ಶ್ರೇಷ್ಠತೆಯ ವ್ಯಸನ ಅರಿವಿನ ಹರಣ
ನಿಮ್ಮನ್ನು ಎಳವೆಯಿಂದಲೇ ಗುಹೆಯೊಂದರಲ್ಲಿ ಬಂಧಿಸಿಡಲಾಗಿದೆ; ಕೈ–ಕಾಲುಗಳನ್ನು ಕಬ್ಬಿಣದ ಸರಳುಗಳಿಂದ ಬಿಗಿಯಲಾಗಿದೆ. ನಿಮ್ಮ ಮುಖವು ಗುಹೆಯ ಒಂದು ಕಡೆಯ ಗೋಡೆಯತ್ತ ಇದೆ; ಆ ಗೋಡೆಯನ್ನು ಬಿಟ್ಟು ಇನ್ನೊಂದನ್ನು ನೋಡಲು ನಿಮಗೆ ಸಾಧ್ಯವಿಲ್ಲ. ನಿಮ್ಮ ಬೆನ್ನಿನ ಹಿಂದೆ ಬೆಂಕಿಯ ದೊಡ್ಡ ಉರಿಯೊಂದಿದೆ. ನಿಮಗೂ ಆ ಉರಿಗೂ ನಡುವೆ ನಡೆದಾಡುವಷ್ಟು ಜಾಗ. ಈ ಓಣಿಯಲ್ಲಿ ಸೆರೆಮನೆಯ ಆಳುಗಳ

ನಿಮ್ಮನ್ನು ಎಳವೆಯಿಂದಲೇ ಗುಹೆಯೊಂದರಲ್ಲಿ ಬಂಧಿಸಿಡಲಾಗಿದೆ; ಕೈ–ಕಾಲುಗಳನ್ನು ಕಬ್ಬಿಣದ ಸರಳುಗಳಿಂದ ಬಿಗಿಯಲಾಗಿದೆ. ನಿಮ್ಮ ಮುಖವು ಗುಹೆಯ ಒಂದು ಕಡೆಯ ಗೋಡೆಯತ್ತ ಇದೆ; ಆ ಗೋಡೆಯನ್ನು ಬಿಟ್ಟು ಇನ್ನೊಂದನ್ನು ನೋಡಲು ನಿಮಗೆ ಸಾಧ್ಯವಿಲ್ಲ. ನಿಮ್ಮ ಬೆನ್ನಿನ ಹಿಂದೆ ಬೆಂಕಿಯ ದೊಡ್ಡ ಉರಿಯೊಂದಿದೆ. ನಿಮಗೂ ಆ ಉರಿಗೂ ನಡುವೆ ನಡೆದಾಡುವಷ್ಟು ಜಾಗ. ಈ ಓಣಿಯಲ್ಲಿ ಸೆರೆಮನೆಯ ಆಳುಗಳು ವಿಧವಿಧವಾದ ವಸ್ತುಗಳನ್ನು ಕೊಂಡೊಯ್ಯುತ್ತಿರುತ್ತಾರೆ. ಈ ವಸ್ತುಗಳ ನೆರಳುಗಳು ನೀವು ನೋಡುತ್ತಿರುವ ಗೋಡೆಯ ಮೇಲೆ ಮೂಡುತ್ತಿರುತ್ತವೆ. ಈ ನೆರಳಿನ ಆಕೃತಿಗಳನ್ನಷ್ಟೆ ನೀವು ನೋಡಿ ಬೆಳೆಯುತ್ತಿರುವುದು. ಅಕಸ್ಮಾತ್ ನಿಮಗೆ ಸೆರೆಯಿಂದ ಬಿಡುಗಡೆ ಲಭಿಸಿತು ಎಂದಿಟ್ಟುಕೊಳ್ಳಿ. ಕೇವಲ ನೆರಳಿನ ಆಕೃತಿಗಳನ್ನಷ್ಟೆ ನೋಡಿ ಬೆಳೆದಿರುವ ನೀವು ಬಾಹ್ಯಪ್ರಪಂಚಕ್ಕೆ ಬಂದಾದಮೇಲೆ ಇಲ್ಲಿಯ ನೈಜ ಆಕೃತಿಗಳನ್ನು ಹೇಗೆ ಸ್ವೀಕರಿಸುತ್ತೀರಿ? ನಿಮ್ಮ ವಾಸ್ತವಜಗತ್ತು ಆಗ ಹೇಗಿರುತ್ತದೆ?