ಮೂಲ್ಕಿ: JDS ಮಹಿಳಾ ಘಟಕದ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ ರಸ್ತೆ ಅಪಘಾತದಲ್ಲಿ ಸಾವು
ಮೂಲ್ಕಿ: ಜನತಾದಳ (ಜಾತ್ಯತೀತ) ಪಕ್ಷದ ಮೂಲ್ಕಿ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಶಶಿಪ್ರಭಾ (47) ಅವರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಚೌಡೇನಹಳ್ಳಿ ಸಮೀಪ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶಶಿಪ್ರಭಾ ಅವರು ಮೂಲ್ಕಿ ಕಾರ್ನಾಡ್ ಕೆ.ಎಸ್.ರಾವ್ ನಗರ, ಕೊರಂಟಬೆಟ್ಟು ನಿ

ಮೂಲ್ಕಿ: ಜನತಾದಳ (ಜಾತ್ಯತೀತ) ಪಕ್ಷದ ಮೂಲ್ಕಿ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಶಶಿಪ್ರಭಾ (47) ಅವರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಚೌಡೇನಹಳ್ಳಿ ಸಮೀಪ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶಶಿಪ್ರಭಾ ಅವರು ಮೂಲ್ಕಿ ಕಾರ್ನಾಡ್ ಕೆ.ಎಸ್.ರಾವ್ ನಗರ, ಕೊರಂಟಬೆಟ್ಟು ನಿವಾಸಿ. ಮೂಲ್ಕಿ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ದಿ.ಶಶಿಕಾಂತ್ ಶೆಟ್ಟಿ ಅವರ ಸಹೋದರಿ. ಅವರು ಹಲವು ಸಾಮಾಜಿಕ, ಧಾರ್ಮಿಕ ಹಾಗೂ ಸೇವಾ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹಾಸನ ಜಿಲ್ಲೆಯ ಬೆಳ್ಳೂರು ಕ್ರಾಸ್ ಸಮೀಪ 'ಯಶಸ್ವಿ‘ ಡಾಬಾ ನಡೆಸುತ್ತಿದ್ದರು. ಶಶಿಪ್ರಭಾ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಾರ್ಕಳ ನಿವಾಸಿ ದಿನೇಶ್ (34), ಮಂಡ್ಯ ನಿವಾಸಿ ಸುಜನ್ (20) ಹಾಗೂ ಕಾರು ಚಾಲಕ ಅಖಿಲ್ (20) ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಶಶಿಪ್ರಭಾ ತಮ್ಮ ಕಾರಿನಲ್ಲಿ ಮೂಲ್ಕಿಗೆ ಪ್ರಯಾಣಿಸುತ್ತಿದ್ದ ವೇಳೆ, ಚೌಡೇನಹಳ್ಳಿ ಸಮೀಪ ಹೆದ್ದಾರಿಯಲ್ಲಿ ಹಂದಿಯೊಂದು ಸತ್ತು ಬಿದ್ದಿರುವುದನ್ನು ಚಾಲಕ ಅಖಿಲ್ ಗಮನಿಸಿದ್ದರು. ವೇಗವನ್ನು ಕಡಿಮೆ ಮಾಡಿ ಕಾರನ್ನು ಬದಿಗೆ ಸರಿಸಿದ್ದರು. ಈ ವೇಳೆ ಹಿಂಬದಿಯಿಂದ ಅತಿವೇಗದಲ್ಲಿ ಬಂದ ಫೋರ್ಡ್ ಕಾರು ರಸ್ತೆಯಲ್ಲಿದ್ದ ಹಂದಿಯ ಮೇಲೆಯೇ ಹರಿದು ನಿಯಂತ್ರಣ ತಪ್ಪಿ ಶಶಿಪ್ರಭಾ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಕಾರು ಹಲವು ಬಾರಿ ಪಲ್ಟಿಯಾಗಿದ್ದು, ಹಿಂಬದಿ ಆಸನದಲ್ಲಿ ಕುಳಿತಿದ್ದ ಅವರು ತೀವ್ರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಕೊನೆಯುಸಿರೆಳೆದರು. ಅಪಘಾತ ಎಸಗಿದ ಫೋರ್ಡ್ ಕಾರಿನ ಚಾಲಕ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಶಶಿಫ್ರಭಾ ಅವರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.ಮೂಲ್ಕಿ ಕೆರೆಕಾಡಿನ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು. ಜನತಾದಳ (ಜಾತ್ಯತೀತ) ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಜಾಕೆ ಮಾಧವ ಗೌಡ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಅಂತಿಮನಮನ ಸಲ್ಲಿಸಿದರು.