ಕೊರತೆಗಳ ನಡುವೆ ಜನರ ಬದುಕು
ಹೆತ್ತಕ್ಕಿ (ಹೊಸಕೋಟೆ): ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರತಿ ಬೇಸಿಗೆಯಲ್ಲೂ ನೀರಿಗೆ ಹಾಹಾಕಾರ, ಸ್ವಚ್ಛತೆ ಮತ್ತು ಮೂಲ ಸೌಕರ್ಯ ಕಣ್ಮರೆಯಾಗಿದ್ದು, ಜನರು ಕೊರತೆಗಳ ನಡುವೆ ಜೀವನ ನಡೆಸುತ್ತಿದ್ದಾರೆ.ಬೀರಹಳ್ಳಿ, ಲಿಂಗಾಪುರ, ಆಗಸರಹಳ್ಳಿ, ಮಾರಸಂಡಹಳ್ಳಿ, ಸತ್ತಿಗಾನಹಳ್ಳಿ, ಬಾಣಾಮಾಕನಹಳ್ಳಿ, ಒಬಳಹಳ್ಳಿ, ಉಳವನಹಳ್ಳಿ, ಬಂಡಹಳ್ಳಿ ಗ್ರಾಮಗಳು ರಾಷ್ಟ್ರೀಯ ಹೆದ

ಹೆತ್ತಕ್ಕಿ (ಹೊಸಕೋಟೆ): ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರತಿ ಬೇಸಿಗೆಯಲ್ಲೂ ನೀರಿಗೆ ಹಾಹಾಕಾರ, ಸ್ವಚ್ಛತೆ ಮತ್ತು ಮೂಲ ಸೌಕರ್ಯ ಕಣ್ಮರೆಯಾಗಿದ್ದು, ಜನರು ಕೊರತೆಗಳ ನಡುವೆ ಜೀವನ ನಡೆಸುತ್ತಿದ್ದಾರೆ.ಬೀರಹಳ್ಳಿ, ಲಿಂಗಾಪುರ, ಆಗಸರಹಳ್ಳಿ, ಮಾರಸಂಡಹಳ್ಳಿ, ಸತ್ತಿಗಾನಹಳ್ಳಿ, ಬಾಣಾಮಾಕನಹಳ್ಳಿ, ಒಬಳಹಳ್ಳಿ, ಉಳವನಹಳ್ಳಿ, ಬಂಡಹಳ್ಳಿ ಗ್ರಾಮಗಳು ರಾಷ್ಟ್ರೀಯ ಹೆದ್ದಾರಿ–75ರ ಸಮೀಪ ನಾಲ್ಕೈದು ಕಿ. ಮೀ. ಅಂತರದಲ್ಲಿ ಇದ್ದರೂ ಬಸ್ ಸೌಕರ್ಯ ಇಲ್ಲದೆ ಗ್ರಾಮಸ್ಥರು ಪ್ರತಿನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮಗಳಿಗೆ ಸರ್ಕಾರಿ ಸಾರಿಗೆ ಬಸ್ ಸಂಪರ್ಕ ಇಲ್ಲದ ಕಾರಣ ಗ್ರಾಮಸ್ಥರು ಮುಖ್ಯರಸ್ತೆವರೆಗೆ ನಡೆದುಕೊಂಡು ಬಂದು ಬಸ್ ಹತ್ತುವ ಅನಿವಾರ್ಯತೆ ಎದುರಾಗಿದೆ. ಇದರಿಂದ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.ಗ್ರಾಮಗಳಲ್ಲಿ ಸಮರ್ಪಕ ಕಸ ವಿಲೇವಾರಿಯಾಗದೆ ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ ಬೆಳೆಯುತ್ತಿದೆ. ವರ್ಷಗಳು ಕಳದೆರೂ ಚರಂಡಿ ಸ್ವಚ್ಛಗೊಳ್ಳದೆ ಕಾಯಿಲೆ ಭೀತಿ ಮನೆ ಮಾಡಿದೆ.‘ನಮ್ಮೂರ ಮಹಿಳೆಯರು ಸಂತೆ, ಆಸ್ಪತ್ರೆಗೆ ಹೋಗಬೇಕಾದರೆ ಬೈಲ ನರಸಪುರ ಇಲ್ಲವೇ ತಾವರೆಕೆರೆಗೆ ಹೋಗಿ ಬಸ್ ಹಿಡಿಯಬೇಕು. ಆದರೆ ಎಲ್ಲಿಗೆ ಹೋಗಬೇಕಾದರೂ ಆಟೊಗೆ ₹150 ಪಾವತಿಸಬೇಕು. ಹೆತ್ತಕ್ಕಿಗೆ ಮಾತ್ರ ಒಂದು ಬಸ್ ಬರುತ್ತದೆ. ಅದನ್ನು ಹೊರತುಪಡಿಸಿ, ನಮ್ಮೂರುಗಳಿಗೆ ಇಷ್ಟು ವರ್ಷ ಆದರೂ ಬಸ್ ಬಂದಿದ್ದನ್ನು ನೋಡಿಲ್ಲ. ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಓಡಾಡಬಹುದು ಎಂಬುದೇ ಗೊತ್ತಿಲ್ಲ’ ಎನ್ನುತ್ತಾರೆ ಗ್ರಾಮಸ್ಥರು.