ಎಸ್ಐಆರ್: 86.64 ಲಕ್ಷ ಎಎಸ್ಡಿಡಿಒ ಮತದಾರರು
ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಭಾಗವಾಗಿ ರಾಜ್ಯದಾದ್ಯಂತ ಈವರೆಗೆ 86.64 ಲಕ್ಷ ಮಂದಿಯನ್ನು ಪತ್ತೆಯಾಗದ/ಸ್ಥಳಾಂತರ/ಮೃತ/ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಣಿ (ಎಎಸ್ಡಿಡಿಒ) ಎಂದು ವರ್ಗೀಕರಿಸಲಾಗಿದೆ. ಈ ಮತದಾರರು ಕರಡು ಮತದಾರರ ಪಟ್ಟಿಯಿಂದ ಹೊರಗುಳಿಯಲಿದ್ದಾರೆ.‘ವರ್ಗೀಕರಣದಲ್ಲಿ ತಪ್ಪಾಗಿದ್ದರೆ, ಅಂತಹ ಗಣತಿ ನಮೂನೆಗಳನ್ನು

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಭಾಗವಾಗಿ ರಾಜ್ಯದಾದ್ಯಂತ ಈವರೆಗೆ 86.64 ಲಕ್ಷ ಮಂದಿಯನ್ನು ಪತ್ತೆಯಾಗದ/ಸ್ಥಳಾಂತರ/ಮೃತ/ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಣಿ (ಎಎಸ್ಡಿಡಿಒ) ಎಂದು ವರ್ಗೀಕರಿಸಲಾಗಿದೆ. ಈ ಮತದಾರರು ಕರಡು ಮತದಾರರ ಪಟ್ಟಿಯಿಂದ ಹೊರಗುಳಿಯಲಿದ್ದಾರೆ.‘ವರ್ಗೀಕರಣದಲ್ಲಿ ತಪ್ಪಾಗಿದ್ದರೆ, ಅಂತಹ ಗಣತಿ ನಮೂನೆಗಳನ್ನು ರೋಲ್ಬ್ಯಾಕ್ (ಎಎಸ್ಡಿಡಿಒ ವರ್ಗೀಕರಣದಿಂದ ತೆಗೆದುಹಾಕುವುದು) ಮಾಡಿ ಮತದಾರರಿಗೆ ವಿತರಿಸಬಹುದು. ಆ ಮತದಾರರು ತಮ್ಮ ಗಣತಿ ನಮೂನೆಗಳನ್ನು ಭರ್ತಿ ಮಾಡಿ ಆಗಸ್ಟ್ 8ರ ಒಳಗೆ ಸಲ್ಲಿಸಬಹುದು’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರು ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ಮಧ್ಯಾಹ್ನ 2ರ ವೇಳೆಗೆ 11.92 ಲಕ್ಷ ಪತ್ತೆಯಾಗದ (ಆಬ್ಸೆಂಟ್–ಎ), 53.39 ಲಕ್ಷ ಶಾಶ್ವತ ಸ್ಥಳಾಂತರ (ಶಿಫ್ಟೆಡ್–ಎಸ್), 15.14 ಲಕ್ಷ ಮೃತ (ಡೈಡ್–ಡಿ), 5.74 ಲಕ್ಷ ಒಂದಕ್ಕಿಂತ ಹೆಚ್ಚುಕಡೆ ನೋಂದಣಿ (ಡೂಪ್ಲಿಕೇಟ್–ಡಿ) ಮತ್ತು 42,725 ಸಹಿ ಮಾಡಲು ಇಚ್ಛಿಸದ (ಅದರ್ಸ್–ಒ) ಮತದಾರರು ಎಂದು ವರ್ಗೀಕರಿಸಲಾಗಿದೆ.