ಈ ಗುಹಾಪ್ರತಿಮೆಯನ್ನು ಪ್ಲೇಟೊ ಕಂಡರಿಸಿರುವುದು – ಸತ್ಯದ ಜಿಜ್ಞಾಸೆಯ ಸಂದರ್ಭದಲ್ಲಿ. ನಮ್ಮ ಸುತ್ತಮುತ್ತ ನಡೆಯುತ್ತಿರುವ ಹಲವು ಘಟನೆಗಳನ್ನು ಅವಲೋಕಿಸಿದಾಗಲೆಲ್ಲ ಈ ಪ್ಲೇಟೊಗುಹೆ ನೆನಪಾಗುತ್ತಿರುತ್ತದೆ. ನೆರಳನ್ನು ಕಂಡವರು ‘ಸತ್ಯ’ಸ್ಥಾಪನೆಯ ಬಗ್ಗೆ ನಡೆಸುವ ಹೋರಾಟ- ಹಾರಾಟಗಳು ಸಹೃದಯರ ಮನಸ್ಸನ್ನು ವಿಚಲಿತಗೊಳಿಸದಿರದು.ವರ್ಷದಲ್ಲಿ ಒಮ್ಮೆಯಾದರೂ ಶಂಕರಾಚಾರ್ಯರು ಮತ್ತು ಮಧ್ವಾಚಾರ್ಯರ ಅನುಯಾಯಿಗಳ ಬೈದಾಟಗಳ ಕದನ ನಡೆಯುವುದು ನಮ್ಮಲ್ಲಿ ಸಹಜವಾಗಿಬಿಟ್ಟಿದೆ! ಈ ಸಂಗ್ರಾಮಕ್ಕೆ ನೂರಾರು ವರ್ಷಗಳ ಇತಿಹಾಸ ಇರುವುದೂ ದಿಟ. ಆದರೆ, ಇದು ನಿಲ್ಲುವುದು ಯಾವಾಗ?ಮತ–ಪಂಥಗಳ ಇಂಥ ಬಡಿದಾಟಗಳು ಭಾರತಕ್ಕಷ್ಟೆ ಸೀಮಿತವಾಗಿಲ್ಲ; ಜಗತ್ತಿನಾದ್ಯಂತ ಎಲ್ಲ ಮತೀಯ ಗುಂಪುಗಳು ಇಂಥವನ್ನು ಬಹಳ ವ್ಯವಸ್ಥಿತವಾಗಿಯೇ ನಡೆಸಿಕೊಂಡುಬರುತ್ತಿವೆಯೆನ್ನಿ. ಜಾಗತಿಕವಾಗಿ ಸುದ್ದಿಯಲ್ಲಿರುವ ಅಮೆರಿಕ–ಇರಾನ್ ಯುದ್ಧ, ಇಸ್ರೇಲ್–ಮುಸ್ಲಿಂ ರಾಷ್ಟ್ರಗಳ ಯುದ್ಧ, ಜಾಗತಿಕ ಭಯೋತ್ಪಾದನೆ, ಮತಾಂತರದ ಉದ್ಯಮ; ನಮ್ಮಲ್ಲಿಯ ಮಠೀಯ ಗುಂಪುಗಾರಿಕೆ, ಅಸ್ಪೃಶ್ಯತೆ, ಮತೀಯ ಜಗಳಗಳು, ಜಾತಿಗಳ ಬಡಿದಾಟ – ಹೀಗೆ ಜಗತ್ತಿನ ಹೆಚ್ಚು ಕಡಿಮೆ ಎಲ್ಲ ಸಮಸ್ಯೆಗಳ ಮೂಲಕಾರಣದ ಬೀಜವೇ ಈ ಶಂಕರ–ಮಧ್ವಶಿಷ್ಯರ ರಣಾಂಗಣಕ್ಕೂ ಬೀಜ; ಶ್ರೇಷ್ಠತೆಯ ವ್ಯಸನವೇ ಈ ಎಲ್ಲ ವ್ಯಾಧಿಗಳ ಮೂಲಕಾರಣ.