ನಾಡಿಗೆ ಕನ್ನಡ ಶಿಕ್ಷಕರು ಬೇಡವೆ?
ಬರಗೂರು ರಾಮಚಂದ್ರಪ್ಪಕರ್ನಾಟಕದ ಕೆಲವು ವರ್ಷಗಳ ಶೈಕ್ಷಣಿಕ ವಿದ್ಯಮಾನಗಳನ್ನು ಗಮನಿಸಿದಾಗ, ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ: ಶಿಕ್ಷಣ ಇಲಾಖೆಯು ಶೈಕ್ಷಣಿಕ ತಾತ್ತ್ವಿಕತೆಯನ್ನು ತುಳಿದು ನೌಕರಶಾಹಿ ನಿಲುವುಗಳ ನಡೆ-ನುಡಿಯ ಕೀರ್ತಿ ಕಿರೀಟವನ್ನು ಧರಿಸಿದೆ. ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯನ್ನೇ ಗಮನಿಸಿ; ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಿರಾಕರಿಸಿ ರಾಜ್ಯ ಶಿಕ್ಷಣ

ಬರಗೂರು ರಾಮಚಂದ್ರಪ್ಪಕರ್ನಾಟಕದ ಕೆಲವು ವರ್ಷಗಳ ಶೈಕ್ಷಣಿಕ ವಿದ್ಯಮಾನಗಳನ್ನು ಗಮನಿಸಿದಾಗ, ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ: ಶಿಕ್ಷಣ ಇಲಾಖೆಯು ಶೈಕ್ಷಣಿಕ ತಾತ್ತ್ವಿಕತೆಯನ್ನು ತುಳಿದು ನೌಕರಶಾಹಿ ನಿಲುವುಗಳ ನಡೆ-ನುಡಿಯ ಕೀರ್ತಿ ಕಿರೀಟವನ್ನು ಧರಿಸಿದೆ. ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯನ್ನೇ ಗಮನಿಸಿ; ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಿರಾಕರಿಸಿ ರಾಜ್ಯ ಶಿಕ್ಷಣ ನೀತಿಯ ರಚನೆಗೆ ಸಮಿತಿಯನ್ನು ರಚಿಸಲಾಯಿತು. ರಾಜ್ಯಗಳ ಶೈಕ್ಷಣಿಕ ಸ್ವಾಯತ್ತತೆಯನ್ನು ಬಯಸುವ ನನ್ನಂಥವರಿಗೆ ಇದು ಸರಿಯಾದ ನಿಲುವು ಎನ್ನಿಸಿತು. ಆದರೆ, ಮುಂದೆ ಆದದ್ದು ಏನು?ರಾಷ್ಟ್ರೀಯ ಶಿಕ್ಷಣ ನೀತಿಯ ಕೆಲವು ಅಂಶಗಳನ್ನೇ ಶಾಲಾ ಶಿಕ್ಷಣ ಇಲಾಖೆ ಜಾರಿಗೆ ತಂದಿತು. ನಿದರ್ಶನಕ್ಕೆ ನೋಡಿ: ರಾಷ್ಟ್ರೀಯ ಶಿಕ್ಷಣ ನೀತಿಯ 7.3ನೇ ಅಂಶವು ಕಿರಿಯ ಶಾಲೆಗಳು ಶಿಕ್ಷಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಾಗಿ ಪ್ರತಿಪಾದಿಸಿದೆ. ಕಿರಿಯ ಪ್ರಾಥಮಿಕ ಶಾಲೆಗಳ ಪ್ರತ್ಯೇಕ ಅಸ್ತಿತ್ವ ನಿರರ್ಥಕ ಎಂದು ಇದರರ್ಥ. ಈ ಅಂಶಕ್ಕೆ ಪೂರಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯ 7.6ನೇ ಅಂಶವನ್ನು ಗಮನಿಸಬಹುದು. ಆ ಅಂಶದ ಪ್ರಕಾರ 5ರಿಂದ 10 ಕಿಲೋಮೀಟರ್ ಅಂತರದಲ್ಲಿ ಅಂಗನವಾಡಿಯಿಂದ ಸೆಕೆಂಡರಿ ಶಿಕ್ಷಣದವರೆಗೆ (12ನೇ ತರಗತಿಯವರೆಗೆ) ಒಂದು ಶಾಲಾ ಸಂಕೀರ್ಣ ಇರಬೇಕು. ಈ ಶಾಲಾ ಸಂಕೀರ್ಣವನ್ನೇ ಕರ್ನಾಟಕ ಸರ್ಕಾರವು ಇಂಗ್ಲಿಷ್ ಮಾಧ್ಯಮದ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ (ಕೆಪಿಎಸ್ ಮ್ಯಾಗ್ನೆಟ್) ಎಂಬ ಹೆಸರಿನಲ್ಲಿ ಆಗುಮಾಡುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ 7.3ನೇ ಅಂಶದಂತೆ ಕಿರಿಯ ಶಾಲೆಗಳನ್ನು ನಕಾರಾತ್ಮಕವೆಂದು ಭಾವಿಸಿ ಮುಚ್ಚಲಾಗುತ್ತಿದೆ.ಒಂದು ವೇಳೆ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಕೆಲವು ಒಳ್ಳೆಯ ಅಂಶಗಳಿದ್ದು, ಅವುಗಳನ್ನು ಜಾರಿ ಮಾಡಿದ್ದೇವೆ ಎಂದು ಭಾವಿಸಿದ್ದರೆ, ಆ ಶಿಕ್ಷಣ ನೀತಿಯ 4.2ನೇ ಅಂಶವು ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ವಿಷಯಾಧಾರಿತ ಶಿಕ್ಷಕರ ನೇಮಕವಾಗಬೇಕು ಎಂದು ಹೇಳಿರುವ ಒಳ್ಳೆಯ ಅಂಶವನ್ನು ರಾಜ್ಯದ ಶಾಲಾ ಶಿಕ್ಷಣ ಇಲಾಖೆಯು ಪೂರ್ಣವಾಗಿ ಜಾರಿಗೆ ತರಬಹುದಿತ್ತು. ಅದರ ಬದಲು ಕನ್ನಡ ಪದವೀಧರ ಶಿಕ್ಷಕರ ನೇಮಕಾತಿಯನ್ನು ಕೈಬಿಟ್ಟು ಕನ್ನಡಕ್ಕೆ ಅನ್ಯಾಯ ಮಾಡಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಒಳಗೊಳಗೇ ಅಕ್ಕರೆಯನ್ನು ಇಟ್ಟುಕೊಂಡ ಶಿಕ್ಷಣ ಇಲಾಖೆ- ಮುಖ್ಯವಾಗಿ ನೌಕರಶಾಹಿ- ರಾಷ್ಟ್ರೀಯ ಶಿಕ್ಷಣ ನೀತಿಯ 4.2ನೇ ಅಂಶವನ್ನು ಪೂರ್ಣ ಪ್ರಮಾಣದಲ್ಲಿ ಯಾಕೆ ಜಾರಿಗೆ ತರಲಿಲ್ಲ? ಇಂಗ್ಲಿಷ್ ಬೋಧನೆಗೆ ಇಂಗ್ಲಿಷ್ ಪದವೀಧರ ಶಿಕ್ಷಕರ ನೇಮಕಾತಿಗೆ ಅವಕಾಶ ಕಲ್ಪಿಸಿ, ಕನ್ನಡ ಪದವೀಧರ ಶಿಕ್ಷಕರ ನೇಮಕಾತಿಯನ್ನು ಮಾತ್ರ ಕೈಬಿಟ್ಟದ್ದು ಯಾಕೆ? ಈ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ.