಬಕು! ಪಾಪ, ಸೋರಿಕೆ ಪಾಪಿಗಳ ವಿರುದ್ಧ ಕಠಿಣ ಕ್ರಮ ತಗಂಡ ಪ್ರಧಾನ್ಗೆ, ನಮ್ ಮೋದಿ ಮಾಮಾಂಗೆ ಎಷ್ಟು ದುಃಖ ಆಗೈತಿ’ ಬೆಕ್ಕಣ್

‘ಆಹಾ! ನೋಡಲೇ... ಜಿರಲೆಗಳು ಅಂತ ಹೀಗಳೆಸಿ ಕೊಂಡವ್ರೇ ಪ್ರಧಾನ್ ಕುರ್ಚಿಯಿಂದ ಕೆಳಗಿಳಿಯುವಂತೆ ಮಾಡಿದ್ರು’ ಎಂದೆ ಸಂತಸದಿಂದ.‘ದೇಶವಾಸಿ ಜಿರಲೆಗಳಿಗೆ, ದೇಶ ವಿರೋಧಿ ಜಿರಲೆಗಳಿಗೆ, ವಿದೇಶಿ ಜಿರಲೆಗಳಿಗೆ ಎಲ್ಲಾರಿಗೂ ಹಾಲು ಪಾಯಸ ಕುಡಿದಂಗೆ ಆಗಿರಬಕು! ಪಾಪ, ಸೋರಿಕೆ ಪಾಪಿಗಳ ವಿರುದ್ಧ ಕಠಿಣ ಕ್ರಮ ತಗಂಡ ಪ್ರಧಾನ್ಗೆ, ನಮ್ ಮೋದಿ ಮಾಮಾಂಗೆ ಎಷ್ಟು ದುಃಖ ಆಗೈತಿ’ ಬೆಕ್ಕಣ್ಣ ಸೊರಸೊರಗುಟ್ಟಿತು.‘ಅಲ್ಲಲೇ... ಸೋರಿಕೆಯಾಗೈತಿ ಅಂತ ನೈತಿಕ ಹೊಣೆ ಹೊತ್ತು ಆವಾಗಲೇ ರಾಜೀನಾಮೆ ಕೊಟ್ಟಿದ್ದರೆ ಜಿರಲೆಗಳು ಇಷ್ಟ್ ದಿನ ಪ್ರತಿಭಟನೆ ಮಾಡ್ತಿರಲಿಲ್ಲ, ಸೊನಮ್ ವಾಂಗ್ಚೂಕ್ ಇಷ್ಟು ದಿನ ಉಪವಾಸ ಮಾಡ್ತಿರಲಿಲ್ಲ’ ಎಂದೆ.‘ಅರೆ... ಇಷ್ಟ್ ದೊಡ್ಡ ದೇಶದಲ್ಲಿ ಇಷ್ಟ್ ದೊಡ್ಡಮಟ್ಟದ ಪರೀಕ್ಷೆ ನಡೆಸೂ ಮುಂದ ಏನೋ ಚಿಕ್ಕಪುಟ್ಟ ಸೋರಿಕೆ ಸಹಜ... ಅದಕ್ಕೇ ಅವ್ರು ರಾಜೀನಾಮೆ ಕೊಟ್ ಬಿಡಬೇಕೇನು?’ ಬೆಕ್ಕಣ್ಣ ವಿತಂಡವಾದ ಮುಂದಿಟ್ಟಿತು.‘ಮಂಗ್ಯಾನಂಥವನೇ... ಇದೊಂದೇ ಸಲ ಅಲ್ಲ ಕಣಲೇ. 2024ರಲ್ಲೂ ನೀಟ್–ಯುಜಿ, ಮತ್ತ ಯುಜಿಸಿ–ನೆಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಈ ಸಲ ಪೂರಾ ಕುತ್ತಿಗಿ ಮಟ ಬಂದೈತಂತ ನಮ್ಮ ಜೆನ್ ಝೀಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ರು’ ನಾನು ಮರು ವಾದಿಸಿದೆ.‘ಈ ಜಿರಲೆಗಳಿಗೆ, ಸೊನಮ್ಗೆ ಹಿಂಗೆ ಪ್ರತಿಭಟನೆ ಮಾಡಕ್ಕೆ ವಿದೇಶಗಳಿಂದ ಮಸ್ತ್ ರೊಕ್ಕ ಬಂದಿರತೈತಿ. ಇದೆಲ್ಲ ವಿದೇಶಿ ಶಕ್ತಿಗಳ ಕೈವಾಡ, ಕುಮ್ಮಕ್ಕು... ಈ ಜಿರಲೆಗಳಿಗೆ ಚೂರೂ ದೇಶಭಕ್ತೀನೆ ಇಲ್ಲ’ ಬೆಕ್ಕಣ್ಣ ಪಟ್ಟುಬಿಡದೆ ವಾದಿಸಿತು.‘ಆತಪಾ... ನಿಮ್ ಪ್ರಕಾರ ಇದೆಲ್ಲವೂ ವಿದೇಶಿ ಶಕ್ತಿಗಳ ಕೈವಾಡ. ಆದರೆ, ಇಲ್ಲಿ ರಾಮಮಂದಿರದ ಹುಂಡಿಯಿಂದ ಕೋಟಿಗಟ್ಟಲೆ ಕಳವು ಆಗಿದ್ದು ಯಾವ ಶಕ್ತಿಗಳ ಕೈವಾಡ? ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದು ಯಾವ ಶಕ್ತಿಗಳು? ಅವೆಲ್ಲ ಪರಮ ದೇಶಭಕ್ತಿಯ ಕರಕಮಲಗಳೇ ತಾನೆ?’ ಎಂದೆ.‘ಅವರಂತಹ ಕೆಲವರಷ್ಟೆ ಪಾಪಿಗಳು’ ಎಂದು ಹ್ಹೆಹ್ಹೆಗುಡುತ್ತ ಬೆಕ್ಕಣ್ಣ ಬಾಲಮುದುರಿ ಕೂತಿತು.