ಚಿನ್ನಸ್ವಾಮಿ ಕಾಲ್ತುಳಿತ ಕೇಸ್| ಕ್ಲೀನ್ ಚಿಟ್ ವರದಿ ನಾನೇ ಸುಟ್ಟು ಹಾಕ್ತೀನಿ: ಅಶೋಕ್ ಕಿಡಿ
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣಕ್ಕೆ(Chinnaswamy Stampede Case) ಸಂಬಂಧಿಸಿದಂತೆ ಸರ್ಕಾರ ನೀಡಿರುವ ಕ್ಲೀನ್ ಚಿಟ್ ವರದಿಯ ಪ್ರತಿ ಸಿಕ್ಕ ತಕ್ಷಣ, ಅದನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(KSCA) ಆವರಣಕ್ಕೆ ತೆಗೆದುಕೊಂಡು ಹೋಗಿ ನಾನೇ ಬೆಂಕಿ ಹಚ್ಚಿ ಸುಟ್ಟು ಹಾಕುತ್ತೇನೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್ (R Ashok) ತೀ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣಕ್ಕೆ(Chinnaswamy Stampede Case) ಸಂಬಂಧಿಸಿದಂತೆ ಸರ್ಕಾರ ನೀಡಿರುವ ಕ್ಲೀನ್ ಚಿಟ್ ವರದಿಯ ಪ್ರತಿ ಸಿಕ್ಕ ತಕ್ಷಣ, ಅದನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(KSCA) ಆವರಣಕ್ಕೆ ತೆಗೆದುಕೊಂಡು ಹೋಗಿ ನಾನೇ ಬೆಂಕಿ ಹಚ್ಚಿ ಸುಟ್ಟು ಹಾಕುತ್ತೇನೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್ (R Ashok) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಪಿಎಸ್ಸಿ ಅಕ್ರಮದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿರುವುದನ್ನು ಖಂಡಿಸಿ ಪ್ರತಿಕ್ರಿಯಿಸಿದ ಅವರು, ನಮ್ಮ ನಿರಂತರ ಹೋರಾಟಕ್ಕೆ ಈಗ ಅರ್ಧ ಜಯ ಸಿಕ್ಕಿದೆ. ಈ ಬೃಹತ್ ಅಕ್ರಮದ ಸಮಗ್ರ ತನಿಖೆಯನ್ನು ಸ್ವತಂತ್ರ ಸಂಸ್ಥೆಯಾದ ಸಿಬಿಐಗೆ ವಹಿಸಬೇಕೆಂದು ನಾವು ಪಟ್ಟು ಹಿಡಿದಿದ್ದೆವು. ಆದರೆ ಸರ್ಕಾರ ಉದ್ದೇಶಪೂರ್ವಕವಾಗಿ ಪ್ರಕರಣವನ್ನು CIDಗೆ ನೀಡಿದೆ. CIDಗೆ ಪ್ರಕರಣ ನೀಡಿದರೆ ಅಂತಿಮವಾಗಿ ಪ್ರಭಾವಿಗಳಿಗೆ ಕ್ಲೀನ್ ಚಿಟ್ ನೀಡಿ ಪ್ರಕರಣ ಮುಚ್ಚಿಹಾಕುವುದು ಸರ್ಕಾರದ ತಂತ್ರ ಎಂದು ಕಿಡಿಕಾರಿದರು. ಕಾಲ್ತುಳಿತದಲ್ಲಿ 11 ಅಮಾಯಕರು ಪ್ರಾಣ ಕಳೆದುಕೊಂಡರೂ ಯಾರಿಗೂ ಶಿಕ್ಷೆಯಾಗಿಲ್ಲ, ಉನ್ನತ ಮಟ್ಟದ ಕ್ಲೀನ್ ಚಿಟ್ ನೀಡಲಾಗಿದೆ. 11 ಜನರ ಸಾವಿಗೆ ಅಸಲಿ ಕಾರಣ ಯಾರು? ಅವರಿಗೆ ನ್ಯಾಯ ಸಿಗಬೇಡವೇ ಎಂದು ಜನ ಪ್ರಶ್ನಿಸುತ್ತಿದ್ದಾರೆ. ವರದಿಯ ಪ್ರತಿ ಕೈಗೆ ಸಿಕ್ಕ ಕೂಡಲೇ ಕೆಎಸ್ಸಿಎ ಕಚೇರಿ ಮುಂದೆ ನಿಂತು ಆ ವರದಿಯನ್ನು ಸುಟ್ಟು ಹಾಕಿ ಪ್ರತಿಭಟಿಸುತ್ತೇನೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಹರಿಸಬಾರದು: ಗಣಿಗ ರವಿಕುಮಾರ್ ಆಗ್ರಹ ಕಾಕ್ರೋಚ್ ಪಾರ್ಟಿ ಹೋರಾಟದಲ್ಲಿ ಸತ್ತವರಿಗೆ 1 ಕೋಟಿ ಕೊಡಿ ಎಂದು ಕೇಳುತ್ತಾರೆ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತ್ತ ಬಡ ಜನರಿಗೆ ನೀಡಿದ್ದು ಕೇವಲ 20 ಲಕ್ಷ ರೂಪಾಯಿ ಮಾತ್ರ. ಪರಿಹಾರ ವಿತರಣೆಯಲ್ಲೂ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಈ ಎಲ್ಲಾ ವಿಷಯಗಳನ್ನು, ಸರ್ಕಾರದ ಹಿನ್ನಡೆಗಳನ್ನು ಮತ್ತು ವೈಫಲ್ಯಗಳನ್ನು ಮುಂಬರುವ ಶಾಸನಸಭೆಯ ಅಧಿವೇಶನದಲ್ಲಿ ಗಂಭೀರವಾಗಿ ಪ್ರಸ್ತಾಪಿಸುತ್ತೇವೆ. ಜನರ ಪರವಾಗಿ ನಮ್ಮ ಹೋರಾಟವನ್ನು ಬೀದಿಯಿಂದ ಸದನದವರೆಗೂ ಕೊಂಡೊಯ್ಯುತ್ತೇವೆ ಎಂದು ಸ್ಪಷ್ಟಪಡಿಸಿದರು.