ಮೈಸೂರು: ದತ್ತವಿಜಯಾನಂದ ತೀರ್ಥ ಚಾತುರ್ಮಾಸ್ಯ ವ್ರತ, ವಿಶ್ವಶಾಂತಿಗಾಗಿ ಪ್ರಾರ್ಥನೆ
ಮೈಸೂರು: ನಗರದ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ದತ್ತವಿಜಯಾನಂದ ತೀರ್ಥ ಸ್ವಾಮೀಜಿಯವರ 23ನೇ ಚಾತುರ್ಮಾಸ್ಯ ವ್ರತದೀಕ್ಷಾ ಮಹೋತ್ಸವ ಬುಧವಾರ ಪ್ರಾರಂಭವಾಯಿತು.ವ್ಯಾಸಪೂರ್ಣಿಮೆಯ ಅಂಗವಾಗಿ ಗುರುದತ್ತಾತ್ರೇಯ ಸ್ವಾಮಿ ಹಾಗೂ ವ್ಯಾಸರು, ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಗುರುಗಳ ಮಾತೃಶ್ರೀ ಮತ್ತು ಶಂಕರಾಚಾರ್ಯರಿಗೆ ಅರ್ಚನೆ, ಮಹಾಪೂಜೆ, ಮಂಗಳರಾತಿ ನೆರವ

ಮೈಸೂರು: ನಗರದ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ದತ್ತವಿಜಯಾನಂದ ತೀರ್ಥ ಸ್ವಾಮೀಜಿಯವರ 23ನೇ ಚಾತುರ್ಮಾಸ್ಯ ವ್ರತದೀಕ್ಷಾ ಮಹೋತ್ಸವ ಬುಧವಾರ ಪ್ರಾರಂಭವಾಯಿತು.ವ್ಯಾಸಪೂರ್ಣಿಮೆಯ ಅಂಗವಾಗಿ ಗುರುದತ್ತಾತ್ರೇಯ ಸ್ವಾಮಿ ಹಾಗೂ ವ್ಯಾಸರು, ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಗುರುಗಳ ಮಾತೃಶ್ರೀ ಮತ್ತು ಶಂಕರಾಚಾರ್ಯರಿಗೆ ಅರ್ಚನೆ, ಮಹಾಪೂಜೆ, ಮಂಗಳರಾತಿ ನೆರವೇರಿಸಿದರು. ಗುರುಪರಂಪರೆ, ವ್ಯಾಸ, ಸ್ವಾಮೀಜಿಯವರ ಪಾದುಕೆ ಪೂಜೆ, ಪವಮಾನ ಹೋಮ ಹಾಗೂ ದತ್ತ ಹೋಮ ನೆರವೇರಿಸಲಾಯಿತು. ನೂರಾರು ಭಕ್ತರ ಸಮ್ಮುಖದಲ್ಲಿ ಪೂಜೆ ನೆರವೇರಿಸಿದರು.ಬಳಿಕ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಲೋಕ ಕಲ್ಯಾಣ ಹಾಗೂ ವಿಶ್ಚ ಶಾಂತಿಗಾಗಿ ಪ್ರಾರ್ಥಿಸಿ ಚಾತುರ್ಮಾಸ್ಯ ವ್ರತ ಪ್ರಾರಂಭಿಸಿರುವೆ’ ಎಂದು ತಿಳಿಸಿದರು.‘ಮಹಾಜ್ಞಾನಿ ಎಂದು ಮನುಷ್ಯ ಮೆರೆಯುತ್ತಾನೆ. ಆದರೆ, ಆತ್ಮಜ್ಞಾನವೇ ಮುಖ್ಯ. ಆತ್ಮಜ್ಞಾನ ಬೋಧಿಸುವ ಗುರುವಿಗಿಂತ ಬೇರೊಬ್ಬ ಈ ಸೃಷ್ಟಿಯಲ್ಲಿ ಇಲ್ಲ. ನೀವು ಹೇಳಿದಂತೆ ಮಾಡುತ್ತೇನೆ ಎಂದು ಶ್ರೀರಾಮನು ಗುರು ವಶಿಷ್ಠರಿಗೆ ಹೇಳಿದ್ದನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು. ಗುರುಸೇವೆ ಮಾಡಿ, ಗುರು ವಾಕ್ಯ ಪಾಲಿಸಬೇಕು’ ಎಂದು ಸಲಹೆ ನೀಡಿದರು.‘ನಮಗೆ ಜ್ಞಾನ ನೀಡಿದ ಎಲ್ಲಾ ಗುರುಗಳನ್ನು ಪ್ರತಿ ಕ್ಷಣವೂ ನೆನಪಿಸಿಕೊಳ್ಳಬೇಕು. ಜ್ಞಾನಾರ್ಜನೆ ಮಾಡಿದ ಎಲ್ಲ ಗುರುಗಳಿಗೂ ನಮಿಸಿ ಸ್ಮರಿಸುವುದೇ ಗುರುಪೂರ್ಣಿಮೆ’ ಎಂದರು.‘ಕೆಟ್ಟ ಮಾತುಗಳನ್ನು ಆಡದೆ, ಚಾಡಿ ಮಾತು ಕೇಳದೆ, ಕೆಟ್ಟ ಆಲೋಚನೆ ಬಿಟ್ಟು ಆಹಾರ ನಿಯಮ ಪಾಲಿಸುತ್ತಾ ಮಂತ್ರ ಪಠಣ ಮಾಡಿ ಚಾತುರ್ಮಾಸ್ಯ ವ್ರತ ಆಚರಿಸಬೇಕು’ ಎಂದು ಸಲಹೆ ನೀಡಿದರು.ಗಂಡೂರಿ ದತ್ತಾತ್ರೇಯ ಶರ್ಮ ಅವರಿಗೆ ಗಣಪತಿ ಸಚ್ಚಿದಾನಂದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸೆ.26ರವರೆಗೂ ವಿವಿಧ ಕಾರ್ಯಕ್ರಮಗಳೊಂದಿಗೆ ಶ್ರೀಗಳ ಚಾತುರ್ಮಾಸ್ಯ ವ್ರತ ನಡೆಯಲಿದೆ.