ಚನ್ನಪಟ್ಟಣ: ಚಿಕ್ಕಮಣ್ಣುಗುಡ್ಡೆ ಅರಣ್ಯದಲ್ಲಿ 30 ವರ್ಷದ ಕಾಡಾನೆಯ ಕಳೇಬರ ಪತ್ತೆ
ಚನ್ನಪಟ್ಟಣ (ರಾಮನಗರ): ತಾಲ್ಲೂಕಿನ ಚಿಕ್ಕಮಣ್ಣುಗುಡ್ಡೆ ಅರಣ್ಯದಲ್ಲಿ ಸುಮಾರು 30 ವರ್ಷದ ಕಾಡಾನೆಯೊಂದರ ಕಳೇಬರ ಮಂಗಳವಾರ ಪತ್ತೆಯಾಗಿದೆ. ಹಳ್ಳದಂತಿರುವ ಸ್ಥಳದಲ್ಲಿರುವ ಕಾಡಾನೆಯು ಹತ್ತು ದಿನಗಳಿಗೂ ಹಿಂದೆಯೇ ಮೃತಪಟ್ಟಿರುವ ಸಾಧ್ಯತೆ ಇದ್ದು, ಸ್ಥಳಕ್ಕೆ ಡಿಸಿಎಫ್ ಎಂ. ರಾಮಕೃಷ್ಣಪ್ಪ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.‘ಸೋಮವಾರ ರಾತ್ರಿ ಚಿಕ್ಕಮಣ

ಚನ್ನಪಟ್ಟಣ (ರಾಮನಗರ): ತಾಲ್ಲೂಕಿನ ಚಿಕ್ಕಮಣ್ಣುಗುಡ್ಡೆ ಅರಣ್ಯದಲ್ಲಿ ಸುಮಾರು 30 ವರ್ಷದ ಕಾಡಾನೆಯೊಂದರ ಕಳೇಬರ ಮಂಗಳವಾರ ಪತ್ತೆಯಾಗಿದೆ. ಹಳ್ಳದಂತಿರುವ ಸ್ಥಳದಲ್ಲಿರುವ ಕಾಡಾನೆಯು ಹತ್ತು ದಿನಗಳಿಗೂ ಹಿಂದೆಯೇ ಮೃತಪಟ್ಟಿರುವ ಸಾಧ್ಯತೆ ಇದ್ದು, ಸ್ಥಳಕ್ಕೆ ಡಿಸಿಎಫ್ ಎಂ. ರಾಮಕೃಷ್ಣಪ್ಪ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.‘ಸೋಮವಾರ ರಾತ್ರಿ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶಕ್ಕೆ ಮೂರು ಕಾಡಾನೆಗಳು ಬಂದಿರುವ ಮಾಹಿತಿ ಬಂದಿತು. ರೈತರ ಜಮೀನು ಹಾಗೂ ಜನವಸತಿ ಪ್ರದೇಶಕ್ಕೆ ಬಾರದಂತೆ ಆನೆಗಳ ಮೇಲೆ ನಿಗಾ ಇಡಲು ಡ್ರೋನ್ ಹಾರಿಸಿದಾಗ, ಆನೆಯ ಕಳೇಬರ ಪತ್ತೆಯಾಯಿತು’ ಎಂದು ಡಿಸಿಎಫ್ ರಾಮಕೃಷ್ಣಪ್ಪ ತಿಳಿಸಿದರು.‘ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಯಿತು. ಬಳಿಕ ವೈದ್ಯರನ್ನು ಸ್ಥಳಕ್ಕೆ ಕರೆಯಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆನೆಯು ಹಳ್ಳಕ್ಕೆ ಜಾರಿ ಬಿದ್ದು ಮೇಲಕ್ಕೆ ಏಳಲಾಗದೆ ಮೃತಪಟ್ಟಿರುವ ಅಥವಾ ಇತರ ಕಾಡಾನೆಗಳ ಜೊತೆಗಿನ ಕಾಳಗದಲ್ಲಿ ಮೃತಪಟ್ಟಿರುವ ಸಾಧ್ಯತೆ ಇದೆ. ವೈದ್ಯರ ಪ್ರಕಾರ ಆನೆಯು 10–15 ದಿನಗಳ ಹಿಂದೆ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆ ವರದಿ ಕೈ ಸೇರಿದ ಬಳಿಕ ಸಾವಿಗೆ ಕಾರಣ ಗೊತ್ತಾಗಲಿದೆ’ ಎಂದು ಹೇಳಿದರು.ಸೆರೆಯಾಗಿದ್ದ ಕಾಡಾನೆಯೆ?:ಕಳೆದ ಜೂನ್ 25ರಂದು ಅರಣ್ಯ ಇಲಾಖೆಯು ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಎರಡು ಪುಂಡಾನೆಗಳು, ಸುತ್ತಲಿನ ರೈತರ ಜಮೀನಿನಲ್ಲಿ ಬೆಳೆಹಾನಿ ಮಾಡಿ, ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದವು. ಬಳಿಕ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಒಂದು ಆನೆಯನ್ನು ಸೆರೆ ಹಿಡಿದಿತ್ತು.ಸೆರೆಯಾದ ಕಾಡಾನೆಯ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅದನ್ನು ಬೇರೆ ಕಡೆಗೆ ಸಾಗಿಸುವ ಬದಲು ಚಿಕಿತ್ಸೆ ನೀಡಿ ಮರಳಿ ಅದೇ ಅರಣ್ಯದಲ್ಲಿ ಬಿಡಲಾಗಿತ್ತು. ಅದೇ ಆನೆ ಇಲ್ಲಿ ಮೃತಪಟ್ಟಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.‘ಮೃತಪಟ್ಟಿರುವ ಕಾಡಾನೆಯು ತಿಂಗಳ ಹಿಂದೆ ಕಾರ್ಯಾಚರಣೆಯಲ್ಲಿ ಸೆರೆಯಾಗಿದ್ದ ಆನೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಆ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಡಿಸಿಎಫ್ ರಾಮಕೃಷ್ಣಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.