ಗದಗ | ಗ್ರಾಮ ಪಂಚಾಯತ್ ನಿರ್ಲಕ್ಷ್ಯಕ್ಕೆ ಬೇಸತ್ತ ಜನ; ಕಚೇರಿ ಮುಂದೆ ಕಸ ಸುರಿದು ಪ್ರತಿಭಟನೆ
ಗದಗ: ಮೂಲ ಸೌಲಭ್ಯಗಳ ಕೊರತೆಯಿಂದ ಬೇಸತ್ತ ಗ್ರಾಮಸ್ಥರು ಗ್ರಾಮ ಪಂಚಾಯತ್ (Gram Panchayat) ಕಚೇರಿ ಎದುರೇ ಚರಂಡಿಯ ಕಸ ಸುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಗದಗ (Gadag) ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದಲ್ಲಿ ನಡೆದಿದೆ. ಸೂಡಿ ಗ್ರಾಮದ ರಾಜೀವ್ ಗಾಂಧಿ ಕಾಲೋನಿಯ ನಿವಾಸಿಗಳು ಜೆಸಿಬಿ ಮೂಲಕ ಚರಂಡಿಯ ಕಲುಷಿತ ಕಸವನ್ನು ತಂದು ಗ್ರಾಮ ಪಂಚಾಯತ್ ಕಚೇರಿ ಮುಂದ

ಗದಗ: ಮೂಲ ಸೌಲಭ್ಯಗಳ ಕೊರತೆಯಿಂದ ಬೇಸತ್ತ ಗ್ರಾಮಸ್ಥರು ಗ್ರಾಮ ಪಂಚಾಯತ್ (Gram Panchayat) ಕಚೇರಿ ಎದುರೇ ಚರಂಡಿಯ ಕಸ ಸುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಗದಗ (Gadag) ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದಲ್ಲಿ ನಡೆದಿದೆ. ಸೂಡಿ ಗ್ರಾಮದ ರಾಜೀವ್ ಗಾಂಧಿ ಕಾಲೋನಿಯ ನಿವಾಸಿಗಳು ಜೆಸಿಬಿ ಮೂಲಕ ಚರಂಡಿಯ ಕಲುಷಿತ ಕಸವನ್ನು ತಂದು ಗ್ರಾಮ ಪಂಚಾಯತ್ ಕಚೇರಿ ಮುಂದೆ ಸುರಿದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕಳೆದ ಒಂದು ವರ್ಷದಿಂದ ಚರಂಡಿ ಹಾಗೂ ರಸ್ತೆ ಸ್ವಚ್ಛತೆ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮಸ್ಥರ ಹೇಳಿಕೆಯ ಪ್ರಕಾರ, ಈ ಗ್ರಾಮ ಪಂಚಾಯತ್ನಲ್ಲಿ ಕಳೆದ ಒಂದು ತಿಂಗಳಿಂದ ಪಿಡಿಒ ಇಲ್ಲ. ಒಂದು ವರ್ಷದಿಂದ ಕಾರ್ಯದರ್ಶಿಯೂ ಇಲ್ಲ. ಕಳೆದ 18 ತಿಂಗಳಿಂದ ಜನಪ್ರತಿನಿಧಿಗಳ ಆಡಳಿತವೂ ಇಲ್ಲ. ಇದರ ಜೊತೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೂ ಇಲ್ಲದ ಕಾರಣ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪಂಚಾಯತ್ನಲ್ಲಿ ಏಳು ಮಂದಿ ಸ್ವಚ್ಛತಾ ಸಿಬ್ಬಂದಿ ಹಾಗೂ ಸ್ವಚ್ಛತಾ ವಾಹನ ಇದ್ದರೂ ಕೆಲಸ ಸರಿಯಾಗಿ ನಡೆಯುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಾಜೀವ್ ಗಾಂಧಿ ಕಾಲೋನಿಯಲ್ಲಿರುವ ಕಸ್ತೂರಬಾ ಶಾಲೆ, ಅಂಗನವಾಡಿ, ಸರ್ಕಾರಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯದ ಸುತ್ತಮುತ್ತ ಕಲುಷಿತ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸ್ವಿಗ್ಗಿ ವಿರುದ್ಧ ಸಿಡಿದ ಬೆಂಗಳೂರು ಹೋಟೆಲ್ ಮಾಲೀಕರು: ಆ.15ರ ಗಡುವು, ಬೇಡಿಕೆ ಈಡೇರದಿದ್ದರೆ ಸೇವೆ ಬಂದ್ ಚರಂಡಿಯ ದುರ್ವಾಸನೆ, ಸೊಳ್ಳೆ ಹಾಗೂ ಕ್ರಿಮಿಕೀಟಗಳ ಹಾವಳಿಯಿಂದ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ಹಲವರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಹಲವು ಬಾರಿ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಪ್ರತಿದಿನ ಅನುಭವಿಸುವ ದುರ್ವಾಸನೆ ಮತ್ತು ಸಮಸ್ಯೆಯನ್ನು ಅಧಿಕಾರಿಗಳೂ ಅರಿಯಲಿ ಎಂಬ ಕಾರಣಕ್ಕೆ ಕಸವನ್ನು ಪಂಚಾಯತ್ ಕಚೇರಿ ಮುಂದೆ ಸುರಿದಿದ್ದೇವೆ. ನಮ್ಮ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡರೂ ಹೆದರುವುದಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.ಇದನ್ನೂ ಓದಿ: ಗೋವಾದಲ್ಲಿ 48 ಸಾವಿರ ಮೌಲ್ಯದ ಗಾಂಜಾ ವಶಕ್ಕೆ ಪಡೆದ ಕಾರವಾರ ಪೊಲೀಸರು