ವಿವರ ಹೀಗಿದೆ: ಶಾಲಾ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದಂತೆ ಜುಲೈ 14, 2026ರಂದು ಕರ್ನಾಟಕ ಸರ್ಕಾರದ ರಾಜ್ಯಪತ್ರದಲ್ಲಿ ಒಂದು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. 8,500 ಶಿಕ್ಷಕರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿ, ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುವ ನಿಯಮಾವಳಿಗಳನ್ನು ವಿವರಿಸಲಾಗಿದೆ. ಪರೀಕ್ಷಾ ಮಾಧ್ಯಮವು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿರುವುದಾಗಿ ತಿಳಿಸಲಾಗಿದೆ. ಬೇರೆ ಶಿಕ್ಷಕರ ನೇಮಕಾತಿ ವಿಷಯದ ಜೊತೆಗೆ 6ರಿಂದ 8ನೇ ತರಗತಿಯ ಬೋಧನೆಗಾಗಿ ವಿಷಯವಾರು ಪದವೀಧರ ಶಿಕ್ಷಕರ ನೇಮಕಾತಿಯ ಪ್ರಸ್ತಾಪವನ್ನೂ ಈ ರಾಜ್ಯಪತ್ರ ಒಳಗೊಂಡಿದೆ.ಆದರೆ, ನಾನು ಮೊದಲೇ ಪ್ರಸ್ತಾಪ ಮಾಡಿದಂತೆ ಶಿಕ್ಷಣ ಇಲಾಖೆಯು ಬಿಡುಗಡೆ ಮಾಡಿರುವ ಈ ಅಧಿಸೂಚನೆಯಲ್ಲಿ 8,500 ಹುದ್ದೆಗಳಲ್ಲಿ ಒಂದೇ ಒಂದು ಹುದ್ದೆಗೂ ಕನ್ನಡ ಪದವೀಧರ ಶಿಕ್ಷಕರ ಪ್ರಸ್ತಾಪವೇ ಇಲ್ಲ. ಯಾವ ಯಾವ ಶಿಕ್ಷಕರ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುತ್ತದೆಯೆಂಬ ಮಾಹಿತಿಯಲ್ಲಿ ಇಂಗ್ಲಿಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಜೀವವಿಜ್ಞಾನದ ವಿಷಯಗಳಿವೆಯೇ ಹೊರತು ಕನ್ನಡದ ವಿಷಯ ಇಲ್ಲ (ಪುಟ 23). ಇದರ ಅರ್ಥವೆಂದರೆ– ಕನ್ನಡ ಪದವೀಧರ ಶಿಕ್ಷಕರಿಗೆ ನೇಮಕಾತಿಯ ಅವಕಾಶವಿಲ್ಲ. ಈ ಅನ್ಯಾಯವು 2017, 2019 ಮತ್ತು 2022ರ ನೇಮಕಾತಿ ಸಂದರ್ಭದಲ್ಲೂ ಆಗಿತ್ತು.