ಶಂಕರ ಮತ್ತು ಮಧ್ವರು ಇಬ್ಬರೂ ತತ್ತ್ವಜ್ಞಾನಿಗಳು; ಸತ್ಯವನ್ನು ಅರಿಯಲು ಹೊರಟವರು; ತಮ್ಮದಾದ ನೆಲೆಯಿಂದ ಸತ್ಯವನ್ನೂ ಕಂಡುಕೊಂಡವರು. ಆದರೆ, ಈ ಇಬ್ಬರನ್ನು ಬಳಸಿಕೊಂಡು ಅವರ ಅನುಯಾಯಿಗಳು ಎಬ್ಬಿಸಿರುವ ಗಬ್ಬಿನಲ್ಲಿ ತತ್ತ್ವಶಾಸ್ತ್ರೀಯ ವಿವರಗಳಿಗಿಂತಲೂ ಮತೀಯವಾದ ಸಂಕುಚಿತಬುದ್ಧಿಯೇ ಪ್ರಧಾನ ಪಾತ್ರದಲ್ಲಿದೆ. ಹೇಗೆ ವಿಜ್ಞಾನದೊಂದಿಗೆ ತಂತ್ರಜ್ಞಾನ ಸೇರಿಕೊಂಡಾಗ ತಂತ್ರಜ್ಞಾನದ ವ್ಯಾವಹಾರಿಕತೆಯ ಕ್ಷುದ್ರತೆಗಳ ಭಾರವನ್ನು ವಿಜ್ಞಾನವು ಹೊರಬೇಕಾಗುತ್ತದೆಯೋ, ಹಾಗೆಯೆ ತತ್ತ್ವಜಿಜ್ಞಾಸೆಯ ಜೊತೆಗೆ ಮತೀಯವಾದವು ಸೇರಿಕೊಂಡು ಮಾಡುವ ಹುನ್ನಾರಗಳ ಕಳಂಕವನ್ನು ತತ್ತ್ವಶಾಸ್ತ್ರವೇ ನಿಭಾಯಿಬೇಕಾಗುತ್ತದೆ. ಮಣಿಮಂಜರಿ, ಶಂಕರದಿಗ್ವಿಜಯ, ಮಧ್ವವಿಜಯ, ಲಲಿತವಿಸ್ತರ, ಜಾತಕಕಥೆಗಳು – ಇಂಥ ‘ಪುರಾಣ’ಗಳ ನೆರಳಿನಲ್ಲಿ ತತ್ತ್ವದ ಬೆಳಕನ್ನು ಅರಸುವುದರಲ್ಲಿಯೇ ಸಮಸ್ಯೆಯಿದೆ. ಪುರಾಣಗಳನ್ನು ‘ಮಿಥ್’ಗಳನ್ನಾಗಿ ಗ್ರಹಿಸದೆ ಅವನ್ನು ಇತಿಹಾಸವಾಗಿ, ತತ್ತ್ವಶಾಸ್ತ್ರವಾಗಿ ಸ್ವೀಕರಿಸುತ್ತಿರುವುದೇ ಜಗತ್ತಿನ ಎಲ್ಲ ಮತ–ಪಂಥಗಳು ಸೃಷ್ಟಿಸುತ್ತಿರುವ ಅನರ್ಥಗಳಿಗೆ ಕಾರಣವಾಗಿದೆ. ಶಂಕರಾಚಾರ್ಯರೇ ಒದಗಿಸಿರುವ ‘ವಸ್ತುತಂತ್ರ’ ಮತ್ತು ‘ಪುರುಷತಂತ್ರ’ಗಳ ಕಲ್ಪನೆಯು ಪುರಾಣಗಳಿಗೂ, ತಾತ್ತ್ವಿಕ ಗ್ರಂಥಗಳಿಗೂ ಇರುವ ವ್ಯತ್ಯಾಸವನ್ನು ತಿಳಿಯಲು ಸಹಕಾರಿಯಾದೀತು. ವಸ್ತುತಂತ್ರ ಎಂದರೆ ದಿಟವಾದ ವಸ್ತುಗಳು, ಪುರುಷತಂತ್ರ ಎಂದರೆ ನಾವು ಕಾಣುತ್ತಿರುವ ನೆರಳಿನ ಆಕೃತಿಗಳು ಎಂದು ಸದ್ಯ ಒಕ್ಕಣಿಸಬಹುದು. ಪುರಾಣಗಳನ್ನು ನೆಚ್ಚಿಕೊಂಡು ಆತ್ಯಂತಿಕ ಸತ್ಯವನ್ನು ಪ್ರತಿಪಾದಿಸುವುದು ಎಂದರೆ ನೆರಳನ್ನು ನೋಡಿಕೊಂಡು ದಿಟವಾದ ವಸ್ತುಗಳನ್ನು ವಿವರಿಸಿದಂತೆ ಆಗುತ್ತದೆ.ಹೀಗೆಂದು ಇಂದು ನಾವು ತತ್ತ್ವಶಾಸ್ತ್ರದ ಗ್ರಂಥಗಳು ಎಂದು ಕರೆಯುತ್ತಿರುವ ಕೃತಿಗಳೇನೂ ಸ್ವಯಂ– ಪರಿಪೂರ್ಣವಾದವು ಎಂದೇನಲ್ಲ. ಸತ್ಯಸಾಕ್ಷಾತ್ಕಾರ ಎನ್ನುವುದು ಮನುಷ್ಯನಿಗೆ ಎಂದಾದರೂ ಸಾಧ್ಯವೆ? ಅಥವಾ ತಾನು ಸತ್ಯ ಎಂದು ಭಾವಿಸಿಕೊಂಡಿರುವುದು ದಿಟವಾಗಿಯೂ ಸತ್ಯವೇ ಹೌದೆ? – ಎಂಬುದೇ ತತ್ತ್ವಜಿಜ್ಞಾಸೆಯಲ್ಲಿ ಉಳಿಯುವ ಮತ್ತು ಉಳಿಯಬೇಕಾದ ಕೊನೆಯ ಪ್ರಶ್ನೆ. ಹೀಗಿರುವಾಗ, ಯಾರಾದರೂ ‘ನಾನು ಕಂಡದ್ದೇ ಅಂತಿಮ ಸತ್ಯ’ ಅಥವಾ ‘ನಮ್ಮ ಮತ-ಪಂಥದ ಗ್ರಂಥವೇ ಕೊನೆಯ ಸತ್ಯ’ ಎಂದು ಪ್ರತಿಪಾದಿಸುವುದು ಹಾಸ್ಯಾಸ್ಪದವಾದೀತಲ್ಲವೆ? ಇಂಥ ಕೂಗಾಟಗಳೆಲ್ಲವೂ ನಮ್ಮ ಹೆಗಲ ಮೇಲೆ ನಾವೇ ನಿಂತು ಮೊಳಗಿಸುವ ಕದನದ ಕಹಳೆಗಳಷ್ಟೆ!ಪುರುಷತಂತ್ರವು ಮತೀಯ ನಂಬಿಕೆ–ಆಚರಣೆಗಳತ್ತ ನಮ್ಮನ್ನು ಸೆಳೆದರೆ, ವಸ್ತುತಂತ್ರವು ಆಧ್ಯಾತ್ಮಿಕತೆಯ ಕಡೆಗೆ ಒಯ್ಯುತ್ತದೆ. ಈ ಎರಡೂ ‘ಮಾರ್ಗ’ಗಳು ಪಾಪದ ಹಾದಿಯನ್ನು ತುಳಿಯುವ ಸಾಧ್ಯತೆಯಿರುತ್ತದೆ. ಆನಂದ ಕುಮಾರಸ್ವಾಮಿ ಅವರುಮತೀಯವಾದದ ಪಾಪಮಾರ್ಗವನ್ನು ನೈತಿಕಮೂಲವಾದುದು ಎಂದೂ,ಆಧ್ಯಾತ್ಮಿಕತೆಯದ್ದು