ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ಸಿಐಐಎಲ್: ವಿದ್ವತ್ ವಲಯಕ್ಕೆ ಸೀಮಿತಇತ್ತೀಚೆಗೆ ಮೈಸೂರಿನಲ್ಲಿ ಭಾರತೀಯ ಭಾಷಾ ಸಂಸ್ಥಾನವು (ಸಿಐಐಎಲ್) ತನ್ನ 58ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು. ಆದರೆ, ಸಂಸ್ಥೆಯು ಬರೀ ವಿದ್ವತ್ ವಲಯಕ್ಕೆ ಸೀಮಿತವಾಗಿದೆಯೆಂದು ಅನಿಸುತ್ತದೆ. ಜನಮುಖಿಯಾಗಿ, ವಿದ್ಯಾರ್ಥಿಮುಖಿಯಾಗಿ ಬೆಳೆಯಬೇಕಾಗಿದೆ. ಶಾಲಾಕಾಲೇಜುಗಳಲ್ಲಿ ಇದರ ಅನುಪಸ್ಥಿತಿ ಇದೆ. ಕೇಂದ್ರ ಶಿಕ್ಷಣ ಸಚಿವಾಲಯದ ನ
ಸಿಐಐಎಲ್: ವಿದ್ವತ್ ವಲಯಕ್ಕೆ ಸೀಮಿತಇತ್ತೀಚೆಗೆ ಮೈಸೂರಿನಲ್ಲಿ ಭಾರತೀಯ ಭಾಷಾ ಸಂಸ್ಥಾನವು (ಸಿಐಐಎಲ್) ತನ್ನ 58ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು. ಆದರೆ, ಸಂಸ್ಥೆಯು ಬರೀ ವಿದ್ವತ್ ವಲಯಕ್ಕೆ ಸೀಮಿತವಾಗಿದೆಯೆಂದು ಅನಿಸುತ್ತದೆ. ಜನಮುಖಿಯಾಗಿ, ವಿದ್ಯಾರ್ಥಿಮುಖಿಯಾಗಿ ಬೆಳೆಯಬೇಕಾಗಿದೆ. ಶಾಲಾಕಾಲೇಜುಗಳಲ್ಲಿ ಇದರ ಅನುಪಸ್ಥಿತಿ ಇದೆ. ಕೇಂದ್ರ ಶಿಕ್ಷಣ ಸಚಿವಾಲಯದ ನಿರ್ದೇಶನದಂತೆ ಕಾರ್ಯನಿರ್ವಹಿಸುವ ಈ ಸಂಸ್ಥೆಯು, ಆಯಾ ಪ್ರಾದೇಶಿಕ ನಿರ್ದೇಶಕರಿಗೆ ಪೂರ್ಣ ಸ್ವಾತಂತ್ರ್ಯ ನೀಡಿದಾಗಷ್ಟೇ ಆಲೋಚನೆಗಳ ವಿನ್ಯಾಸ ಬದಲಾಗಲು ಸಾಧ್ಯ. ಕನ್ನಡ ನಾಡಿನ ಭಾಷೆ ಹೆಜ್ಜೆ ಹೆಜ್ಜೆಗೂ ನಾವೀನ್ಯತೆಯಿಂದ, ಪ್ರಯೋಗಶೀಲತೆಯಿಂದ ಕೂಡಿದೆ. ಇದನ್ನು ಅಧ್ಯಯನಕ್ಕೊಳಪಡಿಸುವುದು ಯಾವಾಗ? ಬರೀ ವಿದ್ವತ್ತಿನ ಸಂಶೋಧನೆ ನಡೆಯದೆ ಜನಸಾಮಾನ್ಯರ ಆಡುಮಾತಿನ ವಿದ್ವತ್ತನ್ನು ಪ್ರಾಯೋಗಿಕವಾಗಿ ದಾಖಲಿಸುವ ಯೋಜನೆಗಳು ಜಾರಿಯಾಗಬೇಕು. ಸಂಸ್ಥೆಯು ಜನಪದರ ಮಾತಿಗೆ ತೂಕ ಬರುವ ನೀಲನಕ್ಷೆ ಸಿದ್ಧಪಡಿಸಿಕೊಳ್ಳಲಿ.