ಮಂಡ್ಯ: ಕರ್ನಾಟಕ ತತ್ವಪದ ಗಾಯನ ಸಮಾವೇಶ
ಮಂಡ್ಯ: ಲಿಂಗ, ವರ್ಣ, ಜಾತಿ, ಧರ್ಮಗಳ ನಡುವಿನ ತಿಕ್ಕಾಟ ಮತ್ತು ರಾಜಕೀಯ ವಿಪ್ಲವದಿಂದ ಮನುಷ್ಯರ ಮನಸುಗಳು ಒಡೆದ ಸಂದರ್ಭದಲ್ಲಿ ತತ್ವಪದಗಳು ಬೆಳಕು ಕೊಟ್ಟಿವೆ. ಹೊರಗೆಲ್ಲ ಕತ್ತಲು ಆವರಿಸಿದಾಗ, ಅಂತರಂಗದಲ್ಲಿ ಬೆಳಕು ಹೊತ್ತಿಸಿವೆ. ಹೀಗಾಗಿ ತತ್ವಪದಕಾರರನ್ನು ‘ಕತ್ತಲೆ ಲೋಕದ ಅನುಸಂಧಾನಿಗಳು’ ಎನ್ನಬಹುದು ಎಂದು ಸಾಮಾಜಿಕ ಹೋರಾಟಗಾರ್ತಿ, ಲೇಖಕಿ ಮೀನಾಕ್ಷಿ ಬಾಳಿ ಅಭಿಪ್ರಾಯ

ಮಂಡ್ಯ: ಲಿಂಗ, ವರ್ಣ, ಜಾತಿ, ಧರ್ಮಗಳ ನಡುವಿನ ತಿಕ್ಕಾಟ ಮತ್ತು ರಾಜಕೀಯ ವಿಪ್ಲವದಿಂದ ಮನುಷ್ಯರ ಮನಸುಗಳು ಒಡೆದ ಸಂದರ್ಭದಲ್ಲಿ ತತ್ವಪದಗಳು ಬೆಳಕು ಕೊಟ್ಟಿವೆ. ಹೊರಗೆಲ್ಲ ಕತ್ತಲು ಆವರಿಸಿದಾಗ, ಅಂತರಂಗದಲ್ಲಿ ಬೆಳಕು ಹೊತ್ತಿಸಿವೆ. ಹೀಗಾಗಿ ತತ್ವಪದಕಾರರನ್ನು ‘ಕತ್ತಲೆ ಲೋಕದ ಅನುಸಂಧಾನಿಗಳು’ ಎನ್ನಬಹುದು ಎಂದು ಸಾಮಾಜಿಕ ಹೋರಾಟಗಾರ್ತಿ, ಲೇಖಕಿ ಮೀನಾಕ್ಷಿ ಬಾಳಿ ಅಭಿಪ್ರಾಯಪಟ್ಟರು. ಮಂಡ್ಯ ತಾಲ್ಲೂಕಿನ ಕೊಮ್ಮೇರಹಳ್ಳಿಯ ವಿಶ್ವಮಾನವ ಕ್ಷೇತ್ರದ ಬಿಜಿಎಸ್ ಸಂಸ್ಥೆಯ ಕುವೆಂಪು ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಮಂಡ್ಯದ ಕರ್ನಾಟಕ ಸಂಘದ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ‘ಕರ್ನಾಟಕ ತತ್ವಪದ ಗಾಯನ ಸಮಾವೇಶ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 17, 18 ಮತ್ತು 19ನೇ ಶತಮಾನದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ತತ್ವಪದ ಪ್ರಕಾರವನ್ನು ಸಾಹಿತ್ಯ ಚರಿತ್ರೆಕಾರರು ಗುರುತಿಸಲೇ ಇಲ್ಲ. ‘ಭಜನೆ ಮಾಡುವ ಬಾಯಿಗಳಿಗಿಂತ, ವಿಚಾರ ಮಾಡುವ ತಲೆಗಳು ನಮಗೀಗ ಬೇಕು’ ಎಂದು ವೈಚಾರಿಕತೆ ಎತ್ತಿ ಹಿಡಿಯುವ ಭರದಲ್ಲಿ ವಿಚಾರವಾದಿಗಳು ಕೂಡ ಈ ಪರಂಪರೆಯನ್ನು ಕಡೆಗಣಿಸಿದರು. ಅಕ್ಷರ ದಕ್ಕಿಸಿಕೊಂಡ ಹೊಸ ಪೀಳಿಗೆ ಭಜನಾ ಗೋಷ್ಠಿಗಳನ್ನು ಕೆಲಸಕ್ಕೆ ಬಾರದ ಮೈಗಳ್ಳರ ಕೂಟ ಎಂದು ಅವಜ್ಞೆ ಮಾಡಿದರು. ಇದರ ಪರಿಣಾಮ ತತ್ವಪದಗಳನ್ನು ಸಕಾಲದಲ್ಲಿ ಸಂಗ್ರಹಿಸಿ, ಉಳಿಸಿಕೊಳ್ಳುವ ಕೆಲಸವಾಗಲಿಲ್ಲ ಎಂದು ವಿಷಾದಿಸಿದರು. ತತ್ವಪದಕಾರರ ನಡೆ–ನುಡಿ ಒಂದೇ ಆಗಿತ್ತು. ಹಗಲೆಲ್ಲ ದುಡಿದು, ಕೂಲಿ ಮಾಡಿ ರಾತ್ರಿ ವೇಳೆ ಪಾಳು ದೇವಾಲಯ, ಜಗಲಿ ಕಟ್ಟೆ, ಊರ ಮುಂದಿನ ಬಯಲಲ್ಲಿ ಹಾಡುತ್ತಿದ್ದರು. ಇವರು ಶಿಷ್ಟ ಲೋಕದಿಂದ ಹೊರಗೇ ಉಳಿದರು. ಹೊನ್ನಿನ ಹರಿವಾಣ, ಚಿನ್ನದ ಕಡಗಕ್ಕಾಗಿ ಇವರು ಹಾಡಲಿಲ್ಲ. ಮಾಸಾಶನ, ಸಂಭಾವನೆಗಾಗಿ ಹಪಹಪಿಸಲಿಲ್ಲ. ಇದು ಕಾಯಕ ಮೂಲದಿಂದ ಬಂದ ಸಾಹಿತ್ಯವಾಗಿದೆ. ಹಲವಾರು ಗುರುಪಂಥಗಳಿದ್ದು, ಇವುಗಳ ಬಗ್ಗೆ ಹೆಚ್ಚು ಅಧ್ಯಯನ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು. 50 ಸಂಪುಟ ಪ್ರಕಟಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಮಾತನಾಡಿ, ‘ತತ್ವಪದ ಕುರಿತು 50 ಸಂಪುಟಗಳು ಈಗಾಗಲೇ ಹೊರಬಂದಿವೆ. ಬಿಟ್ಟುಹೋದ ತತ್ವಪದಗಳ ಸಂಗ್ರಹ ಸಂಪುಟ ಹೊರತರುವ ಕೆಲಸವೂ ನಡೆಯುತ್ತಿದೆ. ಈ ಸಂಪುಟಗಳು ಹೊರಬಂದ ನಂತರ ತತ್ವಪದ ಕುರಿತು ಪಿಎಚ್ಡಿಗಳು ಹೆಚ್ಚಾಗಿವೆ. ಸಂಶೋಧನೆ ಆರಂಭವಾಗಿವೆ’ ಎಂದು ತಿಳಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ತತ್ವಪದಗಳು ನೀತಿ ಹೇಳುತ್ತವೆ. ಆತ್ಮ–ಪರಮಾತ್ಮ ನಡುವಿನ ಸಂಬಂಧ ತಿಳಿಸುತ್ತವೆ. ಗುರು ಮುಖೇನ ಭಗವಂತನನ್ನು ಕಾಣುವ ಪರಂಪರೆಯಾಗಿವೆ. ಶ್ರಮಿಕ ವರ್ಗಕ್ಕೆ ಸೇರಿದ ಈ ತತ್ವಪದಕಾರರಿಗೆ ತರಬೇತಿ ನೀಡಿ, ವೇದಿಕೆ ಕಲ್ಪಿಸುವ ಕೆಲಸವನ್ನು ಕರ್ನಾಟಕ ಸಂಘ ಮಾಡುತ್ತಿದೆ. ಪ್ರತಿ ಜಿಲ್ಲೆಯಲ್ಲೂ ರಂಗಮಂದಿರ ಮತ್ತು ಕಲಾವಿದರ ವಾಸ್ತವ್ಯಕ್ಕೆ ಕೊಠಡಿ ವ್ಯವಸ್ಥೆ ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ವೇದಿಕೆಯಲ್ಲಿದ್ದ ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರಲ್ಲಿ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ಸಮಾವೇಶದ ಸಂಚಾಲಕಿ ಎಂ.