ವಜ್ರದಿಂದ AI ಚಿಪ್ – ಏನಿದು ಚೀನಾದ ಸೀಕ್ರೆಟ್ ಟೆಕ್ನಾಲಜಿ?
ಜನರು ಕೃತಕ ಬುದ್ಧಿಮತ್ತೆ (AI) ಎಂದರೆ ಸಾಮಾನ್ಯವಾಗಿ ಬೃಹತ್ ಡೇಟಾ ಸೆಂಟರ್ಗಳು, ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ, ಅತ್ಯಾಧುನಿಕ ಅರೆವಾಹಕ (Semiconductor) ತಂತ್ರಜ್ಞಾನದ ಬಗ್ಗೆ ಯೋಚಿಸುತ್ತಾರೆ. ಆದರೆ AI ಜಗತ್ತಿನಲ್ಲಿ ಪ್ರಯೋಗಾಲಯದಲ್ಲಿ ತಯಾರಿಸಿದ (Lab-grown) ವಜ್ರಗಳ ಪಾತ್ರದ ಬಗ್ಗೆ ಯಾರಿಗೂ ಅಷ್ಟೊಂದು ಅರಿವಿಲ್ಲ. ಪ್ರಯೋಗಾಲಯದಲ್ಲಿ ತಯಾರಿಸಿದ ವಜ್ರಗಳನ್

ಜನರು ಕೃತಕ ಬುದ್ಧಿಮತ್ತೆ (AI) ಎಂದರೆ ಸಾಮಾನ್ಯವಾಗಿ ಬೃಹತ್ ಡೇಟಾ ಸೆಂಟರ್ಗಳು, ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ, ಅತ್ಯಾಧುನಿಕ ಅರೆವಾಹಕ (Semiconductor) ತಂತ್ರಜ್ಞಾನದ ಬಗ್ಗೆ ಯೋಚಿಸುತ್ತಾರೆ. ಆದರೆ AI ಜಗತ್ತಿನಲ್ಲಿ ಪ್ರಯೋಗಾಲಯದಲ್ಲಿ ತಯಾರಿಸಿದ (Lab-grown) ವಜ್ರಗಳ ಪಾತ್ರದ ಬಗ್ಗೆ ಯಾರಿಗೂ ಅಷ್ಟೊಂದು ಅರಿವಿಲ್ಲ. ಪ್ರಯೋಗಾಲಯದಲ್ಲಿ ತಯಾರಿಸಿದ ವಜ್ರಗಳನ್ನು AI ಚಿಪ್ನಲ್ಲಿ ಬಳಕೆ ಮಾಡಲು ಚೀನಾ ಸಂಶೋಧನೆ ನಡೆಸುತ್ತಿದೆ. ಚೀನಾದ ಈ ಪ್ರಯೋಗದ ಮಹತ್ವ ಏನು? ಇದರಿಂದ ಎಐ ಜಗತ್ತಿಗೆ ಆಗುವ ಲಾಭವೇನು ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ. ವಜ್ರವು ಜಗತ್ತಿನ ಅತ್ಯುತ್ತಮ ಉಷ್ಣ ವಾಹಕ (Thermal Conductor) ವಸ್ತುಗಳಲ್ಲಿ ಒಂದಾಗಿದೆ. ತಾಮ್ರ ಅಥವಾ ಅಲ್ಯೂಮಿನಿಯಂನಂತಹ ಲೋಹಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಶಾಖವನ್ನು ಹರಡುವ ಸಾಮರ್ಥ್ಯ ಇದಕ್ಕಿದೆ. ಇದೇ ಕಾರಣಕ್ಕೆ ಸಂಶೋಧಕರು ಮತ್ತು ಚಿಪ್ ತಯಾರಕರು ವಜ್ರವನ್ನು ಚಿಪ್ನೊಳಗಿನ ಅಥವಾ ಅದರ ಕೆಳಭಾಗದ ಉಷ್ಣ ನಿರ್ವಹಣೆಗೆ ಬಳಸುವ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. AI ಚಿಪ್ನಲ್ಲಿ ವಜ್ರ ಬಳಕೆಗೆ ಕಾರಣಗಳು ಅತ್ಯುತ್ತಮ ಉಷ್ಣ ವಾಹಕತೆ (Thermal Conductivity): AI ಚಿಪ್ಗಳು ಬಹಳಷ್ಟು ಶಾಖವನ್ನು ಉತ್ಪಾದಿಸುತ್ತವೆ. ವಜ್ರವು ಆ ಶಾಖವನ್ನು ಅತ್ಯಂತ ಪರಿಣಾಮಕಾರಿಯಾಗಿ ಹೊರಹಾಕಲು ಸಹಾಯ ಮಾಡುತ್ತದೆ. ಹೆಚ್ಚಿನ ಕಾರ್ಯಕ್ಷಮತೆ: ಚಿಪ್ ತಂಪಾಗಿರುವುದರಿಂದ ಅದು ಹೆಚ್ಚಿನ ವೇಗದಲ್ಲಿ ಮತ್ತು ಹೆಚ್ಚು ಸ್ಥಿರವಾಗಿ ಕೆಲಸ ಮಾಡಬಹುದು. ದೀರ್ಘಾಯುಷ್ಯ: ಹೆಚ್ಚಿನ ಉಷ್ಣದಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುವುದರಿಂದ, ಚಿಪ್ ಬಹಳಷ್ಟು ಕಾಲ ಬಾಳಿಕೆ ಬರಲಿದೆ ಎಂಬುದು ವಿಜ್ಞಾನಿಗಳ ಲೆಕ್ಕಾಚಾರ. ಆಭರಣದಿಂದ ತಂತ್ರಜ್ಞಾನ ಕ್ಷೇತ್ರಕ್ಕೆ ಕಾಲಿಟ್ಟ ವಜ್ರ AI ಗಾಗಿ ಉತ್ತಮ ಚಿಪ್ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಇವುಗಳಿಂದ ಉತ್ಪತ್ತಿಯಾಗುವ ಅಧಿಕ ಪ್ರಮಾಣದ ಶಾಖವನ್ನು ನಿಯಂತ್ರಿಸುವುದು ಬಹುದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ ಪ್ರಯೋಗಾಲಯದಲ್ಲಿ ತಯಾರಿಸಿದ ವಜ್ರಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಕೃತಕ ವಜ್ರಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಇದಕ್ಕೆ ತಕ್ಕಂತೆ ಚೀನಾದಲ್ಲಿ ಕೃತಕ ವಜ್ರಗಳ ವಾಣಿಜ್ಯ ಉತ್ಪಾದನೆ ಮತ್ತು ಪೂರೈಕೆಗೆ ಒತ್ತುಕೊಡಲಾಗುತ್ತಿದೆ. ಇದರಿಂದ ಒಂದು ಕಾಲದಲ್ಲಿ ಕೇವಲ ಆಭರಣ ಉದ್ಯಮಕ್ಕೆ ಸೀಮಿತವಾಗಿದ್ದ ವಜ್ರ ಈಗ ತಂತ್ರಜ್ಞಾನ ಕ್ಷೇತ್ರಕ್ಕೆ ರೂಪಾಂತರಗೊಳ್ಳುತ್ತಿದೆ. ಚಿಪ್ಗಳಿಗೆ ಶಾಕವೇ ಸವಾಲು ಆಧುನಿಕ AI ಚಿಪ್ಗಳು ಪ್ರತಿ ಸೆಕೆಂಡಿಗೆ ಟ್ರಿಲಿಯನ್ಗಟ್ಟಲೆ ಲೆಕ್ಕಾಚಾರಗಳನ್ನು ನಿರ್ವಹಿಸುತ್ತವೆ. ಈ ಅಪಾರ ಕಂಪ್ಯೂಟಿಂಗ್ ಸಾಮರ್ಥ್ಯವು ಹೆಚ್ಚಿನ ಪ್ರಮಾಣದ ಶಾಖವನ್ನು ಉತ್ಪಾದಿಸುತ್ತದೆ. Generative AI ಅಪ್ಲಿಕೇಶನ್ಗಳನ್ನು ನಿರ್ವಹಿಸುವಾಗ, ಪ್ರೊಸೆಸರ್ಗಳು ಅಪಾರ ಪ್ರಮಾಣದ ವಿದ್ಯುತ್ ಬಳಸುತ್ತವೆ. ಟ್ರಾನ್ಸಿಸ್ಟರ್ಗಳ ಸಾಂದ್ರತೆ ಮತ್ತು ಚಿಪ್ಗಳ ಕಾರ್ಯಕ್ಷಮತೆ ಹೆಚ್ಚಾದಂತೆ, ಅವುಗಳ ತಾಪಮಾನವನ್ನು ನಿಯಂತ್ರಿಸುವುದು ಅತ್ಯಗತ್ಯವಾಗಿದೆ. ಹೆಚ್ಚುವರಿ ಶಾಖವನ್ನು ತಕ್ಷಣ ಹೊರಹಾಕದಿದ್ದರೆ ಚಿಪ್ಗಳ ಕಾರ್ಯಕ್ಷಮತೆ ಕುಸಿಯಬಹುದು. ಅಥವಾ ದೀರ್ಘಕಾಲದಲ್ಲಿ ಅವು ಹಾನಿಗೊಳಗಾಗಬಹುದು. ಇದನ್ನು ಸರಿದೂಗಿಸಲು ವಜ್ರ ಸಹಾಯ ಮಾಡುತ್ತದೆ. ವಜ್ರವು ತಾಮ್ರ ಮತ್ತು ಸಿಲಿಕಾನ್ನಂತಹ ಸಾಮಾನ್ಯ ಎಲೆಕ್ಟ್ರಾನಿಕ್ ವಸ್ತುಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಶಾಖವನ್ನು ಹೊರಹಾಕಬಲ್ಲದು. ಆದ್ದರಿಂದ, ವಿಶೇಷವಾಗಿ ತಯಾರಿಸಲಾದ ಸಂಶ್ಲೇಷಿತ (Synthetic) ವಜ್ರಗಳನ್ನು AI ಪ್ರೊಸೆಸರ್ಗಳಿಂದ ಶಾಖವನ್ನು ಹೊರಹಾಕುವ ಸಾಧನವಾಗಿ ಬಳಕೆ ಮಾಡಲಾಗುತ್ತದೆ. ನೈಸರ್ಗಿಕ ವಜ್ರಗಳಿಗಿಂತ ಭಿನ್ನವಾಗಿ, ಪ್ರಯೋಗಾಲಯದಲ್ಲಿ ಬೆಳೆದ ವಜ್ರಗಳನ್ನು ಕೈಗಾರಿಕಾ ಅಗತ್ಯಗಳಿಗೆ ಅನುಗುಣವಾಗಿ ತಯಾರಿಸಬಹುದು. ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ವೆಚ್ಚದಲ್ಲಿ ಉತ್ಪಾದಿಸಬಹುದಾಗಿದೆ. ವಜ್ರ ಚಿಪ್ನ ಮುಖ್ಯಭಾಗವಲ್ಲ ವಜ್ರವು ಚಿಪ್ನ ಮುಖ್ಯ ಭಾಗವಲ್ಲ. ಹೆಚ್ಚಿನ AI ಚಿಪ್ಗಳು ಇನ್ನೂ ಸಿಲಿಕಾನ್ ಅಥವಾ ಇತರ ಸೆಮಿಕಂಡಕ್ಟರ್ ವಸ್ತುಗಳಿಂದಲೇ ತಯಾರಾಗುತ್ತವೆ. ವಜ್ರವನ್ನು ಮುಖ್ಯವಾಗಿ ತಾಪ ನಿರ್ವಹಣೆಗಾಗಿ ಬಳಸಲಾಗುತ್ತದೆ. ಈ ಕ್ಷೇತ್ರದಲ್ಲಿ ಚೀನಾ ಮಾತ್ರವಲ್ಲ, ಅಮೆರಿಕಾ, ಜಪಾನ್ ಮತ್ತು ಇತರ ದೇಶಗಳ ಸಂಶೋಧಕರು ಕೆಲಸ ಮಾಡುತ್ತಿದ್ದಾರೆ. ಇದು ಆಭರಣದ ವಜ್ರವಲ್ಲ ಇಲ್ಲಿ ಬಳಸುವ ವಜ್ರಗಳು ಆಭರಣಗಳಲ್ಲಿ ಬಳಸುವ ನೈಸರ್ಗಿಕ ವಜ್ರಗಳಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಪ್ರಯೋಗಾಲಯದಲ್ಲಿ ತಯಾರಿಸಲಾದ ಕೃತಕ ವಜ್ರಗಳಾಗಿರಲಿವೆ. ಇವುಗಳನ್ನು ವಿಶೇಷ ತಂತ್ರಜ್ಞಾನದ ಮೂಲಕ ಉತ್ಪಾದಿಸಲಾಗುತ್ತದೆ ಮತ್ತು ಕೈಗಾರಿಕಾ ಬಳಕೆಗೆ ಇವು ಸೂಕ್ತವಾಗಿರುತ್ತವೆ. ಚೀನಾದ ಪ್ರಯತ್ನ AI ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಚೀನಾ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡುತ್ತಿದೆ. ಉನ್ನತ ಮಟ್ಟದ ಚಿಪ್ ತಂತ್ರಜ್ಞಾನಗಳ ಮೇಲಿನ ನಿರ್ಬಂಧಗಳ ನಡುವೆಯೂ, ಹೆಚ್ಚು ಕಾರ್ಯಕ್ಷಮತೆಯ ಚಿಪ್ಗಳನ್ನು ಅಭಿವೃದ್ಧಿಪಡಿಸಲು ಸಂಶೋಧನೆಗೆ ಒತ್ತು ನೀಡುತ್ತಿದೆ. ವಜ್ರ ಆಧಾರಿತ ಉಷ್ಣ ನಿರ್ವಹಣೆ ಕೂಡ ಈ ಸಂಶೋಧನೆಯ ಒಂದು ಭಾಗವಾಗಿದೆ. ವಜ್ರ ಆಧಾರಿತ ಉಷ್ಣ ನಿರ್ವಹಣಾ ತಂತ್ರಜ್ಞಾನ ಯಶಸ್ವಿಯಾದರೆ, ಭವಿಷ್ಯದಲ್ಲಿ ಕೇವಲ ಚೀನಾ ಮಾತ್ರವಲ್ಲದೆ ವಿಶ್ವದ ಪ್ರಮುಖ ಚಿಪ್ ತಯಾರಕರು ಕೂಡ ಇದನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ.