ಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯದ ಪ್ರಶ್ನೆಪತ್ರಿಕೆ ಸೋರಿಕೆ
ಅಹಮದಾಬಾದ್: ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯು ರಾಷ್ಟ್ರವ್ಯಾಪಿ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ, ಜಾಮ್ನಗರದಲ್ಲಿರುವ ಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯದ ಪ್ರಶ್ನೆಪತ್ರಿಕೆಯು ಸೋರಿಕೆಯಾಗಿದೆ. ಇದರಿಂದ, ರಾಜ್ಯ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗರವಾಗಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷವು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದೆ

ಅಹಮದಾಬಾದ್: ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯು ರಾಷ್ಟ್ರವ್ಯಾಪಿ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ, ಜಾಮ್ನಗರದಲ್ಲಿರುವ ಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯದ ಪ್ರಶ್ನೆಪತ್ರಿಕೆಯು ಸೋರಿಕೆಯಾಗಿದೆ. ಇದರಿಂದ, ರಾಜ್ಯ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗರವಾಗಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷವು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದೆ. ಕಳೆದೊಂದು ದಶಕದಲ್ಲಿ ರಾಜ್ಯದಲ್ಲಿ 34 ಪರೀಕ್ಷಾ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದು, ಭಾರತದ ಎಲ್ಲ ಪ್ರಶ್ನೆಪತ್ರಿಕೆಗಳ ಸೋರಿಕೆಗಳ ಕೇಂದ್ರಬಿಂದುವಾಗಿ ರಾಜ್ಯ ಹೊರಹೊಮ್ಮಿದೆ ಎಂದು ಟೀಕಿಸಿದೆ. ಬಿಎಎಂಎಸ್ನ ಮೂರನೇ ವರ್ಷದ ಶಾಲ್ಯ ತಂತ್ರ–1 (ಶಸ್ತ್ರಚಿಕಿತ್ಸಾ ವಿಧಾನಗಳು) ಪ್ರಶ್ನೆಪತ್ರಿಕೆಯು ಸೋರಿಕೆಯಾಗಿದೆ. ಜುಲೈ 20ರಂದು ರಾಜ್ಯ ಸರ್ಕಾರ ಅನುಮೋದಿತ 26 ಕಾಲೇಜುಗಳಲ್ಲಿ ಪರೀಕ್ಷೆಯೂ ನಡೆದಿದೆ. ಪರೀಕ್ಷೆ ಮುಗಿದ ಗಂಟೆಗಳ ನಂತರ ಪ್ರಶ್ನೆಪತ್ರಿಕೆಯು ಸೋರಿಕೆಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪರೀಕ್ಷೆಗೂ ಮುನ್ನವೇ 12 ಪ್ರಶ್ನೆಗಳ ಪೈಕಿ 11 ಪ್ರಶ್ನೆಗಳು ವಾಟ್ಸ್ಆ್ಯಪ್ನಲ್ಲಿ ಹರಿದಾಡಿದೆ. ಅದೇ ಪ್ರಶ್ನೆಗಳು ಪರೀಕ್ಷೆಯಲ್ಲಿ ಕಾಣಿಸಿಕೊಂಡಿದ್ದರಿಂದ ಸೋರಿಕೆಯಾಗಿರುವುದು ಖಚಿತಪಟ್ಟಿದೆ.‘ನಾವು ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ತನಿಖಾ ಸಮಿತಿ ರಚಿಸಿದ್ದೇವೆ. ಎಲ್ಲ ಆಯಾಮದಲ್ಲಿ ತನಿಖೆ ನಡೆಸಲಾಗುವುದು. ಕೃತ್ಯದಲ್ಲಿ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ಸಿಬ್ಬಂದಿಯ ಕೈವಾಡ ಕಂಡುಬಂದರೆ ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ವಿಶ್ವವಿದ್ಯಾಲಯದ ಕುಲಪತಿ ನರೇಶ್ ಜೈನ್ ತಿಳಿಸಿದ್ದಾರೆ.