ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿಯಾಗಿಲ್ಲ: ರಾಹುಲ್ ಆರೋಪ ನಿರಾಕರಿಸಿದ ಸಚಿವ
ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧಿಸಿದಂತೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ಮೇಲೆ ಪೊಲೀಸರು ಗುಂಡಿನ ದಾಳಿ ಮಾಡಿಲ್ಲ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಯಲ್ಲಿ ಬುಧವಾರ(ಜುಲೈ 29) ಹೇಳಿದ್ದಾರೆ. ಜುಲೈ 20ರಂದು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲು ಗೃಹ ಸಚಿವ ಅಮಿತ್ ಶಾ ಆ

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧಿಸಿದಂತೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ಮೇಲೆ ಪೊಲೀಸರು ಗುಂಡಿನ ದಾಳಿ ಮಾಡಿಲ್ಲ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಯಲ್ಲಿ ಬುಧವಾರ(ಜುಲೈ 29) ಹೇಳಿದ್ದಾರೆ. ಜುಲೈ 20ರಂದು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲು ಗೃಹ ಸಚಿವ ಅಮಿತ್ ಶಾ ಆದೇಶಿಸಿದ್ದರು. ದೇಹಕ್ಕೆ ಪೆಲೆಟ್ಗಳು ನುಗ್ಗುವಂತೆ ಮಾಡಿದರು ಎಂದು ಲೋಕಸಭೆಯ ಚರ್ಚೆಯ ವೇಳೆ ರಾಹುಲ್ ಗಾಂಧಿ ಆರೋಪಿಸಿದ್ದರು. ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ–2026 ಕುರಿತ ಚರ್ಚೆಯ ವೇಳೆ ಮಾತನಾಡಿದ ಜಿತೇಂದ್ರ ಸಿಂಗ್, ‘ಪ್ರತಿಭಟನೆಯ ವೇಳೆ ಗುಂಡಿನ ದಾಳಿ ನಡೆಸುವ ಆದೇಶ ನೀಡುವ ಅಧಿಕಾರವು ಮ್ಯಾಜಿಸ್ಟ್ರೇಟ್ ಅವರಲ್ಲಿರುತ್ತದೆಯೇ ಹೊರತು ಸಚಿವರಲ್ಲಿ ಅಲ್ಲ. ಸಾರ್ವಜನಿಕ ಜೀವನದಲ್ಲಿ ಅನುಭವದ ಕೊರತೆಯಿರುವ ಕಾರಣದಿಂದಲೇ ರಾಹುಲ್ ಗಾಂಧಿ ಅವರು ಗೃಹ ಮಂತ್ರಿಗಳ ವಿರುದ್ಧ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ತಿಳಿಸಿದರು. ರಾಹುಲ್ ಗಾಂಧಿ ಅವರ ಆರೋಪಕ್ಕೆ ಯಾವುದೇ ಪುರಾವೆಗಳಿಲ್ಲ. ಅದಲ್ಲದೆ, ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿಯೇ ಆಗಿಲ್ಲ ಎನ್ನುವುದನ್ನು ಅವರು ಮುಖ್ಯವಾಗಿ ತಿಳಿದುಕೊಳ್ಳಬೇಕು. ಗುಂಡಿನ ದಾಳಿಯೇ ಆಗಿರದಿದ್ದರೆ, ಅನುಮತಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸುವ ಉದ್ದೇಶದಿಂದ ಅಶ್ರುವಾಯು ಬಳಸಲಾಗಿದೆ. ಗುಂಡಿನ ದಾಳಿಯಾಗಿಲ್ಲ. ಸತ್ಯವನ್ನು ತಿಳಿದುಕೊಳ್ಳದೆ, ಯಾವುದೇ ಜವಾಬ್ದಾರಿಯಿಲ್ಲದೆ ಸದನದಲ್ಲಿ ಈ ರೀತಿಯಾಗಿ ಮಾತನಾಡುವುದು ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕರ ನಡವಳಿಕೆಯಲ್ಲ ಎಂದು ತಿಳಿಸಿದ್ದಾರೆ. ಗುಂಡು ಹಾರಿಸಲು ಶಾ ಆದೇಶಿಸಿದ್ದರು: ರಾಹುಲ್ ಗಾಂಧಿ ಮಾತಿಗೆ ಲೋಕಸಭೆಯಲ್ಲಿ ಗದ್ದಲ