‘ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನರಿಗೆ ಬಸ್ನಲ್ಲಿ ಓಡಾಡುವುದು ಕನಸಾಗಿದೆ. ಹೊಸಕೋಟೆಗೆ ಹೋಗಬೇಕೆಂದರೆ ತಾವರೆಕೆರೆಗೆ ಆಟೊ ಏರಬೇಕು. ತಾವರೆಕೆರೆಯಿಂದ ಹೊಸಕೋಟೆಗೆ 16 ಕಿ.ಮೀ ಇದೆ. ಸರ್ಕಾರಿ ಬಸ್ ಹತ್ತಿದರೆ ಮಹಿಳೆಯರಿಗೆ ಉಚಿತ, ಪುರುಷರಿಗೆ ₹35 ಆಗುತ್ತದೆ. ಆದರೆ ನಮ್ಮ ಊರಿನಿಂದ ನಾಲ್ಕೈದು ಕಿ.ಮೀ ಅಂತರದಲ್ಲಿರುವ ತಾವರೆಕೆರೆಗೆ ಹೋಗಬೇಕಾದರೆ ₹150 ಪಾವತಿಸಬೇಕು. ಇದೆಂಥ ವಿಪರ್ಯಾಸ ನೋಡಿ. ಇನ್ನು ರಾತ್ರಿ 9 ಗಂಟೆ ದಾಟಿದರೆ ತಾವರೆಕೆರೆಯಿಂದ ನಮ್ಮೂರುಗಳಿಗೆ ಆಟೊ ಸಿಗುವುದಿಲ್ಲ’ ಎಂದು ಗ್ರಾಮಸ್ಥರು ಅಲವತ್ತುಕೊಳ್ಳುತ್ತಾರೆ.ಗ್ರಾಮಸ್ಥರಲ್ಲಿ ಕಾಯಿಲೆ ಆತಂಕ: ಗ್ರಾಮದ ಎಲ್ಲೆಡೆ ಕಸ, ದುರ್ನಾತ ಬೀರುವ ಚರಂಡಿಗಳು ಮತ್ತು ಗಿಡಗಂಟಿ ಬೆಳೆದಿರುವುದು ಕಣ್ಣಿಗೆ ರಾಚುತ್ತದೆ. ಜನಸಾಮಾನ್ಯರು ಮೂಗು ಮುಚ್ಚಿಕೊಂಡು ಓಡಾಡುವ ದುಃಸ್ಥಿತಿ ಇದೆ. ಚರಂಡಿಗಳು ಸೊಳ್ಳೆ ಮತ್ತು ನೊಣಗಳ ಆವಾಸ ಸ್ಥಾನವಾಗಿದ್ದು, ಗ್ರಾಮದ ಜನರು ಜ್ವರ, ಕೆಮ್ಮು, ಡೆಂಗ್ಯೂ, ಮಲೇರಿಯಾ ಮತ್ತು ಚರ್ಚ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಭೀತಿ ಎದುರಿಸುತ್ತಿದ್ದಾರೆ.ದೂಳಿನ ದರ್ಶನ: ಹೆತ್ತಕ್ಕಿ ಮತ್ತು ಬೀರಹಳ್ಲಿ ಮಧ್ಯೆ ಪ್ರಭಾವಿಗಳು ಕ್ರಷರ್ಗಳನ್ನು ನಡೆಸುತ್ತಿದ್ದಾರೆ. ಈ ಕ್ರಷರ್ಗಳಿಂದ ಜಲ್ಲಿಕಲ್ಲಿಗಳನ್ನು ಸಾಗಿಸುವ ಟಿಪ್ಪರ್ಗಳ ಹಾವಳಿಯಿಂದ ರಸ್ತೆ ಸಂಪೂರ್ಣ ಹಾನಿಗೀಡಾಗಿದೆ. ಪ್ರತಿನಿತ್ಯ ನೂರಾರು ಟಿಪ್ಪರ್ಗಳ ಸಂಚಾರದಿಂದ ರಸ್ತೆಯಿಂದ ಭಾರಿ ಪ್ರಮಾಣದ ದೂಳು ಮೇಲೇಳುತ್ತಿದ್ದು, ಗ್ರಾಮದಲ್ಲಿರುವ ಮನೆಗಳು, ದೇವಸ್ಥಾನ, ಶಾಲೆ ಮತ್ತು ಹೊಲಗಳೆಲ್ಲವೂ ದೂಳುಮಯವಾಗಿವೆ.ವಿದ್ಯಾರ್ಥಿಗಳಿಗೆ ಖಾಸಗಿ ವಾಹನಗಳೇ ಗತಿ‘ನಮ್ಮೂರುಗಳಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳು ಮಾತ್ರ ಇವೆ. ಹಿರಿಯ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ಹಂತದ ಶಿಕ್ಷಣಕ್ಕಾಗಿ ತಾವರೆಕೆರೆಗೆ ಹೋಗಬೇಕು. ಆದರೆ, ತಾವರೆಕೆರೆಗೆ ಹೋಗಿ–ಬರಲು ಸರ್ಕಾರಿ ಸಾರಿಗೆ ವ್ಯವಸ್ಥೆ ಇಲ್ಲ. ಇದರಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳು ತಾವರೆಕೆರೆ ಕಡೆಗೆ ಹೋಗುವ ಬೈಕ್ ಮತ್ತು ಇತರ ಖಾಸಗಿ ವಾಹನಗಳನ್ನು ಅವಲಂಬಿಸಿದ್ದಾರೆ’ ಎಂದು ಗ್ರಾಮಸ್ಥರು ದೂರಿದರು.ನಾವು ಕೂಲಿ–ನಾಲಿ ಮಾಡಿ ಜೀವನ ನಡೆಸುತ್ತಿದ್ದೇವೆ. ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಲಿ ಅಂದುಕೊಂಡರೂ, ಅವರಿಗೆ ಸ್ಥಳೀಯವಾಗಿ ಶಿಕ್ಷಣ ಸಿಗುತ್ತಿಲ್ಲ. ಸರ್ಕಾರಿ ಸಾರಿಗೆ ಸೇವೆ ಇಲ್ಲದ ಕಾರಣ ಪ್ರತಿನಿತ್ಯವೂ ಮಕ್ಕಳು ತಾವರೆಕೆರೆಗೆ ಹೋಗಿ–ಬರುವುದು ದುಸ್ತರವಾಗಿದೆ ಎಂಬುದು ವಿದ್ಯಾರ್ಥಿಗಳ ಪೋಷಕರ ಅಳಲು.ಚರಂಡಿಯಲ್ಲಿ ನೀರಿನ ಪೈಪ್ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಜಲಜೀವನ್ ಮಿಷನ್ ಯೋಜನೆಯಡಿ ನಡೆಸಲಾಗಿರುವ ಕಾಮಗಾರಿಯು ಅವ್ಯವಸ್ಥೆಯ ಗೂಡಾಗಿದೆ. ಮನೆ–ಮನೆಗೆ ಗಂಗೆ ಯೋಜನೆಗಾಗಿ ರಸ್ತೆಗಳನ್ನು ಬೇಕಾಬಿಟ್ಟಿಯಾಗಿ ಅಗೆಯಲಾಗಿದ್ದು, ಪೈಪ್ ಅಳವಡಿಸಿದ ಬಳಿಕ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಮನೆ ಮುಂದೆ ಓಡಾಡಲು ಆಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.ಪೈಪ್ಲೈನ್ ಅನ್ನು ಚರಂಡಿಯಲ್ಲಿ ಹಾಕಲಾಗಿದೆ. ಕೆಲವು ಮನೆಗಳ ಬಳಿ ನಳ ಅಳವಡಿಸಲಾಗಿದ್ದರೆ, ಸಿಮೆಂಟ್ ಸ್ಲ್ಯಾಬ್ ಅಳವಡಿಸಲಾಗಿಲ್ಲ. ಮತ್ತೆ ಕೆಲವೆಡೆ ಸಿಮೆಂಟ್ ಸ್ಲ್ಯಾಬ್ ಇದ್ದು, ನಳವೇ ಇಲ್ಲ. ಈ ನಲ್ಲಿಗಳಲ್ಲಿ ಒಂದು ಹನಿ ನೀರು ಬರದಿದ್ದರೂ, ಪಂಚಾಯಿತಿಯವರು ಮಾತ್ರ ವರ್ಷಕ್ಕೆ ನಮ್ಮಿಂದ ₹1,000 ವಸೂಲಿ ಮಾಡಲು ಬರುತ್ತಾರೆ ಎಂದು ಗ್ರಾಮಸ್ಥರು ಕಿಡಿಕಾರಿದರು.-ಕಲಾವತಿ, ಲಿಂಗಾಪುರಮಳೆ ಬಂದರೆ ಮನೆ ಮುಂದೆ ಚರಂಡಿ ನೀರು ನಿಂತು ಹುಳ, ಹುಪ್ಪಡಿಗಳು ಮನೆಗೆ ನುಗ್ಗುತ್ತವೆ ಎಂಬ ಭಯದಲ್ಲೇ ಜೀವನ ದೂಡುವಂತಾಗಿದೆ. ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿದೆ-ಸಿಂಧು, ಮಾರಸಂಡಹಳ್ಳಿಗ್ರಾಮದಿಂದ ನಾಲ್ಕು ಕಿ.ಮೀ. ದೂರ ಇರುವ ತಾವರೆಕೆರೆಗೆ ತೆರಳಲು ಆಟೊಗೆ ₹150 ತೆರಬೇಕು. ಸರ್ಕಾರಿ ಬಸ್ ಸೌಲಭ್ಯ ಗ್ರಾಮಕ್ಕೆ ವಿಸ್ತರಣೆಯಾದರೆ, ಎಲ್ಲರಿಗೂ ಅನುಕೂಲ. ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260728-15-2024762692