ಪ್ರತ್ಯೇಕ ಬೆಡ್ & ಬ್ರೇಕ್ಫಾಸ್ಟ್ ವ್ಯವಸ್ಥೆ ಪರಿಚಯಿಸಿದ ಕರ್ನಾಟಕ ಪ್ರವಾಸೋದ್ಯಮ ಇಲಾಖೆ
– ನೈಜ ಹೋಂಸ್ಟೇಗಳ ಸ್ವರೂಪ ಉಳಿಸಿ, ವೃತ್ತಿಪರ ಪ್ರವಾಸೋದ್ಯಮ ವಸತಿ ವ್ಯವಸ್ಥೆಗೆ ಪ್ರತ್ಯೇಕ ಚೌಕಟ್ಟು ಬೆಂಗಳೂರು: ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು(Karnataka Tourism) ರಾಜ್ಯದ ಪ್ರವಾಸೋದ್ಯಮ ವಸತಿ ಕ್ಷೇತ್ರದಲ್ಲಿ ಮಹತ್ವದ ನೀತಿ ಸುಧಾರಣೆಯಾಗಿ ಹೋಂಸ್ಟೇ (Homestay) ಮತ್ತು ಬೆಡ್ & ಬ್ರೇಕ್ಫಾಸ್ಟ್ (Bed & Breakfast – B&B) ವ್ಯವಸ್ಥೆಗಳನ್ನು ಪ್ರತ್

– ನೈಜ ಹೋಂಸ್ಟೇಗಳ ಸ್ವರೂಪ ಉಳಿಸಿ, ವೃತ್ತಿಪರ ಪ್ರವಾಸೋದ್ಯಮ ವಸತಿ ವ್ಯವಸ್ಥೆಗೆ ಪ್ರತ್ಯೇಕ ಚೌಕಟ್ಟು ಬೆಂಗಳೂರು: ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು(Karnataka Tourism) ರಾಜ್ಯದ ಪ್ರವಾಸೋದ್ಯಮ ವಸತಿ ಕ್ಷೇತ್ರದಲ್ಲಿ ಮಹತ್ವದ ನೀತಿ ಸುಧಾರಣೆಯಾಗಿ ಹೋಂಸ್ಟೇ (Homestay) ಮತ್ತು ಬೆಡ್ & ಬ್ರೇಕ್ಫಾಸ್ಟ್ (Bed & Breakfast – B&B) ವ್ಯವಸ್ಥೆಗಳನ್ನು ಪ್ರತ್ಯೇಕ ವರ್ಗಗಳಾಗಿ ಗುರುತಿಸಿ, ವೃತ್ತಿಪರವಾಗಿ ನಿರ್ವಹಿಸಲ್ಪಡುವ ಪ್ರವಾಸಿಗರ ವಸತಿ ವ್ಯವಸ್ಥೆಗಾಗಿ ವಿಶೇಷ ಚೌಕಟ್ಟನ್ನು ರೂಪಿಸಿದೆ. ಇದರೊಂದಿಗೆ ಸಮುದಾಯ ಆಧಾರಿತ ಹೋಂಸ್ಟೇಗಳ ಮೂಲ ಸ್ವರೂಪವನ್ನು ಸಂರಕ್ಷಿಸುವ ಜೊತೆಗೆ ಪ್ರವಾಸೋದ್ಯಮ ವಲಯಕ್ಕೆ ಮತ್ತಷ್ಟು ಸ್ಪಷ್ಟತೆ ಮತ್ತು ವ್ಯವಸ್ಥಿತ ನಿಯಂತ್ರಣ ಒದಗಿಸಿದೆ. ಕರ್ನಾಟಕ ಹೋಂಸ್ಟೇ ನೋಂದಣಿ ಮಾರ್ಗಸೂಚಿ–2025 ಅಡಿಯಲ್ಲಿ ಹೋಂಸ್ಟೇ ಮತ್ತು ಬೆಡ್ & ಬ್ರೇಕ್ಫಾಸ್ಟ್ ವ್ಯವಸ್ಥೆಗಳನ್ನು ಎರಡು ಪ್ರತ್ಯೇಕ ವಿಭಾಗಗಳಾಗಿ ವ್ಯಾಖ್ಯಾನಿಸಲಾಗಿದೆ. ರಾಜ್ಯದ ಪ್ರವಾಸೋದ್ಯಮ ವಸತಿ ಕ್ಷೇತ್ರದಲ್ಲಿ ಸ್ಪಷ್ಟ ನಿಯಂತ್ರಣ ವ್ಯವಸ್ಥೆ ರೂಪಿಸುವುದರ ಜೊತೆಗೆ, ಸೇವೆಯ ಗುಣಮಟ್ಟ ಹೆಚ್ಚಿಸುವುದು ಹಾಗೂ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಈ ಕ್ರಮ ಹೊಂದಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಹೋಂಸ್ಟೇ ಎಂದರೆ ಮನೆ/ ಖಾಸಗಿ ನಿವಾಸದಲ್ಲಿ ಮಾಲೀಕರು ಅಥವಾ ಅವರ ಕುಟುಂಬದ ಸದಸ್ಯರು (ಪತಿ/ಪತ್ನಿ ಅಥವಾ ಮಕ್ಕಳು) ವಾಸವಾಗಿದ್ದು, ಪ್ರವಾಸಿಗರಿಗೆ ಒಂದು ಕೊಠಡಿಯಿಂದ ಗರಿಷ್ಠ ಆರು ಕೊಠಡಿಗಳವರೆಗೆ ವಸತಿ ಒದಗಿಸುವ ವ್ಯವಸ್ಥೆಯಾಗಿದೆ. ಹೋಂಸ್ಟೇಯನ್ನು ವಾಣಿಜ್ಯೇತರ (Non-Commercial) ಚಟುವಟಿಕೆಯಾಗಿ ಪರಿಗಣಿಸಲಾಗಿದೆ. ಬೆಡ್ & ಬ್ರೇಕ್ಫಾಸ್ಟ್ (B&B) ವ್ಯವಸ್ಥೆಯಲ್ಲಿ ಮನೆ/ ಖಾಸಗಿ ನಿವಾಸದಲ್ಲಿ ಆಸ್ತಿಯ ಮಾಲೀಕರು ಸ್ವತಃ ವಾಸಿಸುವುದಿಲ್ಲ. ಅವರ ಪರವಾಗಿ ನಿಯೋಜಿತ ನಿರ್ವಾಹಕರು ಅಥವಾ ಏಜೆಂಟ್ಗಳು ಸ್ಥಳದಲ್ಲೇ ವಾಸವಿದ್ದು, ಅತಿಥಿಗಳಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತಾರೆ. ಈ ವ್ಯವಸ್ಥೆಯಲ್ಲಿ ೬ ಕೊಠಡಿಗಳು ಅಥವಾ ೧೨ ಬೆಡ್ಗಳನ್ನು ನಿರ್ವಹಿಸಲು ಅವಕಾಶವಿದ್ದು, ಇದನ್ನು ವಾಣಿಜ್ಯ ಚಟುವಟಿಕೆ (Commercial Activity) ಎಂದು ಪರಿಗಣಿಸಲಾಗಿದೆ. ಬೆಡ್ & ಬ್ರೇಕ್ಫಾಸ್ಟ್ ವಿಭಾಗಕ್ಕೆ ಪ್ರತ್ಯೇಕ ಕಾರ್ಯಾಚರಣಾ ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಲಿದೆ. ಇದನ್ನೂ ಓದಿ: ಎಸ್ಐಆರ್ 3 ತಿಂಗಳು ವಿಸ್ತರಿಸಿ – ದೇವನೂರು, ಗುಹಾ ಸಲ್ಲಿಸಿದ್ದ PIL ವಜಾ ಈ ನೀತಿ ಬದಲಾವಣೆಯಿಂದ ಪ್ರವಾಸಿಗರು ತಾವು ಆಯ್ಕೆ ಮಾಡುತ್ತಿರುವ ವಸತಿ ವ್ಯವಸ್ಥೆಯ ಸ್ವರೂಪವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ಸಾಧ್ಯವಾಗಲಿದ್ದು, ಹೋಂಸ್ಟೇ ಮತ್ತು ಬೆಡ್ & ಬ್ರೇಕ್ಫಾಸ್ಟ್ ವ್ಯವಸ್ಥೆಗಳನ್ನು ಅವುಗಳ ಕಾರ್ಯವೈಖರಿಯ ಆಧಾರದ ಮೇಲೆ ಪರಿಣಾಮಕಾರಿಯಾಗಿ ನಿಯಂತ್ರಿಸಲು ಇಲಾಖೆಗೆ ಅನುಕೂಲವಾಗಲಿದೆ. ಜೊತೆಗೆ, ಖಾಸಗಿ ಆಸ್ತಿ ಮಾಲೀಕರು ಮತ್ತು ಪ್ರವಾಸೋದ್ಯಮ ಉದ್ಯಮಿಗಳು ನಿಯಮಬದ್ಧವಾಗಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪಾಲ್ಗೊಳ್ಳಲು ಹೊಸ ಅವಕಾಶಗಳನ್ನು ಇದು ಸೃಷ್ಟಿಸಲಿದೆ. ವಿಶೇಷವಾಗಿ, ಹೋಟೆಲ್ಗಳ ಕೊರತೆ ಇರುವ ಅಥವಾ ಪ್ರವಾಸಿಗರ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವ ಪ್ರವಾಸಿ ತಾಣಗಳಲ್ಲಿ ಬೆಡ್ & ಬ್ರೇಕ್ಫಾಸ್ಟ್ ವ್ಯವಸ್ಥೆ ಗುಣಮಟ್ಟದ ಹೆಚ್ಚುವರಿ ವಸತಿ ಸೌಲಭ್ಯ ಒದಗಿಸುವ ಮೂಲಕ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ. ಇದರ ಜೊತೆಗೆ, ಪ್ರವಾಸೋದ್ಯಮ ಇಲಾಖೆ ನೋಂದಾಯಿತ ವಸತಿ ಘಟಕಗಳಿಗೆ ನೋಂದಣಿ ಪ್ರಮಾಣಪತ್ರದ ಪ್ರದರ್ಶನ, ಅತಿಥಿಗಳ ದಾಖಲೆ ನಿರ್ವಹಣೆ, ಸಿಬ್ಬಂದಿಯ ಪೊಲೀಸ್ ಪರಿಶೀಲನೆ, ತುರ್ತು ಪರಿಸ್ಥಿತಿಗಳ ನಿರ್ವಹಣೆ ಹಾಗೂ ವಿವಿಧ ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸುವ ಮೂಲಕ ಪ್ರವಾಸಿಗರ ಸುರಕ್ಷತೆ ಮತ್ತು ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಲು ಕ್ರಮ ಕೈಗೊಂಡಿದೆ. ಈ ಪ್ರತ್ಯೇಕ ಬೆಡ್ & ಬ್ರೇಕ್ಫಾಸ್ಟ್ ವ್ಯವಸ್ಥೆ ಪರಿಚಯಿಸುವ ಮೂಲಕ ಕರ್ನಾಟಕವು ಸಮುದಾಯ ಆಧಾರಿತ ಹೋಂಸ್ಟೇಗಳ ವೈಶಿಷ್ಟ್ಯವನ್ನು ಉಳಿಸಿಕೊಂಡು, ವೃತ್ತಿಪರವಾಗಿ ನಿರ್ವಹಿಸಲ್ಪಡುವ ಪ್ರವಾಸೋದ್ಯಮ ವಸತಿ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡುವ ಮಹತ್ವದ ಹೆಜ್ಜೆ ಇಟ್ಟಿದೆ. ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆಜೆ ಜಾರ್ಜ್ ಮಾತನಾಡಿ, ಕರ್ನಾಟಕದಲ್ಲಿ ಪ್ರವಾಸೋದ್ಯಮ ವೇಗವಾಗಿ ಬೆಳೆಯುತ್ತಿದ್ದು, ಅದರೊಂದಿಗೆ ನಮ್ಮ ವಸತಿ ವ್ಯವಸ್ಥೆಯೂ ಕಾಲಕ್ಕೆ ತಕ್ಕಂತೆ ರೂಪಾಂತರಗೊಳ್ಳಬೇಕಿದೆ. ಹೋಂಸ್ಟೇ ಮತ್ತು ಬೆಡ್ & ಬ್ರೇಕ್ಫಾಸ್ಟ್ ವ್ಯವಸ್ಥೆಗಳನ್ನು ಪ್ರತ್ಯೇಕವಾಗಿ ಗುರುತಿಸುವ ಮೂಲಕ ನೈಜ ಸ್ಥಳೀಯ ಆತಿಥ್ಯದ ಪರಂಪರೆಯನ್ನು ಸಂರಕ್ಷಿಸುತ್ತಿದ್ದೇವೆ. ಅದೇ ಸಮಯದಲ್ಲಿ ವೃತ್ತಿಪರವಾಗಿ ನಿರ್ವಹಿಸಲ್ಪಡುವ ಪ್ರವಾಸೋದ್ಯಮ ವಸತಿ ಕ್ಷೇತ್ರಕ್ಕೂ ಉತ್ತೇಜನ ನೀಡುತ್ತಿದ್ದೇವೆ. ಈ ಸುಧಾರಣೆ ಹೂಡಿಕೆದಾರರ ವಿಶ್ವಾಸ ಹೆಚ್ಚಿಸುವುದರ ಜೊತೆಗೆ, ಪ್ರವಾಸಿಗರ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಿ, ಕರ್ನಾಟಕದಲ್ಲಿ ಗುಣಮಟ್ಟದ ವಸತಿ ವ್ಯವಸ್ಥೆಯನ್ನು ವಿಸ್ತರಿಸಲಿದೆ ಎಂದು ಹೇಳಿದ್ದಾರೆ. ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ರಾಮ್ ಪ್ರಸಾತ್ ಮನೋಹರ್ ಪ್ರತಿಕ್ರಿಯಿಸಿ, ಹೋಂಸ್ಟೇ ಮತ್ತು ಬೆಡ್ & ಬ್ರೇಕ್ಫಾಸ್ಟ್ ವ್ಯವಸ್ಥೆಗಳನ್ನು ಪ್ರತ್ಯೇಕ ವರ್ಗಗಳಾಗಿ ಗುರುತಿಸುವ ಮೂಲಕ ಪ್ರವಾಸೋದ್ಯಮ ವಸತಿ ಕ್ಷೇತ್ರದಲ್ಲಿ ಬಹುಕಾಲದ ಅಗತ್ಯವಾಗಿದ್ದ ನಿಯಂತ್ರಣದ ಸ್ಪಷ್ಟತೆ ಮೂಡುತ್ತಿದೆ. ವಿಭಿನ್ನ ಕಾರ್ಯಾಚರಣಾ ಮಾದರಿಗಳಿಗೆ ಅನುಗುಣವಾಗಿ ಪರಿಣಾಮಕಾರಿ ನಿಯಂತ್ರಣ, ಉತ್ತಮ ಡಿಜಿಟಲ್ ಆಡಳಿತ ಮತ್ತು ಉನ್ನತ ಸೇವಾ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಇದು ನೆರವಾಗಲಿದೆ. ಕರ್ನಾಟಕದಲ್ಲಿ ವಿಶ್ವಾಸಾರ್ಹ, ಸುಸಂಘಟಿತ ಹಾಗೂ ಭವಿಷ್ಯದ ಅಗತ್ಯಗಳಿಗೆ ಹೊಂದಿಕೊಳ್ಳುವ ಪ್ರವಾಸೋದ್ಯಮ ಪರಿಸರ ನಿರ್ಮಾಣದತ್ತ ಇದು ಮಹತ್ವದ ಹೆಜ್ಜೆಯಾಗಿದೆ ಎಂದರು.