ಕಾವೇರಿ ನೀರಿಗಾಗಿ ಮತ್ತೆ CWRC ಮೊರೆ ಹೋದ ತಮಿಳುನಾಡು – ಪ್ರತ್ಯಾಸ್ತ್ರ ಹೂಡಲು ಮುಂದಾದ ಕರ್ನಾಟಕ
ಮಂಡ್ಯ: ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC)ಯ ಮಹತ್ವದ ಸಭೆ ನಡೆಯಲಿದ್ದು, ಸಭೆಯ ತೀರ್ಪಿನ ಮೇಲೆ ಕಾವೇರಿ ಕೊಳ್ಳದ ರೈತರ ಕಣ್ಣು ನೆಟ್ಟಿದೆ. ಮಳೆಯಿಲ್ಲದೆ ರಾಜ್ಯದ ಜಲಾಶಯಗಳು ಬತ್ತಿಹೋಗಿದ್ದರೂ, ತಮಿಳುನಾಡು (Tamil Nadu) ಮಾತ್ರ ತನ್ನ ಪಾಲಿನ ನೀರು ಬಿಡುವಂತೆ ಪಟ್ಟು ಹಿಡಿದಿರುವುದು ತೀವ್ರ ಚರ

ಮಂಡ್ಯ: ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC)ಯ ಮಹತ್ವದ ಸಭೆ ನಡೆಯಲಿದ್ದು, ಸಭೆಯ ತೀರ್ಪಿನ ಮೇಲೆ ಕಾವೇರಿ ಕೊಳ್ಳದ ರೈತರ ಕಣ್ಣು ನೆಟ್ಟಿದೆ. ಮಳೆಯಿಲ್ಲದೆ ರಾಜ್ಯದ ಜಲಾಶಯಗಳು ಬತ್ತಿಹೋಗಿದ್ದರೂ, ತಮಿಳುನಾಡು (Tamil Nadu) ಮಾತ್ರ ತನ್ನ ಪಾಲಿನ ನೀರು ಬಿಡುವಂತೆ ಪಟ್ಟು ಹಿಡಿದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ತಮಿಳುನಾಡಿಗೆ ಹರಿಯಬೇಕಿದ್ದ ನೀರಿನ ಪಾಲನ್ನು ಬಿಡುಗಡೆ ಮಾಡುವಂತೆ ಆ ರಾಜ್ಯದ ಪ್ರತಿನಿಧಿಗಳು ಇಂದಿನ ಸಭೆಯಲ್ಲಿ ಬಲವಾಗಿ ವಾದ ಮಂಡಿಸಲಿದ್ದಾರೆ. ನಿಯಮದ ಪ್ರಕಾರ ಜೂನ್ನಲ್ಲಿ 9.19 ಟಿಎಂಸಿ ಹಾಗೂ ಜುಲೈನಲ್ಲಿ 31.24 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ ಈವರೆಗೆ ಕೇವಲ ಮೂರುವರೆ ಟಿಎಂಸಿ ನೀರು ಮಾತ್ರ ಹರಿದಿದೆ ಎಂದು ತಮಿಳುನಾಡು ಕ್ಯಾತೆ ತೆಗೆದಿದೆ. ಇದನ್ನೂ ಓದಿ: ಕೆಆರ್ಎಸ್ ಡ್ಯಾಂ ಒಳಹರಿವಿನಲ್ಲಿ ಭಾರೀ ಕುಸಿತ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ತಮಿಳುನಾಡಿಗೆ ನೀರು ಹರಿಸುವುದು ಸಂಪೂರ್ಣವಾಗಿ ಅಸಾಧ್ಯ ಎಂದು ಕರ್ನಾಟಕದ ಅಧಿಕಾರಿಗಳು ಸಭೆಯಲ್ಲಿ ವಾದ ಮಂಡಿಸಲಿದ್ದಾರೆ. ಕಾವೇರಿ ಕೊಳ್ಳದ ಕೆಆರ್ಎಸ್ ಸೇರಿದಂತೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ತಳಕಾಣುತ್ತಿದ್ದು, ಈಗಿರುವ ಅಲ್ಪಸ್ವಲ್ಪ ನೀರನ್ನು ಕೇವಲ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಮೀಸಲಿಡಲಾಗಿದೆ ಎಂದು ಸ್ಪಷ್ಟಪಡಿಸಲಿದ್ದಾರೆ. ಕರ್ನಾಟಕ ಮಂಡಿಸಲಿರುವ ಪ್ರಮುಖ ವಾದಗಳು 1. ಕುಡಿಯುವ ನೀರಿಗೆ ಮೊದಲ ಆದ್ಯತೆ: ಬೆಳೆಗಳಿಗಿಂತ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪಿನ ಅಂಶವನ್ನು ಸಭೆಯ ಮುಂದಿಡಲಾಗುತ್ತದೆ. 2. ಡೆಡ್ ಸ್ಟೋರೇಜ್ಗಿಂತ ಕೆಳಗೆ ಇಳಿಯುವ ಆತಂಕ: ಒಂದು ವೇಳೆ ಈಗ ತಮಿಳುನಾಡಿಗೆ ನೀರು ಬಿಟ್ಟರೆ, ರಾಜ್ಯದ ಜಲಾಶಯಗಳಲ್ಲಿನ ನೀರಿನ ಮಟ್ಟ ಡೆಡ್ ಸ್ಟೋರೇಜ್ಗಿಂತಲೂ ಕುಸಿದು ಕುಡಿಯುವ ನೀರಿಗೂ ತೀವ್ರ ಹಾಹಾಕಾರ ಉಂಟಾಗಲಿದೆ. 3. ಸಂಕಷ್ಟದ ಪರಿಸ್ಥಿತಿ: ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ರೈತರು ಸಂಕಷ್ಟದಲ್ಲಿದ್ದು, ತಮಿಳುನಾಡಿನ ಒತ್ತಡಕ್ಕೆ ಮಣಿದು ನೀರು ಬಿಡುವುದು ಪ್ರಾಯೋಗಿಕವಾಗಿ ಅಸಾಧ್ಯ ಎಂಬ ವಾಸ್ತವಿಕ ಪರಿಸ್ಥಿತಿಯನ್ನು ಸಮಿತಿಯ ಮುಂದಿಡಲಾಗುತ್ತದೆ. ರಾಜ್ಯದ ಜನಜೀವನ ಹಾಗೂ ಕುಡಿಯುವ ನೀರಿನ ಹಿತದೃಷ್ಟಿಯಿಂದ ಇಂದಿನ CWRC ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು ಯಾವ ರೀತಿಯ ಸಮರ್ಥನೆ ನೀಡಲಿದ್ದಾರೆ ಮತ್ತು ಸಮಿತಿ ಯಾವ ತೀರ್ಪು ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಮೇಕೆದಾಟು ಯೋಜನೆಗೆ ತಮಿಳುನಾಡು ಸಮ್ಮತಿ ಅಗತ್ಯವಿಲ್ಲ: ಕೇಂದ್ರ ಸ್ಪಷ್ಟನೆ