ಭ್ರೂಣಲಿಂಗ ಪತ್ತೆ: ಏಜೆಂಟರು ಸಕ್ರಿಯ
ಚಿಕ್ಕಬಳ್ಳಾಪುರ: ಜಿಲ್ಲೆಯ ಕೆಲವು ಖಾಸಗಿ ಆಸ್ಪತ್ರೆಗಳು, ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಭ್ರೂಣ ಲಿಂಗ ಪತ್ತೆ ಮಾಡಲಾಗುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿವೆ. ಇದಕ್ಕೆ ಪುಷ್ಟಿ ನೀಡುವಂತೆ ಮಂಡ್ಯ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ‘ಮಾರುವೇಷ’ದ ಕಾರ್ಯಾಚರಣೆಯನ್ನು ಜಿಲ್ಲೆಯಲ್ಲಿ ನಡೆಸಿದ್ದಾರೆ.ಈ ಕಾರ್ಯಾಚರಣೆ ಸಮಯದಲ್ಲಿ ಗರ್ಭಿಣಿಯರ

ಚಿಕ್ಕಬಳ್ಳಾಪುರ: ಜಿಲ್ಲೆಯ ಕೆಲವು ಖಾಸಗಿ ಆಸ್ಪತ್ರೆಗಳು, ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಭ್ರೂಣ ಲಿಂಗ ಪತ್ತೆ ಮಾಡಲಾಗುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿವೆ. ಇದಕ್ಕೆ ಪುಷ್ಟಿ ನೀಡುವಂತೆ ಮಂಡ್ಯ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ‘ಮಾರುವೇಷ’ದ ಕಾರ್ಯಾಚರಣೆಯನ್ನು ಜಿಲ್ಲೆಯಲ್ಲಿ ನಡೆಸಿದ್ದಾರೆ.ಈ ಕಾರ್ಯಾಚರಣೆ ಸಮಯದಲ್ಲಿ ಗರ್ಭಿಣಿಯರನ್ನು ಲಿಂಗ ಪತ್ತೆಗಾಗಿ ಹೊರಗಡೆಯಿಂದ ಜಿಲ್ಲೆಗೆ ಕರೆತರುವ ಏಜೆಂಟರು ಸಕ್ರಿಯರಾಗಿದ್ದಾರೆ ಎಂಬ ವಿಚಾರ ಸಾಕ್ಷಿ ಸಹಿತ ಬೆಳಕಿಗೆ ಬಂದಿದೆ.ನಡೆದಿರುವುದೇನು: ಮಂಡ್ಯ ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆ ಕೃತ್ಯಗಳ ವಿರುದ್ಧ ಅಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಕರಣಗಳೂ ದಾಖಲಾಗಿವೆ.ಮಂಡ್ಯ ಜಿಲ್ಲೆಯ ಗರ್ಭಿಣಿಯರನ್ನು ಏಜೆಂಟರು ಹೊರ ಜಿಲ್ಲೆಗಳಿಗೆ ಕರೆದುಕೊಂಡು ಹೋಗಿ ಭ್ರೂಣ ಲಿಂಗ ಪತ್ತೆ ಮಾಡಿಸುತ್ತಿದ್ದಾರೆ ಎಂಬ ಬಗ್ಗೆ ಮಂಡ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದರು. ಏಜೆಂಟರೊಬ್ಬರ ಮೊಬೈಲ್ಗೆ ಕರೆ ಮಾಡಿದ ಅಧಿಕಾರಿಗಳು ವ್ಯವಹಾರ ಕುದುರಿಸಿದ್ದರು. ಭ್ರೂಣಲಿಂಗ ಪತ್ತೆಗೆ ಏಜೆಂಟರು ₹35 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು.ಗರ್ಭಿಣಿಯೊಬ್ಬರನ್ನು ಮಹಿಳಾ ಏಜೆಂಟರ ಜೊತೆ ಆರೋಗ್ಯ ಇಲಾಖೆ ಅಧಿಕಾರಿಗಳು ಕಳುಹಿಸಿದ್ದರು. ತಕ್ಷಣವೇ ಅಧಿಕಾರಿಗಳು ಸಹ ಕಾರ್ಯಾಚರಣೆಗೆ ಇಳಿದಿದ್ದರು. ಬೆಂಗಳೂರಿನಿಂದ ಗರ್ಭಿಣಿಯನ್ನು ಕರೆದುಕೊಂಡು ಹೊರಟ ಏಜೆಂಟ್ ತಲುಪಿದ್ದು ಚಿಂತಾಮಣಿಗೆ. ಚಿಂತಾಮಣಿಯ ಖಾಸಗಿ ಆಸ್ಪತ್ರೆಯೊಂದರ ಬಳಿ ಬರುವಂತೆ ಮತ್ತೊಬ್ಬ ಗರ್ಭಿಣಿಗೂ ಏಜೆಂಟ್ ಸೂಚಿಸಿದ್ದಳು. ಆ ಪ್ರಕಾರ ಈ ಇಬ್ಬರು ಗರ್ಭಿಣಿಯರನ್ನು ಏಜೆಂಟ್ ಆಸ್ಪತ್ರೆಯೊಳಗೆ ಕರೆದುಕೊಂಡು ಹೋಗಿದ್ದಾಳೆ. ಆಸ್ಪತ್ರೆಯಿಂದ ಹೊರ ಬರುವಾಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಯಾವುದೇ ಸ್ಕ್ಯಾನಿಂಗ್ ನಡೆದಿಲ್ಲ.