114 ರಫೇಲ್ ಜೆಟ್ ಖರೀದಿಗೆ ಭಾರತ ವಿನಂತಿ – ಬಿಗ್ ಡೀಲ್ಗೆ ಆಗಸ್ಟ್ನಲ್ಲೇ ಫ್ರಾನ್ಸ್ನಿಂದ ಸಿಗುತ್ತಾ ಒಪ್ಪಿಗೆ?
ನವದೆಹಲಿ/ಪ್ಯಾರಿಸ್: ಭಾರತದ ಜೊತೆಗಿನ 114 ರಫೇಲ್ ಯುದ್ಧ ವಿಮಾನಗಳ (Rafale Fighter Jets) ಒಪ್ಪಂದಕ್ಕೆ ಆಗಸ್ಟ್ ತಿಂಗಳಿನಲ್ಲೇ ಫ್ರಾನ್ಸ್ ತನ್ನ ಅಧಿಕೃತ ಪ್ರತಿಕ್ರಿಯೆ ನೀಡುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ. 114 ರಫೇಲ್ ಜೆಟ್ಗಳ ಖರೀದಿ ಸಂಬಂಧ ಭಾರತ ಸರ್ಕಾರ ಕಳೆದ ಮೇ ತಿಂಗಳ ಆರಂಭದಲ್ಲಿ ಫ್ರಾನ್ಸ್ಗೆ (France) ವಿನಂತಿ ಪತ್ರ ಕಳುಹಿಸಿತ್ತು.

ನವದೆಹಲಿ/ಪ್ಯಾರಿಸ್: ಭಾರತದ ಜೊತೆಗಿನ 114 ರಫೇಲ್ ಯುದ್ಧ ವಿಮಾನಗಳ (Rafale Fighter Jets) ಒಪ್ಪಂದಕ್ಕೆ ಆಗಸ್ಟ್ ತಿಂಗಳಿನಲ್ಲೇ ಫ್ರಾನ್ಸ್ ತನ್ನ ಅಧಿಕೃತ ಪ್ರತಿಕ್ರಿಯೆ ನೀಡುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ. 114 ರಫೇಲ್ ಜೆಟ್ಗಳ ಖರೀದಿ ಸಂಬಂಧ ಭಾರತ ಸರ್ಕಾರ ಕಳೆದ ಮೇ ತಿಂಗಳ ಆರಂಭದಲ್ಲಿ ಫ್ರಾನ್ಸ್ಗೆ (France) ವಿನಂತಿ ಪತ್ರ ಕಳುಹಿಸಿತ್ತು. ಇದಕ್ಕೆ ಆಗಸ್ಟ್ ಮಧ್ಯದ ವರೆಗೆ ಫ್ರಾನ್ಸ್ನ ಅಧಿಕಾರಿಗಳು ಸಮಯ ಕೋರಿದ್ದರು. ಬಿಗ್ ಡೀಲ್ಗೆ ಫ್ರಾನ್ಸ್ ಪ್ರತಿಕ್ರಿಯೆ ನೀಡಿದ್ರೆ ಉಭಯ ರಾಷ್ಟ್ರಗಳು ಮುಂದಿನ ಸುತ್ತಿನ ಮಾತುಕತೆ ನಡೆಸಲಿವೆ ಎಂದು ತಿಳಿದುಬಂದಿದೆ. ಏನಿದು ಡೀಲ್? ಈ ವರ್ಷ ಮೇ ತಿಂಗಳ ಆರಂಭದಲ್ಲಿ ಭಾರತವು ವಾಯುಪಡೆಗಳ (IAF) ಸಾಮರ್ಥ್ಯ ಹೆಚ್ಚಿಸಲು 114 ರಫೇಲ್ ಜೆಟ್ಗಳ ಖರೀದಿಸುವ ಒಪ್ಪಂದ ಸಂಬಂಧ ಮಾತುಕತೆ ನಡೆಸಲು ವಿನಂತಿ ಪತ್ರ ಕಳುಹಿಸಿತ್ತು. ಈ 114 ಜೆಟ್ಗಳ ಪೈಕಿ 94 ರಫೇಲ್ ಜೆಟ್ಗಳನ್ನು ಡಸಾಲ್ಟ್ ಏವಿಯೇಷನ್ ಮತ್ತು ಭಾರತೀಯ ಕಂಪನಿಯ ಸಹಯೋಗದಲ್ಲಿ ಭಾರತದಲ್ಲೇ ತಯಾರಿಸಲಿದೆ. ಇದು ದೇಶೀಯ ಏರೋಸ್ಪೇಸ್ ಉತ್ಪಾದನೆಗೆ ಗಮನಾರ್ಹ ಉತ್ತೇಜನ ನೀಡುತ್ತದೆ. ಖರೀದಿ ವೆಚ್ಚ ಎಷ್ಟಾಗಲಿದೆ? 