ಮೈಸೂರು: ಪೌರಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು ಎಂದು ಆಯೋಗದ ಸದಸ್ಯರ ಸೂಚನೆ
ಮೈಸೂರು: ಪೌರಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆಯಡಿ ನಿಗದಿಪಡಿಸಿದಂತೆ ವೇತನ ನೀಡಬೇಕು. ಅವರ ಆರೋಗ್ಯದ ಹಿತದೃಷ್ಟಿಯಿಂದ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಬೇಕು. ಮಾಸ್ಕ್, ಗ್ಲೌಸ್ ಮೊದಲಾದ ಸುರಕ್ಷಿತಾ ಪರಿಕರಗಳನ್ನು ಒದಗಿಸಬೇಕು ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ ಅಧಿಕಾರಿಗಳಿಗೆ ಸೂ

ಮೈಸೂರು: ಪೌರಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆಯಡಿ ನಿಗದಿಪಡಿಸಿದಂತೆ ವೇತನ ನೀಡಬೇಕು. ಅವರ ಆರೋಗ್ಯದ ಹಿತದೃಷ್ಟಿಯಿಂದ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಬೇಕು. ಮಾಸ್ಕ್, ಗ್ಲೌಸ್ ಮೊದಲಾದ ಸುರಕ್ಷಿತಾ ಪರಿಕರಗಳನ್ನು ಒದಗಿಸಬೇಕು ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ ಅಧಿಕಾರಿಗಳಿಗೆ ಸೂಚಿಸಿದರು.ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪೌರಕಾರ್ಮಿಕರ ಅಹವಾಲಗಳನ್ನು ಆಲಿಸಿ ಅವರು ಮಾತನಾಡಿದರು.ಪೌರಕಾರ್ಮಿಕರ ಸಂಕಷ್ಟಗಳನ್ನು ನಿವಾರಿಸಿ, ಅವರಿಗೆ ಸೌಲಭ್ಯಗಳನ್ನು ದೊರಕಿಸಿಕೊಡಲು ಆಯೋಗವು ಬದ್ಧವಾಗಿದೆ. ಇದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಿದೆ ಎಂದರು.ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಿ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.‘ನಾನೂ ಪೌರಕಾರ್ಮಿಕರ ಮಗ. ಶಿಕ್ಷಣದಿಂದ ಮುಂದೆ ಬಂದಿದ್ದೇನೆ. ನಮಗೆಲ್ಲ ಅವಕಾಶ ದೊರೆಯಲು ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವೇ ಪ್ರಮುಖ ಕಾರಣ. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಮುಂದೆ ಬರಬೇಕು’ ಎಂದು ಹೇಳಿದರು.ಪ್ರತಿ ಬೀದಿಗಳನ್ನೂ ಸ್ವಚ್ಛಗೊಳಿಸಿ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಅವರಿಂದಲೇ ನಾವೆಲ್ಲರೂ ಆರೋಗ್ಯವಾಗಿದ್ದೇವೆ. ಆದ್ದರಿಂದ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಕೆಲಸ ಕೊಡಿಸುವುದಾಗಿ ಮಧ್ಯವರ್ತಿಗಳು ಅಥವಾ ಖಾಸಗಿ ವ್ಯಕ್ತಿಗಳು ಹಣಕ್ಕೆ ಬೇಡಿಕೆ ಇಟ್ಟರೆ, ಆಯೋಗ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬೇಕು. ಕೆಲಸದ ಅಗತ್ಯವಿದ್ದರೆ ನೇರವಾಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸಬೇಕು ಎಂದರು.ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ, ‘ಯಾವುದೇ ಸಿಬ್ಬಂದಿಯನ್ನೂ ಗ್ರಾಮ ಪಂಚಾಯಿತಿ ನೇಮಕ ಮಾಡಿಕೊಳ್ಳಲು ಸರ್ಕಾರದ ನಿರ್ದೇಶನದ ಪ್ರಕಾರ ಅವಕಾಶವಿಲ್ಲ. ಕಾಯಂ ಕೆಲಸ ಕೊಡಿಸುವುದಾಗಿ ವಂಚಕರು ಪೀಡಿಸಿದರೆ ನೇರವಾಗಿ ನಮಗೆ ದೂರು ನೀಡಬೇಕು. ಹಣ ಕೊಟ್ಟು ಮೋಸ ಹೋಗಬಾರದು’ ಎಂದು ಹೇಳಿದರು.ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜನಾರ್ಧನ್, ತಾ.ಪಂ. ಯೋಜನಾಧಿಕಾರಿ ಸುರೇಶ್, ಪಿಡಿಒಗಳು, ಪೌರಕಾರ್ಮಿಕರು ಪಾಲ್ಗೊಂಡಿದ್ದರು.