ಅಧಿಕಾರ ದುರುಪಯೋಗದ ಆರೋಪ: ನ್ಯಾಯಾಧೀಶೆ ಗಾಯತ್ರಿ ಅಮಾನತಿಗೆ ಆಗ್ರಹ
ಬೆಂಗಳೂರು: ‘ರಸ್ತೆ ರಂಪಾಟಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆ ಮಾಲೂರಿನ ಚೀಫ್ ಜ್ಯುಡಿಷಿಯಲ್ ಮತ್ತು ಜೆಎಂಎಫ್ಸಿ ಕೋರ್ಟ್ನ ಪ್ರಧಾನ ನ್ಯಾಯಾಧೀಶೆ ಗಾಯತ್ರಿ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು’ ಎಂದು ‘ಬೆಂಗಳೂರು ವಕೀಲರ ಸಂಘ’ (ಎಎಬಿ) ಆಗ್ರಹಿಸಿದೆ.ಈ ಕುರಿತಂತೆ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್.ವಿ.ಪ್ರವೀಣ್ ಗೌಡ,

ಬೆಂಗಳೂರು: ‘ರಸ್ತೆ ರಂಪಾಟಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆ ಮಾಲೂರಿನ ಚೀಫ್ ಜ್ಯುಡಿಷಿಯಲ್ ಮತ್ತು ಜೆಎಂಎಫ್ಸಿ ಕೋರ್ಟ್ನ ಪ್ರಧಾನ ನ್ಯಾಯಾಧೀಶೆ ಗಾಯತ್ರಿ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು’ ಎಂದು ‘ಬೆಂಗಳೂರು ವಕೀಲರ ಸಂಘ’ (ಎಎಬಿ) ಆಗ್ರಹಿಸಿದೆ.ಈ ಕುರಿತಂತೆ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್.ವಿ.ಪ್ರವೀಣ್ ಗೌಡ, ಉಪಾಧ್ಯಕ್ಷ ಸಿ.ಎಸ್.ಗಿರೀಶ್ ಕುಮಾರ್ ಮತ್ತು ಖಜಾಂಚಿ ಶ್ವೇತಾ ರವಿಶಂಕರ್, ಕೋಲಾರ ಜಿಲ್ಲೆಯ ಆಡಳಿತಾತ್ಮಕ ಉಸ್ತುವಾರಿಯಾಗಿರುವ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಮತ್ತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದಿದ್ದಾರೆ.‘ತಾವು ಪಯಣಿಸುತ್ತಿದ್ದ ಕಾರಿಗೆ ಬೈಕ್ನಲ್ಲಿ ಅಡ್ಡಬಂದ ಎಂಬ ಕಾರಣಕ್ಕೆ ವಿದ್ಯಾರ್ಥಿ ಕೆ.ಎಂ.ವಿನಯ್ ಹಾಗೂ ಆತನ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸ್ಥಳಕ್ಕೆ ಪೊಲೀಸರನ್ನು ಕರೆಯಿಸಿ ವಿದ್ಯಾರ್ಥಿಯ ಮೇಲೆ ಬಲಪ್ರಯೋಗ ಮಾಡಿಸಿರುವ ಗಾಯತ್ರಿ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಮೂಲಕ ಸಮಸ್ತ ನ್ಯಾಯಾಧೀಶರ ಘನತೆ ಮತ್ತು ಗೌರವಕ್ಕೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಲಾಗಿದೆ.ಈ ಸಂಬಂಧ ‘ಪ್ರಜಾವಾಣಿ’ ಜೊತೆ ಮಾತನಾಡಿದ ವಿವೇಕ್ ಸುಬ್ಬಾರೆಡ್ಡಿ, ‘ಈಗಾಗಲೇ ಈ ಕುರಿತಂತೆ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರ ಜೊತೆ ವಕೀಲರ ಸಂಘದ ಪರವಾಗಿ ಮಾತನಾಡಿದ್ದೇನೆ. ಅವರೂ ಕೂಡಾ ಇದೊಂದು ದುರದೃಷ್ಟಕರ ಬೆಳವಣಿಗೆ ಎಂದು ತಿಳಿಸಿದ್ದಾರೆ. ಸದರಿ ನ್ಯಾಯಾಧೀಶರ ವಿರುದ್ಧ ಈ ಹಿಂದೆಯೇ ಇಂತಹುದೇ ಕೆಲವು ಫಿರ್ಯಾದುಗಳಿವೆ. ಅವೆಲ್ಲವುಗಳ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ’ ಎಂದರು.‘ಪೊಲೀಸರು ಏನು ಮಾಡಬೇಕೆಂದು ನಿರ್ದೇಶಿಸಲು ಗಾಯತ್ರಿ ಅವರಿಗೆ ಯಾವ ಅಧಿಕಾರವಿದೆ? ಘಟನೆ ನಡೆಯುವಾಗ ಗಾಯತ್ರಿ ಅವರ ಪತಿ ಕರೆ ಮಾಡಿದ ತಕ್ಷಣವೇ ಪೊಲೀಸರು ಏಕೆ ಸ್ಥಳಕ್ಕೆ ಧಾವಿಸಿ ಬರುತ್ತಾರೆ ಎಂಬುದರ ಕುರಿತೂ ತನಿಖೆಯಾಗಬೇಕು. ಇಂತಹ ವ್ಯಕ್ತಿಗಳು ಯಾರಿಗೂ ಹೊಣೆಗಾರರಾಗಿರುವುದಿಲ್ಲ ಮತ್ತು ಈ ಘಟನೆಯ ಬಗ್ಗೆ ಹೈಕೋರ್ಟ್ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ನಮಗೆ ಆಘಾತವನ್ನುಂಟುಮಾಡಿದೆ. ಗಾಯತ್ರಿ ಅವರು ಹಿಂದೆ ಕೆ.ಆರ್.ನಗರದಲ್ಲಿ ನ್ಯಾಯಾಧೀಶರಾಗಿದ್ದಾಗಲೂ ವಕೀಲರೊಂದಿಗೆ ಇದೇ ರೀತಿ ಅಸಮಂಜಸ ವರ್ತನೆ ತೋರಿದ ನಿದರ್ಶನಗಳಿವೆ’ ಎಂದು ನೆನಪಿಸಿದ್ದಾರೆ.ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್.ಹರೀಶ್ ಅವರೂ ಈ ಕುರಿತಂತೆ ಪ್ರತಿಕ್ರಿಯಿಸಿದ್ದು, ‘ಗಾಯತ್ರಿ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು. ಸದ್ಯ ರಾಜ್ಯ ವಕೀಲರ ಪರಿಷತ್ನ ನೂತನ ಆಡಳಿತ ಮಂಡಳಿ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಹೊಸ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡ ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪರಿಷತ್ ತನ್ನ ಮುಂದಿನ ಹೆಜ್ಜೆ ಇರಿಸಲಿದೆ’ ಎಂದು ತಿಳಿಸಿದರು.‘ಶ್ರೀಸಾಮಾನ್ಯರ ಮೇಲೆ ಅಹಂಕಾರ ಪ್ರದರ್ಶನ’‘ನ್ಯಾಯಾಧೀಶರು ತಮ್ಮ ಅಧಿಕೃತ ಆಸನದಿಂದ ಕೆಳಗಿಳಿದಾಗ ಸಾಮಾನ್ಯ ನಾಗರಿಕರೇ ಆಗಿರುತ್ತಾರೆ. ಪೊಲೀಸರಾಗಲಿ ಅಥವಾ ಬೇರೆ ಯಾರೇ ಆಗಲಿ ಅವರಿಗೆ ಅಧಿಕೃತ ಆದೇಶದ ಹೊರತಾಗಿ ಯಾವುದೇ ವಿಶೇಷ ಸವಲತ್ತು ಅಥವಾ ಆದ್ಯತೆಯನ್ನು ನೀಡುವಂತಿಲ್ಲ’ ಎಂದು ವಿವೇಕ್ ಸುಬ್ಬಾರೆಡ್ಡಿ ತಿಳಿಸಿದ್ದಾರೆ.‘ಘಟನೆಯಲ್ಲಿ ವಿದ್ಯಾರ್ಥಿ ಕ್ಷಮೆ ಯಾಚಿಸುತ್ತಿದ್ದರೂ ಆತನಿಗೆ ಕಪಾಳಮೋಕ್ಷ ಮಾಡಲಾಗಿದೆ. ಗಾಯತ್ರಿ ಅವರು ವಿದ್ಯಾರ್ಥಿಯನ್ನು ತಡೆದು ನಿಲ್ಲಿಸಿದ ಮತ್ತು ಆ ಹುಡುಗನಿಗೆ ಹೊಡೆಯುವಂತೆ ಪೊಲೀಸ್ ಪೇದೆಯನ್ನು ಪ್ರಚೋದಿಸಿದ ರೀತಿಯನ್ನು ಗಮನಿಸಿದರೆ, ಅವರ ವಿರುದ್ಧ ಸಾಮಾನ್ಯ ದಂಡ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಇಂತಹ ಅಹಂಕಾರಿ ವ್ಯಕ್ತಿಗಳು ನ್ಯಾಯಾಧೀಶರ ಹುದ್ದೆಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಮತ್ತು ಅವರು ನ್ಯಾಯಾಂಗದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ’ ಎಂದು ಹೇಳಿದ್ದಾರೆ.