2026 ವರ್ಷಾರಂಭದಲ್ಲಿ ಅಂದ್ರೆ ಫೆಬ್ರವರಿಯಲ್ಲಿ ದೇಶದ ರಕ್ಷಣಾ ಪಡೆಗಳ ಸನ್ನದ್ಧತೆ ವೃದ್ಧಿಸುವ ನಿಟ್ಟಿನಲ್ಲಿ ಭಾರತ ರಕ್ಷಣಾ ಸಚಿವಾಲಯ 114 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಅನುಮೋದನೆ ನೀಡಿತ್ತು. ಆದ್ರೆ ಯುದ್ಧ ವಿಮಾನಗಳ ಖರೀದಿಗೆ ತಗುಲುವ ವೆಚ್ಚದ ಕುರಿತು ರಕ್ಷಣಾ ಸಚಿವಾಲಯ ಮಾಹಿತಿ ನೀಡಿಲ್ಲ. ಇವುಗಳಿಗೆ ತಗುಲುವ ವೆಚ್ಚ 2.90 ಲಕ್ಷ ಕೋಟಿಯಿಂದ 3.15 ಲಕ್ಷ ಕೋಟಿ ರೂ.ವೆರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ. ಭಾರತೀಯ ವಾಯುಪಡೆಯು ಈ ಹಿಂದೆ 6 ಸ್ಕ್ಯಾಡ್ರನ್ಗಳಿಗೆ ಮಿಗ್ ಯುದ್ಧವಿಮಾನಗಳ ಬದಲು ಮಧ್ಯಮ ಹಾಗೂ ಬಹುಕಾರ್ಯ ಯುದ್ಧವಿಮಾನಗಳನ್ನು (MMRA) ಸೇರ್ಪಡೆ ಮಾಡುವುದಕ್ಕೆ 25 ವರ್ಷಗಳ ಹಿಂದೆ ಪ್ರಕ್ರಿಯೆ ಆರಂಭಿಸಿತ್ತು. ರಾಜಕೀಯ ಜಟಾಪಟಿಯಿಂದಾಗಿ ಇದು ಕಾರ್ಯಗತವಾಗಿರಲಿಲ್ಲ. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ತನ್ನ 10 ವರ್ಷಗಳ ಅಧಿಕಾರಾವಧಿಯಲ್ಲಿ ವಿವಿಧ ಸಾಮರ್ಥ್ಯದ ಯುದ್ಧವಿಮಾನಗಳ ಖರೀದಿಯನ್ನು ಅಂತಿಮಗೊಳಿಸಿರಲಿಲ್ಲ. ಆದರೆ, ಜಾಗತಿಕ ಟೆಂಡರ್ ಮೂಲಕ ರಫೇಲ್ ಯುದ್ಧವಿಮಾನಗಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿತ್ತು. 2015ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಎಂಎಂಆರ್ಸಿಎ ಖರೀದಿಗೆ ಕರೆದಿದ್ದ ಟೆಂಡರ್ಅನ್ನು ರದ್ದು ಮಾಡಿತ್ತು. 2016 ರಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿತ್ತು. ರಫೇಲ್ ಡೀಲ್ ಪ್ರಮುಖ ಅಂಶಗಳು * ಇದು ಭಾರತ ಮತ್ತು ಫ್ರಾನ್ಸ್ ಸರ್ಕಾರಗಳ ನಡುವಿನ ಖರೀದಿ ಒಪ್ಪಂದವಾಗಿದೆ. ಯುದ್ಧವಿಮಾನಗಳ ದರ ಹಾಗೂ ಇತರ ಶಸ್ತ್ರಾಸ್ತ್ರಗಳ ಕುರಿತು ಡಸಾಲ್ಟ್ ಏವಿಯೇಷನ್ ಹಾಗೂ ರಕ್ಷಣಾ ಸಚಿವಾಲಯದ ನಡುವೆ ಮಾತುಕತೆ ನಡೆಯಬೇಕಿದೆ. * ಈ ಖರೀದಿ ಕಾರ್ಯಕ್ರಮದಡಿ ಸುಮಾರು 90 ಯುದ್ಧ ವಿಮಾನಗಳು ಭಾರತದಲ್ಲಿ ತಯಾರಾಗಲಿವೆ, ಉಳಿದ ರಫೇಲ್ ಯುದ್ಧವಿಮಾನಗಳನ್ನು ಹಾಸೊ ಏವಿಯೇಷನ್ ಪೂರೈಕೆ ಮಾಡಲಿದೆ. * 114 ಯುದ್ಧವಿಮಾನಗಳ ಪೈಕಿ 88 ಸಿಂಗಲ್ ಸೀಟರ್ ಹಾಗೂ 26 ಡಬಲ್ ಸೀಟರ್ ಆವೃತ್ತಿಯ ರಫೇಲ್ ಇರಲಿವೆ * ಭಾರತೀಯ ವಾಯುಪಡೆಗೆ ಮಂಜೂರಾದ ಯುದ್ಧವಿಮಾನಗಳ ಸ್ಕ್ಯಾಡ್ರನ್ಗಳ ಸಂಖ್ಯೆ 42. ಈಗ ಅವುಗಳ ಸಂಖ್ಯೆ 31ಕ್ಕೆ ಇಳಿದಿದೆ. ಈ ಸಂದರ್ಭದಲ್ಲಿ ರಫೇಲ್ ಖರೀದಿಗೆ ಮುಂದಾಗಿರುವುದು ಗಮನಾರ್ಹ. ಒಂದು ಸ್ಕ್ಯಾಡ್ರನ್ 16-18 ಯುದ್ಧವಿಮಾನಗಳನ್ನು ಒಳಗೊಂಡಿರುತ್ತದೆ. ಸದ್ಯ ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ ಈಗಾಗಲೇ ಒಟ್ಟು 62 ರಫೇಲ್ ಜೆಟ್ಗಳನ್ನ ಒಳಗೊಂಡಿವೆ. 114 ವಿಮಾನಗಳ ಒಪ್ಪಂದವನ್ನು ಅಂತಿಮಗೊಳಿಸಿದರೆ, ಭಾರತದ ರಫೇಲ್ ಜೆಟ್ಗಳ ಸಂಖ್ಯೆ 176ಕ್ಕೆ ಏರಿಕೆಯಾಗಲಿದೆ. ಭಾರತೀಯ ನೌಕಾಪಡೆಯು ಕಡಲ ಕಾರ್ಯಾಚರಣೆಗಳಿಗಾಗಿ ಹೆಚ್ಚುವರಿಯಾಗಿ 31 ರಫೇಲ್ಗಳನ್ನ ಸ್ವಾಧೀನಪಡಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಇದು ದೇಶದ ಒಟ್ಟು ರಫೇಲ್ ದಾಸ್ತಾನುಗಳ ಸಂಖ್ಯೆ 200 ಕ್ಕಿಂತ ಹೆಚ್ಚಿಸುವ ಸಾಧ್ಯತೆಯಿದೆ.