ಕಾಡುವ ಕಥೆಗಳು: ಒಂದೇ ದಿನ ಕಡಿಮೆ ವಾಡಿಕೆ ಮಳೆ ಬಂದರೂ ಕೃಷಿಕರ ಅದೃಷ್ಟ ಬದಲು !
ಒಮ್ಮೆ ಚಿತ್ರದುರ್ಗ ಚಳ್ಳಕೆರೆಯ ಕೃಷಿ ಭೂಮಿ ಸುತ್ತಾಡುತ್ತಿದ್ದೆ. ಬಿಳಿ ಮಣ್ಣಿನ ಹೊಲದಲ್ಲಿ ತೊಗರಿ ಬೆಳೆದ ಮೀರ್ ಸಾಬಿ ಹಳ್ಳಿಯ ಕೃಷಿಕರೊಬ್ಬರು ತಮಗೆ 20 ಮಿಲಿ ಮೀಟರ್ ಮಳೆ ಸುರಿದರೆ ₹8 ಲಕ್ಷ ಸಿಗುತ್ತದೆಂದು ಲೆಕ್ಕ ಹೇಳಿದ್ದರು. ಅವರ ಹತ್ತು ಹದಿನೈದು ಎಕರೆ ಭೂಮಿಯ ತೊಗರಿ ಗಿಡ ಹೂ ಅರಳುತ್ತಾ ಕಾಯಿ ಕಚ್ಚುವ ಹಂತದಲ್ಲಿತ್ತು. ಒಂದೇ ಒಂದು ದಿನ ಇಷ್ಟು ಕಡಿಮೆ ಮಳೆ ಬಂದರೂ

ಒಮ್ಮೆ ಚಿತ್ರದುರ್ಗ ಚಳ್ಳಕೆರೆಯ ಕೃಷಿ ಭೂಮಿ ಸುತ್ತಾಡುತ್ತಿದ್ದೆ. ಬಿಳಿ ಮಣ್ಣಿನ ಹೊಲದಲ್ಲಿ ತೊಗರಿ ಬೆಳೆದ ಮೀರ್ ಸಾಬಿ ಹಳ್ಳಿಯ ಕೃಷಿಕರೊಬ್ಬರು ತಮಗೆ 20 ಮಿಲಿ ಮೀಟರ್ ಮಳೆ ಸುರಿದರೆ ₹8 ಲಕ್ಷ ಸಿಗುತ್ತದೆಂದು ಲೆಕ್ಕ ಹೇಳಿದ್ದರು. ಅವರ ಹತ್ತು ಹದಿನೈದು ಎಕರೆ ಭೂಮಿಯ ತೊಗರಿ ಗಿಡ ಹೂ ಅರಳುತ್ತಾ ಕಾಯಿ ಕಚ್ಚುವ ಹಂತದಲ್ಲಿತ್ತು. ಒಂದೇ ಒಂದು ದಿನ ಇಷ್ಟು ಕಡಿಮೆ ಮಳೆ ಬಂದರೂ ಕೃಷಿಕರ ಅದೃಷ್ಟ ಬದಲಾಗುತ್ತದೆ. ಅಲ್ಲಿನ ಮಣ್ಣು ಬೆಳೆ ಗೆಲ್ಲಿಸುತ್ತದೆ.ಈಗ ಹುಬ್ಬಳ್ಳಿ, ಕೊಪ್ಪಳ, ಬಾದಾಮಿ, ಗದಗ ಯಾವುದೇ ಕಡೆ ಹೋದರೂ ಹೆಸರು ಗಿಡ ಹೊಲದಲ್ಲಿದೆ. ಎರೆ ಸೀಮೆಯ ಇಲ್ಲಿ ಹತ್ತು ಹದಿನೈದು ಮಿಲಿ ಮೀಟರ್ ಮಳೆ ಬಂದರೆ ಹೆಸರು ಕಾಳಿನ ಗಾತ್ರ ದೊಡ್ಡದಾಗುತ್ತದೆ, ಬೆಳೆ ಗೆಲ್ಲುತ್ತದೆ. ಗೋವಿನ ಜೋಳದ ಕ್ಷೇತ್ರದಲ್ಲಿ ಮಳೆ ಸಿಂಪರಣೆ ಮಾತ್ರ ಸಾಲುವುದಿಲ್ಲ, ಹೊಲದ ಮಣ್ಣಿನ ಮೇಲೆ ನೀರು ಹರಿದು ಭೂಮಿ ತುಸು ಗಟ್ಟಿಯಾದರೆ ಮಾತ್ರ ಜೋಳದ ಕಾಳು ಗಟ್ಟಿಯಾಗುತ್ತವೆ. ಮಳೆ ಹನಿಯ ಸ್ವರೂಪ ಅನುಭವಿಸಿ ತಮ್ಮ ಬೆಳೆ ಬೆಳೆಯುವ ಲಕ್ಷಣ ಅರ್ಥಮಾಡಿಕೊಂಡವರು ನಮ್ಮ ಕೃಷಿಕರು. ಇವರಿಗೆ ಮಳೆ ಬಂತು ಎನ್ನುವುದಕ್ಕಿಂತ ಹೇಗೆ ಬಂತು ಎಂಬುದು ಮುಖ್ಯವಾಗುತ್ತದೆ. ಹೀಗಾಗಿಯೇ ಎಲ್ಲರಿಗೂ ಅರ್ಥವಾಗುವಂತೆ ನವಿಲು ಮಳೆ, ಕಪ್ಪೆ ಮಳೆ ಎಂದು ಪ್ರಾಣಿ ಹೆಸರಿನ ಮೂಲಕವೂ ಜನಪದರು ಮಳೆ ಜ್ಞಾನ ಹಿಡಿದು ಕೊಟ್ಟಿದ್ದಾರೆ.ಸರಕಾರ ವಾಡಿಕೆ ಮಳೆ ಬಗ್ಗೆ ಯಾವಾಗಲೂ ಹೇಳುತ್ತದೆ.ಕಲಬುರ್ಗಿಯಲ್ಲಿ ವಾಡಿಕೆಯ 770 ಮಿಲಿ ಮೀಟರ್, ಮಂಡ್ಯದಲ್ಲಿ 699 ಮಿಲಿ ಮೀಟರ್ ಇಲ್ಲವೇ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3975 ಮಿಲಿ ಮೀಟರ್ ಮಳೆ ಬಂದರೆ ಬರಗಾಲ ಇಲ್ಲ, ಜಲಕ್ಷಾಮ ಇಲ್ಲ ಎಂದು ನಿರ್ಧರಿಸಲಾಗುತ್ತದೆ. ನಮ್ಮ ಕೃಷಿಕರು ಮುಂಗಾರು, ಹಿಂಗಾರು ಮಳೆ ನಂಬಿ ಪರಂಪರೆಯಿಂದ ಕೃಷಿ ಮಾಡಿದವರು. ಈಗ ಬದಲಾದ ಹವಾಮಾನ ಕೃಷಿ ಬದುಕಿನ ಲೆಕ್ಕವನ್ನು ತಲೆಕೆಳಗಾಗಿಸುತ್ತಿದೆ. ವಾಡಿಕೆ ಎಷ್ಟು ಮಳೆ ಬಂತು ಎಂಬ ವಾರ್ಷಿಕ ಲೆಕ್ಕಕ್ಕಿಂತ ಬಂದ ಮಳೆ ಹೇಗೆ ಸುರಿಯಿತು ಎಂಬುದು ಮುಖ್ಯ. ಉದಾಹರಣೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ವಾರ್ಷಿಕ ಸರಾಸರಿ ಮಳೆ 2500ಮಿಲಿ ಮೀಟರ್ ಆಗಿದೆ. ಜೂನ್ ಜುಲೈ ಆಗಸ್ಟ್ ತಿಂಗಳಲ್ಲಿ ಈ ಸರಾಸರಿ ಮಳೆಯ ಬಹುತೇಕ ಪ್ರಮಾಣ ಸುರಿಯುತ್ತದೆ. ಇಲ್ಲಿ ವಾಡಿಕೆ ಲೆಕ್ಕದಲ್ಲಿ ಮಳೆ ಬಂದರೆ ಅದರಿಂದ ಕೃಷಿಕರಿಗೆ ಲಾಭವಿಲ್ಲ, ಕೆಲವೊಮ್ಮೆ ಒಂದೇ ದಿನ 150ಮಿಲಿ ಮೀಟರ್ ಸುರಿದು ಪ್ರವಾಹವಾಗಿ ಓಡುತ್ತದೆ, ಮಳೆ ಲೆಕ್ಕಕ್ಕೆ ಇದು ಸೇರ್ಪಡೆಯಾಗುತ್ತದೆ. ಬದಲಾಗಿ ಸುರಿದ ಮಳೆ ಜೂನ್ ತಿಂಗಳಿಂದ ಅಕ್ಟೋಬರ್ ತಿಂಗಳ ತನಕ ಹಂಚಿಕೆ ಆದ ವರ್ಷ ಬೇಸಿಗೆ ಜಲಕ್ಷಾಮದ ತೀವ್ರತೆ ಕಡಿಮೆ ಇರುತ್ತದೆ.2001 ರಲ್ಲಿ ಶಿರಸಿಯಲ್ಲಿ ಅತ್ಯಂತ ಕಡಿಮೆ ಮಳೆ ಸುರಿಯಿತು, ಆದರೆ ಆ ವರ್ಷ ಸುರಿದ ಮಳೆ ಅಕ್ಟೋಬರ್ ತಿಂಗಳಿನಲ್ಲಿ ಸಹ ಬಂದಿದ್ದರಿಂದ ನೀರಿನ ಸಮಸ್ಯೆ ಆಗಲಿಲ್ಲ.