ಪದವಿ ತರಗತಿಯಲ್ಲಿ ಕನ್ನಡವನ್ನು ಐಚ್ಛಿಕ ವಿಷಯವಾಗಿ ವಿಶೇಷ ಅಧ್ಯಯನ ಮಾಡಿದವರನ್ನು ಕೈಬಿಟ್ಟು, ಸಮಾಜಶಾಸ್ತ್ರದ ಪದವೀಧರ ಶಿಕ್ಷಕರೇ ಕನ್ನಡವನ್ನು ಬೋಧಿಸುವ ಪರಿಪಾಠವನ್ನು ಅನುಸರಿಸಲಾಗುತ್ತಿದೆ. ಇದರಿಂದ ಕನ್ನಡ ಕಲಿಕೆಯ ಗುಣಮಟ್ಟಕ್ಕೆ ಧಕ್ಕೆಯಾಗುತ್ತಿದೆ. ಯಾಕೆ ಹೀಗೆ ಎಂದು ಕೇಳಿದರೆ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆಯೆಂದೂ, 1:7 ಪ್ರಮಾಣದಲ್ಲಿ ಕನ್ನಡ ಅಧ್ಯಾಪಕರಿದ್ದಾರೆಂದೂ, ಹೀಗಾಗಿ ಹೊಸ ನೇಮಕಾತಿ ಅಗತ್ಯವಿಲ್ಲವೆಂದೂ ಅಧಿಕಾರಿಗಳು ಹೇಳುತ್ತಾರಂತೆ. ‘ಇದು ನಿಜವೇ ಆಗಿದ್ದರೆ’ ಒಂದು ಸ್ಪಷ್ಟನೆಯನ್ನು ಕೊಡಬಯಸುತ್ತೇನೆ: ಕನ್ನಡ ಬೋಧನೆಯು ಮಾಧ್ಯಮಕ್ಕೆ ಮಾತ್ರ ಸಂಬಂಧಿಸಿದ್ದಲ್ಲ; ಯಾವುದೇ ಭಾಷಾ ಮಾಧ್ಯಮವಿದ್ದರೂ 6ರಿಂದ 8ನೇ ತರಗತಿಗಳಲ್ಲಿ ಪ್ರಥಮ, ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಕನ್ನಡವು ಈಗ ಇದ್ದೇ ಇದೆ. ಒಂದು ಭಾಷೆಯಾಗಿ ಕನ್ನಡ ಕಲಿಯುವವರ ಸಂಖ್ಯೆ ತುಂಬಾ ಕಡಿಮೆಯಾಗಿಲ್ಲ. ಆದ್ದರಿಂದ ಕನ್ನಡವನ್ನು ಒಂದು ಭಾಷಾ ವಿಷಯವಾಗಿ ಬೋಧನೆ ಮಾಡಲು ಕನ್ನಡ ಪದವೀಧರ ಶಿಕ್ಷಕರು ಬೇಡವೆ? ಇಷ್ಟಕ್ಕೂ ನಮ್ಮ ರಾಜ್ಯ ಭಾಷೆಯಾದ ಕನ್ನಡ ಬೋಧನೆಗೆ ವಿದ್ಯಾರ್ಥಿಗಳ ಸಂಖ್ಯೆಯ ಲೆಕ್ಕಾಚಾರ ಮಾಡುವ ಬದಲು, ಕನ್ನಡವನ್ನು ಉಳಿಸುವ ಸದಾಚಾರಕ್ಕೆ ಬದ್ಧವಾಗಬೇಕು.ಆಂಗ್ಲ ಭಾಷಾ ಬೋಧನೆಗೆ ಆಂಗ್ಲ ಭಾಷಾ ಐಚ್ಛಿಕ ವಿಷಯದ ಪದವೀಧರ ಶಿಕ್ಷಕರೇ ಬೇಕು ಎನ್ನುವಂತೆ, ಕನ್ನಡ ಭಾಷಾ ಬೋಧನೆಗೆ ಕನ್ನಡ ಭಾಷಾ ಐಚ್ಛಿಕ ವಿಷಯದ ಪದವೀಧರ ಶಿಕ್ಷಕರೇ ಬೇಕು. ಕನ್ನಡ ಶಿಕ್ಷಕರ ಹುದ್ದೆಗಳನ್ನು ಸೃಷ್ಟಿಸಬೇಕು. ಕನ್ನಡವನ್ನು ವಿಶೇಷ ವಿಷಯವಾಗಿ ಅಧ್ಯಯನ ಮಾಡಿ ಪದವಿ ಪಡೆದವರಿಗೆ ಕರ್ನಾಟಕದಲ್ಲೇ ಕೆಲಸ ಕೊಡುವುದಿಲ್ಲವಾದರೆ, ಅದನ್ನು ಕನ್ನಡ ದ್ರೋಹವೆನ್ನದೆ ಬೇರೆ ದಾರಿಯಿಲ್ಲ. ಕನ್ನಡಪರ ವಿಷಯಗಳನ್ನು ಕೇವಲ ತಾಂತ್ರಿಕವಾಗಿ ನೋಡಬಾರದು. ಶೈಕ್ಷಣಿಕ ತಾತ್ತ್ವಿಕತೆಯಾಗಿ ಪರಿಗಣಿಸಬೇಕು.ವಿಶೇಷವಾಗಿ, ಶಿಕ್ಷಣ ಕ್ಷೇತ್ರದಲ್ಲಿ ಕನ್ನಡವನ್ನು ಉಳಿಸಿ, ಬೆಳೆಸಬೇಕು. ಇಲ್ಲದಿದ್ದರೆ ಸಾಮಾಜಿಕ, ಸಾಂಸ್ಕೃತಿಕ ದುಷ್ಪರಿಣಾಮಗಳು ‘ಅಭಿವೃದ್ಧಿ’ ಹೊಂದುತ್ತವೆ. ಭೌತಿಕ ಅಭಿವೃದ್ಧಿಯ ಬಗ್ಗೆ ಸದಾ ಹಂಬಲಿಸುವ ನೇತಾರರು ಬೌದ್ಧಿಕ-ಮಾನಸಿಕ ಅಭಿವೃದ್ಧಿಯ ಬಗ್ಗೆ ಗಂಭೀರವಾಗಿ ಚಿಂತಿಸಿದರೆ ‘ದುಷ್ಪರಿಣಾಮದ ಅಭಿವೃದ್ಧಿ’ ಆಗುವುದಿಲ್ಲ. ಶಾಲಾ ಶಿಕ್ಷಣದಲ್ಲಿ ಕನ್ನಡಕ್ಕೆ ಕಂಟಕವಾದರೆ, ಮುಂದೊಂದು ದಿನ ಕನ್ನಡ ಪತ್ರಿಕೆ ಮತ್ತು ಪುಸ್ತಕಗಳನ್ನು ಓದುವವರು ಇರುವುದಿಲ್ಲ. ಕನ್ನಡ ನಾಟಕ ಮತ್ತು ಸಿನಿಮಾ ನೋಡುವವರು ಸಿಗುವುದಿಲ್ಲ. ಕನ್ನಡದ ಹಾಡುಗಳು ಬೇಕಾಗುವುದಿಲ್ಲ. ಈಗಾಗಲೇ, ಈ ದುಷ್ಪರಿಣಾಮಗಳು ಕಾಣಿಸಿಕೊಂಡಿದ್ದು, ಮತ್ತಷ್ಟು ‘ಅಭಿವೃದ್ಧಿ’ ಹೊಂದಲು ಅವಕಾಶ ಕಲ್ಪಿಸಬಾರದು. ಇದು ಸರ್ಕಾರದ ಆಡಳಿತಾತ್ಮಕ ಜವಾಬ್ದಾರಿ; ಸಮಾಜದ ನೈತಿಕ ಜವಾಬ್ದಾರಿ.ಕನ್ನಡ ಪದವೀಧರ ಶಿಕ್ಷಕರ ನೇಮಕಾತಿಗೆ ಅವಕಾಶವನ್ನು ಕಲ್ಪಿಸದೇ ಇರುವುದಕ್ಕೆ ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವುದು ಕಾರಣ ಎನ್ನುವುದಾದರೆ, ಅತ್ಯಂತ ಕಡಿಮೆ ಸಂಖ್ಯೆಯ ಕನ್ನಡ ವಿದ್ಯಾರ್ಥಿಗಳಿರುವ ಬೇರೆ ರಾಜ್ಯಗಳ ನಿದರ್ಶನವನ್ನು ಕೊಡಬಯಸುತ್ತೇನೆ.2023ರ ಆಗಸ್ಟ್ 25ರಂದು ತೆಲಂಗಾಣ ಸರ್ಕಾರ ಪ್ರಕಟಿಸಿರುವ ಮಾಹಿತಿಯಂತೆ, 6ರಿಂದ 8ನೇ ತರಗತಿಯವರೆಗೆ ಬೋಧನೆ ಮಾಡಲು ಕನ್ನಡ ಪದವೀಧರ ಶಿಕ್ಷಕರ ನೇಮಕಾತಿಯನ್ನು ಮಾಡಲಾಗುತ್ತದೆ. ಕನ್ನಡವನ್ನು ಐಚ್ಛಿಕ ವಿಷಯವಾಗಿ ಅಧ್ಯಯನ ಮಾಡಿದ ಪದವೀಧರರು ಈ ನೇಮಕಾತಿಗೆ ಅರ್ಹರೆಂದು ತಿಳಿಸಲಾಗಿದೆ. ಆಂಧ್ರಪ್ರದೇಶ ಸರ್ಕಾರವು 2025ರ ಏಪ್ರಿಲ್ 19ರಂದು ನೀಡಿರುವ ಪ್ರಕಟಣೆಯಲ್ಲಿ, 6ರಿಂದ 8ನೇ ತರಗತಿಯವರೆಗಿನ ಕನ್ನಡ ಬೋಧನೆಗೆ ಕನ್ನಡ ಐಚ್ಛಿಕ ವಿಷಯದ ಪದವೀಧರ ಶಿಕ್ಷಕರನ್ನು ನೇಮಿಸಿಕೊಳ್ಳಲು ಮುಂದಾಗುತ್ತಿದೆ. ನೆರೆಯ ರಾಜ್ಯಗಳು ಕನ್ನಡ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಿರುವಾಗ, ಕನ್ನಡ ನಾಡಿನ ಶಿಕ್ಷಣ ಇಲಾಖೆಯು ನೆಪಗಳನ್ನು ಹೇಳುತ್ತ ಕನ್ನಡಕ್ಕೆ ಅನ್ಯಾಯ ಮಾಡುತ್ತಿದೆ. ಪ್ರಜಾಸತ್ತಾತ್ಮಕ ಸಂವಾದ, ವಿಚಾರ ವಿನಿಮಯಗಳಿಗೂ ಮುಂದಾಗದೆ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ.ಇದಕ್ಕೆ ಒಂದು ನಿದರ್ಶನವೆಂದರೆ, ಪೂರ್ವಭಾವಿ ಚರ್ಚೆ, ಚಿಂತನೆಗಳಿಲ್ಲದೆ ದ್ವಿಭಾಷಾ ಮಾಧ್ಯಮದ ಬೋಧನೆಯನ್ನು ಜಾರಿಗೆ ತಂದಿದೆ. ದ್ವಿಭಾಷಾ ನೀತಿ ಬೇರೆ, ದ್ವಿಭಾಷಾ ಮಾಧ್ಯಮದ ಬೋಧನಾ ವಿಧಾನ ಬೇರೆ. ಕಡ್ಡಾಯವಾಗಿ ರಾಜ್ಯಭಾಷೆ (ಕನ್ನಡ) ಮತ್ತು ಆಂಗ್ಲ ಭಾಷೆಯನ್ನು ಕಲಿಸುವುದು ದ್ವಿಭಾಷಾ ನೀತಿಯ ಪ್ರತಿಪಾದನೆ. ದ್ವಿಭಾಷಾ ಮಾಧ್ಯಮದಲ್ಲಿ ಶಿಕ್ಷಕರು ತರಗತಿಯಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಗಳ ಮೂಲಕ ಒಟ್ಟಿಗೇ ಬೋಧನೆ ಮಾಡಬೇಕು. ಇದು ಎಷ್ಟು ಪ್ರಯೋಗಾತ್ಮಕ ಮತ್ತು ಪ್ರಯೋಜನಾತ್ಮಕ ಎಂಬ ಚರ್ಚೆಯೇ ಆಗಿಲ್ಲ. ಒಟ್ಟಾರೆ ಏಕಪಕ್ಷೀಯ ನಡೆಗಳಿಗೆ ಶಾಲಾ ಶಿಕ್ಷಣ ಇಲಾಖೆ ಪ್ರಸಿದ್ಧವಾಗಿದೆ. ಕನ್ನಡ ಪದವೀಧರ ಶಿಕ್ಷಕರ ನೇಮಕಾತಿಯ ನಿರಾಕರಣೆಯು ಈ ನಡೆಗೆ ಇನ್ನೊಂದು ನಿದರ್ಶನವಾಗಿದೆ.ಈಗಲಾದರೂ ಕರ್ನಾಟಕ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಕಣ್ಣು ತೆರೆದು ಕನ್ನಡದ ಕಡೆಗೆ ನೋಡಲಿ ಎಂದು ಆಶಿಸುತ್ತೇನೆ.