ಬಿಡದಿ: ಮೂಲಸೌಕರ್ಯ ನಿರೀಕ್ಷೆಯಲ್ಲಿ ಬಾನಂದೂರು
ಬಿಡದಿ: ಪಟ್ಟಣದ ವಾರ್ಡ್–18ರ ಬಾನಂದೂರು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಗ್ರಾಮದಲ್ಲಿ ಈಗಾಗಲೇ ಕೈಗೊಂಡಿದ್ದ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿದ್ದರೂ ಗ್ರಾಮವು ಅಭಿವೃದ್ಧಿ ಕಂಡಿಲ್ಲ.ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಬಾಲಗಂಗಾಧರನಾಥಸ್ವಾಮೀಜಿ ಅವರ ಪೂರ್ವಾಶ್ರಮಆಗಿರುವ ಈ ಗ್ರಾಮವು ನಾಡಿಗೂ ಪರಿಚಿತ. ಸುಮಾರು

ಬಿಡದಿ: ಪಟ್ಟಣದ ವಾರ್ಡ್–18ರ ಬಾನಂದೂರು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಗ್ರಾಮದಲ್ಲಿ ಈಗಾಗಲೇ ಕೈಗೊಂಡಿದ್ದ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿದ್ದರೂ ಗ್ರಾಮವು ಅಭಿವೃದ್ಧಿ ಕಂಡಿಲ್ಲ.ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಬಾಲಗಂಗಾಧರನಾಥಸ್ವಾಮೀಜಿ ಅವರ ಪೂರ್ವಾಶ್ರಮಆಗಿರುವ ಈ ಗ್ರಾಮವು ನಾಡಿಗೂ ಪರಿಚಿತ. ಸುಮಾರು 600 ಮನೆಗಳೊಂದಿಗೆ 3 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮವು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಗ್ರಾಮ ಸಂಪರ್ಕಿಸುವ ರಸ್ತೆಯೂ ಉತ್ತಮವಾಗಿಲ್ಲ.ಹಿಂದಿನ ಸರ್ಕಾರದ ಅವಧಿಯಲ್ಲಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ₹25 ಕೋಟಿ ಘೋಷಣೆ ಮಾಡಲಾಗಿತ್ತು. ಅದಾಗಿ ಮೂರ್ನಾಲ್ಕು ವರ್ಷ ಕಳೆದರೂ ಅರ್ಧದಷ್ಟು ಹಣ ಮಾತ್ರ ಬಿಡುಗಡೆಯಾಗಿದೆ. ಅದರಲ್ಲಿ ಕೈಗೊಂಡ ಕೈಗೊಂಡ ಕಾಮಗಾರಿಗಳು ಕಾಗದದ ಮೇಲಷ್ಟೇ ಉಳಿದಿವೆ.ನನೆಗುದಿಗೆ ಬಿದ್ದ ನೀರಿನ ಘಟಕ: ಆದಿಚುಂಚನಗಿರಿ ಮಠದ ಶಾಖೆಯ ಮುಂಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವು ಕೆಟ್ಟು ತಿಂಗಳುಗಳಾದರೂ ರಿಪೇರಿ ಭಾಗ್ಯ ಕಂಡಿಲ್ಲ. ಇದರಿಂದಾಗಿ ಸ್ಥಳೀಯರಿಗೆ ಶುದ್ಧ ಕುಡಿಯುವ ನೀರಿನ ಭಾಗ್ಯವೂ ಇಲ್ಲವಾಗಿದೆ. ಘಟಕವನ್ನು ರಿಪೇರಿ ಮಾಡಿಸುವ ಯೋಗ್ಯತೆಯೂ ಪುರಸಭೆಗೆ ಇಲ್ಲವಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.