–ರಾಜೇಂದ್ರಕುಮಾರ್ ಮುದ್ನಾಳ್, ಯಾದಗಿರಿ ಪೋಕ್ಸೊ ಪ್ರಕರಣ: ಜಾಗೃತಿಯೇ ಮದ್ದು‘ಬದುಕು ಕಸಿದ ಪೋಕ್ಸೊ’ ವರದಿ (ಒಳನೋಟ, ಪ್ರ.ವಾ., ಜುಲೈ 26) ಓದಿ ದಿಗ್ಭ್ರಮೆಯಾಯಿತು. ಮೂರೂವರೆ ವರ್ಷಗಳಲ್ಲಿ ಹದಿನಾಲ್ಕು ಸಾವಿರಕ್ಕೂ ಹೆಚ್ಚುಪ್ರಕರಣಗಳು ದಾಖಲಾಗಿರುವುದು ಆತಂಕಕಾರಿ. ಇದು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಜಾಗೃತಿಯ ಅಗತ್ಯವಿರುವುದನ್ನು ಒತ್ತಿ ಹೇಳಿದೆ. ಮಕ್ಕಳೊಂದಿಗೆ ಮುಕ್ತ ಸಂವಾದ ನಡೆಸಿ, ‘ಒಳ್ಳೆಯ- ಕೆಟ್ಟ ಸ್ಪರ್ಶ’ದ ಬಗ್ಗೆ ಅರಿವು ಮೂಡಿಸಬೇಕಿದೆ. ಹದಿಹರೆಯದ ಮಕ್ಕಳಿಗೆ ಪೋಕ್ಸೊ ಕಾಯ್ದೆ ಮತ್ತು ಆ ವಯಸ್ಸಿನ ಪ್ರೇಮ ಸಂಬಂಧಗಳು ತಂದೊಡ್ಡುವ ಕಾನೂನು ಸಂಕಷ್ಟಗಳ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಬಗ್ಗೆ ಭಿತ್ತಿಪತ್ರ ಅಂಟಿಸಬೇಕು. ಬಸ್ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಬೀದಿನಾಟಕಗಳ ಮೂಲಕ ಜಾಗೃತಿ ಮೂಡಿಸಬೇಕಿದೆ. ಶಿಕ್ಷಕರು ಕೂಡ ಶಾಲಾಕಾಲೇಜುಗಳಲ್ಲಿ ಕಾಯ್ದೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಹೇಳಬೇಕು. ಸಮಾಜದಲ್ಲಿ ತಿಳಿವಳಿಕೆ ಬಲಗೊಂಡರೆ ಪ್ರಕರಣಗಳು ಗಣನೀಯವಾಗಿ ತಗ್ಗಲಿವೆ.–ಪೂಜಾರ ರಘು, ಹರಪನಹಳ್ಳಿನೀಟ್ ಅವ್ಯವಸ್ಥೆ: ಪ್ರತಿಭಾವಂತರಿಗೆ ಬರೆನೀಟ್–ಯುಜಿ ಮರುಪರೀಕ್ಷೆ ಬರೆದಿದ್ದ ಹಾವೇರಿ ಜಿಲ್ಲೆಯ ಹಾನಗಲ್ನ ವಿದ್ಯಾರ್ಥಿನಿ ಬಿಂದುಶ್ರೀ ಜಗದೀಶ ಪವಾರ ಅವರ ಒಎಂಆರ್ ಪ್ರತಿ ತಿರುಚಿರುವುದು ವರದಿಯಾಗಿದೆ. ವಿದ್ಯಾರ್ಥಿನಿಯ ಆರೋಪವು ನಿಜವಾದರೆ ಪ್ರಶ್ನೆಪತ್ರಿಕೆ ಸೋರಿಕೆ ಮಾತ್ರವಲ್ಲ, ಇಡೀ ನೀಟ್ ವ್ಯವಸ್ಥೆಯೇ ಹದಗೆಟ್ಟಿರುವುದು ಸ್ಪಷ್ಟವಾಗುತ್ತದೆ. ಕಾಕ್ರೋಚ್ ಜನತಾ ಪಾರ್ಟಿ ನಡೆಸಿದ ಹೋರಾಟದ ತಾರ್ಕಿಕ ಅಂತ್ಯವು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗಷ್ಟೇ ಸೀಮಿತವಾಗಬಾರದು. ಹದಗೆಟ್ಟಿರುವ ಶಿಕ್ಷಣ ವ್ಯವಸ್ಥೆಯ ದುರಸ್ತಿಗಾಗಿ ಹೋರಾಟ ಮತ್ತಷ್ಟು ಗಟ್ಟಿಗೊಳ್ಳಬೇಕಿದೆ.–ಬಾಲಸುಬ್ರಹ್ಮಣ್ಯ ಎಸ್., ಬೆಂಗಳೂರು ಕೆಎಚ್ಬಿ ನಿಯಮ: ನಿವೇಶನ ಮರೀಚಿಕೆಕರ್ನಾಟಕ ಗೃಹ ಮಂಡಳಿಯು ಬೆಂಗಳೂರಿನ ಸೂರ್ಯನಗರ ನಾಲ್ಕನೇ ಹಂತದಲ್ಲಿ ಜನರಿಗೆ ನಿವೇಶನಗಳನ್ನು ಹಂಚಿಕೆ ಮಾಡಿದೆ. 2019–20ರಲ್ಲಿ ಅರ್ಜಿ ಆಹ್ವಾನಿಸಿ ನೋಂದಣಿ ಶುಲ್ಕದ ಜೊತೆ ನಿವೇಶನದ ಅಳತೆಗನುಸಾರ ಇಡುಗಂಟು ಪಡೆದಿತ್ತು. ಅರ್ಜಿ ಪಡೆಯುವಾಗ ಉಲ್ಲೇಖಿಸಿದ್ದ ದರಕ್ಕೆ ಬದಲಾಗಿ ಈಗ ದುಪ್ಪಟ್ಟು ನಿಗದಿಪಡಿಸಿದೆ. ಇದರಿಂದ ಬಡ, ಮಧ್ಯಮವರ್ಗದವರಿಗೆ ನಿವೇಶನಗಳು ಕೈಗೆಟುಕದಂತಾಗಿವೆ. ನಾಲ್ಕು ತಿಂಗಳಲ್ಲಿ ನಿಗದಿಪಡಿಸಿದ ಮೊತ್ತ ಪಾವತಿಸಿದವರಿಗಷ್ಟೇ ನಿವೇಶನದ ನೋಂದಣಿಗೆ ಅವಕಾಶ ಕೊಡುವುದಾಗಿ ಹೇಳಿದೆ. ಸಾರ್ವಜನಿಕರ ಹಣವನ್ನು ಐದಾರು ವರ್ಷ ತನ್ನಲ್ಲಿಯೇ ಇಟ್ಟುಕೊಂಡು ಈಗ ಹೊಸ ನಿಯಮ ರೂಪಿಸುವುದು ಎಷ್ಟು ಸರಿ? ಖಾಸಗಿ ಬಡಾವಣೆಗಳಂತೆ ದುಬಾರಿ ದರ ನಿಗದಿಪಡಿಸಿ ನಿವೇಶನ ಮಾರುವುದಾದರೆ ಕೆಎಚ್ಬಿಯ ನೈಜ ಕರ್ತವ್ಯವಾದರೂ ಏನು?–ವಿಕಾಸ್ ಹೆಗಡೆ, ಗಜೇಂದ್ರ ಎಸ್., ದಿವಿಜಾ, ಬೆಂಗಳೂರು ಟಿಇಟಿ ಕಡ್ಡಾಯ: ಅರ್ಹರಿಗೆ ಅನ್ಯಾಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ಹುದ್ದೆಗಳಿಗೆ ಇಲ್ಲಿಯವರೆಗೂ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (ಟಿಇಟಿ) ಕಡ್ಡಾಯಗೊಳಿಸಿಲ್ಲ. ಹಾಗಾಗಿ, ಪ್ರೌಢಶಾಲಾ ಶಿಕ್ಷಕರಿಗೆ ಟಿಇಟಿ ನಡೆಸಿಲ್ಲ. ಆದರೆ, ಕ್ರೈಸ್ ವಸತಿ ಪ್ರೌಢಶಾಲೆಗಳ ಶಿಕ್ಷಕರ ಹುದ್ದೆಗಳಿಗೆ ಟಿಇಟಿ ಕಡ್ಡಾಯಗೊಳಿಸಲಾಗಿದೆ. ಈ ನಿಯಮದಿಂದಾಗಿ ಅರ್ಹತೆ ಹೊಂದಿದ್ದ ಸಾವಿರಾರು ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದಂತಾಗಿದೆ. ಇದನ್ನು ಸರಿಪಡಿಸಿ ಬಿ.ಇಡಿ ಮತ್ತು ಸ್ನಾತಕೋತ್ತರ ಪದವಿ ಪಡೆದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕಿದೆ.–ಸೋಮಶೇಖರ್, ಕದಿರೇಹಳ್ಳಿಕನ್ನಡ ಶಿಕ್ಷಕರ ಬಗ್ಗೆ ಸರ್ಕಾರದ ಅವಜ್ಞೆ‘ನಾಡಿಗೆ ಕನ್ನಡ ಶಿಕ್ಷಕರು ಬೇಡವೇ?’ ಲೇಖನವು (ಲೇ: ಬರಗೂರು ರಾಮಚಂದ್ರಪ್ಪ, ಪ್ರ.ವಾ., ಜುಲೈ 27) ಸರ್ಕಾರದ ಕಣ್ಣು ತೆರೆಸುವಂತಿದೆ. ಕನ್ನಡವನ್ನು ಐಚ್ಛಿಕ ವಿಷಯವಾಗಿ ಓದಿದ ಕನ್ನಡ ಪದವೀಧರರು ನಿರುದ್ಯೋಗಿಗಳಾಗಿ ಅಲೆಯುತ್ತಿದ್ದಾರೆ. ಕಾಲೇಜುಗಳಲ್ಲಿ ಕನ್ನಡವನ್ನು ಐಚ್ಛಿಕ ವಿಷಯವಾಗಿ ಬೋಧಿಸುತ್ತಿದ್ದ ವಿಭಾಗಗಳು ಮುಚ್ಚುತ್ತಿವೆ. ಈ ವಿಭಾಗಗಳಿಗೆ ಸೇರುವ ವಿದ್ಯಾರ್ಥಿಗಳು ಕಡಿಮೆಯಾಗಿರುವುದೇ ಇದಕ್ಕೆ ಕಾರಣ. ಈ ಸನ್ನಿವೇಶಕ್ಕೆ ಸರ್ಕಾರವೇ ನೇರ ಹೊಣೆ. ಶಾಲೆಗಳಲ್ಲಿ ಕನ್ನಡ ಭಾಷಾ ಬೋಧಕರಿಗೆ ಬದಲಿಯಾಗಿ ಸಮಾಜವಿಜ್ಞಾನ ಶಿಕ್ಷಕರೇ ಆ ಕೆಲಸ ನಿರ್ವಹಿಸುವುದರಿಂದ ಮಕ್ಕಳ ಕನ್ನಡ ಕಲಿಕೆಯ ಗುಣಮಟ್ಟ ಕಳಪೆಯಾಗುತ್ತದೆ. ಶಿಕ್ಷಣದಲ್ಲಿ ಕನ್ನಡ ಭಾಷೆಗೆ, ಉದ್ಯೋಗದಲ್ಲಿ ಕನ್ನಡ ಪದವೀಧರರಿಗೆ ಪ್ರಾಮುಖ್ಯತೆ ಇಲ್ಲದೇ ಹೋದರೆ, ಕನ್ನಡಪರ ಆದೇಶಗಳಿಗೆ ಅರ್ಥವಿರುವುದಿಲ್ಲ.ಸಿ. ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು