ದೇಶದಲ್ಲಿ ಶತಕೋಟ್ಯಧೀಶರ ಸಂಖ್ಯೆ ನಾಲ್ಕು ಪಟ್ಟು ಏರಿಕೆ
ನವದೆಹಲಿ: ವಾರ್ಷಿಕ ಒಟ್ಟು ಆದಾಯವು ₹100 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಎಂಬುದಾಗಿ ಹೇಳಿಕೊಂಡವರ ಸಂಖ್ಯೆಯು 2025–26ನೆಯ ತೆರಿಗೆ ಮೌಲ್ಯಮಾಪನ ವರ್ಷದಲ್ಲಿ 576ಕ್ಕೆ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಸೋಮವಾರ ತಿಳಿಸಿದೆ.₹100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿದವರ ಸಂಖ್ಯೆಯು ಕಳೆದ ಐದು ವರ್ಷಗಳ ಅವಧಿಯಲ್ಲಿ ನಾಲ್ಕು ಪಟ್ಟು ಹೆಚ್

ನವದೆಹಲಿ: ವಾರ್ಷಿಕ ಒಟ್ಟು ಆದಾಯವು ₹100 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಎಂಬುದಾಗಿ ಹೇಳಿಕೊಂಡವರ ಸಂಖ್ಯೆಯು 2025–26ನೆಯ ತೆರಿಗೆ ಮೌಲ್ಯಮಾಪನ ವರ್ಷದಲ್ಲಿ 576ಕ್ಕೆ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಸೋಮವಾರ ತಿಳಿಸಿದೆ.₹100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿದವರ ಸಂಖ್ಯೆಯು ಕಳೆದ ಐದು ವರ್ಷಗಳ ಅವಧಿಯಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ನೀಡಿರುವ ಉತ್ತರದಲ್ಲಿ ಹೇಳಲಾಗಿದೆ.ದೇಶದಲ್ಲಿ ಶತಕೋಟ್ಯಧೀಶರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಆಗಿದೆ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರವಾಗಿ ಚೌಧರಿ ಈ ಮಾಹಿತಿ ನೀಡಿದ್ದಾರೆ.‘ಶತಕೋಟ್ಯಧೀಶ’ ಎಂಬ ಪದಕ್ಕೆ ಆದಾಯ ತೆರಿಗೆ ಕಾಯ್ದೆ – 2025ರ ಅಡಿಯಲ್ಲಿ ಅಥವಾ ಹಿಂದೆ ಜಾರಿಯಲ್ಲಿದ್ದ ಆದಾಯ ತೆರಿಗೆ ಕಾಯ್ದೆ – 1961ರ ಅಡಿಯಲ್ಲಿ ಯಾವುದೇ ವ್ಯಾಖ್ಯಾನ ಇಲ್ಲ ಎಂದು ಚೌಧರಿ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.2021–22ರ ಮೌಲ್ಯಮಾಪನ ವರ್ಷದಲ್ಲಿ ₹100 ಕೋಟಿಗಿಂತ ಹೆಚ್ಚಿನ ಒಟ್ಟು ವಾರ್ಷಿಕ ಆದಾಯವನ್ನು ಘೋಷಿಸಿದ್ದವರ ಸಂಖ್ಯೆಯು 142 ಆಗಿತ್ತು.‘ಎಥೆನಾಲ್ ವಾಹನ: ಮಾಹಿತಿ ಇಲ್ಲ’ಶೇ 20ರಷ್ಟು ಎಥೆನಾಲ್ ಮಿಶ್ರಣ ಇರುವ ಪೆಟ್ರೋಲ್ (ಇ20) ಬಳಕೆಗೆ ಪೂರ್ಣವಾಗಿ ಹೊಂದಿಕೆ ಆಗುವ ವಾಹನಗಳ ಪ್ರಮಾಣವು ದೇಶದಲ್ಲಿ ಎಷ್ಟಿದೆ ಎಂಬ ವಿವರವು ತನ್ನಲ್ಲಿ ಇಲ್ಲ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ತಿಳಿಸಿದೆ.ಆದರೆ ಇ20 ಪೆಟ್ರೋಲ್ ಬಳಕೆಯು ನಿಗದಿತ ಮಾನದಂಡಗಳನ್ನು ಪಾಲಿಸಿದಾಗ ಸುರಕ್ಷಿತ ಎಂದು ಸ್ಪಷ್ಟಪಡಿಸಿದೆ.ಎಂಜಿನ್ ಬಾಳಿಕೆ, ಚಾಲನೆ, ಸವಕಳಿ ನಿರೋಧಕತ್ವ, ವಾಹನಗಳಲ್ಲಿ ಬಳಕೆಯಾಗಿರುವ ವಸ್ತುಗಳ ಹೊಂದಾಣಿಕೆ, ಹೊಗೆ ಉಗುಳುವಿಕೆ ಮತ್ತು ಇಂಧನ ದಕ್ಷತೆ ಕುರಿತಾಗಿ ಪ್ರಯೋಗಾಲಯಗಳಲ್ಲಿ ಹಾಗೂ ಹೊರಗಡೆ ವಿಸ್ತೃತವಾಗಿ ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆಗಳು ಇ20 ಪೆಟ್ರೋಲ್ ಬಳಕೆಯು ಸುರಕ್ಷಿತ ಎಂಬುದನ್ನು ತಿಳಿಸಿವೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಅವರು ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.ಇ15 ಪೆಟ್ರೋಲ್ ಬಳಕೆಯು ಮೂರೂವರೆ ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ಇದೆ, ಇ19–ಇ20 ಪೆಟ್ರೋಲ್ ಬಳಕೆಯು ಎರಡೂವರೆ ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ಇದೆ. 20 ಕೋಟಿಗಿಂತ ಹೆಚ್ಚು ದ್ವಿಚಕ್ರ ವಾಹನಗಳು ಹಾಗೂ ಮೂರು ಕೋಟಿಗಿಂತ ಹೆಚ್ಚು ಕಾರುಗಳು ಈ ಇಂಧನ ಬಳಸುತ್ತಿವೆ ಎಂದು ಗೋಪಿ ಅವರು ತಿಳಿಸಿದ್ದಾರೆ.‘ಎಥೆನಾಲ್ ಮಿಶ್ರಣ ಇರುವ ಪೆಟ್ರೋಲ್ ಬಳಕೆಯಿಂದಾಗಿ ವ್ಯಾಪಕವಾದ ಎಂಜಿನ್ ವೈಫಲ್ಯ ಆಗಿದೆ ಎನ್ನಲು ಅಥವಾ ವಾಹನ ಹಾಳಾಗಿದೆ ಎನ್ನಲು ಪರಿಶೀಲಿಸಿ ನೋಡಬಹುದಾದ ಆಧಾರ ಇಲ್ಲ’ ಎಂದು ಹೇಳಿದ್ದಾರೆ. ವಾಹನ ತಯಾರಿಕಾ ಕಂಪನಿಗಳು ವಾರಂಟಿ ಹೊಣೆಗಾರಿಕೆಗಳನ್ನು ಮಾನ್ಯ ಮಾಡುವುದು ಮುಂದುವರಿದಿದೆ ಎಂದಿದ್ದಾರೆ.