ತಂತ್ರಜ್ಞಾನ: ಹಿತ್ತಲ ಕೋಣೆಗೆ ವಿಳಾಸವಿಲ್ಲ!
ರಜೆಗಳು, ಲಾಂಗ್–ವೀಕೆಂಡ್ ಬಂದರೆ ಸಾಕು, ಪ್ರವಾಸ ಹೋಗುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ; ಪ್ರವಾಸ ಹೋಗುವ ಮುನ್ನ ಎಲ್ಲರೂ ತಮ್ಮ ಕನಸು, ಆಸಕ್ತಿ, ಜೇಬಿನ/ಪರ್ಸಿನ ಆಳಕ್ಕೆ ತಕ್ಕ ಹಾಗೆ ಸ್ಥಳವನ್ನು ಆಯ್ಕೆ ಮಾಡುತ್ತಾರೆ. ಈಗ ಯುವಜನತೆ ಟ್ರೆಕ್ಕಿಂಗ್, ಬೈಕಿಂಗ್ ಎಂದು ಪ್ರವಾಸ ಮಾಡಿ ಇನ್ಸ್ಟಾಗ್ರಾಮ್/ಫೇಸ್ಬುಕ್ಗಳಲ್ಲಿ ಹಾಕಿಕೊಳ್ಳುವುದು ಸರ್ವೇಸಾಮಾನ್ಯವಾಗಿಬಿಟ್ಟಿ

ರಜೆಗಳು, ಲಾಂಗ್–ವೀಕೆಂಡ್ ಬಂದರೆ ಸಾಕು, ಪ್ರವಾಸ ಹೋಗುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ; ಪ್ರವಾಸ ಹೋಗುವ ಮುನ್ನ ಎಲ್ಲರೂ ತಮ್ಮ ಕನಸು, ಆಸಕ್ತಿ, ಜೇಬಿನ/ಪರ್ಸಿನ ಆಳಕ್ಕೆ ತಕ್ಕ ಹಾಗೆ ಸ್ಥಳವನ್ನು ಆಯ್ಕೆ ಮಾಡುತ್ತಾರೆ. ಈಗ ಯುವಜನತೆ ಟ್ರೆಕ್ಕಿಂಗ್, ಬೈಕಿಂಗ್ ಎಂದು ಪ್ರವಾಸ ಮಾಡಿ ಇನ್ಸ್ಟಾಗ್ರಾಮ್/ಫೇಸ್ಬುಕ್ಗಳಲ್ಲಿ ಹಾಕಿಕೊಳ್ಳುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಆದರೆ ಜನರ ಹುಬ್ಬೇರುವಂತೆ, ಕಳವಳಕ್ಕೀಡು ಮಾಡುವಂತಹ ಮತ್ತೊಂದು ಪ್ರವಾಸವಿದೆ. ಅದು ಎಲ್ಲಿಗೆ ಗೊತ್ತೇ? ವಿಳಾಸವೇ ಇಲ್ಲದ ಹಿತ್ತಲ ಕೋಣೆಗೆ! ಹೌದು, ‘ಬ್ಯಾಕ್ರೂಂ’ಗಳೆಂಬ ಈ ಹೊಸ ಯುವಜನರ ಫೇವರೆಟ್ ಜಾಗ ಯಾವುದೇ ನಿಜವಾದ ತಾಣವಲ್ಲ! ಇವು ಕೇವಲ ಅಂತರ್ಜಾಲದ ಜಾಲದಲ್ಲಿರುವ ವರ್ಚುವಲ್ ಸ್ಥಳ!ಪ್ರವಾಸ ಮತ್ತು ತಂತ್ರಜ್ಞಾನ ಎಂದಿಗೂ ಜೊತೆಯಲ್ಲೇ ಬೆಳೆಯುತ್ತಾ ಬಂದಿದೆ. ಹೊಸ ತಾಣಗಳ ಪರಿಚಯದ ವಿಡಿಯೊಗಳು ‘ಯೂಟ್ಯೂಬ್ ಶಾರ್ಟ್ಸ್’, ‘ಇನ್ಸ್ಟಾಗ್ರಾಮ್ ರೀಲ್ಸ್’ನ ಮೂಲಕ ಮನೆಮನೆಗೂ ತಲುಪುತ್ತಿದೆ. ಇನ್ನು ಪ್ರವಾಸದ ಪ್ಯಾಕೇಜ್ ಬುಕ್ ಮಾಡಿ, ಉಳಿದುಕೊಳ್ಳುವ ವ್ಯವಸ್ಥೆ, ಬಸ್/ಕ್ಯಾಬ್/ರೈಲು/ವಿಮಾನ ಟಿಕೆಟ್ ಬುಕಿಂಗ್, ಮ್ಯೂಸಿಯಂನಿಂದ ಮಂದಿರದವರೆಗೆ ಸ್ಲಾಟ್ ಬುಕ್ ಮಾಡುವುದು ಇವೆಲ್ಲಾ ಆನ್ಲೈನ್ನೇ! ಕೋವಿಡ್ ಸಮಯದಲ್ಲಿ ಮನೆಯಲ್ಲೇ ಕುಳಿತು ವಿಶ್ವದರ್ಶನ ಮಾಡಲು ‘ಅಮೆಜಾನ್ ಎಕ್ಸ್ಪ್ಲೋರ್’ನಂತಹ ವ್ಯವಸ್ಥೆಗಳು ಅಂಗೈಯಲ್ಲಿರುವ ಫೋನಿನೊಳಗೆ ಇಣುಕಿ ಹಾಕಿದ್ದು ಈಗಾಗಲೇ ಹಳೆಯ ಸುದ್ದಿ. ಆದರೆ ಮೂರು ಹೊತ್ತೂ ಫೋನು, ಗೇಮು, ಸೋಷಿಯಲ್ ಮೀಡಿಯಾ ಅಂತ ಗೀಳು ಬೆಳೆಸಿಕೊಂಡಿರೋ ಯುವಜನತೆಗೆ ಈಗಾಗಲೇ ಎಲ್ಲವೂ ಬೋರ್! ಸಮುದ್ರಗಳನ್ನು ನೋಡಿಯಾಯಿತು, ಬೆಟ್ಟಗಳನ್ನು ಹತ್ತಿಯಾಯಿತು. ಇನ್ನು ಹೊಸದೇನು ಎಂದು ಹುಡುಕಿಕೊಂಡು ಈ ‘ಬ್ಯಾಕ್ರೂಂ’ ಎಡತಾಕುತ್ತಿದ್ದಾರೆ. ಮನೋವಿಜ್ಞಾನಿಗಳ ಪ್ರಕಾರ ಇದು ಕೇವಲ ಒಂದು ಟ್ರೆಂಡ್ ಅಲ್ಲ; ಇದರ ಹಿಂದೆ ಆಳವಾದ ಭಾವನಾತ್ಮಕ ತೊಳಲಾಟವಿದೆ.‘ಬ್ಯಾಕ್ರೂಂ’ ಎನ್ನುವುದು ಅಂತರ್ಜಾಲದಲ್ಲಿರುವ ಹಳದಿಗೋಡೆಗಳ, ಅಗಣಿತ ಕೋಣೆಗಳ ಒಂದು ಸ್ಥಳ; ಇಲ್ಲಿ ಬಾಗಿಲಿನ ಅವಶ್ಯಕತೆಯಿಲ್ಲದಂತೆ ಗೋಡೆಗಳ ಮೂಲಕವೇ ಜನರು ಒಂದು ಕೋಣೆಯಿಂದ ಮತ್ತೊಂದಕ್ಕೆ ಹೋಗುತ್ತಾರೆ. ಯಾವುದೋ ಖಾಲಿ ಗೋಡೌನಿನಂತೆ, ಜನರು ತೊರೆದ ಬೃಹತ್ ಆಫೀಸಿನಂತೆ ಕಾಣುವ ಈ ತಾಣ, ನಮ್ಮ ‘ವರ್ಚುವಲ್ ಅವತಾರ್’ಗಳಿಗೆ ಕೊನೆಯಿಲ್ಲದ ಹೊಸಬಗೆಯ ಭಯಂಕರ ಅನುಭವವನ್ನು ಕೊಡಮಾಡುತ್ತದೆ. ಗೇಮಿಂಗ್ ಗೀಳು ಹತ್ತಿಸಿಕೊಂಡವರಿಗೆ ಆಟದ ಪಾತ್ರದ ಮೂಲಕ ಬ್ಯಾಕ್ರೂಂನಲ್ಲಿರುವವರು ತಾವೇ ಅಥವಾ ತಮ್ಮ ಪ್ರತಿನಿಧಿಯಾದ ಪಾತ್ರವೇ ಎಂಬ ಅರಿವೂ ಮಸುಕಾಗುತ್ತದೆ ಮತ್ತು ತಾವೇ ಎಲ್ಲೋ ಕಳೆದುಹೋದ, ಬೆಚ್ಚಿಬಿದ್ದ, ಕಾಣದ್ದನ್ನು ಹುಡುಕಿಹೊರಟ ಅನುಭವವಾಗುತ್ತದೆ. ಇದೊಂದು ವಿಚಿತ್ರವೆನಿಸುವ, ಭಯಹುಟ್ಟಿಸುವ ಹೊಸ ಬಗೆಯ ಪ್ರವಾಸವೇನೋ ಎಂಬಂತೆ ಯುವಜನತೆ ಇಲ್ಲಿ ತಮ್ಮನ್ನೇ ತಾವು ಮರೆಯುತ್ತಿದ್ದಾರೆ. ಎಲ್ಲಿ ಹೋದರೆಂದು ಹುಡುಕೋಕೆ ಯಾವ ನಕ್ಷೆಯೂ ಸಹಾಯಕ್ಕೆ ಬಾರದಾಗಿದೆ!ಈ ಬ್ಯಾಕ್ರೂಂ ಎಂಬ ‘ವರ್ಚುವಲ್ ಸ್ಥಳ’ವನ್ನು ಯಾರೋ ಒಬ್ಬರು ಹುಟ್ಟುಹಾಕಿದ್ದು ಎಂದು ಬೆರಳು ಮಾಡಿ ತೋರಿಸುವಂತೆಯೂ ಇಲ್ಲ. 2019ರ ಮೇ 12ರಂದು ಅನಾಮಿಕ ಅಂತರ್ಜಾಲ ಬಳಕೆದಾರರೊಬ್ಬರು ‘4ಚಾನ್’ ಎಂಬ ಪ್ಯಾರಾನಾರ್ಮಲ್ ಬೋರ್ಡ್ ಒಂದರಲ್ಲಿ, ಇಂಟರ್ನೆಟ್ ಬಳಕೆದಾರರಿಗೆ ‘ವಿಚಿತ್ರ ಎನಿಸುವಂತಹ ತಾಣಗಳ ಚಿತ್ರಗಳನ್ನು ಅಪ್ಲೋಡ್ ಮಾಡಿ’ ಎಂದು ಪೋಸ್ಟ್ ಮಾಡಿದರು; ಜೊತೆಗೆ ಹಳದಿ ಗೋಡೆಗಳ ಖಾಲಿ ಕೋಣೆಗಳ ಚಿತ್ರವನ್ನೂ ಹಾಕಿದರು. ಇದಕ್ಕೆ ಉತ್ತರವಾಗಿ ಅನೇಕ ಪ್ರತಿಕ್ರಿಯೆಗಳು ಬಂದು, ಸಾವಿರಾರು ಪುಟಗಳ ಕಟ್ಟುಕಥೆಗಳು ಹುಟ್ಟಿಕೊಂಡಿವೆ; ಸಾವಿರಾರು ಜನರು ಈ ವಾಸ್ತವಾಭಾಸದ ಲೋಕವನ್ನು ಕಟ್ಟುವಲ್ಲಿ ನಿರತರಾಗಿದ್ದಾರೆ. ಒಂದು ವಾಕ್ಯ, ಒಂದು ಫೋಟೊವಾಗಿ ಪ್ರಾರಂಭವಾದ ಈ ‘ಬ್ಯಾಕ್ ರೂಂ’ ಪುರಾಣವು ಈಗ ಅನೇಕ ‘ಲೆವೆಲ್’ಗಳನ್ನು ಹೊಂದಿರುವ ಗೇಮ್ ಆಗಿ ಪರಿವರ್ತನೆಗೊಂಡಿದೆ.ಸಾವಿರಾರು ಜನರಿಗೆ ಗುಂಗು ಹಿಡಿಸಿರುವ ಈ ವಿಷಯವನ್ನೇ ಆಧರಿಸಿ ಕೇನ್ ಪಾರ್ಸನ್ಸ್/ಪಿಕ್ಸೆಲ್ಸ್ ಎಂಬ ಹದಿನಾರು ವರ್ಷಗಳ ಹುಡುಗ, ತನ್ನ ಯೂಟ್ಯೂಬ್ ಚ್ಯಾನೆಲ್ಲಿನಲ್ಲಿ ‘ಬ್ಯಾಕ್ರೂಮ್ಸ್’ ಎಂಬ ವೆಬ್ ಸೀರೀಸ್ ಹರಿಬಿಟ್ಟ. ಈ ವಿಡಿಯೊಗಳನ್ನು ಎಷ್ಟು ಜನರು ನೋಡಿದ್ದಾರೆ ಗೊತ್ತೇ? ಈ ವಿಚಿತ್ರ, ವಿಕ್ಷಿಪ್ತ ಎನಿಸುವ ವಿಡಿಯೊಗಳು ಬರೋಬ್ಬರಿ 190 ಕೋಟಿಗಳಷ್ಟು ವೀಕ್ಷಣೆ ಪಡೆದುಕೊಂಡಿದೆ. ‘ಅದು ಸಮಾಜಕ್ಕೆ ಒಳ್ಳೆಯದೋ ಕೆಟ್ಟದ್ದೊ, ಟ್ರೆಂಡ್ ಆದರೆ ಸಾಕು’ ಎಂಬಂತಹ ಮನಃಸ್ಥಿತಿಯ ಯುವಕರು ಇದನ್ನು ಮತ್ತೊಂದು ಮಜಲಿಗೆ ಕೊಂಡೊಯ್ದಿದ್ದಾರೆ. ಇದೇ ತಿಂಗಳು ‘ಬ್ಯಾಕ್ರೂಮ್ಸ್’ ಎಂಬ ಹೆಸರಿನಮನೋವೈಜ್ಞಾನಿಕ ಭಯಾನಕ ರೋಮಾಂಚಕ ಸಿನಿಮಾ ಕೂಡ ಬಿಡುಗಡೆಯಾಗಿದೆ. ಅದರ ನಿರ್ದೇಶಕ ಇದೇ ಕೇನ್ ಪಾರ್ಸನ್ಸ್. ಈ ಸಿನೆಮಾ ಈಗಾಗಲೇ 38 ಕೋಟಿ ರೂಪಾಯಿಗಳಷ್ಟು ಹಣವನ್ನು ಗಳಿಸಿ, ಮುನ್ನುಗ್ಗುತ್ತಿದೆಯಂತೆ.