ಒಳಚರಂಡಿ (ಯುಜಿಡಿ) ಕಾಮಗಾರಿಗಾಗಿ ಗ್ರಾಮದ ಮುಖ್ಯರಸ್ತೆಯನ್ನು ಅಗೆದು ಎರಡು ವರ್ಷವಾದರೂ ಸರಿಯಾಗಿ ಮುಚ್ಚದೆ ಹಾಗೆಯೇ ಬಿಡಲಾಗಿದೆ. ಆಮೆಗತಿಯಲ್ಲಿ ಸಾಗುತ್ತಿರುವ ಕೆಲಸದಿಂದಾಗಿ ಕಳೆದೆರಡು ವರ್ಷಗಳಿಂದ ಗ್ರಾಮಕ್ಕೆ ಯಾವುದೇ ಸರ್ಕಾರಿ ಬಸ್ಸುಗಳು ಬರುತ್ತಿಲ್ಲ. ಸ್ಥಳೀಯರ ಆಡಳಿತಗಳ ನಿರ್ಲಕ್ಷ್ಯಕ್ಕೆ ಗ್ರಾಮವು ಒಳಗಾಗಿದೆ ಎಂದು ಅಸಮಾಧಾನ ಹೊರಹಾಕಿದರು.ಗ್ರಾಮದಿಂದ ನಿತ್ಯ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಪಕ್ಕದ ಊರುಗಳಿಗೆ ಕಾಲ್ನಡಿಗೆಯಲ್ಲಿ ಅಥವಾ ಖಾಸಗಿ ವಾಹನಗಳಲ್ಲಿ ಹೋಗಬೇಕಾದ ಸ್ಥಿತಿ ಇದೆ. ಗ್ರಾಮದಲ್ಲಿ ಸರ್ಕಾರಿ ಜಾಗದಲ್ಲಿ ಸ್ಮಶಾನವಿದ್ದರೂ ಅದಕ್ಕೆ ಸೂಕ್ತ ದಾರಿಯಿಲ್ಲದೆ ಸಾರ್ವಜನಿಕರು ಶವ ತೆಗೆದುಕೊಂಡು ಹೋಗಿ ಸಂಸ್ಕಾರ ಕಾರ್ಯ ಮಾಡಿಬರಲು ಪರದಾಡುವಂತಾಗಿದೆ ಎಂದು ಸಮಸ್ಯೆಗಳನ್ನು ಬಿಚ್ಚಿಟ್ಟರು.‘ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’‘ಗ್ರಾಮದಲ್ಲಿ ಕೈಗೊಂಡಿರುವ ಕಾಮಗಾರಿಗಳು ವಿಳಂಬವಾಗಿವೆ. ಯುಜಿಡಿ ಒಂದೂವರೆ ವರ್ಷದಿಂದಲೂ ಆಮೆಗತಿಯಲ್ಲಿ ನಡೆಯುತ್ತಿದೆ. ತ್ವರಿತವಾಗಿ ಮುಗಿಸುವಂತೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಪುರಸಭೆ ಅಧಿಕಾರಿಗಳು ಗ್ರಾಮದ ಅಭಿವೃದ್ಧಿ ವಿಷಯದಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ವಾರ್ಡ್ 18ರ ಬಾನಂದೂರಿನ ಪುರಸಭೆ ಸದಸ್ಯ ಕೆ. ಶ್ರೀನಿವಾಸ್ ‘ಪ್ರಜಾವಾಣಿ’ ಜೊತೆ ಅಸಹಾಯಕತೆ ತೋಡಿಕೊಂಡರು.–ನಂಜುಂಡಿ, ಸ್ಥಳೀಯ ನಿವಾಸಿಒಳಚರಂಡಿ ಕಾಮಗಾರಿ ನೆಪದಲ್ಲಿ ಅಗೆದಿರುವ ರಸ್ತೆಯನ್ನು ದುರಸ್ತಿ ಮಾಡಿಸಬೇಕು. ಗ್ರಾಮಕ್ಕೆ ಬಸ್ ಸಂಚಾರ ಮತ್ತೆ ಆರಂಭಿಸುವ ಮೂಲಕ ಸ್ಥಳೀಯರಿಗೆ ಅನುಕೂಲ ಮಾಡಿಕೊಡಬೇಕು.–ಬಿ.ಎನ್. ಗಂಗಾಧರಯ್ಯ, ಸ್ಥಳೀಯ ನಿವಾಸಿಸರ್ಕಾರ ಘೋಷಿಸಿದ್ದ ₹25 ಕೋಟಿ ಅನುದಾನವನ್ನು ಸರ್ಕಾರ ಸಂಪೂರ್ಣವಾಗಿ ಬಿಡುಗಡೆ ಮಾಡಬೇಕು. ಗ್ರಾಮದಲ್ಲಿ ಶಾಶ್ವತವಾಗಿ ಉಳಿಯುವಂತಹ ಮಾದರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260728-14-1696746572