ನಿರ್ಬಂಧ ಹೇರಿದ್ದರೂ ಇರಾನ್ ಇನ್ನೂ ಸೋತಿಲ್ಲ ಹೇಗೆ?
ಪಾಶ್ಚಿಮಾತ್ಯ ದೇಶಗಳ ಕಠಿಣ ಆರ್ಥಿಕ ನಿರ್ಬಂಧಗಳು, ಅಮೆರಿಕದ ನೌಕಾ ದಿಗ್ಬಂಧನ ಹಾಗೂ ಸತತ ಯುದ್ಧದ ಸನ್ನಿವೇಶಗಳ ನಡುವೆಯೂ ಇರಾನ್(Iran) ಸಂಪೂರ್ಣವಾಗಿ ಕುಸಿಯದೆ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿರುವುದು ಜಾಗತಿಕ ವಲಯದಲ್ಲಿ ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ. ಗಗನಕ್ಕೇರಿರುವ ಹಣದುಬ್ಬರ ಮತ್ತು ರಿಯಾಲ್ ಮೌಲ್ಯದ ತೀವ್ರ ಕುಸಿತದ ನಡುವೆಯೂ, ರಹಸ್ಯ ತೈಲ ರಫ್ತು, ಶ್ಯಾಡೋ

ಪಾಶ್ಚಿಮಾತ್ಯ ದೇಶಗಳ ಕಠಿಣ ಆರ್ಥಿಕ ನಿರ್ಬಂಧಗಳು, ಅಮೆರಿಕದ ನೌಕಾ ದಿಗ್ಬಂಧನ ಹಾಗೂ ಸತತ ಯುದ್ಧದ ಸನ್ನಿವೇಶಗಳ ನಡುವೆಯೂ ಇರಾನ್(Iran) ಸಂಪೂರ್ಣವಾಗಿ ಕುಸಿಯದೆ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿರುವುದು ಜಾಗತಿಕ ವಲಯದಲ್ಲಿ ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ. ಗಗನಕ್ಕೇರಿರುವ ಹಣದುಬ್ಬರ ಮತ್ತು ರಿಯಾಲ್ ಮೌಲ್ಯದ ತೀವ್ರ ಕುಸಿತದ ನಡುವೆಯೂ, ರಹಸ್ಯ ತೈಲ ರಫ್ತು, ಶ್ಯಾಡೋ ಬ್ಯಾಂಕಿಂಗ್ ಜಾಲ, ಪರ್ಯಾಯ ವ್ಯಾಪಾರ ಮಾರ್ಗಗಳು ಹಾಗೂ ಬಾರ್ಟರ್ (ವಸ್ತು ವಿನಿಮಯ) ಪದ್ಧತಿಯಂತಹ ಚಾಣಾಕ್ಷ ತಂತ್ರಗಳ ಮೂಲಕ ಇರಾನ್ ತನ್ನ ಆರ್ಥಿಕ ಚಕ್ರವನ್ನು ಚಲನೆಯಲ್ಲಿಟ್ಟಿದೆ. ನಿರ್ಬಂದಗಳ ಮಧ್ಯೆಯೂ ಇರಾನ್ ಆರ್ಥಿಕತೆ ಹೇಗೆ ಮುನ್ನಡೆಯುತ್ತಿದೆ, ಕಠಿಣ ಸವಾಲುಗಳೇನು ಮತ್ತು ಯಾವ ದೇಶಗಳು ಇರಾನ್ಗೆ ಆಸರೆಯಾಗಿ ನಿಂತಿವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ ರಹಸ್ಯ ತೈಲ ರಫ್ತು ಮತ್ತು ಶ್ಯಾಡೋ ಬ್ಯಾಂಕಿಂಗ್ ಅಮೆರಿಕದ(USA) ಕಠಿಣ ನೌಕಾ ದಿಗ್ಬಂಧನಗಳ ನಡುವೆಯೂ ಇರಾನ್ ತನ್ನ ಕಚ್ಚಾ ತೈಲವನ್ನು ಚೀನಾಕ್ಕೆ ರಹಸ್ಯ ನೆಟ್ವರ್ಕ್ಗಳು ಮತ್ತು ಬೇರೆ ದೇಶಗಳ ಧ್ವಜ ಹೊಂದಿರುವ ಹಡಗುಗಳ ಮೂಲಕ ರಫ್ತು ಮಾಡುತ್ತಿದೆ. ಕಡಲ ಹಡಗುಗಳ ಸಂಕೇತಗಳನ್ನು (Radar/GPS signals) ಆಫ್ ಮಾಡಿ ಸರಕುಗಳನ್ನು ರಫ್ತು ಮಾಡುತ್ತದೆ. ಯುದ್ಧದ ಕಾರಣದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಹೆಚ್ಚಾಗಿದ್ದು, ಇರಾನ್ ಪ್ರತಿ ಬ್ಯಾರೆಲ್ಗೆ ಹೆಚ್ಚಿನ ಆದಾಯ ಗಳಿಸುತ್ತಿದೆ. ಅಂತರರಾಷ್ಟ್ರೀಯ ಬ್ಯಾಂಕಿಂಗ್ ವ್ಯವಸ್ಥೆಯಿಂದ (SWIFT) ಹೊರಗಿಡಲ್ಪಟ್ಟಿದ್ದರೂ, ಇರಾನ್ ‘ಶ್ಯಾಡೋ ಬ್ಯಾಂಕಿಂಗ್’ ಮತ್ತು ಶೆಲ್ ಕಂಪನಿಗಳ ಮೂಲಕ ಹಣಕಾಸು ವಹಿವಾಟು ನಡೆಸುತ್ತಿದೆ. ಇರಾನ್ ಪ್ರಪಂಚದಾದ್ಯಂತ, ವಿಶೇಷವಾಗಿ ಯುಎಇ (UAE), ಹಾಂಗ್ ಕಾಂಗ್ ಮತ್ತು ಟರ್ಕಿಯಲ್ಲಿ ನಕಲಿ (ಶೆಲ್) ಕಂಪನಿಗಳನ್ನು ಸ್ಥಾಪಿಸಿದೆ. ತೈಲ ಮಾರಾಟದಿಂದ ಬರುವ ಹಣವನ್ನು ಇರಾನ್ನ ನಿಜವಾದ ಬ್ಯಾಂಕ್ ಖಾತೆಗಳಿಗೆ ಹಾಕುವ ಬದಲಿಗೆ, ಈ ಶೆಲ್ ಕಂಪನಿಗಳ ವಿದೇಶಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತದೆ. ಪಾಶ್ಚಿಮಾತ್ಯ ದೇಶಗಳ ಕಣ್ಣು ತಪ್ಪಿಸಲು ಇರಾನ್ನ ಹವಾಲಾ ದಲ್ಲಾಳಿಗಳು ಮತ್ತು ಸ್ಥಳೀಯ ಕರೆನ್ಸಿ ಎಕ್ಸ್ಚೇಂಜ್ ಹೌಸ್ಗಳು ಈ ಹಣವನ್ನು ಇರಾನ್ಗೆ ತಲುಪಿಸುತ್ತವೆ. ದೇಶೀಯ ಉತ್ಪಾದನೆಗೆ ಒತ್ತು ಆಮದು ಮಾಡಿಕೊಳ್ಳಲು ವಿದೇಶಿ ಕರೆನ್ಸಿಯ ಕೊರತೆ ಇರುವುದರಿಂದ, ಇರಾನ್ ತನ್ನ ದೇಶೀಯ ಕೈಗಾರಿಕೆಗಳು ಮತ್ತು ಕೃಷಿ ವಲಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಸಾಧ್ಯವಾದಷ್ಟು ವಸ್ತುಗಳನ್ನು ದೇಶದ ಒಳಗೇ ಉತ್ಪಾದಿಸುವ ಪ್ರತಿರೋಧ ಆರ್ಥಿಕತೆ (Resistance Economy) ನೀತಿಯನ್ನು ಅನುಸರಿಸುತ್ತಿದೆ. ಪರ್ಯಾಯ ವ್ಯಾಪಾರ ಮಾರ್ಗಗಳ ಬಳಕೆ ಇರಾನ್ ತನ್ನ ಉತ್ತರದ ಕ್ಯಾಸ್ಪಿಯನ್ ಸಮುದ್ರದ ಮೂಲಕ ರಷ್ಯಾ, ಕಝಾಕಿಸ್ತಾನ್ ಮತ್ತು ತುರ್ಕಮೆನಿಸ್ತಾನ್ ದೇಶಗಳೊಂದಿಗೆ ವ್ಯಾಪಾರವನ್ನು ವಿಸ್ತರಿಸಿದೆ. ಇದರ ಮೂಲಕ ಗೋಧಿ, ಜೋಳ ಮತ್ತು ಅಗತ್ಯ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಟರ್ಕಿ, ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ದೇಶಗಳೊಂದಿಗೆ ರೈಲು ಮತ್ತು ರಸ್ತೆ ಸಂಪರ್ಕಗಳ ಮೂಲಕ ಸರಕುಗಳನ್ನು ಸಾಗಿಸುತ್ತಿದೆ. ಇತ್ತೀಚೆಗೆ ಪಾಕಿಸ್ತಾನ ಕೂಡ ಇರಾನ್ ಸರಕುಗಳ ಸಾಗಣೆಗೆ ತನ್ನ ಗಡಿಗಳಲ್ಲಿ ಮುಕ್ತ ಕಾರಿಡಾರ್ಗಳನ್ನು ನೀಡಿದೆ. ಸರ್ಕಾರದ ಕಠಿಣ ನಿಯಂತ್ರಣ ಮತ್ತು ರಕ್ಷಣೆ ದೇಶೀಯ ಮಾರುಕಟ್ಟೆಯಲ್ಲಿ ಅಭಾವ ಉಂಟಾಗದಂತೆ ತಡೆಯಲು ಇರಾನ್ ಸರ್ಕಾರವು ಉಕ್ಕು ಸೇರಿದಂತೆ ಹಲವು ಪ್ರಮುಖ ಮತ್ತು ಅಗತ್ಯ ಸರಕುಗಳ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಯುದ್ಧದ ನಡುವೆಯೂ ನಾಗರಿಕರಿಗೆ ದೈನಂದಿನ ಜೀವನ ಕೈಗೆಟುಕುವಂತೆ ಮಾಡಲು ಆಹಾರ ಮತ್ತು ಇಂಧನದ ಮೇಲೆ ಇರಾನ್ ಸರ್ಕಾರ ಭಾರಿ ಸಬ್ಸಿಡಿಗಳನ್ನು ನೀಡುತ್ತಾ ಬಂದಿದೆ. ಇರಾನ್ನ ಆರ್ಥಿಕತೆಯ ಶೇಕಡಾ 20 ಕ್ಕಿಂತ ಹೆಚ್ಚು ಭಾಗವನ್ನು ಬೋನ್ಯಾಡ್ಸ್ (ತೆರಿಗೆ ವಿನಾಯಿತಿ ಇರುವ ಧಾರ್ಮಿಕ ಸಂಸ್ಥೆಗಳು) ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನಂತಹ ಮಿಲಿಟರಿ ನಿಯಂತ್ರಿತ ಕಂಪನಿಗಳು ಮುನ್ನಡೆಸುತ್ತಿದ್ದು, ಇವು ಬಿಕ್ಕಟ್ಟಿನ ಸಮಯದಲ್ಲಿ ಆರ್ಥಿಕ ಸ್ಥಿರತೆ ಕಾಪಾಡಲು ನೆರವಾಗಿವೆ. ಆರ್ಥಿಕತೆ ಹೇಗಿದೆ? ಇರಾನ್ ಆರ್ಥಿಕತೆಯು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಸಂಪೂರ್ಣವಾಗಿ ಕುಸಿತದ ಹಾದಿಯಲ್ಲಿದೆ. ಯುಎಸ್ ಮತ್ತು ಇಸ್ರೇಲ್ ಜೊತೆಗಿನ ಇತ್ತೀಚಿನ ಸಶಸ್ತ್ರ ಸಂಘರ್ಷಗಳು, ಅಂತರರಾಷ್ಟ್ರೀಯ ಕಠಿಣ ನಿರ್ಬಂಧಗಳು ಮತ್ತು ಅಮೆರಿಕದ ನೌಕಾ ದಿಗ್ಬಂಧನದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಅಂದಾಜಿನ ಪ್ರಕಾರ, 2026 ರಲ್ಲಿ ಇರಾನ್ನ ನೈಜ ಜಿಡಿಪಿ 6.1% ರಷ್ಟು ಕುಗ್ಗುವ ನಿರೀಕ್ಷೆಯಿದೆ. ತೈಲ ರಫ್ತು ಮಾತ್ರವಲ್ಲದೆ, ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳೂ ನಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿವೆ. ದಾಖಲೆ ಮಟ್ಟದ ಹಣದುಬ್ಬರ ಇರಾನ್ನ ವಾರ್ಷಿಕ ಹಣದುಬ್ಬರ ದರವು ಸರಾಸರಿ 68.9% ತಲುಪಿದ್ದು, ಜೂನ್ ವೇಳೆಗೆ ಇದು ಬರೋಬ್ಬರಿ 88.6% ಕ್ಕೆ ಏರಿಕೆಯಾಗಿದೆ. ಇದು ಎರಡನೇ ಮಹಾಯುದ್ಧದ ನಂತರ ದೇಶ ಕಂಡ ಅತ್ಯಂತ ಗರಿಷ್ಠ ಮಟ್ಟದ ಹಣದುಬ್ಬರವಾಗಿದೆ. ಇರಾನ್ನ ಕರೆನ್ಸಿಯಾದ ರಿಯಾಲ್ (Rial) ಮೌಲ್ಯ ತೀವ್ರವಾಗಿ ಕುಸಿದಿದ್ದು, ಪ್ರಸ್ತುತ ಒಂದು ಯುಎಸ್ ಡಾಲರ್ಗೆ ಸುಮಾರು 1.9 ಮಿಲಿಯನ್ ರಿಯಾಲ್ ದಾಟಿದೆ. ಆಹಾರ ಪದಾರ್ಥಗಳ ಬೆಲೆಗಳು 100% ಕ್ಕಿಂತ ಹೆಚ್ಚು ದುಬಾರಿಯಾಗಿವೆ. ಬ್ರೆಡ್, ಧಾನ್ಯಗಳು (140% ಏರಿಕೆ), ಮಾಂಸ (135% ಏರಿಕೆ) ಮತ್ತು ಹಾಲಿನ ಉತ್ಪನ್ನಗಳ ಬೆಲೆ ಸಾಮಾನ್ಯ ಜನರಿಗೆ ಕೈಗೆಟುಕದಂತಾಗಿದೆ. ತೀವ್ರ ಆರ್ಥಿಕ ಮುಗ್ಗಟ್ಟಿನಿಂದಾಗಿ ಇರಾನ್ ಸರ್ಕಾರ ತನ್ನ ಮಿಲಿಟರಿ ಸಿಬ್ಬಂದಿಗೆ ವೇತನ ನೀಡಲು ಮತ್ತು ವಿಕಲಚೇತನರ ಭತ್ಯೆಗಳನ್ನು ಪಾವತಿಸಲು ತಡಕಾಡುತ್ತಿದೆ. ತೈಲ ರಫ್ತು ಸ್ಥಗಿತ ಮತ್ತು ವ್ಯಾಪಾರ ನಷ್ಟ ಯುಎಸ್ ನೌಕಾಪಡೆಯು ಇರಾನ್ನ ದಕ್ಷಿಣ ಬಂದರುಗಳನ್ನು ದಿಗ್ಬಂಧನಗೊಳಿಸಿರುವುದರಿಂದ ಇರಾನ್ನ ತೈಲ ರಫ್ತು ಬಹುತೇಕ ಶೂನ್ಯಕ್ಕೆ ತಲುಪಿದೆ. ಇರಾನ್ನ ಅತಿ ದೊಡ್ಡ ವಾಣಿಜ್ಯ ಪಾಲುದಾರನಾಗಿದ್ದ ಚೀನಾಕ್ಕೆ ಆಗುತ್ತಿದ್ದ ತೈಲ ರಫ್ತು ಮತ್ತು ತೈಲೇತರ ವ್ಯಾಪಾರದಲ್ಲಿ ಸುಮಾರು 75% ನಷ್ಟು ಭಾರಿ ಕುಸಿತ ಕಂಡುಬಂದಿದೆ. ಪ್ರಸ್ತುತ ಇರಾನ್ ತಕ್ಷಣದ ಆರ್ಥಿಕ ಕುಸಿತವನ್ನು ತಡೆಯಲು ತನ್ನ ನೆರೆಹೊರೆಯ ದೇಶಗಳೊಂದಿಗೆ ವಸ್ತು ವಿನಿಮಯ (ಬಾರ್ಟರ್ ಸಿಸ್ಟಮ್ – ಉದಾಹರಣೆಗೆ ಅಕ್ಕಿಗಾಗಿ ಗ್ಯಾಸ್ ನೀಡುವುದು) ಪದ್ಧತಿಯನ್ನು ಅವಲಂಬಿಸಿದೆ. ಇರಾನ್ ವ್ಯಾಪಾರ ಪಾಲುದಾರ ದೇಶಗಳು: ಚೀನಾ: ಇರಾನ್ನ ಅತ್ಯಂತ ದೊಡ್ಡ ಆರ್ಥಿಕ ಮತ್ತು ವ್ಯಾಪಾರ ಪಾಲುದಾರ ದೇಶ. ಇರಾನ್ನ 80% ಕ್ಕಿಂತ ಹೆಚ್ಚು ಕಚ್ಚಾ ತೈಲ ಚೀನಾಕ್ಕೇ ರಫ್ತಾಗುತ್ತದೆ. ಪ್ರತಿಯಾಗಿ ಇರಾನ್ ಚೀನಾದಿಂದ ಯಂತ್ರೋಪಕರಣಗಳು, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನವನ್ನು ಆಮದು ಮಾಡಿಕೊಳ್ಳುತ್ತದೆ. ಟರ್ಕಿ: ಇರಾನ್ನೊಂದಿಗೆ ಗಡಿ ಹಂಚಿಕೊಂಡಿರುವ ಟರ್ಕಿಯು ಇರಾನ್ನಿಂದ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಖರೀದಿಸಿ, ಕೈಗಾರಿಕಾ ಉಪಕರಣಗಳನ್ನು ಮಾರಾಟ ಮಾಡುತ್ತದೆ. ಇರಾಕ್: ಇರಾನ್ ತನ್ನ ನೆರೆಹೊರೆಯ ಇರಾಕ್ಗೆ ಹೆಚ್ಚಿನ ಪ್ರಮಾಣದಲ್ಲಿ ನೈಸರ್ಗಿಕ ಅನಿಲ ಮತ್ತು ವಿದ್ಯುತ್ ಅನ್ನು ರಫ್ತು ಮಾಡುತ್ತದೆ. ಭಾರತ: ಭಾರತವು ಇರಾನ್ನಿಂದ ರಾಸಾಯನಿಕಗಳು ಮತ್ತು ಒಣ ಹಣ್ಣುಗಳನ್ನು (ಬಾದಾಮಿ, ಪಿಸ್ತಾ, ಒಣದ್ರಾಕ್ಷಿ) ಆಮದು ಮಾಡಿಕೊಳ್ಳುತ್ತದೆ. ಪ್ರತಿಯಾಗಿ ಭಾರತವು ಇರಾನ್ಗೆ ಬಾಸ್ಮತಿ ಅಕ್ಕಿ, ಚಹಾ ಎಲೆಗಳು ಮತ್ತು ಪ್ರಮುಖ ಔಷಧಗಳನ್ನು (Pharmaceuticals) ರಫ್ತು ಮಾಡುತ್ತದೆ. ರಷ್ಯಾ: ಯುರೇಷಿಯನ್ ಆರ್ಥಿಕ ಒಕ್ಕೂಟದ (EAEU) ಒಪ್ಪಂದದ ಮೂಲಕ ರಷ್ಯಾದೊಂದಿಗೆ ಇರಾನ್ ಮಿಲಿಟರಿ ಮತ್ತು ಆರ್ಥಿಕ ಸಹಕಾರವನ್ನು ಹೆಚ್ಚಿಸಿಕೊಂಡಿದೆ.