ನಮ್ಮ ಬಯಲು ಸೀಮೆಯ ಪ್ರದೇಶ ಬಹುತೇಕ ಸಂದರ್ಭಗಳಲ್ಲಿ ಮಳೆ ಕೊರತೆ ಅನುಭವಿಸುತ್ತದೆ. ದಿನದ 24 ಗಂಟೆಯ ಸಮಯದಲ್ಲಿ 2.5ಮಿಲಿ ಮೀಟರ್ ಗಿಂತ ಹೆಚ್ಚು ಮಳೆ ಸುರಿದರೆ ಅದು ಮಳೆ ದಿನವೆಂದು ದಾಖಲಾಗುತ್ತದೆ. ಬಯಲು ಸೀಮೆಯ ಪ್ರದೇಶದಲ್ಲಿ ವರ್ಷದಲ್ಲಿ 40-60 ಮಳೆ ದಿನಗಳಿವೆ. ಇಲ್ಲಿ ಅಬ್ಬಬ್ಬಾ ಎಂದರೆ 750 ಮಿಲಿ ಮೀಟರ್ ಮಳೆ ಬರುತ್ತದೆ. ಕೊಪ್ಪಳ, ಗದಗ ಪ್ರದೇಶಗಳು 500-6 00ಮಿಲಿ ಮೀಟರ್ ಬಂದರೆ ಹೆಚ್ಚು! ನಮ್ಮ ರಾಜ್ಯದ ಶೇಕಡಾ 70ರಷ್ಟು ಪ್ರದೇಶಕ್ಕೆ ದೊರೆಯುವ ಮಳೆ ಇಷ್ಟು ಮಾತ್ರ.ರಾಜ್ಯದ ವಾರ್ಷಿಕ ಸರಾಸರಿ ಮಳೆ 1153ಮಿಲಿ ಮೀಟರ್ ಇದೆ. ಇಲ್ಲಿ ಮಳೆ ಹನಿಯ ಲೆಕ್ಕ ಅರ್ಥವಾದರೆ ನೀರು ಸಂರಕ್ಷಣೆ ಏಕೆ ಮುಖ್ಯ ಎಂಬುದು ಗೊತ್ತಾಗುತ್ತದೆ. ಒಂದು ಹೆಕ್ಟೇರ್ ಜಾಗದಲ್ಲಿ 500ಮಿಲಿ ಮೀಟರ್ ಮಳೆ ಸುರಿದರೆ ಅಲ್ಲಿ 40,48, 000 ಲೀಟರ್ ಮಳೆ ನೀರು ಬಿದ್ದಿದೆಯೆಂದು ಅರ್ಥ! ನಮ್ಮ ರಾಜ್ಯದ ಸರಾಸರಿ ಮಳೆ ಲೆಕ್ಕದಲ್ಲಿ ಹೆಕ್ಟೇರ್ ಜಾಗದಲ್ಲಿ ಕನಿಷ್ಠ 80ಲಕ್ಷ ಲೀಟರ್ ಮಳೆ ನೀರು ಸಿಗುತ್ತದೆ. ಸುರಿದ ಮಳೆಯಲ್ಲಿ ಶೇಕಡಾ 10-15 ಪ್ರಮಾಣ ಭೂಮಿಗೆ ಇಂಗಿದರೆ ಉಳಿದ ನೀರು ತಗ್ಗಿನ ಪ್ರದೇಶದತ್ತ ಹರಿದು ಪ್ರವಾಹವಾಗಿ ಓಡುತ್ತದೆ. ಅಣೆಕಟ್ಟೆ, ಕೆರೆಗಳಲ್ಲಿ ಮಳೆ ನೀರು ಸಂಗ್ರಹಿಸಿ ಕೃಷಿ, ಕುಡಿಯುವ ನೀರು, ಉದ್ಯಮಗಳಿಗೆ ಬಳಸುವ ಪ್ರಯತ್ನಗಳು ನಮಗೆ ಗೊತ್ತೇ ಇದೆ. ಆದರೆ ಅಣೆಕಟ್ಟೆಯ ಕೇಂದ್ರೀಕೃತ ವ್ಯವಸ್ಥೆಯನ್ನು ಅತಿಯಾಗಿ ನಂಬಿಕೊಂಡು ಅತ್ಯುತ್ತಮ ಕೆರೆ ನೀರಾವರಿ ವಿಕೇಂದ್ರೀಕೃತ ವ್ಯವಸ್ಥೆಯನ್ನು ಮರೆತಿದ್ದೇವೆ. ಪ್ರತೀ ಹೊಲದಲ್ಲಿ ಬಿದ್ದ ಮಳೆ ನೀರನ್ನು ಕೃಷಿ ಬೆಳೆಗೆ ತೊಂದರೆ ಆಗದಂತೆ ಸಂರಕ್ಷಿಸುವ ತಂತ್ರ ಅಳವಡಿಸಿಕೊಂಡಿಲ್ಲ. ಆದರೆ ರಾಜ್ಯದ ಎಲ್ಲಾ ಕೃಷಿ ಭೂಮಿಗೆ ನೀರು ಒದಗಿಸಲು ಅಸಾಧ್ಯವೆಂಬುದು ಸರಕಾರಕ್ಕೆ ಗೊತ್ತಿದೆ. ಇರುವ ನೀರನ್ನು ಸಮರ್ಥವಾಗಿ ಬಳಸಲು ಯೋಜಿಸುವುದು ಮರೆತು ಖಾಲಿ ಪೈಪ್ ಯೋಜನೆ ಮುಂದಿಟ್ಟು ಸಾವಿರ ಕೋಟಿ ಬಜೆಟ್ ಮೆರೆಯುತ್ತಿದೆ.ರಾಜ್ಯದಾದ್ಯಂತ ನೂರಾರು ಕೆರೆಗಳಿಗೆ ನೀರು ತುಂಬಿಸುವ ವಿವಿಧ ಯೋಜನೆಗಳಿಗೆ ಸುಮಾರು ₹40,000 ಕೋಟಿಗಳಿಗೂ ಅಧಿಕ ಹಣ ಕಳೆದ ಹತ್ತು ವರ್ಷಗಳಲ್ಲಿ ತೊಡಗಿಸಲಾಗಿದೆ. ಏತ ನೀರಾವರಿ ಹಾಗೂ ಪಂಪಿಂಗ್ ವ್ಯವಸ್ಥೆಗಳನ್ನು ಹೊಂದಿದ ಈ ಯೋಜನೆ ಹಣ ಕೃಷಿಗೆ ಲಾಭವಾಗಿದ್ದಕ್ಕಿಂತ ಹಳ್ಳ ಹಿಡಿದಿದ್ದೇ ಹೆಚ್ಚು! ದೊಡ್ಡ ದೊಡ್ಡ ನದಿ, ಸಣ್ಣ ಪುಟ್ಟ ಹಳ್ಳಗಳಲ್ಲಿ ಇಂಥ ವಿಫಲ ಯೋಜನೆಗಳ ಕುರುಹು ನೋಡಬಹುದು. ವಿಚಿತ್ರ ನೋಡಿ ರಾಜ್ಯದಲ್ಲಿ 39, 173 ಕೆರೆಗಳಿವೆ, ಈ ಕೆರೆಗಳನ್ನು ಹೂಳು ತುಂಬಲು ಬಿಟ್ಟು ಇಷ್ಟು ಸಾವಿರ ಕೋಟಿ ಪೈಪ್ ಲೈನ್ ಹಾಕುವುದಕ್ಕೆ ಹೋಗಿದೆ. ಹಣ ಹಾಳಾಗಿದ್ದು, ಯೋಜನೆಗಳು ಸೋತಿದ್ದಕ್ಕೆ ಯಾರಿಗೂ ಸ್ವಲ್ಪವೂ ಬೇಸರ ಇಲ್ಲ! ಈ ವರ್ಷ ಬರಗಾಲಕ್ಕೆ ಇನ್ನಷ್ಟು ಯೋಜನೆ ಬರಬಹುದು. ಕಟ್ಟಕಡೆಗೂ ನಮ್ಮ ಕೃಷಿಕರು ಮಾತ್ರ ಬೀಜ ಬಿತ್ತನೆ ಮಾಡಿ ಕೊನೆಗೆ ಹದಿನೈದು ಮಿಲಿ ಮೀಟರ್ ಮಳೆಯಲ್ಲಿ ತಮ್ಮ ಬೆಳೆ ಅದೃಷ್ಟ ಪರೀಕ್ಷೆಯಲ್ಲಿಯೇ ಬದುಕಬೇಕು.( ಲೇಖಕರು: ಕೃಷಿ, ಪರಿಸರ ತಜ್ಞರು)