ಮಂಡ್ಯ ಜಿಲ್ಲೆಯ ಅಧಿಕಾರಿಗಳ ಕಾರ್ಯಾಚರಣೆಯ ಮಾಹಿತಿ ಸೋರಿಕೆ ಆಗಿದೆ. ಹಾಗಾಗಿ ಸ್ಕ್ಯಾನಿಂಗ್ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.ಗಡಿಭಾಗದಲ್ಲಿ ಸದ್ದಿಲ್ಲದೆ ಕೃತ್ಯ: ಜಿಲ್ಲೆಯ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಭಾಗಗಳಲ್ಲಿ ಭ್ರೂಣಲಿಂಗ ಪತ್ತೆ ಕಾರ್ಯ ಸದ್ದಿಲ್ಲದೆಯೇ ನಡೆಯುತ್ತಿದೆ. ಈ ‘ಗುಪ್ತ ದಂಧೆ’ಯಲ್ಲಿ ದೊಡ್ಡಮಟ್ಟದಲ್ಲಿ ಏಜೆಂಟರು, ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.ಕರ್ನಾಟಕದಿಂದ ಆಂಧ್ರಕ್ಕೆ, ಆಂಧ್ರದಿಂದ ಕರ್ನಾಟಕಕ್ಕೆ ಭ್ರೂಣಲಿಂಗ ಪತ್ತೆಗೆ ಗರ್ಭಿಣಿಯರನ್ನು ಕರೆದೊಯ್ಯಲಾಗುತ್ತದೆ. ಅಂತರರಾಜ್ಯವಾದ ಕಾರಣ ಸುಲಭವಾಗಿ ಈ ಪ್ರಕರಣಗಳ ಪತ್ತೆಯೂ ಕಷ್ಟಸಾಧ್ಯ. ಗಡಿ ಪ್ರದೇಶಗಳಲ್ಲಿ ಎರಡೂ ರಾಜ್ಯಗಳ ಜನರು ವೈವಾಹಿಕ ಸಂಬಂಧಗಳನ್ನು ಬೆಳೆಸುವುದು ಸಾಮಾನ್ಯ.ಕೆಲವು ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಯು ಮಧ್ಯವರ್ತಿಗಳ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ಇವರು ವೈದ್ಯರಿಂದ ಭ್ರೂಣಲಿಂಗದ ಮಾಹಿತಿ ಪಡೆದು ಗರ್ಭಿಣಿ ಮತ್ತು ಕುಟುಂಬ ಸದಸ್ಯರಿಗೆ ತಿಳಿಸುತ್ತಾರೆ. ಗಡಿಭಾಗಗಳ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ಗೆ ಯಂತ್ರಗಳು ಇದ್ದರೂ ಬಹಳಷ್ಟು ಕಡೆಗಳಲ್ಲಿ ತಂತ್ರಜ್ಞರು ಇಲ್ಲ. ಇದು ಮಧ್ಯವರ್ತಿಗಳಿಗೆ ವರವಾಗಿದೆ ಎನ್ನುವ ಮಾತುಗಳಿವೆ.ಪ್ರಕರಣಗಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ದೂರುಗಳು ಸಹ ದಾಖಲಾಗಿಲ್ಲ. ಗುಪ್ತ ದಂಧೆ ಬಗ್ಗೆ ಬಹಿರಂಗವಾಗಿ ಹೇಳಲು ವೈದ್ಯರು, ಸಾರ್ವಜನಿಕರು ಸಹ ಹಿಂಜರಿಯುತ್ತಾರೆ.ಕೆಲ ವರ್ಷಗಳ ಹಿಂದೆ ನೆರೆಯ ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿದ್ದರು. ಅಲ್ಲಿನ ಜಿಲ್ಲಾ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳು ಸಹ ಸಭೆಯಲ್ಲಿ ಭಾಗವಹಿಸಿದ್ದರು. ಭ್ರೂಣಲಿಂಗ ಪತ್ತೆಯ ಬಗ್ಗೆ ಮಾಹಿತಿ ವಿನಿಮಯಕ್ಕೆ ಕ್ರಮವಹಿಸಲಾಗಿತ್ತು. 2017ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಭ್ರೂಣ ಲಿಂಗ ಪತ್ತೆ ಮಾಡುವುದನ್ನು ಪತ್ತೆ ಹಚ್ಚಿ ಆರೋಗ್ಯ ಇಲಾಖೆಯ ಸಹಾಯವಾಣಿಗೆ ಮಾಹಿತಿ ನೀಡಿದರೆ, ಅದು ದೃಢಪಟ್ಟರೆ ಮಾಹಿತಿ ನೀಡಿದವರಿಗೆ ₹50 ಸಾವಿರ ಬಹುಮಾನ ನೀಡಲಾಗುವುದು. ಮಾಹಿತಿ ನೀಡಿದವರ ಹೆಸರನ್ನು ಗೋಪ್ಯವಾಗಿಡಲಾಗುವುದು ಎಂದು ಪ್ರಕಟಿಸಿದ್ದರು.‘ಪೊಲೀಸರಿಗೆ ದೂರು ಸಲ್ಲಿಸುತ್ತೇವೆ’‘ಏಜೆಂಟರು ಮಾತನಾಡಿರುವ ಆಡಿಯೊ ಸೇರಿದಂತೆ ಅಗತ್ಯ ದಾಖಲೆಗಳು ಇವೆ. ಆ ಆಧಾರದಲ್ಲಿ ಪೊಲೀಸರಿಗೆ ದೂರು ನೀಡುತ್ತೇವೆ. ಈ ಆಸ್ಪತ್ರೆಯ ಜೊತೆ ಏಜೆಂಟರು ನಡೆಸಿರುವ ವ್ಯವಹಾರ ಮತ್ತಿತರ ವಿಚಾರಗಳು ಪೊಲೀಸರ ವಿಚಾರಣೆ ವೇಳೆ ಹೊರ ಬರಲಿವೆ’ ಎಂದು ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.