ಕೆಂಪಮ್ಮ, ಸದಸ್ಯ ಸಂಚಾಲಕ ಚಕ್ಕೆರೆ ಶಿವಶಂಕರ್, ಕರ್ನಾಟಕ ಸಂಘದ ಪದಾಧಿಕಾರಿಗಳು, ತತ್ವಪದಕಾರರು ಭಾಗವಹಿಸಿದ್ದರು. ಭವಾನಿ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು. ‘21 ಜಾನಪದ ಮಹಾಕಾವ್ಯ ಸೃಷ್ಟಿ’ ‘ವಚನ ಸಾಹಿತ್ಯ, ದಾಸ ಸಾಹಿತ್ಯ ಬಂದ ನಂತರ 16ರಿಂದ 19ನೇ ಶತಮಾನದಲ್ಲಿ ಯಾವುದೇ ಸಾಹಿತ್ಯ ಪ್ರಕಾರ ಮೇಳೈಸಲಿಲ್ಲ ಎಂಬ ಕಾರಣದಿಂದ ಇದನ್ನು ‘ಕತ್ತಲ ಯುಗ’ ಎಂದು ಸಾಹಿತ್ಯ ಚರಿತ್ರೆಕಾರರು ಕರೆದರು. ಆದರೆ, ಈ ಯುಗದಲ್ಲಿ ಮಂಟೆಸ್ವಾಮಿ, ಮಲೆ ಮಹದೇಶ್ವರ, ಮೈಲಾರಲಿಂಗ, ಯಲ್ಲಮ್ಮನ ಕುರಿತು ಕಾವ್ಯ ಸೃಷ್ಟಿಯಾಗಿವೆ. ಒಟ್ಟಾರೆ 21 ಜಾನಪದ ಮಹಾಕಾವ್ಯಗಳು ಸಿಕ್ಕಿವೆ. ಇವು ಜನಸಾಮಾನ್ಯರ ಚರಿತ್ರೆಯನ್ನು ಕಟ್ಟಿಕೊಟ್ಟಿವೆ’ ಎಂದು ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಹೇಳಿದರು. ‘ಈ ಯುಗದಲ್ಲೇ ತತ್ವಪದ ಪ್ರಕಾರ ಕಾಣಿಸಿಕೊಂಡಿದೆ. ಆದರೆ, ಪಂಡಿತರು ಇದನ್ನು ಕಡೆಗಣ್ಣಿನಿಂದ ನೋಡಿದರು. ಇಂದು ಅಕ್ಷರ ಎಂಬುದು ಅಹಂಕಾರವಾಗಿದೆ. ಅನಕ್ಷರಸ್ಥರ ಸಾಹಿತ್ಯವನ್ನು ಕಡೆಗಣಿಸಲಾಗಿದೆ. ವಿದ್ಯೆಯ ಜತೆಗೆ ವಿನಯವಂತಿಕೆ ಇಲ್ಲದಂತಾಗಿದೆ. ತತ್ವಪದಕಾರರ ಮೂಲ ಉದ್ದೇಶ ಜನಸಾಮಾನ್ಯರ ಬದುಕು ಹಸನು ಮಾಡುವುದಾಗಿದೆ’ ಎಂದು ತಿಳಿಸಿದರು. ಅನುರಣಿಸಿದ ತತ್ವಪದಗಳು ‘ಮೂಳೆ ಮಾಂಸದ ದೇಹಕೆ, ಚಿನ್ನದ ಲೇಪನ ಏತಕೆ..’, ‘ರೂಪ–ನಾಮ ಇಲ್ಲದ ಸ್ವಾಮಿಯ ಪೂಜೆಯ ಮಾಡಮಮ್ಮ..’, ‘ಎಲ್ಲಿಂದ ನೀ ಬಂದೆ, ಇಲ್ಲಿಂದ ಏನೋಯ್ದೆ ಮನುಜ..’, ‘ಹಕ್ಕಿ ಗೂಡು ಬಿಟ್ಟ ಮೇಲೆ ಗೂಡಿಗೇನು ಬೆಲೆ ಇದೆ..’ ಮುಂತಾದ ತತ್ವಪದಗಳು ಕೊಮ್ಮೇರಹಳ್ಳಿ ಮಠದ ಆವರಣದ ಸಭಾಂಗಣದಲ್ಲಿ ಅನುರಣಿಸಿದವು. ತತ್ವಪದಗಳ ರಾಗಕ್ಕೆ ಏಕತಾರಿ, ದಮ್ಮಡಿ, ಚಿಟಕ ತಾಳ, ಕಂಚಿನ ತಾಳದ ಸದ್ದುಗಳು ಒಗ್ಗೂಡಿ ಪ್ರೇಕ್ಷಕರಿಗೆ ಮುದ ನೀಡಿದವು. ಆಯ್ದ 11 ತಂಡಗಳ ತತ್ವಪದಕಾರರು ಬೆಳಿಗ್ಗೆಯಿಂದ ಸಂಜೆವರೆಗೆ ನಿರಂತರವಾಗಿ ಹಾಡಿ, ಆಧ್ಯಾತ್ಮಿಕ ಸಿಂಚನವನ್ನು ಸಿಂಪಡಿಸಿದರು.