ಪ್ರಜ್ಞಾಸ್ತರದ್ದೆಂದೂ ಕರೆದಿದ್ದಾರೆ. ಈ ಎರಡೂ ಪಾಪಗಳ ಮೂಲದಲ್ಲಿ ನಮ್ಮ ಸ್ವಾರ್ಥದ ಆಯಾಮವೇ ಇರುವುದು; ಒಂದರಲ್ಲಿ ‘ನನ್ನ ದಾರಿಯೇ ಸತ್ಯ’, ಮತ್ತೊಂದರಲ್ಲಿ ‘ನಾನು ಕಂಡದ್ದಷ್ಟೆ ಸತ್ಯ’. ಎಂದರೆ, ‘ನಾನು’, ‘ನನ್ನದು’ – ಎಂಬುದೇ ಇಂದಿನ ಸಮಸ್ಯೆಗಳಿಗೆ ಮೂಲ. ಹೀಗಾಗಿಯೇ ಈ ಮಿತಿಯನ್ನು ಮೀರಲು ತತ್ತ್ವಶಾಸ್ತ್ರದಲ್ಲಿ ಸತ್ಯದ ನಿರೂಪಣೆಗೆ ಪ್ರಮಾಣಗಳನ್ನು ಆಶ್ರಯಿಸಲಾಯಿತು; ಈ ಪ್ರಮಾಣಗಳಲ್ಲಿ ಗ್ರಂಥಗಳನ್ನೂ ಸೇರಿಸಲಾಯಿತು. ತತ್ತ್ವಾನ್ವೇಷಣೆಯಲ್ಲಿ ವೈಯಕ್ತಿಕತೆಯನ್ನು ಮೀರಿ, ವೈಶ್ವಿಕತೆಯನ್ನು ಸಾಧಿಸುವುದು ಈ ಪ್ರಮಾಣಗ್ರಂಥಗಳ ಉದ್ದೇಶ. ಆದರೆ, ಈ ವೈಶ್ವಿಕತೆಯಾದರೂ ಹಲವು ವೈಯಕ್ತಿಕತೆಗಳ ಸಂಹಿತೆಯೆಂಬುದೂ ದಿಟವೇ. ‘ಹಲವು’ ಎಂಬ ಬಹುಸಂಖ್ಯೆಯೇ ಸತ್ಯನಿರ್ಧಾರಕ್ಕೆ ಮಾನದಂಡವಾಗದಷ್ಟೆ. ಆದುದರಿಂದಲೇ ಆತ್ಯಂತಿಕ ಸತ್ಯವನ್ನು ನಾವು ಎಂದಾದರೂ ಕಂಡುಕೊಳ್ಳಲು ಸಾಧ್ಯವಾದೀತೆ– ಎಂಬ ಸಂದೇಹದಲ್ಲಿಯೇ ‘ನಮ್ಮ ಸತ್ಯ’ದ ಅನುಸಂಧಾನ ನಡೆಯಬೇಕಾಗುತ್ತದೆ. ಈ ಕಾರಣದಿಂದಾಗಿ, ಪ್ರಮಾಣಗ್ರಂಥಗಳ ನೆರಳು ನಮ್ಮ ನೆಮ್ಮದಿಗೆ ತಂಪನ್ನು ಒದಗಿಸುವ ಮೂಲವಾಗಬೇಕೆ ವಿನಾ ನಮ್ಮ ವಿವೇಕವನ್ನು ಬಂಧಿಸುವ ಕಬಂಧಬಾಹುಗಳಾಗಬಾರದು. ಈ ಕಾರಣದಿಂದಲೇ ಎಲ್ಲ ಆಚಾರ್ಯರೂ ನಾವು ತತ್ತ್ವಜಿಜ್ಞಾಸೆಯನ್ನು ನಡೆಸುವುದಕ್ಕೂ ಮೊದಲು ನಮ್ಮ ಮೈ–ಮನಗಳ ಕೊಳೆಯನ್ನು ತೊಳೆದುಕೊಳ್ಳಬೇಕೆಂದು ಆಗ್ರಹಿಸಿದರು; ಕೆಲವರು ಭಾವ–ಬುದ್ಧಿಗಳ ಈ ನಿಮಜ್ಜನ ಕೌಶಲವನ್ನು ‘ಸಾಧನಚತುಷ್ಟಯ’ ಎಂದರು, ಕೆಲವರು ‘ಶೀಲಗಳು’ ಎಂದರು; ಸತ್ಯವನ್ನು ಕಾಣುವ ಮೊದಲು ನಮ್ಮ ಬದುಕು ಹಸನಾಗಬೇಕೆಂದು ಹಾರೈಸಿದರು. ಬದುಕು ಹದವಾಗಿ ಸಿದ್ಧವಾಗದೆ ತತ್ತ್ವದ ಬೆಳಕು ಮೊಳೆಯದು.ಸತ್ಯವನ್ನು ಗ್ರಂಥಕ್ಕೋ ಕಾಲಕ್ಕೋ ವ್ಯಕ್ತಿಗೋ ಸೀಮಿತಮಾಡುವುದರಲ್ಲಿಯೇ ತಾತ್ತ್ವಿಕ ಸಮಸ್ಯೆ ಇದೆ. ಹಲವು ಆಯಾಮಗಳಲ್ಲಿ ನಾವು ತತ್ತ್ವಚಿಂತನೆಯನ್ನು ಮಾಡಬೇಕಾಗುತ್ತದೆ. ನಾವು ನೆಚ್ಚಿಕೊಂಡಿರುವ ಪ್ರಾಚೀನ ಗ್ರಂಥಗಳು ತತ್ತ್ವವನ್ನು ನಿರೂಪಿಸಲು ಬಳಸುವುದು ರೂಪಕಭಾಷೆಯನ್ನು. ಇದನ್ನು ವಾಚ್ಯವಾಗಿ ಸ್ವೀಕರಿಸಿರುವುದೇ ಮತೀಯ ಸಂಘರ್ಷಗಳಿಗೆ ಮೂಲ ಇಂಧನ. ನಮ್ಮ ಈ ಅಪಾರ್ಥಗಳನ್ನು ಕುಮಾರಸ್ವಾಮಿಯವರು ‘The misunderstanding is profound’ (ನಮ್ಮ ಅಪಾರ್ಥವು ಅಗಾಧವಾದುದು!) ಎಂದಿದ್ದಾರೆ.ಹೀಗಿರುವಾಗ ‘ನನ್ನ ಗುರುಗಳಷ್ಟೆ ಶ್ರೇಷ್ಠ’, ‘ನನ್ನ ಗ್ರಂಥವಷ್ಟೆ ಶ್ರೇಷ್ಠ’, ‘ನನ್ನ ದೇವರಷ್ಟೆ ಶ್ರೇಷ್ಠ’ ಎಂದು ನಾವು ಇನ್ನೊಬ್ಬರೊಂದಿಗೆ ಬಡಿದಾಡುವುದಾದರೂ ಯಾವ ಪುರುಷಾರ್ಥಕ್ಕೆ? ನಮ್ಮ ಸತ್ಯ ಇನ್ನೊಂದು ನೆಲೆಯಿಂದ ಅನೃತವಾಗಿರಬಹುದು; ನಮ್ಮ ಅನೃತ ಇನ್ನೊಂದು ದೃಷ್ಟಿಯಿಂದ ಸತ್ಯವಾಗಿರಬಹುದು. ಸತ್ಯ ಮತ್ತು ಅನೃತಗಳ ಜಡೆಯಲ್ಲಿ ಕ್ಷಣಕ್ಷಣವೂ ಮೂಡುವ ಸೃಷ್ಟಿಸೌಂದರ್ಯವನ್ನು ಸವಿಯಲು ನಮಗೆ ಸಮನ್ವಯದೃಷ್ಟಿ ಬೇಕಾಗುತ್ತದೆ. ಸಾವಿರಾರು ವರ್ಷಗಳಿಂದ ಈ ಸ್ವಾಸ್ಥ್ಯಸಂಹಿತೆಯನ್ನು ನೆಲೆಗೊಳಿಸಿದ ಹಲವರು ತತ್ತ್ವಜ್ಞಾನಿಗಳಿದ್ದಾರೆ. ಇಂದು ನಾವು ಅಂಥವರ ಕೈ ಹಿಡಿದುಕೊಂಡು, ಅವಿವೇಕದ ಕೂಪದಲ್ಲಿ ಬೀಳದಂತೆ ಎಚ್ಚರಿಕೆಯಿಂದ ಮುನ್ನಡೆಯಬೇಕಿದೆ. ದುರಭಿಮಾನ ಎಂಬ ರೋಗಕ್ಕೆ ತುತ್ತಾದ ವಿವರಣಕಾರರು ಎಲ್ಲ ಕಾಲದಲ್ಲೂ ಇರುತ್ತಾರೆ; ಅಂಥವರು ತತ್ತ್ವವನ್ನು ತಪ್ಪಾಗಿ ತಿಳಿಸುತ್ತ ಜನರ ದಿಕ್ಕನ್ನು ತಪ್ಪಿಸುತ್ತಿರುತ್ತಾರೆ (ವಿವರಣಕಾರೈಃ ದುರಭಿಮಾನನಿವೇಶೇನ ಪ್ರತಾರಿತೋ ಜನಃ) – ಎಂದು ಅಭಿನವಗುಪ್ತರು ಸಾವಿರ ವರ್ಷಗಳ ಮೊದಲೇ ಎಚ್ಚರಿಸಿದ್ದಾರೆ. ಪಾಪಕ್ಕೆ ಕಾರಣವೇ ಎಚ್ಚರವನ್ನು ತಪ್ಪುವುದು. ನಮ್ಮ ವಿವೇಕವನ್ನು ಮತ–ಪಂಥ–ಗ್ರಂಥಗಳ ಶ್ರೇಷ್ಠತೆಯ ವ್ಯಸನದಲ್ಲಿ ಕಳೆದುಕೊಳ್ಳುವುದು ಭಕ್ತಿಯೋ ಅಥವಾ ಜ್ಞಾನವೋ ಅಲ್ಲ, ಮತಾಂಧತೆಯಷ್ಟೆ.ಇಂದಿನ ತತ್ತ್ವಜಿಜ್ಞಾಸೆಗೆ ಸಾಮಾಜಿಕ ಆಯಾಮವೂ ಒದಗಬೇಕಿದೆ. ನಮ್ಮನ್ನು ನಮಗೇ ಇನ್ನೊಬ್ಬರ ಕಣ್ಣಿನಲ್ಲಿ ಕಾಣಿಸಬಲ್ಲ ವಿವೇಕದೃಷ್ಟಿಯೇ ಈ ಸಾಮಾಜಿಕತೆಯ ಬ್ರಹ್ಮಸೂತ್ರ. ಈ ದರ್ಶನವನ್ನು ಕುಮಾರಸ್ವಾಮಿ ಅವರು ‘ಅನಂತದರ್ಪಣ’ ಎಂದಿರುವುದು ಮನನೀಯ. ನಮ್ಮದು ‘ರೀಡಿಂಗ್ ಫಿಲಾಸಫಿ’ಯಿಂದ ‘ಡೂಯಿಂಗ್ ಫಿಲಾಸಫಿ’ ಆಗಬೇಕಿದೆ. ನಮ್ಮ ಮತಗ್ರಂಥಗಳ ಪಾರಾಯಣ, ಆಚರಣೆಗಳ ತೋರಣ, ವಿಚಾರಗಳ ಹೂರಣ ನಮ್ಮನ್ನು ದೇವರ ಗಡಿಗೆ ಒಯ್ಯದಿದ್ದರೂ ಪರವಾಗಿಲ್ಲ, ಮನುಷ್ಯತ್ವದ ಗುಡಿಯಲ್ಲಿ ನೆಲೆಗೊಳಿಸಲಿ, ಸಾಮರಸ್ಯದ ನಡೆ–ನುಡಿಗಳನ್ನು ಕಲಿಸಲಿ.