96 ಶಾಸಕರಿದ್ದರೂ ಅಭಿವೃದ್ಧಿಯಲ್ಲಿ ಹಿಂದುಳಿದ ಉತ್ತರ ಕರ್ನಾಟಕ: ಹೊರಟ್ಟಿ ಬೇಸರ
ವಿಜಯಪುರ: ‘ಉತ್ತರ ಕರ್ನಾಟಕ ಭಾಗ ಪ್ರತಿಯೊಂದು ಕ್ಷೇತ್ರದಲ್ಲೂ ಹಿಂದುಳಿದಿದೆ. ಡಾ. ನಂಜುಂಡಪ್ಪ ವರದಿಯ ಶೇ 80 ರಷ್ಟು ಶಿಫಾರಸ್ಸುಗಳು ಅನುಷ್ಠಾನವೇ ಆಗಿಲ್ಲ, ಉತ್ತರ ಕರ್ನಾಟಕ ಭಾಗದಿಂದ 96 ಶಾಸಕರಿದ್ದಾರೆ. ಆದರೆ, ಅವರು ಒಗ್ಗಟ್ಟಿನಿಂದ ಗಟ್ಟಿಯಾಗಿ ನಿಲ್ಲದಕ್ಕೆ ಇಂದು ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿ

ವಿಜಯಪುರ: ‘ಉತ್ತರ ಕರ್ನಾಟಕ ಭಾಗ ಪ್ರತಿಯೊಂದು ಕ್ಷೇತ್ರದಲ್ಲೂ ಹಿಂದುಳಿದಿದೆ. ಡಾ. ನಂಜುಂಡಪ್ಪ ವರದಿಯ ಶೇ 80 ರಷ್ಟು ಶಿಫಾರಸ್ಸುಗಳು ಅನುಷ್ಠಾನವೇ ಆಗಿಲ್ಲ, ಉತ್ತರ ಕರ್ನಾಟಕ ಭಾಗದಿಂದ 96 ಶಾಸಕರಿದ್ದಾರೆ. ಆದರೆ, ಅವರು ಒಗ್ಗಟ್ಟಿನಿಂದ ಗಟ್ಟಿಯಾಗಿ ನಿಲ್ಲದಕ್ಕೆ ಇಂದು ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ಇಲ್ಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದಶಮಾನೋತ್ಸವ ಕಟ್ಟಡ ಉದ್ಘಾಟನೆ ಮತ್ತು ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.‘ಅಕ್ಕಮಹಾದೇವಿ ಮಹಿಳಾ ವಿವಿ ವಿಜಯಪುರದಲ್ಲಿ ಸ್ಥಾಪನೆಯಾಗುವಾಗ ದಕ್ಷಿಣ ಕರ್ನಾಟಕದವರು ವಿರೋಧಿಸಿದ್ದರು, ಅದು ದಕ್ಷಿಣದಲ್ಲೇ ಆಗಲಿ ಎಂದು ಪಟ್ಟು ಹಿಡಿದಿದ್ದರು, ಉತ್ತರ ಕರ್ನಾಟಕ ಭಾಗದ ನಾವು ಗಟ್ಟಿಯಾಗಿ ಹೋರಾಟ ಮಾಡಿದ ಫಲವಾಗಿ ಇಂದು ಮಹಿಳಾ ವಿವಿ ವಿಜಯಪುರದಲ್ಲಿ ಸ್ಥಾಪನೆಯಾಗಲು ಕಾರಣವಾಗಿದೆ’ ಎಂದರು. ‘ಇಂದಿನ ಯುಗದಲ್ಲಿ ಕೇವಲ ಆರ್ಟ್ಸ್, ಸೈನ್ಸ್, ಕಾಮರ್ಸ್ ಮಾಡಿದರೆ ನಡೆಯುವುದಿಲ್ಲ ನೀವು ಕೌಶಲಗಳನ್ನು ಕಲಿಯಬೇಕು. ಮನಸ್ಸು ಮಾಡಿದರೆ ವಿದ್ಯಾರ್ಥಿಯರು ಏನು ಬೇಕಾದರು ಸಾಧಿಸಬಹುದು, ಮನಸ್ಸು ಮಾಡಿ ಕಷ್ಟ ಪಟ್ಟು ಓದಬೇಕು’ ಎಂದು ಕಿವಿ ಮಾತು ಹೇಳಿದರು.‘ನಾವು ಕತ್ತೆ ಕಾಯಬೇಕಾ’‘ಉತ್ತರ ಕರ್ನಾಟಕದಲ್ಲೂ ಸಮಸ್ಯೆಯಿದೆ, ಹುಬ್ಬಳ್ಳಿ-ಧಾರವಾಡದವರು ಐಐಟಿ, ಏಮ್ಸ್ ಎಲ್ಲವೂ ಅವರಲ್ಲೇ ಬರಬೇಕು ಎನ್ನುತ್ತಾರೆ, ಎಲ್ಲವೂ ಅವರಲ್ಲೇ ಬರಬೇಕು ಎಂದರೆ ವಿಜಯಪುರ, ಕಲಬುರ್ಗಿಯವರು ನಾವು ಕತ್ತೆ ಕಾಯಬೇಕಾ?’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಸಮಾಧಾನ ವ್ಯಕ್ತಪಡಿಸಿದರು.‘ಹೈಕೋರ್ಟ್ ಪೀಠ ವಿಜಯಪುರಕ್ಕೆ ಬರಬೇಕಾಗಿತ್ತು, ಹುಬ್ಬಳ್ಳಿಗೆ ಅವರು ಮಾಡಿಕೊಂಡರು, ಧರ್ಮಸಿಂಗ್ ಮುಖ್ಯಮಂತ್ರಿಯಾಗಿ ತಮ್ಮ ಕಲಬುರ್ಗಿಯಲ್ಲಿ ಪೀಠ ಮಾಡಿಕೊಂಡರು, ಈಗ ಅಲ್ಲಿಯೂ ಕೇಸ್ ಇಲ್ಲ, ಇಲ್ಲಿಯೂ ಕೇಸ್ ಇಲ್ಲ’ ಎಂದರು.‘ಅಕ್ಕಮಹಾದೇವಿ ಮಹಿಳಾ ವಿವಿ ಆರಂಭವಾದಾಗಿನಿಂದಲೂ ಸಮಸ್ಯೆ, ಗೊಂದಲ, ವಿವಾದ ಅನುಭವಿಸಿ ಈಗ ಶಾಂತ ರೀತಿಯಿಂದ ನಡೆದಿದೆ’ ಎಂದರುಕರ್ನಾಟಕ ರಾಜ್ಯ ಮುಕ್ತ ವಿವಿ ವಿಶ್ರಾಂತ ಕುಲಪತಿ ಎಸ್.ವಿ. ಹಲಸೆ ಮಾತನಾಡಿ, ‘ಕೇಂದ್ರ ಸರ್ಕಾರದ ಹಲವಾರು ಕೌಶಲಾಧಾರಿತ ಕಾರ್ಯಕ್ರಮಗಳನ್ನು ವಿವಿಯಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿನಿಯರಿಗೆ ಅನುಕೂಲ ಕಲ್ಪಿಸಬೇಕಾದ ಅವಶ್ಯಕತೆ ಇದೆ. ಈ ಕಾರ್ಯದ ಅನುಷ್ಠಾನದಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಭದ್ರತೆ ನೀಡಿದಂತಾಗುತ್ತದೆ’ ಎಂದು ಸಲಹೆ ನೀಡಿದರು.ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿ, ‘ಗ್ರಾಮೀಣ ಭಾಗಗಳಲ್ಲಿಮಹಿಳಾ ಕಾಲೇಜು ನಿರ್ಮಿಸಲು ಆದ್ಯತೆ ನೀಡಲಾಗುತ್ತಿದ್ದು, ಅನಿವಾರ್ಯ ಕಾರಣಗಳಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿದ ವಿದ್ಯಾರ್ಥಿನಿಯರು ಮತ್ತೆ ತಮ್ಮ ವಿದ್ಯಾಭ್ಯಾಸ ಪೂರೈಸಲು ಮಹಿಳಾ ವಿವಿ ಅವಕಾಶದ ಬಾಗಿಲು ತೆರೆದಿದೆ’ ಎಂದರು.‘ಬೆಂಗಳೂರಿನಲ್ಲಿ ಮಹಿಳಾ ವಿವಿಯಿಂದ ಕೌಶಲಾಭಿವೃದ್ಧಿ ಕೇಂದ್ರ ಆರಂಭಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅಲ್ಲಿ ವಿದ್ಯಾರ್ಥಿನಿಯರಿಗೆ ಕೌಶಲಾಭಿವೃದ್ಧಿಯ ಕೋರ್ಸ್ಗಳನ್ನು ನೀಡಲಾಗುವುದು’ ಎಂದರು.ವಿಧಾನ ಪರಿಷತ್ ಸದಸ್ಯ ಹಣಮಂತ ನೀರಾಣಿ, ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ. ಬಿ. ಎಲ್. ಲಕ್ಕಣ್ಣವರ, ಕುಲಸಚಿವ ಶಂಕರಗೌಡ ಸೋಮನಾಳ, ಆರ್ಥಿಕ ಅಧಿಕಾರಿ ರಾಮಣ್ಣ ಅಥಣಿ ಉಪಸ್ಥಿತರಿದ್ದರು.