ತಂತ್ರಜ್ಞಾನದ ಅಗಣಿತ ಸಾಧ್ಯತೆಗಳಲ್ಲಿ ಜನರ ಪ್ರಾಣ ಉಳಿಸಲು, ಕಡಲ್ಕೊರೆತ ತಡೆಯಲು, ಮೆಡಿಕಲ್ ಸೀಟ್ ಹಂಚಲು, ಕಡಿಮೆ ದರದಲ್ಲಿ ಆಹಾರಪದಾರ್ಥಗಳು ದೊರೆಯುವಂತೆ ಮಾಡಲು, ಮುರಿದ ಸಂಬಂಧಗಳನ್ನು ಬೆಸಯಲು, ದೇಶ ಕಾಯುವ ಯೋಧರಿಗೆ ನೆರವಾಗಲು, ಬ್ಯಾಂಕಿಂಗ್ ಸುಲಭಗೊಳಿಸಲು - ಹೀಗೆ ಕೋಟ್ಯಂತರ ದಾರಿಗಳು ನಮ್ಮೆದುರಿಗಿವೆ. ಆದರೆ, ಬದಲಾದ ಕಾಲಘಟ್ಟದಲ್ಲಿ ಶಾಲೆಗೆ ಹೋಗುವ ಮುನ್ನವೇ ಕೈಗೆ ಸಿಕ್ಕ ಸ್ಮಾರ್ಟ್ ಫೋನ್, ಬದಲಾದ ಕುಟುಂಬ ವ್ಯವಸ್ಥೆ, ಕಲಿಕೆಯ/ ಕೆಲಸದ ವಾತಾವರಣದಲ್ಲಿನ ವಿವರಿಸಲಾಗದ ಒತ್ತಡ - ಇವೆಲ್ಲಾ ಮಾನಸಿಕ ತೊಳಲಾಟಕ್ಕೆ ಕಾರಣವಾಗುತ್ತಿದೆ. ಮನೋವಿಜ್ಞಾನಿ ಡಾ. ಕ್ಯಾರೋಲಿನಾ ಎಸ್ಟೆವೆಝ್ ಅವರ ಪ್ರಕಾರ ತಮ್ಮ ದಿನನಿತ್ಯದ ಕಾರ್ಪಣ್ಯ, ಮಾನಸಿಕ ತುಮುಲ, ಒತ್ತಡವನ್ನು ಮರೆಯಲು, ನಿರ್ದಿಷ್ಟ ಸಮಸ್ಯೆಗಳನ್ನು ಮರೆಯಲು ಅನಿರ್ದಿಷ್ಟ ಲೋಕದೊಳಗೆ ಪ್ರಯಾಣ ಆರಂಭಿಸುತ್ತಾರೆ, ‘ಬ್ಯಾಕ್ರೂಮ್ಸ್’ ಬಳಕೆದಾರರು. ಇಲ್ಲಿ ಊಹಿಸಲಾಗದ ಹೊಸ ಸಾಧ್ಯತೆಗಳು, ಅಂತ್ಯವಿಲ್ಲದ ಅಪರಿಚಿತತೆ ತಮಗೇನೋ ಹೊಸ ಅನುಭವ ನೀಡುತ್ತದೆ ಎಂದು ಭಾವಿಸಿ ಭೇಟಿ ನೀಡುತ್ತಾರೆ. ಆದರೆ ಅದು ಮತ್ತಷ್ಟು ಆತಂಕವನ್ನು, ತುಮುಲವನ್ನು ಹೆಚ್ಚಿಸುತ್ತದೆ. ಇದನ್ನೂ ಅರ್ಥಮಾಡಿಕೊಂಡ ಸಾವಿರಾರು ಬುದ್ಧಿವಂತ ‘ಜೆನ್ ಝಿ’ ಯುವಜನರು, ‘ಡಿಜಿಟಲ್ ಡೀಟಾಕ್ಸ್’ ಮೊರೆಹೋಗಿದ್ದಾರೆ. ಇಂಟರ್ನೆಟ್ ಇಲ್ಲದ ಹಳೆಯ ಪುಟ್ಟ ಫೋನುಗಳು ಮತ್ತೆ ಪ್ರಸಿದ್ಧವಾಗುತ್ತಿವೆ. ಬದಲಾವಣೆಯ ಗಾಳಿ ಬೀಸಿದೆಯೇ? ಕಾದು ನೋಡಬೇಕಿದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260729-51-902085425