1,152 ಗ್ರಾ.ಪಂ: ಆರಂಭವಾಗದ ‘ವಿಬಿ ಜಿ ರಾಮ್ ಜಿ’
ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಕಾರಣಕ್ಕೆ ಜನರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರ ನಿರ್ದೇಶನ ನೀಡಿದರೂ, ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತರಿಯ ‘ವಿಬಿ ಜಿ ರಾಮ್ ಜಿ’ (ವಿಕಸಿತ ಭಾರತ್– ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)’ ಯೋಜನೆಯು ಒಟ್ಟು 5,958 ಗ್ರಾಮ ಪಂಚಾಯಿತಿಗಳ ಪೈಕಿ

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಕಾರಣಕ್ಕೆ ಜನರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರ ನಿರ್ದೇಶನ ನೀಡಿದರೂ, ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತರಿಯ ‘ವಿಬಿ ಜಿ ರಾಮ್ ಜಿ’ (ವಿಕಸಿತ ಭಾರತ್– ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)’ ಯೋಜನೆಯು ಒಟ್ಟು 5,958 ಗ್ರಾಮ ಪಂಚಾಯಿತಿಗಳ ಪೈಕಿ 1,152ರಲ್ಲಿ ಇನ್ನೂ ಆರಂಭ ಆಗಿಲ್ಲ.ನರೇಗಾ (ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ) ಕಾಯ್ದೆ ಬದಲಿಗೆ ಕೇಂದ್ರ ಸರ್ಕಾರ ಜುಲೈ 1ರಿಂದ ‘ವಿಬಿ ಜಿ ರಾಮ್ ಜಿ’ ಯೋಜನೆಯನ್ನು ಜಾರಿಗೆ ತಂದಿದೆ. ಹೊಸ ಯೋಜನೆಯಡಿ ಈವರೆಗೆ (ಜುಲೈ 27) ಇಡೀ ರಾಜ್ಯದಲ್ಲಿ ಕೇವಲ 10.23 ಲಕ್ಷ ಮಾನವ ದಿನಗಳು ಸೃಜನೆ ಆಗಿವೆ.‘ನರೇಗಾ ಜಾರಿಯಲ್ಲಿದ್ದ 2025ರ ಜುಲೈ ತಿಂಗಳಲ್ಲಿ 61.49 ಲಕ್ಷ ಮಾನವ ದಿನಗಳು ಸೃಜನೆ ಆಗಿದ್ದವು. ಆ ಮೂಲಕ, ಕಳೆದ ವರ್ಷಕ್ಕೆ ಹೋಲಿಸಿದರೆ ಜುಲೈ ತಿಂಗಳಲ್ಲಿ ಹೊಸ ಯೋಜನೆಯ ಪ್ರಗತಿಯು ಶೇಕಡ 83.36ಕ್ಕಿಂತ ಕಡಿಮೆ ದಾಖಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿವೆ.‘ವಿಬಿ ಜಿ ರಾಮ್ ಜಿ’ ಅಡಿ 13,670 ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಪೈಕಿ, ತುಮಕೂರು ಜಿಲ್ಲೆಯಲ್ಲಿ ಅತೀ ಹೆಚ್ಚು 2,157, ಬೆಳಗಾವಿಯಲ್ಲಿ 1,437 ಕಾಮಗಾರಿಗಳು ನಡೆಯುತ್ತಿವೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೊಪ್ಪಳ, ಕೊಡಗು, ಯಾದಗಿರಿ, ಚಿಕ್ಕಮಗಳೂರು, ಉಡುಪಿ, ವಿಜಯನಗರ ಜಿಲ್ಲೆಗಳಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳ ಸಂಖ್ಯೆ ಕಡಿಮೆ. ಗದಗ, ಉತ್ತರ ಕನ್ನಡ, ಕೊಡಗು, ಯಾದಗಿರಿ, ಕಲಬುರಗಿ, ಧಾರವಾಡ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಾನವ ದಿನಗಳ ಸೃಜನೆ ಸಂಖ್ಯೆ ತೀರಾ ಕಡಿಮೆಯಿದೆ ಎಂದು ಮೂಲಗಳು ಹೇಳಿವೆ.ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ರಾಜ್ಯದಲ್ಲಿನ ಬರ ಪರಿಸ್ಥಿತಿ ಅವಲೋಕಿಸಲು ಇದೇ 18ರಂದು ಸಭೆ ನಡೆಸಿದ್ದರು. ಅಂದಿನ ಸಭೆಗೆ ಅಧಿಕಾರಿಗಳು ನೀಡಿದ್ದ ಮಾಹಿತಿಯ ಪ್ರಕಾರ 2,443 ಗ್ರಾಮ ಪಂಚಾಯಿತಿಗಳಲ್ಲಿ ‘ವಿಬಿ ಜಿ ರಾಮ್ ಜಿ’ ಯೋಜನೆ ಆರಂಭ ಆಗಿರಲಿಲ್ಲ. ಜನರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಈ ಯೋಜನೆಗೆ ಚಾಲನೆ ನೀಡುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದರು. ಪರಿಣಾಮವಾಗಿ ಯೋಜನೆ ಆರಂಭವಾಗದ ಗ್ರಾಮ ಪಂಚಾಯಿತಿಗಳ ಸಂಖ್ಯೆ ಜುಲೈ 24ರ ವೇಳೆಗೆ 1,226ಕ್ಕೆ ಇಳಿದಿತ್ತು. ‘ಯೋಜನೆಯ ಮಾರ್ಗಸೂಚಿ ಅನುಸಾರ ನಿಗದಿತ ಅವಧಿಯ ಒಳಗೆ ಫಲಾನುಭವಿಗಳಿಗೆ ಕೂಲಿ ಪಾವತಿಸಬೇಕು. ಸದ್ಯ ಬಿಡುಗಡೆ ಮಾಡಿರುವ ಅನುದಾನವನ್ನು ಕೂಲಿಗೆ ಮಾತ್ರ ವೆಚ್ಚ ಮಾಡಬೇಕು. ಕೂಲಿ ಪಾವತಿಸುವುದು ವಿಳಂಬವಾದರೆ ಸಂಬಂಧಿಸಿದ ಅಧಿಕಾರಿಗಳು ನೇರ ಹೊಣೆಗಾರರಾಗುತ್ತಾರೆ’ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.‘ವಿಬಿ ಜಿ ರಾಮ್ ಜಿ’ ಅಡಿ ಕೂಲಿ ಕಾರ್ಮಿಕರಿಗೆ 100ರಿಂದ 125 ಮಾನವ ದಿನ ಸೃಜನೆಗೆ ಅವಕಾಶ ಕಲ್ಪಿಸಲಾಗಿದೆ. ಕೂಲಿ ಮೊತ್ತ ₹ 370ರಿಂದ 382ಕ್ಕೆ ಹೆಚ್ಚಳಗೊಂಡಿದೆ. ನಿರಂತರ ಉದ್ಯೋಗದ ಖಾತರಿಯಿಂದ 125 ದಿನಗಳಿಗೆ ಸುಮಾರು ₹ 47,750 ಗಳಿಸಬಹುದಾಗಿದೆ. ಯೋಜನೆಯಲ್ಲಿ 318 ರೀತಿಯ ಕಾಮಗಾರಿಗಳಿವೆ. ಸಂಪೂರ್ಣ ಪಾರದರ್ಶಕತೆ ಮತ್ತು ತಂತ್ರಜ್ಞಾನದೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಈ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಬಹುದು’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.‘ರೈತರಿಗೆ ಅನುಕೂಲವಾಗಲೆಂದು ಕೃಷಿ ಚಟುವಟಿಕೆಗಳ ಹಂಗಾಮಿನ ಉತ್ತುಂಗದ ಅವಧಿ, ಅಂದರೆ, ಬಿತ್ತನೆ ಮತ್ತು ಕಟಾವು ಸಮಯದಲ್ಲಿ 60 ದಿನಗಳ ಕಾಲ ‘ವಿಬಿ– ಜಿ ರಾಮ್ ಜಿ’ ಯೋಜನೆಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಇಲ್ಲ. ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರ ಲಭ್ಯತೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಹೊಸ ಕಾಯ್ದೆಯಲ್ಲಿಯೇ ಈ ಅವಕಾಶ ಕಲ್ಪಿಸಲಾಗಿದೆ. ರೈತರು ಈ ಅವಧಿಯಲ್ಲಿ ತಮ್ಮ ಸ್ವಂತ ಕೆಲಸದಲ್ಲಿ ತೊಡಗಿಕೊಳ್ಳಬಹುದು. ರಾಜ್ಯ ಸರ್ಕಾರಗಳು 60 ದಿನಗಳ ಬಿಡುವಿನ ಅವಧಿಯನ್ನು ಮೊದಲೇ ತಿಳಿಸಿ ಅಧಿಸೂಚನೆ ಹೊರಡಿಸಬೇಕು. ಈಗಾಗಲೇ ಎಲ್ಲ ಜಿಲ್ಲೆಗಳಿಂದ ಈ ಬಗ್ಗೆ ಪ್ರಸ್ತಾವಗಳು ಬಂದಿವೆ. ಶೀಘ್ರದಲ್ಲಿ ಈ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಲಿದೆ’ ಎಂದೂ ಅವರು ಹೇಳಿದರು. ಕೂಲಿ ಪಾವತಿಗೆ ₹ 1,000 ಕೋಟಿವಿಬಿ ಜಿ ರಾಮ್ ಜಿ’ ಯೋಜನೆಯ ಕೂಲಿ ವೆಚ್ಚಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರವು 60:40 ಅನುಪಾತದಲ್ಲಿ ಅನುದಾನ ಬಿಡುಗಡೆ ಮಾಡಬೇಕಿದೆ. ಕೇಂದ್ರ ಸರ್ಕಾರವು ತನ್ನ ಪಾಲಿನ ₹ 972.71 ಕೋಟಿ ಬಿಡುಗಡೆ ಮಾಡಿದ್ದು, ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ತನ್ನ ಪಾಲಿನ₹ 648.47 ಕೋಟಿ ಬಿಡುಗಡೆ ಮಾಡಿದೆ. ಆ ಮೂಲಕ, ಒಟ್ಟು 1,621.18 ಕೋಟಿ ಬಿಡುಗಡೆಯಾಗಿದೆ. ಈ ಮೊತ್ತದಲ್ಲಿ ₹ 1 ಸಾವಿರ ಕೋಟಿಯನ್ನು ಯೋಜನೆಯ ಫಲಾನುಭವಿಗಳಿಗೆ ಕೂಲಿ ಪಾವತಿಸಲು ಎಲ್ಲ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳ ಡಿಡಿಒಗಳಿಗೆ (ಹಣ ಬಿಡುಗಡೆ ಮತ್ತು ವಿತರಣಾ ಅಧಿಕಾರಿಗಳು) ಹಂಚಿಕೆ ಮಾಡಿ ಬಿಡುಗಡೆಗೊಳಿಸಲಾಗಿದೆ.