‘ಯಾವುದೇ ಮತದಾರರನ್ನು ಎಎಸ್ಡಿಡಿಒ ಎಂದು ವರ್ಗೀಕರಿಸುವ ಮುನ್ನ ಬಿಎಲ್ಒಗಳು, ಸ್ಥಳ ಮಹಜರು ನಡೆಸುವುದು ಕಡ್ಡಾಯ. ಮತದಾರ ಮೃತಪಟ್ಟಿದ್ದರೆ, ಕಡ್ಡಾಯವಾಗಿ ಅವರ ಮರಣ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು. ಪ್ರಮಾಣ ಪತ್ರ ಇಲ್ಲದೇ ಇದ್ದ ಸಂದರ್ಭದಲ್ಲಿ ಸ್ಥಳದಲ್ಲಿ ಲಭ್ಯವಿರುವವರಿಂದ ಮತ್ತು ಬಿಎಲ್ಎ ಸಹಿ ಪಡೆದುಕೊಳ್ಳುವುದು ಕಡ್ಡಾಯ. ಒಂದೊಮ್ಮೆ ಮತದಾರರು ಬದುಕಿದ್ದೂ ಅವರನ್ನು ‘ಮೃತ’ ಎಂದು ವರ್ಗೀಕರಿಸಿದ್ದರೆ, ಕೂಡಲೇ ಅವರು ಬಿಎಲ್ಒ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.‘ಮತದಾರರು ವಾಸವಿರುವ ವಿಳಾಸ ಮತ್ತು ಮತದಾರರ ಪಟ್ಟಿಯಲ್ಲಿ ಇರುವ ವಿಳಾಸ ಎರಡೂ ಒಂದೇ ಆಗಿದ್ದು, ಅವರನ್ನು ‘ಶಾಶ್ವತ ಸ್ಥಳಾಂತರ’ ಎಂದು ವರ್ಗೀಕರಿಸಿದ್ದರೆ, ಅದನ್ನು ಸರಿಪಡಿಸಬಹುದು. ‘ಪತ್ತೆಯಾಗದ’ ಮತದಾರರ ವರ್ಗೀಕರಣದಲ್ಲಿ ತಪ್ಪಾಗಿದ್ದ ಸಂದರ್ಭದಲ್ಲೂ ಇದು ಅನ್ವಯವಾಗುತ್ತದೆ’ ಎಂದು ವಿವರಿಸಿದರು.‘ಇಂತಹ ಮತದಾರರು ತಮ್ಮ ಮತಗಟ್ಟೆಯ ಬಿಎಲ್ಒಗಳನ್ನು ಸಂಪರ್ಕಿಸಿ, ತಮ್ಮ ಗಣತಿ ನಮೂನೆಗಳನ್ನು ತಪ್ಪಾಗಿ ‘ಎಎಸ್ಡಿಡಿಒ’ ಎಂದು ವರ್ಗೀಕರಿಸಲಾಗಿದೆ ಎಂಬುದನ್ನು ತಿಳಿಸಬೇಕು. ಬಿಎಲ್ಒಗಳು ಅದನ್ನು ಮತದಾರರ ನೋಂದಣಾಧಿಕಾರಿಗೆ (ಇಆರ್ಒ) ತಿಳಿಸುತ್ತಾರೆ. ಈಗಾಗಲೇ ಎಎಸ್ಡಿಡಿಒ ಎಂದು ವರ್ಗೀಕರಿಸಲಾದ ಗಣತಿ ನಮೂನೆಗಳನ್ನು, ಮತದಾರರಿಗೆ ವಿತರಣೆ ಮಾಡಲು ಸೂಚಿಸುವ ಅಧಿಕಾರ ಇಆರ್ಒಗೆ ಇದೆ. ಗಣತಿ ನಮೂನೆ ಪಡೆದುಕೊಂಡು, ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕು. ನಂತರ ಬಿಎಲ್ಒಗೆ ಸಲ್ಲಿಸಬೇಕು’ ಎಂದು ಅವರು ಮಾಹಿತಿ ನೀಡಿದರು.‘ಆಗಸ್ಟ್ 8ರವರೆಗೆ ಮಾತ್ರ ಎಎಸ್ಡಿಡಿಒ ಮತದಾರರು ತಮ್ಮ ಗಣತಿ ನಮೂನೆಗಳ್ನು ಹೀಗೆ ಪಡೆದುಕೊಂಡು (ರೋಲ್ಬ್ಯಾಕ್), ಸಲ್ಲಿಸಲು ಅವಕಾಶವಿದೆ. ಆಗ ಅವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಉಳಿಯಲಿದೆ. ಇಲ್ಲವೇ ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ, ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಹೊಸದಾಗಿ ನೋಂದಾಯಿಸಲು ಅರ್ಜಿ ಸಂಖ್ಯೆ–6ನ್ನು ಸಲ್ಲಿಸಬೇಕಾಗುತ್ತದೆ. ಆ ಅರ್ಜಿಯು ಸರಿಯಿದ್ದು, ಮತದಾರರು ಅರ್ಹರಾಗಿದ್ದರೆ ಅವರ ಹೆಸರನ್ನು ಅಂತಿಮ ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ’ ಎಂದು ವಿವರಿಸಿದರು.