ಕಲ್ಯಾಣ ಕರ್ನಾಟಕವನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲು ಒತ್ತಾಯಿಸಿ ಪ್ರತಿಭಟನೆ
ಕಲಬುರಗಿ: ಕಲ್ಯಾಣ ಕರ್ನಾಟಕವನ್ನು ಬರ ಪೀಡಿತ ಪ್ರದೇಶವಾಗಿ ಘೋಷಿಸುವಂತೆ ಒತ್ತಾಯಿಸಿ ವಿವಿಧ ರಾಜಕೀಯ ಪಕ್ಷಗಳು ಸೋಮವಾರ ಪ್ರತಿಭಟನೆ ನಡೆಸಿದವು.ನಗರದ ಐವಾನ್-ಎ-ಶಾಹಿ ರಸ್ತೆಯ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಘಟಕದಿಂದ ಧರಣಿ ನಡೆಸಲಾಯಿತು.'ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಹೆಸರು, ಉದ್ದು, ತೊಗರಿ ಸೇರಿದಂತೆ ಎಲ್ಲ

ಕಲಬುರಗಿ: ಕಲ್ಯಾಣ ಕರ್ನಾಟಕವನ್ನು ಬರ ಪೀಡಿತ ಪ್ರದೇಶವಾಗಿ ಘೋಷಿಸುವಂತೆ ಒತ್ತಾಯಿಸಿ ವಿವಿಧ ರಾಜಕೀಯ ಪಕ್ಷಗಳು ಸೋಮವಾರ ಪ್ರತಿಭಟನೆ ನಡೆಸಿದವು.ನಗರದ ಐವಾನ್-ಎ-ಶಾಹಿ ರಸ್ತೆಯ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಘಟಕದಿಂದ ಧರಣಿ ನಡೆಸಲಾಯಿತು.'ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಹೆಸರು, ಉದ್ದು, ತೊಗರಿ ಸೇರಿದಂತೆ ಎಲ್ಲ ಬೆಳೆಗಳು ಕೈಕೊಟ್ಟಿವೆ. ಕೂಡಲೇ ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕು ಹಾಗೂ ಬರ ಪರಿಹಾರ ಕಾಮಗಾರಿಗಳನ್ನು ಆಂಭಿಸಬೇಕು' ಎಂದು ಆಗ್ರಹಿಸಿದರು.'ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಹಲವರು ರೈತರು ಮನನೊಂದು ಹಾಗೂ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಮನ್ನಾ ಮಾಡಬೇಕು. ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ವಿತರಿಸಬೇಕು. ದನ-ಕರುಗಳ ರಕ್ಷಣೆಗಾಗಿ ಗೋಶಾಲೆ ಆರಂಭಿಸಬೇಕು. ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಬೇಕು' ಎಂದು ಒತ್ತಾಯಿಸಿದರು. 'ಜಿಲ್ಲೆಯ ಜೀವನದಿಯಾದ ಭೀಮೆಯಲ್ಲಿ ಇನ್ನೂ ಹೊಸ ನೀರು ಹರಿದಿಲ್ಲ. ಕೂಡಲೇ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಬಚಾವತ್ ಆಯೋಗದ ಪ್ರಕಾರ ಭೀಮಾನದಿಗೆ 15 ಟಿಎಂಸಿ ಅಡಿ ನೀರು ಹರಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.'ಉತ್ತಮ ಮಳೆ ಪಡೆಯಲು ಮೋಡ ಬಿತ್ತನೆ ನಡೆಸಬೇಕು. ಮರು ಬಿತ್ತನೆಗೆ ಬೀಜ ಮತ್ತು ರಸಗೊಬ್ಬರ ಉಚಿತವಾಗಿ ನೀಡಬೇಕು' ಎಂದು ಪ್ರತಿಭಟನಕಾರರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಪಕ್ಷದ ದಕ್ಷಿಣ ಭಾರತ ಪ್ರಧಾನ ಕಾರ್ಯದರ್ಶಿ ಎ.ಬಿ.ಹೊಸಮನಿ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬಾವಿಕಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಮಾಲೆ, ಮುಖಂಡರಾದ ದಿನೇಶ ಔರಾದಕರ್, ಭೀಮಾಶಂಕರ ಕಟ್ಟಿಸಂಗಾವಿ, ಮಲ್ಲೇಶಿ ಹೊನಗುಂಟಿಕರ ಸೇರಿದಂತೆ ಹಲವರು ಧರಣಿಯಲ್ಲಿ ಪಾಲ್ಗೊಂಡಿದ್ದರು. 'ಸಮಗ್ರ ಸಾಲ ನೀತಿ ಜಾರಿಗೆ ತನ್ನಿ'ಕಲಬುರಗಿ: ಜಿಲ್ಲೆಯನ್ನು ಬರ ಪೀಡಿತವೆಂದು ಘೋಷಿಸುವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ವಪಕ್ಷದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.ಜಿಲ್ಲೆಯಲ್ಲಿ ಬರದ ಸನ್ನಿವೇಶವಿದ್ದು, ರೈತರು, ಬಡವರು, ಕೃಷಿ ಕೂಲಿಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗಾಗಿ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದರು.'ಜಿಲ್ಲೆಯನ್ನು ಬರಪೀಡಿತ ಪ್ರದೇಶವಾಗಿ ಘೋಷಿಸಬೇಕು. ಕೂಡಲೇ ಬರ ಪರಿಹಾರ ಕಾಮಗಾರಿ ಆರಂಭಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ತಕ್ಷಣವೇ ಉದ್ಯೋಗ ಖಾತ್ರಿ ಕೆಲಸ ಆರಂಭಿಸಬೇಕು.ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಅನ್ನದಾತ ಸಮಗ್ರ ಅಭಿವೃದ್ಧಿಗಾಗಿ ಸಮಗ್ರ ಕೃಷಿ ನೀತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ, ರಾಜ್ಯ ಮಂಡಳಿ ಸದಸ್ಯ ಸಿದ್ದಪ್ಪ ಪಾಲ್ಕಿ, ಸಹ ಕಾರ್ಯದರ್ಶಿ ಪ್ರಭುದೇವ ಯಳಸಂಗಿ, ಪದ್ಮಾವತಿ ಪಾಟೀಲ, ಭೀಮಶಂಕರ ಮಾಡಿಯಾಳ, ಎಚ್.ಎಸ್.ಪತಕಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.